ನ್ಯೂಸ್

ನಾನಿಲ್ಲಿಯೇ ನನ್ನ ಗಂಡನಿಗೆ ಕಿಸ್​ ಮಾಡ್ತೇನೆ, ತಾಕತ್ತಿದ್ರೆ ತಡೆಯಿರಿ! ಪೊಲೀಸರಿಗೆ ಮಹಿಳೆ ಸವಾಲು

ನವದೆಹಲಿ: ವೀಕೆಂಡ್​ ಲಾಕ್​ಡೌನ್​ ಪಾಲಿಸದೆ ಕೋವಿಡ್​ ನಿಯಮಗಳನ್ನು ಉಲ್ಲಂಘಿಸಿದ ದಂಪತಿ ವಿರುದ್ಧ ದೆಹಲಿ ಪೊಲೀಸರು ಭಾನುವಾರ ಪ್ರಕರಣ ದಾಖಲಿಸಿದ್ದಾರೆ.

ಕಾರಿನ ಒಳಗೆ ಮಾಸ್ಕ್​ ಧರಿಸಿಲ್ಲ ಎಂದು ದಂಪತಿಯನ್ನು ಪೊಲೀಸರು ತಡೆದಿದ್ದಾರೆ. ಅಲ್ಲದೆ, ಕರ್ಫ್ಯೂ ಪಾಸ್​ ಸಹ ಅವರ ಬಳಿಯಿರಲಿಲ್ಲ. ಈ ವೇಳೆ ತಾವು ಮಾಡಿದ ತಪ್ಪನ್ನು ತಿದ್ದುಕೊಂಡು ಸೌಮ್ಯವಾಗಿ ವರ್ತಿಸದ ದಂಪತಿ ಪೊಲೀಸರೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ.

"ನಾನು ಇಲ್ಲಿಯೇ ನನ್ನ ಗಂಡನಿಗೆ ಕಿಸ್​ ಮಾಡುತ್ತೇನೆ. ನೀವು ನನ್ನನ್ನು ತಡೆಯಬಹುದೇ? ಎಂದು ಮಹಿಳೆ ಕೂಗಾಡುವುದನ್ನು ವಿಡಿಯೋದಲ್ಲಿ ನೋಡಬಹುದಾಗಿದೆ.

ಈ ಘಟನೆ ದೆಹಲಿಯ ದರಿಯಾಗಂಜ್​ ಏರಿಯಾದಲ್ಲಿ ಭಾನುವಾರ ಸಂಜೆ 4 ಗಂಟೆ ಸುಮಾರಿಗೆ ನಡೆದಿದೆ. ನಮ್ಮ ಕಾರನ್ನೇಕೆ ನಿಲ್ಲಿಸಿದ್ದೀರಿ? ನಾನು ನನ್ನ ಪತ್ನಿಯ ಜತೆ ಕಾರಿನ ಒಳಗಡೆ ಇದ್ದೆನು ಎಂದು ವ್ಯಕ್ತಿ ಪೊಲೀಸರಿಗೆ ಹೇಳುವುದು ವಿಡಿಯೋದಲ್ಲಿದೆ.

ಕಾರಿನಲ್ಲಿದ್ದಾಗಲೂ ಮಾಸ್ಕ್​ ಧರಿಸಬೇಕೆಂದು ಇತ್ತೀಚೆಗೆ ಹೈಕೋರ್ಟ್​ ಸಹ ಆದೇಶದ ನೀಡಿದೆ ಎಂದು ಪೊಲೀಸರು ಮನವರಿಕೆ ಮಾಡಿದರೂ ಸುಮ್ಮನಾಗದ ದಂಪತಿ, ಅವರೊಂದಿಗೆ ವಾಗ್ವಾದ ಮುಂದುವರಿಸಿದರು. ಅಲ್ಲದೆ, ತಾಕತ್ತಿದ್ದರೆ ಕ್ರಮ ಕೈಗೊಳ್ಳುವಂತೆ ಸವಾಲು ಹಾಕಿದರು. ಬಳಿಕ ಮಹಿಳಾ ಪೊಲೀಸರನ್ನು ಕರೆಸಿ ಏರು ಧ್ವನಿಯಲ್ಲಿ ಮಾತನಾಡುತ್ತಿದ್ದ ಮಹಿಳೆಯನ್ನು ಹತ್ತಿರದ ಪೊಲೀಸ್​ ಠಾಣೆಗೆ ಕರೆದೊಯ್ಯಲಾಯಿತು. ಇದೀಗ ದಂಪತಿ ವಿರುದ್ಧ ಪ್ರಕರಣ ದಾಖಲಾಗಿದೆ. (ಏಜೆನ್ಸೀಸ್​)