More

    ಮತ್ತೊಮ್ಮೆ ಕರೊನಾ ಸೋಲಿಸಿ, ನಾವು ಗೆಲ್ಲಬೇಕಿದೆ!

    ಮತ್ತೊಮ್ಮೆ ಕರೊನಾ ಸೋಲಿಸಿ, ನಾವು ಗೆಲ್ಲಬೇಕಿದೆ!ಕೋವಿಡ್ ಮತ್ತೆ ಹಬ್ಬುತ್ತಿದೆ. ಈ ಸಲ ಕಳೆದ ಬಾರಿಯಂತೆ ಜನ ಸಹಕಾರಕ್ಕೆ ಕೂಡಲೇ ಧಾವಿಸಲಾರರು. ಸಹಕಾರಕ್ಕೆ ಬರಬೇಕಾದವರೂ ಈ ಬಾರಿ ಸುಸ್ತಾಗಿದ್ದಾರೆ. ಅದಕ್ಕೇ ನಮ್ಮನ್ನು ನಾವು ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಸೂಕ್ತವಾದ ಮಾರ್ಗ ಎಂಬುದನ್ನು ಮರೆಯಬಾರದು.

    ಕೋವಿಡ್​ನ ಎರಡನೇ ಅಲೆ ಭಯಾನಕವಾಗಿ ಅಪ್ಪಳಿಸಿದೆ. ನಿಜಕ್ಕೂ ಈ ಅಲೆ ಆವರಿಸಿಕೊಂಡಿದೆಯೋ ಅಥವಾ ಸರ್ಕಾರ ಮತ್ತು ಮಾಧ್ಯಮಗಳು ನಮ್ಮ ಹೆದರಿಕೆಯ ಲಾಭವನ್ನು ಪಡೆದುಕೊಳ್ಳುತ್ತಿವೆಯೋ, ದೇವರೇ ಬಲ್ಲ! ಲಾಕ್​ಡೌನ್ ತೆರೆಯುವಾಗ ಕೋವಿಡ್ ಪ್ರಕರಣಗಳು ಹೆಚ್ಚು-ಕಡಿಮೆ ಇಲ್ಲವಾಗಿಬಿಟ್ಟಿದ್ದವು. ಜನರು ಸಾಮಾನ್ಯವಾಗಿ ತಿರುಗಾಡಲಾರಂಭಿಸಿದ್ದರು. ವೈಯಕ್ತಿಕ ಅಂತರಗಳು, ಮಾಸ್ಕು ಎಲ್ಲವೂ ಕಾಣೆಯಾಗಿ ಸಹಜ ಸ್ಥಿತಿ ಒಲಿದು ಬಂದಿತ್ತು. ಆದರೆ, ಇದ್ದಕ್ಕಿದ್ದಂತೆ ಎರಡನೇ ಅಲೆ ಆವರಿಸಿಕೊಂಡಿದ್ದು, ಕಂಡ-ಕಂಡಲ್ಲಿ ಕರೊನಾ ಹಬ್ಬಲಾರಂಭಿಸಿದ್ದು, ಜನ ಉಸಿರುಗಟ್ಟಿಸುವ ವಾತಾವರಣದಲ್ಲಿ ಬೇಯಲಾರಂಭಿಸಿದ್ದು ಎಲ್ಲವೂ ಕಣ್ಣಿಗೆ ರಾಚತೊಡಗಿತು. ಮತ್ತೆ ಮಾಧ್ಯಮಗಳಲ್ಲಿ ಕರೊನಾ ವರದಿಯ ತಾಂಡವ ನೃತ್ಯ. ಸಹಜವಾಗಿಯೇ ಹೆದರಿದ ಜನ ಸಣ್ಣ-ಪುಟ್ಟ ಜ್ವರಕ್ಕೂ ಆಸ್ಪತ್ರೆಗೆ ಧಾವಿಸಿ ಮಲಗಿಕೊಳ್ಳಲು ಹಾಸಿಗೆ ಸಿಕ್ಕರೆ ಸಾಕು ಎನ್ನುವಂತಾಡಿದರು. ವಯಸ್ಸಾದವರು ಬಿಡಿ, ತರುಣರು ಕೂಡ ಹೀಗೆ ಮಾಡುವುದನ್ನು ಕಂಡಾಗ ಅಚ್ಚರಿ ಎನಿಸುತ್ತಿತ್ತು.

    ವೈರಸ್ಸು ಸ್ವಲ್ಪ ದಿನಗಳ ಕಾಲ ಸುಮ್ಮನಿದ್ದು ಮತ್ತೆ ಈ ರೀತಿ ಆಕ್ರಮಿಸಿಕೊಂಡು ಮತ್ತೆ ಇದ್ದಕ್ಕಿದ್ದಂತೆ ಶಾಂತವಾಗಿಬಿಡುವುದು ವಿಚಿತ್ರವಾದ ಸಂಗತಿಯೇ. ಆದರೆ ಗಮನಿಸಬೇಕಾದ ಪ್ರಮುಖ ಸಂಗತಿಯೊಂದಿದೆ. ಬಜೆಟ್​ನಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಮೀಸಲಿಟ್ಟ ಹಣವನ್ನು ಎಲ್ಲ ಸರ್ಕಾರಗಳೂ ಕರೊನಾ ನಿರ್ವಹಣೆಗೆಂದೇ ತಿರುಗಿಸುತ್ತಿವೆ. ಈ ಹಂತದಲ್ಲಿ ತೆಗೆದುಕೊಂಡ ನಿರ್ಣಯಗಳಿಗೆ ಯಾರೂ ಪ್ರಶ್ನೆ ಮಾಡುವಂತಿಲ್ಲ ಎಂಬ ನಿಯಮವೂ ಇದೆ. ಅದು ಸರಿಯೇ. ತುರ್ತು ಪರಿಸ್ಥಿತಿಯಲ್ಲಿ ಕೆಲವು ಅನಿವಾರ್ಯ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ. ಹಾಗಂತ ಈ ನುಂಗಣ್ಣಗಳು ತಾವೇ ತುರ್ತು ಪರಿಸ್ಥಿತಿಯನ್ನು ಸೃಷ್ಟಿಸುವುದಿಲ್ಲ ಎಂಬುದಕ್ಕೆ ಪುರಾವೆ ಏನು? ಸತ್ಯ ಹೇಳಬೇಕೆಂದರೆ ಎಲ್ಲರಿಗೂ ಕರೊನಾ ಸಾಕಾಗಿ ಹೋಗಿದೆ. ಮೊದಲ ಬಾರಿಗೆ ಕರೊನಾ ಲಾಕ್​ಡೌನ್ ಆದಾಗ ಜನರೆಲ್ಲ ಬೀದಿಗೆ ಬಂದು ಊಟ-ತಿಂಡಿಯ ವಿತರಣೆ ಮಾಡುತ್ತಿದ್ದುದು ಖುಷಿ ಕೊಡುತ್ತಿತ್ತು. ನೋಡುವವರಿಗೂ ಮತ್ತು ಕೊಡುವವರಿಗೂ ಕೂಡ. ಕರೊನಾದ ವಾರ್ಷಿಕೋತ್ಸವ ಆಚರಿಸಿದ ನಂತರ ಈಗ ಆ ತ್ರಾಣ ಯಾರಿಗೂ ಉಳಿದಿಲ್ಲ. ವ್ಯಾಪಾರ-ವಹಿವಾಟುಗಳು ಸರಿಯಾಗಿ ನಡೆದು ನೆಮ್ಮದಿಯಿಂದ ಬದುಕಿದರೆ ಸಾಕು ಎನ್ನುವ ಹಂತಕ್ಕೆ ಎಲ್ಲರೂ ಬಂದುಬಿಟ್ಟಿದ್ದಾರೆ. ಇದರ ನಡುವೆಯೂ ಲೂಟಿಕೋರರು ಲೂಟಿ ಮಾಡುತ್ತಲೇ ಇದ್ದಾರೆ. ಅದು ರಾಜಕಾರಣಿಗಳ ವಲಯದಿಂದ ಹಿಡಿದು ಶವಸಂಸ್ಕಾರ ಮಾಡುವವರೆಗೂ ಈ ಅವಕಾಶವನ್ನು ಬಳಸಿಕೊಳ್ಳುತ್ತಲೇ ಇದ್ದಾರೆ.

    ಹೀಗೆ ಸಮಾಧಿಯ ಮೇಲೆ ನರ್ತನ ಮಾಡುವ ಜನರ ನಡುವೆಯೂ ಶಾಂತಿಯುತವಾಗಿ ಕೆಲಸ ಮಾಡುತ್ತಲೇ ಇರುವ ಅನೇಕ ಮಂದಿ ನಮ್ಮ ನಡುವೆಯೇ ಇದ್ದಾರೆ. ಅನೇಕ ವೈದ್ಯರು ಯಾವ ಲಾಭದ ಅಪೇಕ್ಷೆ ಇಲ್ಲದೆ, ಆರೋಗ್ಯವನ್ನು ಪಣಕ್ಕಿಟ್ಟು ಜನರ ಸೇವೆಗೆಂದು ನಿಂತಿದ್ದಾರೆ. ಇತ್ತೀಚೆಗೆ ಗುಜರಾತಿನಿಂದ ವರದಿಯೊಂದು ಬಂದಿದೆ. ವಡೋದರಾದ ವೈದ್ಯರಾದ ಡಾ.ಪಟೇಲ್ ಅವರ ತಾಯಿ ಕೋವಿಡ್​ಗೆ ತುತ್ತಾಗಿ ಒಂದು ವಾರಗಳ ಕಾಲ ಐಸಿಯುನಲ್ಲಿ ಜೀವನ್ಮರಣದ ಹೋರಾಟ ನಡೆಸಿ ಕೊನೆಗೂ ದೇಹತ್ಯಾಗ ಮಾಡಿದರು. ಬೆಳಗಿನ ಜಾವ 3.30ಕ್ಕೆ ಆಕೆಯ ಅಂತ್ಯಸಂಸ್ಕಾರ ಮುಗಿಸಿಬಂದ ವೈದ್ಯರು ಮತ್ತೆ ಕೋವಿಡ್ ವಾರ್ಡನ್ನು ಹೊಕ್ಕಿ ಕೆಲಸ ಆರಂಭಿಸಿಬಿಟ್ಟರು. ಇಷ್ಟು ಧಾವಂತವೇಕೆ ಎಂದು ಕೇಳಿದ್ದಕ್ಕೆ ವೈದ್ಯರು ಹೇಳಿದ್ದೇನು ಗೊತ್ತೇ? ‘ಎಲ್ಲಕ್ಕಿಂತಲೂ ಮೊದಲು ಕರ್ತವ್ಯ ಎಂದು ಅಮ್ಮನೇ ಹೇಳಿದ್ದಾಳೆ’ ಅಂತ. ರೋಗಿಗಳ ಸೇವೆಯಲ್ಲಿ ತಾನು ಸವೆಯುವುದೇ ತನ್ನ ಅಮ್ಮನ ಸದ್ಗತಿಗೆ ಕೊಡಬಹುದಾಗಿರುವ ಕೊಡಗೆ ಎಂದು ಅವರು ಭಾವಿಸಿರುವುದು ನಿಜಕ್ಕೂ ಅಚ್ಚರಿ ಮತ್ತು ಹೆಮ್ಮೆಯ ಸಂಗತಿ.

    ಅಲ್ಲಿನದ್ದೇ ಡಾ. ರಾಹುಲ್ ಪಾರ್​ವುರ್​ರದ್ದೂ ಇದೇ ಕಥೆ. ಅವರು ಕೋವಿಡ್ ನಿರ್ವಹಣೆಯ ನೊಡೆಲ್ ಅಧಿಕಾರಿಯಾಗಿದ್ದು ಶವಗಳನ್ನು ಸೂಕ್ತವಾಗಿ ವಿಲೇವಾರಿ ಮಾಡುವ ಹೊಣೆಗಾರಿಕೆ ಅವರದ್ದಿತ್ತು. ಅವರ ತಾಯಿ ತೀರಿಕೊಂಡ ನಂತರ ಅಂತ್ಯಸಂಸ್ಕಾರ ಮುಗಿಸಿ ನೇರವಾಗಿ ಕೋವಿಡ್ ಶವಗಳೆಡೆಗೆ ಅವರು ಬಂದು ಸೇರಿಕೊಂಡಿದ್ದರು. ಅವರು ನಾಲ್ಕು ದಿನ ಹೆಚ್ಚು ರಜೆ ಪಡೆದರೆ ಶವಗಳ ನಿರ್ವಹಣೆ ಕಷ್ಟವೆಂಬುದು ಅವರಿಗೆ ಗೊತ್ತಿಲ್ಲದ ಸಂಗತಿಯೇನಾಗಿರಲಿಲ್ಲ. ಹೀಗಾಗಿಯೇ ದುಃಖವನ್ನು ಬದಿಗಿಟ್ಟು ಸಮಾಜದ ಒಳಿತಿಗಾಗಿ ಅವರು ಧಾವಿಸಿ ಬಂದಿದ್ದರು.

    ಅನೇಕ ವೈದ್ಯರು ಕೋವಿಡ್ ಹೋರಾಟದ ಹೊತ್ತಿನಲ್ಲೇ ಪ್ರಾಣವನ್ನೂ ಕಳೆದುಕೊಂಡಿದ್ದಿದೆ. ಹಾಗಂತ ಆ ಹೊತ್ತಲ್ಲಿ ವೈದ್ಯರುಗಳು ಕರ್ತವ್ಯವನ್ನು ಕಡಿಮೆ ಮಾಡಲಿಲ್ಲ. ಎಲ್ಲರೂ ಎಂದೇನಲ್ಲ, ಕೆಲವರಂತೂ ಆಸ್ಪತ್ರೆಗೆ ಬರದೇ ಕಿರಿಯ ವೈದ್ಯರಿಗೆ ತಾಕೀತು ಮಾಡಿ ತಾವು ತಪ್ಪಿಸಿಕೊಂಡು ಮನೆಯಲ್ಲಿ ಕುಳಿತಿದ್ದಿದೆ. ಕಾಲೇಜಿಗೆ ರಜವಿರುವ ಈ ಹೊತ್ತಿನಲ್ಲಿ ವೈದ್ಯ ವಿದ್ಯಾರ್ಥಿಗಳು ಜವಾಬ್ದಾರಿಯನ್ನು ಮರೆತು ಮನೆಯಲ್ಲಿ ಉಳಿದುಕೊಂಡ ಉದಾಹರಣೆಗಳಿಗೂ ಕಡಿಮೆಯಿಲ್ಲ.

    ಕರೊನಾದ ಭಯ ತೀವ್ರವಾಗಿದ್ದಾಗಲೂ ಅನೇಕರು ಅದನ್ನು ಮೀರಿನಿಂತು ಕಷ್ಟದಲ್ಲಿರುವವರಿಗೆ ಕೈಲಾದ ಸಹಕಾರ ಮಾಡಲು ಮುಂದೆ ನಿಂತದ್ದು ಈಗ ಇತಿಹಾಸ. ಮನೆ-ಮನೆಗೂ ಊಟ ತಲುಪಿಸುವಲ್ಲಿ, ದಿನಸಿ ಸಾಮಾನುಗಳನ್ನು ನೀಡುವಲ್ಲಿ ಅಕ್ಷರಶಃ ಸಮಾಜ ಜೊತೆ ನಿಂತಿತ್ತು. ಎಷ್ಟೋ ಬಾರಿ ಸರ್ಕಾರಗಳು ಮಾಡಬಹುದಾದಕ್ಕಿಂತಲೂ ಹೆಚ್ಚಿನದನ್ನು ಪ್ರಜೆಗಳು ಪ್ರಜೆಗಳಿಗೋಸ್ಕರವೇ ಮಾಡಿದ್ದಾರೆ. ನಿಜವಾದ ಪ್ರಜಾಪ್ರಭುತ್ವ ಅಂದರೆ ಇದೇ. ಸ್ವತಃ ಈ ಬಗೆಯ ಅನುಭವವೊಂದು ನಮಗೆ ಕೂಡ ಇದೆ. ವಿಕ್ಟೋರಿಯಾ ಆಸ್ಪತ್ರೆಯ ವಿಶೇಷಾಧಿಕಾರಿ ಬಾಲಾಜಿ ಪೈ ಡಿ ಗ್ರೂಪ್ ನೌಕರರ ಕೊರತೆಯನ್ನು ಹೇಳಿಕೊಂಡಾಗ ತಕ್ಷಣ ಧುಮುಕಬೇಕೆಂದೆನಿಸಿತ್ತಾದರೂ ಸಾವಿನ ಮನೆಯೊಳಗೆ ಕಾಲಿಟ್ಟಂತಲ್ಲವೇ ಎಂಬ ಹೆದರಿಕೆಯೂ ಇತ್ತು. ನಾವು ಆಸ್ಪತ್ರೆಯನ್ನು ಸಾವಿನ ಮನೆ ಎಂದು ಭಾವಿಸುವುದಾದರೆ ಡಿ ಗ್ರೂಪ್ ನೌಕರರು ಯಾವ ಧೈರ್ಯದಿಂದ ಅಲ್ಲಿ ಕೆಲಸ ಮಾಡಬೇಕು ಹೇಳಿ? ಹೆಂಡತಿ, ಮಕ್ಕಳು ಅವರಿಗೂ ಇರುತ್ತಾರಲ್ಲ. ಹಾಗಿದ್ದ ಮೇಲೆ ಈ ಪ್ರಕ್ರಿಯೆಯಲ್ಲಿ ಭಾಗವಹಿಸುವುದು ನಮ್ಮ ಹೊಣೆಗಾರಿಕೆ ಎನಿಸಿತು ನಮಗೆ. ವಿಷಯ ಮುಂದಿಟ್ಟೊಡನೆ 17 ಮಂದಿ ಕಾರ್ಯಕರ್ತರು ಸಿದ್ಧರಾಗಿಬಿಟ್ಟರು. ಅಲ್ಲಿ ಕೆಲಸಕ್ಕೆಂದು ಹೋದಮೇಲೇ ನಮಗೆ ಗೊತ್ತಾಗಿದ್ದು, ಆಸ್ಪತ್ರೆಯಲ್ಲಿ ವೈರಸ್ ಹಬ್ಬುವುದು ಸಾಧ್ಯವೇ ಇಲ್ಲ ಅಂತ. ಏಕೆಂದರೆ ಅಲ್ಲಿ ಇರುವಷ್ಟು ಹೊತ್ತು ನಾವು ಅಗತ್ಯಕ್ಕಿಂತ ಹೆಚ್ಚು ಎಚ್ಚರಿಕೆಯನ್ನು ಹೊಂದಿರುತ್ತೇವೆ. ಹೊರಗೆ ಬಂದೊಡನೆ ಎಲ್ಲ ತಿಳಿವನ್ನೂ ಕಳೆದುಕೊಂಡು ಮೈಮರೆತು ಬಿಡುತ್ತೇವೆ. ಪಿಪಿಇ ಕಿಟ್​ಗಳನ್ನು ಧರಿಸಿ ಕೆಲಸ ಮಾಡುವುದಿರಲಿ, ಮೂರು ಮಹಡಿ ಹತ್ತಿಕೊಂಡು ಹೋಗುವುದೂ ಸಾಧ್ಯವಿಲ್ಲ. ಪ್ರತೀ ವಾರ್ಡನ್ನು ಸ್ವಚ್ಛಗೊಳಿಸುವುದಲ್ಲದೆ, ರೋಗಿಗಳಿಗೆ ಊಟ-ತಿಂಡಿ ಕೊಟ್ಟು ಬರುವುದು ಸವಾಲಿನ ಕೆಲಸವೇ ಆಗಿತ್ತು. ಒಮ್ಮೆಯಂತೂ ಹೊದ್ದುಕೊಂಡು ಮಲಗಿದ್ದವನನ್ನು ಎಬ್ಬಿಸಿ ಊಟ ಕೊಡಲು ಹೋದರೆ, ಪಕ್ಕದಲ್ಲಿ ಮಲಗಿದ್ದವ ಯಾವ ಧಾವಂತವೂ ಇಲ್ಲದೆ, ‘ಅವನು ತಿಂಡಿ ತಿನ್ನಲ್ಲ ಸರ್. ನಿನ್ನೆ ಸಂಜೆಯೇ ತೀರಿಕೊಂಡಾಗಿದೆ’ ಎಂದಾಗ ಎದೆ ಝುಲ್ಲೆಂದಿತ್ತು. ಅವನಿಗೆಂದು ತೆಗೆದಿಟ್ಟಿದ್ದ ಊಟವನ್ನು ಪಕ್ಕದಲ್ಲಿ ಮಲಗಿದ್ದ ಮತ್ತೊಬ್ಬ ವ್ಯಕ್ತಿಗೆ ಕೊಟ್ಟಾಗ ಆತ ಮುಖ ಕಿವುಚಿಕೊಂಡಿದ್ದ. ಹೆಣಕ್ಕೆ ಮೀಸಲಾಗಿದ್ದ ಊಟ ಕೊಟ್ಟಿದ್ದೀರಲ್ಲ, ಎಂದಿರಬಹುದು. ಶವವನ್ನೇ ಪಕ್ಕದಲ್ಲಿರಿಸಿಕೊಂಡು ಒಂದಿಡೀ ರಾತ್ರಿ ಬದುಕುವುದಿದೆಯಲ್ಲ, ಸುಲಭದ ಕೆಲಸವಲ್ಲ.

    ಐಸಿಯುನಲ್ಲಿ ಸಹಾಯಕ ವೈದ್ಯರ ಕೋರಿಕೆ ಮೇರೆಗೆ ವ್ಯಕ್ತಿಯೊಬ್ಬನನ್ನು ಹಾಸಿಗೆಯಲ್ಲಿ ಕೂರಿಸಿ, ತಿಂಡಿ ತಿನ್ನಲಾಗದೆಂದಾಗ ತಿನ್ನಿಸಿ, ಒಂದರ್ಧ ಗಂಟೆ ನಂತರ ಸ್ವಚ್ಛತೆಯ ಕಾರ್ಯ ಮುಗಿಸಿ ಬರುವ ವೇಳೆಗೆ ಆತ ತೀರಿಕೊಂಡಿದ್ದಾನೆ ಎಂಬ ಸುದ್ದಿ ಕೇಳಿದಾಗ ಒಮ್ಮೆ ಎದೆ ಒಡೆದಿತ್ತು. ನಿರಂತರವಾಗಿ ಇದೇ ವಾತಾವರಣದಲ್ಲಿ ಕೆಲಸ ಮಾಡುವ ವೈದ್ಯರು, ನೌಕರರುಗಳಿಗೆಲ್ಲ ಇದು ದಿನನಿತ್ಯದ ಪದವಷ್ಟೇ. ಅಷ್ಟಾದರೂ ಪ್ರತಿನಿತ್ಯವೂ ಅದೇ ಉತ್ಸಾಹ, ಎಚ್ಚರಿಕೆಯಿಂದ ರೋಗಿಗಳನ್ನು ನೋಡಿಕೊಳ್ಳುವ ಅವರೆಲ್ಲರಿಗೂ ನಮನ ಸಲ್ಲಲೇಬೇಕು.

    ಈಗ ಕರೊನಾ ಮತ್ತೆ ಮರಳಿದೆ. ಆದರೆ ನಿಜಕ್ಕೂ ಗಾಬರಿಯಾಗುವ ಯಾವ ಅಗತ್ಯವೂ ಇಲ್ಲ. ನೆಗಡಿ, ಕೆಮ್ಮು, ಜ್ವರ, ತಲೆನೋವು, ಮೈ-ಕೈ ನೋವು, ವಾಸನೆ ಹೋಗುವಿಕೆ, ರುಚಿ ಇಲ್ಲದಿರುವಿಕೆ, ಇಂತಹ ಎಲ್ಲ ಸಾಮಾನ್ಯ ಲಕ್ಷಣಗಳೊಂದಿಗೆ ಉಸಿರಾಟದ ತೊಂದರೆಯೂ ಕಂಡುಬರುತ್ತದೆ. ಆದರೆ ಇವುಗಳಲ್ಲಿ ಬಹುತೇಕ ಸಮಸ್ಯೆಗಳು ಪ್ರತೀ ಬಾರಿಯೂ ವಾತಾವರಣ ಬದಲಾದಾಗ ಕಂಡು ಬರುವಂಥದ್ದೇ. ಈ ಬಾರಿ ಏಪ್ರಿಲ್ ತಿಂಗಳಲ್ಲಂತೂ ಭಯಾನಕವಾದ ಬಿಸಿಲು. ಸಹಜವಾಗಿಯೇ ವಾತಾವರಣ ಬದಲಾದದ್ದರಿಂದ ನೆಗಡಿ, ಜ್ವರ, ತಲೆಭಾರ ಇವೆಲ್ಲವೂ ಹೆಚ್ಚಾಗಿದೆ. ಆದರೆ ಈ ಬಾರಿ ಇವೆಲ್ಲವುಗಳೊಟ್ಟಿಗೆ ಕರೊನಾದ ಷರಾ ಇದೆ ಅಷ್ಟೇ. ಕಂಡು ಬರುವ ರೋಗಲಕ್ಷಣಗಳಿಗೆ ಕೂಡಲೇ ಔಷಧ ತೆಗೆದುಕೊಂಡುಬಿಟ್ಟರೆ ಕರೊನಾ ತುಂಬ ತೊಂದರೆ ಕೊಡಲಾರದು. ಹೊಟ್ಟೆ ಬಿರಿಯುವಂತೆ ಊಟ, ಅಕ್ಕ-ಪಕ್ಕದವರು ಅಚ್ಚರಿ ಪಡುವಂತೆ ನಿದ್ದೆ. ಇವೆರಡನ್ನೂ ಮಾಡಿದರೆ ಕರೊನಾದಿಂದ ಪಾರಾಗುವುದು ನಿಶ್ಚಿತ. ಇದನ್ನು ಅಧ್ಯಯನದಿಂದ ಹೇಳುತ್ತಿಲ್ಲ, ಬದಲಿಗೆ ಅನುಭವದಿಂದಲೇ ಹೇಳುತ್ತಿದ್ದೇನೆ. ಇಷ್ಟಕ್ಕೂ ಅಧ್ಯಯನ ಮಾಡಲು ಇಲ್ಲಿ ವಸ್ತು ಸಂಗ್ರಹಣೆಯೇ ಇಲ್ಲ. ಈಗ ರೋಗದಿಂದ ಸಂಗ್ರಹವಾಗುವ ಮಾಹಿತಿ ಆಧಾರದ ಮೇಲೆ ಮುಂದಿನ ದಿನಗಳಲ್ಲಿ ಅಧ್ಯಯನಯೋಗ್ಯ ಸಾಹಿತ್ಯ ಬರಬಹುದೇನೋ. ಅದಕ್ಕೆ ಹೆದರಿ ಆಸ್ಪತ್ರೆಗೆ ಲಗ್ಗೆ ಹಾಕಿ, ಆಕ್ಸಿಜನ್ ಸಿಲಿಂಡರ್ ಹಿಡಿದು ಕುಳಿತುಬಿಡಬೇಕೆಂಬ ಧಾವಂತಕ್ಕೆ ಬೀಳಬೇಡಿ. ರೆಮ್ೆಸಿವಿರ್ ಔಷಧ ಸಿಗಲಿಲ್ಲವೆಂದು ಆತಂಕಕ್ಕೆ ಒಳಗಾಗುವುದೇನೂ ಬೇಕಾಗಿಲ್ಲ. ಅದನ್ನು ಕೊಟ್ಟು ಅಮೆರಿಕದಲ್ಲಿ ಸಾಧಿಸಿದ್ದೇನೂ ಇಲ್ಲ. ಎಲ್ಲ ವಸ್ತುಗಳ ಬೇಡಿಕೆಯನ್ನು ಹೆಚ್ಚಿಸುವಂತೆ ಮಾಡಿ, ಅದನ್ನು ಮಾರುಕಟ್ಟೆಗೆ ತಲುಪಿಸುವಲ್ಲಿಯೂ ದೊಡ್ಡದೊಂದು ಮಾಫಿಯಾ ಇದೆ. ಈ ರೋಗ ಮನೆಯಲ್ಲೇ ಇದ್ದು ಗುಣಪಡಿಸಿಕೊಳ್ಳಬಹುದಾಗಿರುವಂಥದ್ದು. ಮಾಸ್ಕ್ ಧರಿಸುವ, ಅಂತರವನ್ನು ಕಾಪಾಡಿಕೊಳ್ಳುವ ಜೊತೆಗೆ ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಬರುವ ವರ್ಣರಂಜಿತ ವರದಿಗಳನ್ನು ನೋಡದಿರುವ ಸಂಕಲ್ಪ ಮಾಡಿದರಾಯ್ತು.

    ಈ ಸಲ ಕಳೆದ ಬಾರಿಯಂತೆ ಜನ ಸಹಕಾರಕ್ಕೆ ಕೂಡಲೇ ಧಾವಿಸಲಾರರು. ಸಹಕಾರಕ್ಕೆ ಬರಬೇಕಾದವರೂ ಈ ಬಾರಿ ಸುಸ್ತಾಗಿದ್ದಾರೆ. ಅದಕ್ಕೇ ನಮ್ಮನ್ನು ನಾವು ಎಚ್ಚರಿಕೆಯಿಂದ ನೋಡಿಕೊಳ್ಳುವುದೇ ಸೂಕ್ತವಾದ ಮಾರ್ಗ. ಅದಾಗಲೇ ಜಗತ್ತಿನಲ್ಲೇ ವೇಗವಾಗಿ ಭಾರತದ ಲಸಿಕಾ ಮಹೋತ್ಸವ ನಡೆಯುತ್ತಿದೆ. ಅಮೆರಿಕವನ್ನು ಹಿಂದಿಕ್ಕಿ ಲಸಿಕೆ ಹೆಚ್ಚು ಜನರಿಗೆ ಕೊಡಿಸುವಲ್ಲಿ ಭಾರತ ಸಫಲವಾಗಿದೆ. ಹೀಗಿರುವಾಗ ಔಷಧದ ಮೇಲೆ ವಿಶ್ವಾಸವಿಟ್ಟು, ದೇಹದ ರೋಗನಿರೋಧಕ ಶಕ್ತಿ ಮೇಲೆ ಭರವಸೆ ಇಟ್ಟು ಎಂದಿನ ಕೆಲಸಗಳಿಗೆ ಹಾಜರಾಗಬೇಕಾದ ತುರ್ತಿದೆ. ಮತ್ತೆ ಲಾಕ್​ಡೌನ್​ಗೆ ತೆರಳುವ ಸಾಮರ್ಥ್ಯ ದೇಶಕ್ಕೇನು, ಜಗತ್ತಿಗೂ ಇಲ್ಲ. ನಾವು ನಮ್ಮ ಕೆಲಸಗಳನ್ನು ಮಾಡುತ್ತಲೇ ನಮ್ಮೊಳಗಿನ ಧೈರ್ಯವನ್ನು ಬಳಸಿಕೊಂಡೇ ಕರೊನಾವನ್ನು ಸೋಲಿಸಬೇಕಿದೆ ಮತ್ತು ನಾವು ಗೆಲ್ಲಬೇಕಿದೆ.

    (ಲೇಖಕರು ಖ್ಯಾತ ವಾಗ್ಮಿ ಹಾಗೂ ಚಿಂತಕರು)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts