Gold Price: ಚಿನ್ನದ ಬೆಲೆಗಳು ಮತ್ತೊಮ್ಮೆ ಗ್ರಾಹಕರನ್ನು ಅಚ್ಚರಿಗೆ ದೂಡಿದೆ. ಎರಡು ವಾರಗಳ ಹಿಂದೆ 97,000 ರೂ.ನಲ್ಲಿದ್ದ 10 ಗ್ರಾಂ 24 ಕ್ಯಾರೆಟ್ ಗೋಲ್ಡ್ ಬೆಲೆ ಇದೀಗ 1 ಲಕ್ಷ ರೂ. ಗಡಿದಾಟಿ ಮುನ್ನುಗ್ಗುತ್ತಿದೆ. ಮಧ್ಯಪ್ರಾಚ್ಯದಲ್ಲಿ ಯುದ್ಧದ ಸಂಘರ್ಷ ಭುಗಿಲೆದ್ದ ಬೆನ್ನಲ್ಲೇ ಚಿನ್ನದ ಬೆಲೆಗಳು ತೀವ್ರ ಹೆಚ್ಚಳ ಕಂಡಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ದರ ಮುಂದಿನ ದಿನಗಳಲ್ಲಿ ಏರಲಿದೆಯೋ ಅಥವಾ ಕಡಿಮೆಯಾಗಲಿದೆಯೋ? ಎಂಬ ಪ್ರಶ್ನೆ ಸದ್ಯ ಹಲವರಲ್ಲಿದೆ. ಈ ಸಂದರ್ಭದಲ್ಲಿ, ಚಿನ್ನ ಖರೀದಿಸುವುದು ಉತ್ತಮವೇ ಎಂಬ ಪ್ರಶ್ನೆಗಳಿಗೆ ತಜ್ಞರು ಹೇಳುವುದೇನು? ಎಂಬುದರ ವಿವರ ಹೀಗಿದೆ ನೋಡಿ.
ಪ್ರಸ್ತುತ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಇಸ್ರೇಲ್ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಚಿನ್ನದ ಬೆಲೆ ಮೇಲೂ ಪರಿಣಾಮ ಬೀರಿದೆ. ಇಂಥಾ ಅನಿಶ್ಚಿತ ಸಮಯದಲ್ಲಿ, ಹೂಡಿಕೆದಾರರು ತಮ್ಮ ಹಣವನ್ನು ಷೇರು ಮಾರುಕಟ್ಟೆಗಳಿಗಿಂತ ಚಿನ್ನದಂತಹ ಸುರಕ್ಷಿತ ಸ್ವತ್ತುಗಳಲ್ಲಿ ಹೂಡಲು ಬಯಸುತ್ತಾರೆ. ಇದು ಬೆಲೆ ಏರಿಕೆಗೆ ಪ್ರತ್ಯಕ್ಷ ಹಾಗೂ ಪರೋಕ್ಷ ಕಾರಣವಾಗಿದೆ.
"ಇಸ್ರೇಲ್-ಇರಾನ್ ಯುದ್ಧವು ಮತ್ತೊಂದು ಹಂತಕ್ಕೆ ಹೋಗುವ ಸಾಧ್ಯತೆಗಳಿವೆ. ಯುಎಸ್ ನೇರವಾಗಿ ಮಧ್ಯಪ್ರವೇಶಿಸಿದರೆ, ಪರಿಸ್ಥಿತಿ ಇನ್ನಷ್ಟು ಹದಗೆಡಬಹುದು" ಎಂದು ಕೆಸಿಎಂ ಟ್ರೇಡ್‌ನ ಮುಖ್ಯ ಮಾರುಕಟ್ಟೆ ವಿಶ್ಲೇಷಕ ಟಿಮ್ ವಾಟರರ್ ಹೇಳಿದ್ದಾರೆ.
ಯುದ್ಧಗಳು, ವ್ಯಾಪಾರ ನಿರ್ಬಂಧಗಳು (ಸುಂಕಗಳು) ಮತ್ತು ಜಾಗತಿಕ ಆರ್ಥಿಕತೆಯ ಮೇಲೆ ನಿರಂತರ ಹಣದುಬ್ಬರವು ಆವರಿಸಿರುವುದರಿಂದ, ಈ ಸಮಯದಲ್ಲಿ ಚಿನ್ನವನ್ನು ಸುರಕ್ಷಿತ ಹೂಡಿಕೆ ಎಂದು ಪರಿಗಣಿಸಲಾಗಿದೆ.
ಇದನ್ನೂ ಓದಿ: ಅಲ್ಪಸಂಖ್ಯಾತರಿಗೆ ಗುತ್ತಿಗೆ ಬಳಿಕ ವಸತಿ ಯೋಜನೆಯಲ್ಲೂ ಮೀಸಲಾತಿ ಹೆಚ್ಚಳ; ಸಂಪುಟ ಸಭೆಯಲ್ಲಿ ತೀರ್ಮಾನ| reservation
ಚಿನ್ನದ ಬೆಲೆಯಲ್ಲಿ ಮತ್ತಷ್ಟು ಹೆಚ್ಚಳ ಕಾಣುವ ಸಾಧ್ಯತೆಗಳಿವೆ ಎಂಬ ಪ್ರಶ್ನೆ ಉದ್ಬವಗೊಂಡಿದೆ. ಈ ಕುರಿತಂತೆ ಗ್ರಾಹಕರಲ್ಲಿ ಕೂಡ ಸಾಕಷ್ಟು ಗೊಂದಲಗಳು ಮೂಡಿವೆ. ಗೋಲ್ಡ್ ದರ ಭವಿಷ್ಯದ ಬಗ್ಗೆ ತಜ್ಞರು ಮಿಶ್ರ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. “ಮಾರುಕಟ್ಟೆ ಅಸ್ಥಿರವಾಗಿರುತ್ತದೆ. ಯುದ್ಧದ ಭೀತಿ ಚಿನ್ನದ ದರವನ್ನು ಬೆಂಬಲಿಸುತ್ತಿದ್ದರೆ, ಫೆಡ್ ನಿರ್ಧಾರಗಳು ಬೆಲೆ ಏರಿಕೆಯನ್ನು ತಡೆಹಿಡಿಯುತ್ತಿವೆ” ಎಂದು ರಾಹುಲ್ ಕಲಾಂತ್ರಿ (ಮೆಹ್ತಾ ಈಕ್ವಿಟೀಸ್) ಹೇಳಿದ್ದಾರೆ.
“ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆ ಇಳಿಕೆಯಾದರೆ, ಚಿನ್ನದ ಬೆಲೆಗಳು ಮತ್ತಷ್ಟು ಕುಸಿಯುವ ಸಾಧ್ಯತೆಯಿದೆ. ಶಾಂತಿ ಮಾತುಕತೆ ಪ್ರಾರಂಭವಾದರೆ, ದರಗಳು ಇಳಿ ಮುಖ ಕಾಣಲಿದೆ” ಎಂದು ಅಕ್ಷಾ ಕಾಂಬೋಜ್ (IBJA) ಅಭಿಪ್ರಾಯಿಸಿದ್ದಾರೆ.
ಚಿನ್ನದ ಬೆಲೆಗಳು ಪ್ರಸ್ತುತ ಅಂತಾರಾಷ್ಟ್ರೀಯ ರಾಜಕೀಯ ಮತ್ತು ಅಮೆರಿಕ ಆರ್ಥಿಕ ನಿರ್ಧಾರಗಳ ನಡುವೆ ಹರಿದು ಹೋಗುತ್ತಿವೆ. ಈ ಹಿನ್ನಲೆ, ಖರೀದಿದಾರರು ಮತ್ತು ಹೂಡಿಕೆದಾರರು ಮಾರುಕಟ್ಟೆಯನ್ನು ಎಚ್ಚರಿಕೆಯಿಂದ ಗಮನಿಸುವುದು ಮತ್ತು ತಿಳುವಳಿಕೆಯುಳ್ಳ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಉತ್ತಮ,(ಏಜೆನ್ಸೀಸ್).