ನ್ಯೂಸ್

ರೇಣುಕಸ್ವಾಮಿ ಕೊಲೆ ಕೇಸ್​; ದರ್ಶನ್​ಗೆ ಮನೆಯೂಟದ ಭಾಗ್ಯ ಕರುಣಿಸುತ್ತಾ ನ್ಯಾಯಾಲಯ

ಬೆಂಗಳೂರು: ಚಿತ್ರದುರ್ಗ ಮೂಲದ ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಸೇರಿರುವ ನಟ ದರ್ಶನ್​ ಮನೆ ಊಟ, ಹಾಸಿಗೆ ಹಾಗೂ ಕೆಲವು ಪುಸ್ತಕಗಳು ಬೇಕೆಂದು ಕೋರಿ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದು, ಇಂದು (ಆಗಸ್ಟ್​ 20) ನ್ಯಾಯಾಲಯ ಅರ್ಜಿ ವಿಚಾರಣೆ ನಡೆಸಲಿದೆ.

ಕಳೆದ ಬಾರಿ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯವು ಜೈಲು ಅಧಿಕಾರಿಗಳು ಈ ಬಗ್ಗೆ ನಿರ್ಣಯ ಕೈಗೊಂಡು ವರದಿ ಸಲ್ಲಿಸುವಂತೆ ಸೂಚಿಸಿತ್ತು. ಜೈಲು ಅಧಿಕಾರಿಗಳು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದು, ಇಂದು (ಆಗಸ್ಟ್​20) ಹೈಕೋರ್ಟ್ ಏಕ ಸದಸ್ಯ ಪೀಠ ತನ್ನ ನಿರ್ಣಯ ಪ್ರಕಟಿಸುವ ಸಾಧ್ಯತೆ ಇದೆ. 

ಸುದ್ದಿ ಮೂಲಗಳು ಹೇಳುವ ಪ್ರಕಾರ ಜೈಲಿನ ಅಧಿಕಾರಿಗಳು ನಟ ದರ್ಶನ್​ಗೆ ಮನೆಯೂಟ ಹಾಗೂ ಹಾಸಿಗೆಯ ಅವಶ್ಯಕತೆವಿಲ್ಲವೆಂದು ವರದಿ ನೀಡಿದ್ದಾರೆ ಎಂದು ಹೇಳಲಾಗಿದ್ದು, ವೈದ್ಯಾಧಿಕಾರಿಗಳು ಸಹ ನ್ಯಾಯಾಲಯದ ಮುಂದೆ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಅಂತಿಮವಾಗಿ ನ್ಯಾಯಾಲಯ ಕೈಗೊಳ್ಳುವ ನಿರ್ಣಯದ ಮೇಲೆ ದರ್ಶನ್​ ಸಲ್ಲಿಸಿರುವ ಅರ್ಜಿ ಇತ್ಯರ್ಥಗೊಳ್ಳುತ್ತದೆ.

ರೇಣುಕಸ್ವಾಮಿ ಹತ್ಯೆ ಪ್ರಕರಣದಲ್ಲಿ ಜೈಲು ಪಾಲಾಗಿರುವ ನಟ ದರ್ಶನ್​ ಆ್ಯಂಡ್​ ಗ್ಯಾಂಗ್​ಗೆ ನ್ಯಾಯಾಲಯ ಆಗಸ್ಟ್​ 28ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದು, ಪೊಲೀಸರು ತನಿಖೆಯನ್ನು ಮುಂದುವರೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು 200ಕ್ಕೂ ಹೆಚ್ಚು ಸಾಕ್ಷ್ಯಗಳನ್ನು ಸಂಗ್ರಹಿಸಿದ್ದು, ಶೇ. 70ರಷ್ಟು ಸಾಕ್ಷ್ಯಗಳ ಎಫ್​ಎಸ್​ಎಲ್ ವರದಿಗಳು ಪೊಲೀಸರ ಕೈ ಸೇರಿವೆ. ಇನ್ನುಳಿದ ಸಾಕ್ಷ್ಯಗಳ ಎಫ್​ಎಸ್​ಎಲ್ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಹೈದರಾಬಾದ್​ಗೆ ಕಳಿಸಲಾಗಿರುವ ಎಲೆಕ್ಟ್ರಾನಿಕ್ ಮತ್ತು ಡಿಜಿಟಲ್ ಉಪಕರಣಗಳು, ಸಿಸಿ ಕ್ಯಾಮೆರಾ, ಆಡಿಯೋ ಸ್ಯಾಂಪಲ್ಸ್, ಮೊಬೈಲ್ ಡೇಟಾ ರಿಪೋರ್ಟ್ ಎಫ್​ಎಸ್​ಎಲ್ ವರದಿಗಳು ಮಾತ್ರವೇ ಬರಬೇಕಿದೆ. ಇನ್ನು 30% ವರದಿಗಳು ಮಾತ್ರವೇ ಬರಬೇಕಿದ್ದು, ಈ ವರದಿಗಳು ಪೊಲೀಸರ ಕೈ ಸೇರಿದ ನಂತರ ನ್ಯಾಯಾಲಯಕ್ಕೆ ಪೊಲೀಸರು ಚಾರ್ಜ್​ಶೀಟ್​ ಸಲ್ಲಿಸಲಿದ್ದಾರೆ.