Sir Creek: ಸರ್ ಕ್ರೀಕ್ ಪ್ರದೇಶದ ಕಡೆಗೆ ಯಾವುದೇ ದುಸ್ಸಾಹಸಕ್ಕೆ ಪಾಕಿಸ್ತಾನ ಮುಂದಾಗಬಾರದು, ಒಂದು ವೇಳೆ ಆ ರೀತಿಯ ದುಸ್ಸಾಹಸಕ್ಕೆ ಅದು ಕೈ ಹಾಕಿದರೆ ಇತಿಹಾಸ ಮತ್ತು ಭೌಗೋಳಿಕತೆಯನ್ನು ಬದಲಾಯಿಸಬಹುದಾದ ಪ್ರತಿಕ್ರಿಯೆಯನ್ನು ನೀಡಬೇಕಾಗುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಎಚ್ಚರಿಕೆ ನೀಡಿದ್ದಾರೆ.
ಗುರುವಾರ (ಅ 2) ಗುಜರಾತ್‌ನ ಭುಜ್‌ನಲ್ಲಿರುವ ಸೇನಾ ನೆಲೆಯಲ್ಲಿ ದಸರಾ ಆಚರಣೆ ಮತ್ತು 'ಶಸ್ತ್ರ ಪೂಜೆ' ವೇಳೆ ಮಾತನಾಡಿದ ರಕ್ಷಣಾ ಸಚಿವರು, ಸರ್ ಕ್ರೀಕ್ ಪ್ರದೇಶದ ಕಡೆಗೆ ಆಕ್ರಮಣ ನಡೆಸಿದರೆ ಅದಕ್ಕೆ ತಕ್ಕ ಪ್ರತಿಕ್ರಿಯೆ ನೀಡಬನೇಕಾಗುತ್ತದೆ ಎಂದರು. ಇದೇ ವೇಳೆ ಆಪರೇಷನ್ ಸಿಂಧೂರ ಸಮಯದಲ್ಲಿ ಸಶಸ್ತ್ರ ಪಡೆಗಳ ಪ್ರಯತ್ನಗಳನ್ನು ಮುಕ್ತಕಂಠದಿಂದ ಶ್ಲಾಘಿಸಿದರು.
ಇದನ್ನೂ ಓದಿ:ಕಾಲ್ತುಳಿತ ದುರಂತ; ಟಿವಿಕೆ ವಿಜಯ್ ಆರೋಪಕ್ಕೆ ಕರೂರು ಡಿಎಂಕೆ ನಾಯಕ ಸೆಂಥಿಲ್ ಬಾಲಾಜಿ ಹೇಳಿದ್ದೇನು?| V Senthil Balaji 1965 ರ ಯುದ್ಧದಲ್ಲಿ, ಭಾರತೀಯ ಸೇನೆ ಲಾಹೋರ್ ತಲುಪುವ ಸಾಮರ್ಥ್ಯವನ್ನು ಪ್ರದರ್ಶಿಸಿತ್ತು. ಇಂದು ಅದೇ ರೀತಿ ಕರಾಚಿಗೆ ಹೋಗುವ ಮಾರ್ಗವು ತೊರೆಯ ಮೂಲಕ ಹಾದುಹೋಗುತ್ತದೆ ಎಂಬುದನ್ನು ಪಾಕಿಸ್ತಾನ ನೆನಪಿನಲ್ಲಿಡಬೇಕು. ಸ್ವಾತಂತ್ರ್ಯ ಸಿಕ್ಕು 78 ವರ್ಷಗಳು ಕಳೆದರೂ, ಸರ್ ಕ್ರೀಕ್ ಪ್ರದೇಶದಲ್ಲಿ ಗಡಿ ವಿವಾದ ಇನ್ನು ಮುಂದುವರೆದಿದೆ, ಭಾರತವು ಈ ಸಮಸ್ಯೆಯನ್ನು ಮಾತುಕತೆಯ ಮೂಲಕ ಪರಿಹರಿಸಲು ಪದೇ ಪದೇ ಪ್ರಯತ್ನಿಸಿದೆ, ಆದರೆ ಪಾಕಿಸ್ತಾನದ ದೋಷಪೂರಿತ ಮತ್ತು ಅಸ್ಪಷ್ಟ ನಿಲುವುಗಳಿಂದ ಅದು ಹಾಗೇ ಉಳಿದಿದೆ ಎಂದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆ ತನ್ನ ಉದ್ದೇಶಗಳನ್ನು ಸಾಧಿಸಿದೆ. ಮತ್ತೇ ಪರಿಸ್ಥಿತಿಯನ್ನು ಉಲ್ಬಣಗೊಳಿಸುವ ಮೂಲಕ ಪಾಕಿಸ್ತಾನದೊಂದಿಗೆ ಯುದ್ಧ ಪ್ರಾರಂಭಿಸುವುದು ನಮ್ಮ ಗುರಿಯಲ್ಲ, ಗಡಿಯಾಚೆಗಿನ ಭಯೋತ್ಪಾದನೆಯ ವಿರುದ್ಧ ಭಾರತದ ನಿರಂತರ ಹೋರಾಟ ಮುಂದುವರಿಯುತ್ತದೆ. ಪಾಕಿಸ್ತಾನ ಲೇಹ್ ನಿಂದ ಸರ್ ಕ್ರೀಕ್ ವರೆಗೆ ಭಾರತದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಲು ಅನೇಕ ಪ್ರಯತ್ನ ಮಾಡಿತು, ಆದರೆ ಅವೆಲ್ಲವೂ ವಿಫಲವಾದವು ಎಂದು ಹೇಳಿದರು. ಪಹಲ್ಗಾಮ ದಾಳಿಯ ನಂತರ ಪ್ರತೀಕಾರದ ಸಂದರ್ಭದಲ್ಲಿ ಭಾರತೀಯ ಪಡೆಗಳು ಯಾವಾಗ ಬೇಕಾದರೂ ಮತ್ತು ಎಲ್ಲಿ ಬೇಕಾದರೂ ಪಾಕಿಸ್ತಾನಕ್ಕೆ ನಷ್ಟವನ್ನುಂಟುಮಾಡಬಹುದು ಎಂಬ ಸಂದೇಶವನ್ನು ಜಗತ್ತಿಗೆ ರವಾನಿಸಿದವು ಎಂದರು.
ಆಪರೇಷನ್ ಸಿಂಧೂರ ಕಾರ್ಯಾಚರಣೆಯನ್ನು ಅತ್ಯಂತ ವೇಗವಾಗಿ ಕಾರ್ಯಗತಗೊಳಿಸಲು ಸಹಾಯ ಮಾಡಿದ ಸಶಸ್ತ್ರ ಪಡೆಗಳ ಜಂಟಿ ಪ್ರಯತ್ನಗಳನ್ನು ಶ್ಲಾಘಿಸಿದ ರಾಜನಾಥ್ ಸಿಂಗ್, ಆಪರೇಷನ್ ಸಿಂಧೂರ ಯಶಸ್ಸಿಗಾಗಿ ಸೈನಿಕರಿಗೆ ಮತ್ತು ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು. ಸೇನೆಯ ಧೈರ್ಯ, ಶೌರ್ಯ ಭಾರತದ ಸಾರ್ವಭೌಮತ್ವ ಮತ್ತು ಸಮಗ್ರತೆ ರಕ್ಷಿಸುವುದನ್ನು ಮುಂದುವರಿಸುವ ವಿಶ್ವಾಸವಿದೆ ಎಂದು ಹೇಳಿದರು. ಭೂಸೇನೆ, ವಾಯುಪಡೆ ಮತ್ತು ನೌಕಾಪಡೆಗಳನ್ನು ಭಾರತದ ಶಕ್ತಿಯ ಮೂರು ಸ್ತಂಭಗಳು ಎಂದು ಬಣ್ಣಿಸಿದ ಸಿಂಗ್, ಇವು ಮೂರು ಒಟ್ಟಾಗಿ ಕೆಲಸ ಮಾಡಿದಾಗ ಮಾತ್ರ ಭಾರತ ಪ್ರತಿಯೊಂದು ಸವಾಲನ್ನು ಪರಿಣಾಮಕಾರಿಯಾಗಿ ಎದುರಿಸಲು ಸಾಧ್ಯವಾಗುತ್ತದೆ, ನಮ್ಮ ಶಸ್ತ್ರಾಸ್ತ್ರಗಳು ಕೇವಲ ಸಾಧನಗಳಲ್ಲ. ಆಯುಧಗಳು ಕೇವಲ ಶಕ್ತಿಯನ್ನು ಪ್ರದರ್ಶಿಸಲು ಅಲ್ಲ. ಬದಲಿಗೆ , ಅವು ಸದಾಚಾರವನ್ನು ಸ್ಥಾಪಿಸುವ ಸಾಧನ ಎಂದರು.
ಏನಿದು ಸರ್ ಕ್ರೀಕ್
ಸರ್ ಕ್ರೀಕ್ ಪ್ರದೇಶವು ಗುಜರಾತ್‌ನ ರಣ್ ಆಫ್ ಕಚ್ ಮತ್ತು ಪಾಕಿಸ್ತಾನದ ನಡುವಿನ 96 ಕಿ.ಮೀ ಉದ್ದದ ಉಬ್ಬರವಿಳಿತದ ನದೀಮುಖವಾಗಿದೆ. ಎರಡೂ ಕಡೆಯವರು ಸಮುದ್ರ ಗಡಿ ರೇಖೆಗಳ ವಿಭಿನ್ನ ವ್ಯಾಖ್ಯಾನಗಳಿಂದಾಗಿ ಇದು ವಿವಾದಿತ ಪ್ರದೇಶವಾಗಿದೆ.(ಏಜೆನ್ಸೀಸ್)