ಆಧುನೀಕರಣದಿಂದ ಮನುಷ್ಯ ಸಮಾಜಕ್ಕೆ ಆರ್ಥಿಕ ಅಭಿವೃದ್ಧಿ, ಹೆಚ್ಚಿನ ಸೌಲಭ್ಯ, ಸೌಕರ್ಯಗಳು ಸಿಗುತ್ತದಾದರೂ ನೈಸರ್ಗಿಕ ಸಂಪನ್ಮೂಲಗಳು ಮತ್ತು ಸೀಮಿತ ಭೂಪ್ರದೇಶದ ಮೇಲೆ ಒತ್ತಡ ಹೆಚ್ಚುತ್ತದೆ. ಅತಿಯಾದ ಆಧುನೀಕರಣದಿಂದ ವನ್ಯಜೀವಿಗಳ ಮೇಲಿನ ಒತ್ತಡದ ಪ್ರಮಾಣ ಮತ್ತು ಕುತ್ತುಗಳು ತಾಳಿಕೊಳ್ಳದಷ್ಟು ಮಟ್ಟಕ್ಕೆ ತಲುಪಿದೆ.
ಎಲ್ಲರೂ ಆಧುನೀಕರಣವನ್ನು ಹೊಗಳುವುದು ಸಾಮಾನ್ಯ. ಆದರೆ ಒಂದೆರಡು ಹೆಜ್ಜೆ ಹಿಂದೆ ನಿಂತು ಅದು ಹೇಗೆ ನಮ್ಮ ನಿಸರ್ಗ ಮತ್ತು ವನ್ಯಜೀವಿಗಳ ಮೇಲೆ ಪರಿಣಾಮ ಬೀರುತ್ತವೆ ಎಂಬುದನ್ನು ಯೋಚಿಸುವುದಿಲ್ಲ. ಉದಾಹರಣೆಗೆ ಈಗ ಸಂಪೂರ್ಣಗೊಳ್ಳುತ್ತಿರುವ ಬೆಂಗಳೂರು-ಮೈಸೂರು ಹೆದ್ದಾರಿ ಬಗ್ಗೆ ಕೊಂಡಾಡುತ್ತಿದ್ದೇವೆ. ಆದರೆ ಆ ಹೆದ್ದಾರಿಯಿಂದ ರಾಮನಗರ, ಚನ್ನಪಟ್ಟಣದ ಸುತ್ತಮುತ್ತಲಿರುವ ಡೆಕ್ಕನ್ ಪ್ರಸ್ಥಭೂಮಿಯ ಭಾಗವಾಗಿರುವ ಕಲ್ಲು ಬೆಟ್ಟಗಳನ್ನು, ಮತ್ತು ಚಿರತೆ, ಕರಡಿಗಳಿಗೆ ಆವಾಸಸ್ಥಾನವಾದ ಅಲ್ಲಿನ ಕಾಡುಗಳನ್ನು ಛಿದ್ರೀಕರಿಸಿ ಅವುಗಳು ರಸ್ತೆ ಅಪಘಾತಗಳಲ್ಲಿ ಸಾಯುವ ಹಾಗೆ ಆಗಿರುವುದನ್ನು ರ್ಚಚಿಸುತ್ತಿಲ್ಲ. ಹೆದ್ದಾರಿ ಬೇಡವೆಂದಲ್ಲ, ಆದರೆ ಯೋಜನೆ ಅನುಷ್ಠಾನಗೊಳಿಸಿದವರು ವನ್ಯಜೀವಿ ಸಂರಕ್ಷಣೆಯ ಕ್ರಮಗಳ ಬಗ್ಗೆ ಯೋಚಿಸಿದ ಹಾಗೆ ಕಾಣುತ್ತಿಲ್ಲ.
ಮಾಹಿತಿ ತಂತ್ರಜ್ಞಾನ, ಡಿಜಿಟೀಲಿಕರಣಗಳಿಂದ ವನ್ಯಜೀವಿ ಛಾಯಾಚಿತ್ರಗ್ರಹಣ, ಪ್ರವಾಸೋದ್ಯಮ, ಎಲ್ಲವೂ ಹೆಚ್ಚಿವೆ. ಇದರಿಂದ ವನ್ಯಜೀವಿಗಳ ಬಗ್ಗೆ ಒಂದು ರೀತಿಯ ನೀರಿನ ಗುಳ್ಳೆಯಂತಹ ಆಸಕ್ತಿ ಹುಟ್ಟಿದೆ. ವನ್ಯಜೀವಿ ಸಂರಕ್ಷಣೆ ಎಂದರೆ ಛಾಯಾಗ್ರಹಣ, ಚಿತ್ರೀಕರಣ, ಹಕ್ಕಿ ಹಬ್ಬ, ಕಪ್ಪೆ ಹಬ್ಬ, ಉರಗ ಹಬ್ಬ, ಆನ್ಲೈನ್ ಪೆಟಿಷನ್.. ಇಂಥವುಗಳ ನಡುವೆ ವನ್ಯಜೀವಿಗಳು ಎದುರಿಸುತ್ತಿರುವ ಆವಾಸ ಸ್ಥಾನದ ನಾಶ, ಛಿದ್ರೀಕರಣ, ಕಳ್ಳಬೇಟೆ, ಇನ್ನಿತರ ಪ್ರಮುಖ ಅಪಾಯಗಳ ವಿರುದ್ಧ ಹೋರಾಡುವ ಪ್ರವೃತ್ತಿಯೇ ಹೋಗಿಬಿಡುತ್ತಿದೆ.
ಕೆಲವರಂತೂ ಸಾಮಾಜಿಕ ಜಾಲತಾಣಗಳಲ್ಲಿ ಅಭಿಪ್ರಾಯಗಳನ್ನು ಹಾಕಿದರೆ ಅದೇ ವನ್ಯಜೀವಿ ಸಂರಕ್ಷಣೆ ಎಂದುಕೊಂಡುಬಿಟ್ಟಿದ್ದಾರೆ. ಹೋರಾಟ ನಡೆಸಲು ಚೂರುಪಾರು ಆಸಕ್ತಿಯಿರುವವರು ಕೂಡ ಮಾಹಿತಿ ಕೊರತೆ, ಪ್ರಚಾರದ ಗೀಳಿನಿಂದ ಮಾಧ್ಯಮ, ಸಮಾಜ, ನ್ಯಾಯಾಲಯಕ್ಕೂ ಸುಳ್ಳು ಮಾಹಿತಿ ನೀಡಿ ವನ್ಯಜೀವಿ ಸಂರಕ್ಷಣೆ ಎಂಬ ಪದಕ್ಕೆ ಸಮಾಜದಲ್ಲಿ ತಪ್ಪು ಅಭಿಪ್ರಾಯ ಮತ್ತು ಜಿಗುಪ್ಸೆ ಬರುವ ಹಾಗೆ ಮಾಡಿದ್ದಾರೆ. ಇತ್ತೀಚಿಗೆ ಹುಬ್ಬಳ್ಳಿ-ಅಂಕೋಲಾ ರೈಲು ಮಾರ್ಗದ ಬಗ್ಗೆ ನ್ಯಾಯಾಲಯದಲ್ಲಿ ದಾವೆ ಹೂಡಿದ ಬೆಂಗಳೂರಿನ ಸಂಸ್ಥೆಯೊಂದು ಈ ಪ್ರಸ್ತಾಪಿತ ರೈಲ್ವೆ ಹಳಿ ಕಾಳಿ, ಹುಲಿ ಪ್ರದೇಶದ ಪರಿಸರ ಸೂಕ್ಷ್ಮ ವಲಯದೊಳಗೆ ಅನುಷ್ಠಾನಗೊಳ್ಳುವುದು ಎಂದು ಹೇಳಿದೆ. ವಾಸ್ತವವಾಗಿ ಇದು ತಪ್ಪು ಮಾಹಿತಿ. ಇಂತಹ ಹಾದಿತಪ್ಪಿಸುವ ಮಾಹಿತಿಗಳಿಂದ ನ್ಯಾಯಾಲಯಗಳು ಎಲ್ಲಾ ವನ್ಯಜೀವಿ ಸಂರಕ್ಷಣೆಯ ದಾವೆಗಳನ್ನು ಅನುಮಾನದ ದೃಷ್ಟಿಯಿಂದ ನೋಡುವಂತಾಗಿದೆ. ಹಕ್ಕಿ ಹಬ್ಬ, ಛಾಯಾಗ್ರಹಣ, ಪ್ರವಾಸೋದ್ಯಮ ಈ ರೀತಿಯ ಪರಿಸರಪ್ರೇಮ ಕೂಡ ಬೇಕು, ಆದರೆ ನೈಜ ಸಮಸ್ಯೆಗಳನ್ನು ಕಡಿಮೆಗೊಳಿಸುವ ಕಾರ್ಯಗಳ ಜೊತೆ ಇವನ್ನು ಆಚರಿಸಿದರೆ ಮಾತ್ರ ಅರ್ಥವಿರುತ್ತದೆ.
ಈ ವರ್ಷದ ಘೋಷವಾಕ್ಯ ‘ವನ್ಯಜೀವಿ ಸಂರಕ್ಷಣೆಯಲ್ಲಿ ಸಹಭಾಗಿತ್ವ’. ಹುಲಿ, ಆನೆ, ತೋಳ, ಪಕ್ಷಿಗಳು, ಉಭಯಚರಿಗಳು, ಸ್ಥಳೀಯ ಮರಗಿಡಗಳು ಹೀಗೆ - ಎಲ್ಲವೂ ವಾಸ್ತವವಾಗಿ ಸಂರಕ್ಷಣೆಯಾಗುವ ನಿಟ್ಟಿನಲ್ಲಿ ಭಾವನಾತ್ಮಕವಾಗಿ ಆದರೆ ವೈಜ್ಞಾನಿಕ ಆಧಾರಿತ ಮಾಹಿತಿಗಳೊಂದಿಗೆ, ನಿಜವಾದ ಸಮಸ್ಯೆಗಳಿಗೆ ಸ್ಪಂದಿಸಿ, ಬಗೆಹರಿಸುವತ್ತ ನಮ್ಮನ್ನು ತೊಡಗಿಸಿಕೊಳ್ಳೋಣ. ಇದರಲ್ಲಿ ಅರಣ್ಯ ಇಲಾಖೆ, ಸಾರ್ವಜನಿಕರು, ವನ್ಯಜೀವಿ ಸಂರಕ್ಷಕರು, ಮಾಧ್ಯಮ, ರಾಜಕಾರಣಿಗಳು... ಹೀಗೆ ಎಲ್ಲರ ಸಹಭಾಗಿತ್ವ ಅವಶ್ಯ.