ಕಾಡಾನೆ ಮುಂದೆ ಬೈಕ್​ನಿಂದ ಬಿದ್ದ ಮಹಿಳೆ 
ನ್ಯೂಸ್

ಬೈಕ್ ಎದುರು ದಿಢೀರ್ ಕಾಡಾನೆ ಪ್ರತ್ಯಕ್ಷ; ಹೆದರಿ ಕೆಳಗೆ ಬಿದ್ದ ಮಹಿಳೆ, ಮುಂದೇನಾಯ್ತು? | Assam Elephant

Assam Elephant: ಹೆದ್ದಾರಿಯಲ್ಲಿ ಬೈಕ್‌ನಲ್ಲಿ ಹೋಗುತ್ತಿದ್ದಾಗ ದಿಢೀರ್ ಕಾಡಾನೆ ಎದುರಿಗೆ ಬಂದರೆ ಪರಿಸ್ಥಿತಿ ಹೇಗಿರುತ್ತೆ? ಇಂತಹದ್ದೇ ಘಟನೆ ಅಸ್ಸಾಂನ ಧೇಮಾಜಿ ಜಿಲ್ಲೆಯ ಜೊನೈ ಬಳಿ ನಡೆದಿದೆ. ಹೆದ್ದಾರಿಯಲ್ಲಿ ಕಾಡಾನೆ ಎದುರಾಗುತ್ತಿದ್ದಂತೆ ಬೈಕ್ ಸವಾರನ ನಿಯಂತ್ರಣ ತಪ್ಪಿ ಹಿಂಬದಿ ಕುಳಿತಿದ್ದ ಮಹಿಳೆ ರಸ್ತೆಯ ಮೇಲೆ ಬಿದ್ದಿದ್ದಾರೆ. ಆನೆ ಎದುರಲ್ಲೇ ಬಿದ್ದಿದ್ದರೂ ಅದೃಷ್ಟವಶಾತ್ ಇಬ್ಬರೂ ಯಾವುದೇ ಗಾಯಗಳಿಲ್ಲದೆ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ನವೆಂಬರ್ 24ರಂದು ಲೆಕು ಬೀಟ್ ಸಮೀಪದ ನಾಲ್ಕು ಪಥದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ಬೈಕ್‌ನಲ್ಲಿ ಸವಾರ ಮತ್ತು ಹಿಂಬದಿ ಸವಾರರಾಗಿ ಮಹಿಳೆ ಪ್ರಯಾಣಿಸುತ್ತಿದ್ದಾಗ, ಕಾಡಾನೆಯೊಂದು ಏಕಾಏಕಿ ರಸ್ತೆ ಎದುರು ಕಾಣಿಸಿಕೊಂಡಿದೆ. ಆನೆಯನ್ನು ಕಂಡು ಗಾಬರಿಗೊಂಡ ಸವಾರನ ಬೈಕ್ ನಿಯಂತ್ರಣ ತಪ್ಪಿದ್ದು, ಮಹಿಳೆ ರಸ್ತೆಯ ಮೇಲೆ ಬಿದ್ದಿದ್ದಾರೆ.

ಆನೆಯ ಮುಂದೆಯೇ ಬಿದ್ದ ಮಹಿಳೆ

ಈ ವೇಳೆ ಮಹಿಳೆ ಆನೆಯ ಎದುರಲ್ಲೇ ಬಿದ್ದಿದ್ದರೂ, ಆನೆ ದಾಳಿ ಮಾಡದೆ ಸುಮ್ಮನೆ ನಿಂತಿತ್ತು. ಇದರಿಂದ ಇಬ್ಬರೂ ಸುರಕ್ಷಿತವಾಗಿ ಅಲ್ಲಿಂದ ಪಾರಾಗಿದ್ದಾರೆ. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೋಡುಗರಲ್ಲಿ ಆತಂಕ ಮೂಡಿಸಿದೆ.

ಹೆದ್ದಾರಿಯಲ್ಲಿ ಕೆಲಕಾಲ ಆತಂಕ

ಹೆದ್ದಾರಿಯಲ್ಲಿ ಕಾಡಾನೆ ಕಾಣಿಸಿಕೊಂಡಿದ್ದರಿಂದ ಆ ಮಾರ್ಗದಲ್ಲಿ ಸಂಚರಿಸುತ್ತಿದ್ದ ಇತರ ವಾಹನ ಸವಾರರು ಕೂಡ ಆತಂಕಗೊಂಡಿದ್ದಾರೆ. ಕೆಲಕಾಲ ವಾಹನ ಸಂಚಾರಕ್ಕೂ ಅಡ್ಡಿಯಾಗಿದೆ ಎಂದು ವರದಿಯಾಗಿದೆ.

ಅಸ್ಸಾಂ ಮತ್ತು ಅರುಣಾಚಲ ಪ್ರದೇಶದ ಗಡಿಯಲ್ಲಿರುವ ಪೋಬಾ ಅರಣ್ಯ ಪ್ರದೇಶವು ಕಾಡಾನೆಗಳ ಸಂಚಾರಕ್ಕೆ ಪ್ರಮುಖ ತಾಣವಾಗಿದೆ. ಅರಣ್ಯ ಪ್ರದೇಶದ ಮೂಲಕ ಹೆದ್ದಾರಿ ಹಾದುಹೋಗುತ್ತಿರುವುದರಿಂದ ವನ್ಯಜೀವಿಗಳು ರಸ್ತೆ ದಾಟುವ ಸಂದರ್ಭದಲ್ಲಿ ಇಂತಹ ಘಟನೆಗಳು ಸಂಭವಿಸುತ್ತಿವೆ.

ಇದನ್ನೂ ಓದಿ: ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಮಳೆ: ಟ್ರಾಫಿಕ್‌ ಜಾಮ್​ನಿಂದ ವಾಹನ ಸವಾರರು ಹೈರಾಣು | Bengaluru Rain

ಕಾಡಾನೆಗಳು ಕಾಣಿಸಿಕೊಳ್ಳುವ ಅರಣ್ಯ ಮಾರ್ಗಗಳಲ್ಲಿ ವಾಹನ ಸವಾರರು ಎಚ್ಚರಿಕೆಯಿಂದ ಸಂಚರಿಸಬೇಕು, ವನ್ಯಜೀವಿಗಳಿಗೆ ತೊಂದರೆ ನೀಡದೆ ಸುರಕ್ಷಿತ ಅಂತರ ಕಾಯ್ದುಕೊಳ್ಳಬೇಕು ಎಂದು ಅರಣ್ಯ ಇಲಾಖೆ ಹಾಗೂ ಸ್ಥಳೀಯ ಆಡಳಿತ ಎಚ್ಚರಿಕೆ ನೀಡಿದೆ.