ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಮಳೆ: ಟ್ರಾಫಿಕ್‌ ಜಾಮ್​ನಿಂದ ವಾಹನ ಸವಾರರು ಹೈರಾಣು | Bengaluru Rain

Bengaluru Rain
ಬೆಂಗಳೂರಿನಲ್ಲಿ ಮಳೆ ಪರಿಣಾಮ ಟ್ರಾಫಿಕ್ ಕಿರಿಕಿರಿ
Published on: 

Bengaluru Rain: ಸಿಲಿಕಾನ್ ಸಿಟಿಯಲ್ಲಿ ಮೋಡ ಕವಿದ ವಾತಾವರಣ, ತಂಪು ಗಾಳಿ, ಅಲ್ಲಲ್ಲಿ ಮಳೆ.. ಹೀಗೆ ಬೆಂಗಳೂರಿನ ಹವಾಮಾನ ನಿನ್ನೆ ಇದ್ದಂತೆಯೇ ಇಂದೂ ಮುಂದುವರಿದಿದೆ. ನಗರದ ಹಲವೆಡೆ ಸಾಧಾರಣ ಮಳೆಯಾಗುತ್ತಿದ್ದು, ಮುಂದಿನ ದಿನಗಳಲ್ಲೂ ಮಳೆ ಮುಂದುವರಿಯುವ ಸಾಧ್ಯತೆಯಿದೆ. ಇತ್ತ ಮಳೆಯಿಂದ ರಸ್ತೆಗಳ ಮೇಲೆ ನೀರು ನಿಂತು ಟ್ರಾಫಿಕ್ ಜಾಮ್ ಉಂಟಾಗಿದ್ದು, ವಾಹನ ಸವಾರರು ಪರದಾಡುವಂತಾಗಿದೆ.

ಭಾರತೀಯ ಹವಾಮಾನ ಇಲಾಖೆ (IMD) ಹಾಗೂ ಸ್ಥಳೀಯ ಹವಾಮಾನ ವರದಿಗಳ ಪ್ರಕಾರ, ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ನವೆಂಬರ್ 26ರವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ. ನಗರದಲ್ಲಿ ಗರಿಷ್ಠ ತಾಪಮಾನ 26ರಿಂದ 27 ಡಿಗ್ರಿ ಸೆಲ್ಸಿಯಸ್ ಇದ್ದರೆ, ರಾತ್ರಿ ಕನಿಷ್ಠ ತಾಪಮಾನ 18ರಿಂದ 20 ಡಿಗ್ರಿ ಸೆಲ್ಸಿಯಸ್ ದಾಖಲಾಗುವ ಸಾಧ್ಯತೆಯಿದ್ದು, ಚಳಿಯ ವಾತಾವರಣ ಇರಲಿದೆ.

ವಾರಪೂರ್ತಿ ಮಳೆ ಸಾಧ್ಯತೆ

ವಾರಾಂತ್ಯದವರೆಗೂ ಬೆಂಗಳೂರು, ಹಳೆ ಮೈಸೂರು ಹಾಗೂ ಮಲೆನಾಡಿನ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮೋಡ ಕವಿದ ವಾತಾವರಣ ಇರಲಿದ್ದು, ವಾರಪೂರ್ತಿ ಅಲ್ಲಲ್ಲಿ ಮಳೆಯಾಗುವ ಸಾಧ್ಯತೆಯಿದೆ.

ಹಲವೆಡೆ ಟ್ರಾಫಿಕ್ ಜಾಮ್

ಮಳೆಯ ಪರಿಣಾಮ ನಗರದ ಪ್ರಮುಖ ರಸ್ತೆಗಳಲ್ಲಿ ನೀರು ನಿಂತಿದ್ದು, ವಾಹನ ಸಂಚಾರ ನಿಧಾನಗೊಂಡಿದೆ. ಹೊರವರ್ತುಲ ರಸ್ತೆ (ORR) ಹಾಗೂ ಐಟಿ ಕಾರಿಡಾರ್‌ನ ಮಾರತ್ತಹಳ್ಳಿ, ಕಾಡುಬೀಸನಹಳ್ಳಿ, ಬೆಳ್ಳಂದೂರು ಮತ್ತು ಕಾರ್ತಿಕ್ ನಗರ ಭಾಗಗಳಲ್ಲಿ ಮಳೆ ನೀರು ನಿಂತಿರುವುದರಿಂದ ವಾಹನ ಸವಾರರು ತೊಂದರೆ ಅನುಭವಿಸುತ್ತಿದ್ದಾರೆ.

ದೊಮ್ಮಲೂರು ಹಾಗೂ ಕೋರಮಂಗಲ ಭಾಗದಲ್ಲೂ ಸಂಚಾರ ದಟ್ಟಣೆ ಹೆಚ್ಚಾಗಿದೆ. ಶ್ರೀನಿವಾಗಿಲು ಜಂಕ್ಷನ್‌ನಿಂದ ದೊಮ್ಮಲೂರು ಕಡೆಗೆ ಹಾಗೂ ಸೋನಿ ವರ್ಲ್ಡ್ ಜಂಕ್ಷನ್ ಸುತ್ತಮುತ್ತ ವಾಹನಗಳು ನಿಧಾನವಾಗಿ ಸಾಗುತ್ತಿವೆ.

ಇದನ್ನೂ ಓದಿ: ಡಿಸೆಂಬರ್ 16ರೊಳಗೆ ಬಾಂಗ್ಲಾ ವಶ? ಹಿಂದೂಗಳ ಹತ್ಯೆಗೆ ಪ್ರತೀಕಾರ ಎಂದ ಅರ್ಜುನ್ ಸಿಂಗ್ | Arjun Singh

ಇನ್ನು ಹೆಬ್ಬಾಳದಿಂದ ಮೇಖ್ರಿ ಸರ್ಕಲ್ ಕಡೆಗೆ ಹಾಗೂ ಮೇಜರ್ ಸಂದೀಪ್ ಉನ್ನಿಕೃಷ್ಣನ್ ಜಂಕ್ಷನ್‌ನಿಂದ ಅನಂತಪುರ ಗೇಟ್ ಮಾರ್ಗದಲ್ಲೂ ವಾಹನ ಸಂಚಾರ ನಿಧಾನವಾಗಿದೆ. ಮಳೆ ಮುಂದುವರಿಯುವ ಸಾಧ್ಯತೆ ಇರುವುದರಿಂದ ವಾಹನ ಸವಾರರು ಎಚ್ಚರಿಕೆಯಿಂದ ಪ್ರಯಾಣಿಸುವಂತೆ ಸೂಚಿಸಲಾಗಿದೆ.