ನ್ಯೂಸ್

'ನನ್ನ ಪತಿ ಮತ್ತು...ಆ ಮಹಿಳೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸಿ': ಶಾಸಕನ ಪತ್ನಿಯಿಂದ ಮನವಿ

ಡೆಹ್ರಾಡೂನ್​: ನನ್ನ ಪತಿ ಹಾಗೂ ಅವರ ವಿರುದ್ಧ ಲೈಂಗಿಕ ಕಿರುಕುಳದ ಆರೋಪ ಮಾಡುತ್ತಿರುವ ಮಹಿಳೆ ಇಬ್ಬರನ್ನೂ ಮಂಪರು ಪರೀಕ್ಷೆಗೆ ಒಳಪಡಿಸಿ ಎಂದು ಬಿಜೆಪಿ ಶಾಸಕ ಮಹೇಶ್​ ನೇಗಿ ಅವರ ಪತ್ನಿ ಉತ್ತರಾಖಂಡ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಮಹೇಶ್​ ನೇಗಿ ಅವರ ಪತ್ನಿ ಈ ರೀತಿ ಮನವಿ ಮಾಡಿ ಪತ್ರ ಬರೆದಿದ್ದಾಗಿ ಪೊಲೀಸರೇ ತಿಳಿಸಿದ್ದಾರೆ. ಎಂಎಲ್​ಎ ಹಾಗೂ ಅವರ ವಿರುದ್ಧ ಆರೋಪ ಮಾಡುತ್ತಿರುವ ಮಹಿಳೆಯನ್ನು ಮಂಪರು ಪರೀಕ್ಷೆಗೆ ಒಳಪಡಿಸುವಂತೆ ಶಾಸಕರ ಪತ್ನಿ ಪತ್ರ ಬರೆದಿದ್ದಾರೆ. ಹಾಗೇ, ಮಹಿಳಾ ಮತ್ತು ಮಕ್ಕಳ ಹಕ್ಕು ರಕ್ಷಣಾ ಆಯೋಗದಿಂದಲೂ ಪತ್ರ ಬಂದಿದೆ. ಆದರೆ ಸಂತ್ರಸ್ತ ಮಹಿಳೆಯ ಪತಿಯ ಹೇಳಿಕೆ ಇನ್ನೂ ದಾಖಲಾಗಿಲ್ಲ. ನಾವು ಪ್ರಕರಣದ ತನಿಖೆ ನಡೆಸುತ್ತಿದ್ದೇವೆ ಎಂದು ಡಿಎಸ್​ಪಿ ಅನೂಜ್​ ಕುಮಾರ್​ ತಿಳಿಸಿದ್ದಾರೆ. ಇದನ್ನೂ ಓದಿ: 100ಕ್ಕೂ ಹೆಚ್ಚು ತಾಸುಗಳು ಕಳೆದುಹೋದವು..’: ಕಂಗನಾಗೆ ಬಿಜೆಪಿ ಮುಖಂಡನ ಬೆಂಬಲ

ನನ್ನನ್ನು ಶಾಸಕ ಮಹೇಶ್​ ನೇಗಿ ಎರಡು ವರ್ಷಗಳಿಂದಲೂ ದೈಹಿಕವಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಮಹಿಳೆಯೋರ್ವಳು ಆರೋಪ ಮಾಡಿದ್ದಾರೆ. ಅಷ್ಟೇ ಅಲ್ಲ, ನನ್ನ ಮಗಳ ತಂದೆ ಶಾಸಕನೇ ಹೊರತು, ನನಗೆ ತಾಳಿಕಟ್ಟಿದ ಪತಿಯಲ್ಲ. ಬೇಕಿದ್ದರೆ ಡಿಎನ್​ಎ ಟೆಸ್ಟ್​ ಮಾಡಿಸಬಹುದು ಎಂದೂ ಆಕೆ ಗಂಭೀರವಾಗಿ ಸವಾಲು ಹಾಕಿದ್ದಾರೆ. ಸದ್ಯ ಪೊಲೀಸರು ಆ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.(ಏಜೆನ್ಸೀಸ್​)