ನ್ಯೂಸ್

ಅನಗತ್ಯ ವಿಳಂಬವೇಕೆ?

ಮೋಹನ್​ ಶೆಟ್ಟಿ

ಜೀವ ವಿಮೆ ಮತ್ತು ಆರೋಗ್ಯ ವಿಮೆಯ ಕಂತುಗಳ ಮೇಲಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್​ಟಿ) ದರ ತಗ್ಗಿಸಬೇಕು ಅಥವಾ ರದ್ದುಗೊಳಿಸಬೇಕು ಎಂಬ ಬೇಡಿಕೆಯ ಬಗ್ಗೆ ಪರಿಶೀಲನೆ ನಡೆಸಿ ವರದಿ ನೀಡಲು ಸಚಿವರ ಗುಂಪನ್ನು ರಚನೆ ಮಾಡಲು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ನೇತೃತ್ವದ ಜಿಎಸ್​ಟಿ ಮಂಡಳಿ ತೀರ್ಮಾನಿಸಿದೆ.

ಆರೋಗ್ಯ ವಿಮೆ ಮತ್ತು ಜೀವ ವಿಮೆ ಮೇಲೆ ಪ್ರಸ್ತುತ ಶೇಕಡ 18ರಷ್ಟು ಜಿಎಸ್​ಟಿ ವಿಧಿಸಲಾಗಿದೆ. ಇದರಿಂದ ಪಾಲಿಸಿಗಳ ಪ್ರೀಮಿಯಂ ಮೊತ್ತ ದುಬಾರಿಯಾಗಿರುವುದು ಸಾರ್ವಜನಿಕರಿಗೆ ಹೊರೆಯಾಗಿ ಪರಿಣಮಿಸಿದೆ. ಈ ವಿಮೆಗಳ ಮೇಲೆ ಶೇ.18ರಷ್ಟು ಜಿಎಸ್​ಟಿ ವಿಧಿಸಿರುವುದು ಸರಿಯಲ್ಲ ಎಂಬ ಅಭಿಪ್ರಾಯ ಪಕ್ಷಾತೀತವಾಗಿ ಕೇಳಿಬರುತ್ತಿದೆ. ಮೊದಲ ಬಾರಿಗೆ ಇದರ ಬಗ್ಗೆ ಧ್ವನಿ ಎತ್ತಿದ ಕೇಂದ್ರ ಸಾರಿಗೆ ಸಚಿವ ಗಡ್ಕರಿ ಅವರು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪತ್ರ ಬರೆದಿದ್ದರು. ಇದೀಗ ಕರ್ನಾಟಕ ಸರ್ಕಾರವೂ ಅದೇ ಬೇಡಿಕೆಯನ್ನು ಮುಂದಿಟ್ಟಿದೆ.

ಇಂಥ ತುರ್ತು ವಿಷಯದ ಬಗ್ಗೆ ಜಿಎಸ್​ಟಿ ಮಂಡಳಿಯ ಇದೇ ಸಭೆಯಲ್ಲಿ ನಿರ್ಣಯ ಕೈಗೊಳ್ಳಬಹುದಿತ್ತು. ಅಲ್ಲದೆ, ವಿಮಾ ಪ್ರೀಮಿಯಂ ಮೇಲಿನ ಜಿಎಸ್​ಟಿ ಪ್ರಮಾಣವನ್ನು ತಗ್ಗಿಸಲು ಸಭೆಯಲ್ಲಿ ಸಹಮತ ವ್ಯಕ್ತವಾಗಿದ್ದರೂ, ಪರಿಶೀಲನೆಗೆ ‘ಸಚಿವರ ಗಂಪು’ ರಚಿಸುವ ಅಗತ್ಯವೇನಿತ್ತು? ಜಿಎಸ್​ಟಿ ವ್ಯವಸ್ಥೆ ಅಡಿಯಲ್ಲಿ ಸಂಗ್ರಹವಾಗುತ್ತಿರುವ ವರಮಾನ ಮೊತ್ತವು ತಿಂಗಳಿನಿಂದ ತಿಂಗಳಿಗೆ ಹೆಚ್ಚುತ್ತಿರುವ ಕಾರಣಕ್ಕೆ, ವಿಮೆ ಕಂತುಗಳ ಮೇಲಿನ ತೆರಿಗೆ ಪ್ರಮಾಣ ಕಡಿಮೆ ಮಾಡಬಹುದು ಎಂಬ ವಿಚಾರಕ್ಕೆ ಬಹುತೇಕ ರಾಜ್ಯಗಳು ಸಹಮತ ವ್ಯಕ್ತಪಡಿಸಿರುವುದು ಗಮನಾರ್ಹ.

ಹೀಗಿರುವಾಗ ಮುಂದೂಡಿಕೆ ಅಗತ್ಯವಿರಲಿಲ್ಲ. ಜಿಎಸ್​ಟಿ ಪ್ರಮಾಣ ಕಡಿಮೆ ಮಾಡಿದ್ದಲ್ಲಿ, ಕೋಟ್ಯಂತರ ಪಾಲಿಸಿದಾರರಿಗೆ ಅನುಕೂಲವಾಗುತ್ತದೆ. ವಿಮಾ ಕ್ಷೇತ್ರದ ಬೆಳವಣಿಗೆಗೂ ಪೂರಕವಾಗುತ್ತದೆ. ಅಲ್ಲದೆ, ಕ್ಯಾನ್ಸರ್ ಔಷಧ ಮೇಲಿನ ತೆರಿಗೆ ದರ ಇಳಿಸಲು ಮಂಡಳಿಯ ಸಭೆ ನಿರ್ಧರಿಸಿರುವುದು ಸ್ವಾಗತಾರ್ಹ. ಆದರೆ, ಕ್ಯಾನ್ಸರ್ ಮಾರಣಾಂತಿಕ ಕಾಯಿಲೆ ಆಗಿರುವುದರಿಂದ ತೆರಿಗೆ ದರವನ್ನು ಶೂನ್ಯಕ್ಕೆ ತಂದರೆ ರೋಗಿಗಳಿಗೆ ಸಹಕಾರಿ. ಸೂಕ್ತ ನಿರ್ಧಾರಗಳನ್ನು ಸಕಾಲದಲ್ಲಿ ತೆಗೆದುಕೊಳ್ಳುವುದು ಅಗತ್ಯ ಎಂಬುದನ್ನು ಜಿಎಸ್​ಟಿ ಮಂಡಳಿ ಮನಗಾಣಲಿ. ವಿಳಂಬ ಧೋರಣೆಯನ್ನು ಕೈಬಿಟ್ಟು, ಜನಹಿತದ ನಿರ್ಧಾರಗಳಿಗೆ ಆದ್ಯತೆ ನೀಡಲಿ.