ಸೌರಶಕ್ತಿ ಯೋಜನೆಗಳ ಗುತ್ತಿಗೆ ಪಡೆಯುವುದಕ್ಕಾಗಿ ಕೆಲವು ರಾಜ್ಯ ಸರ್ಕಾರಗಳ ಅಧಿಕಾರಿಗಳಿಗೆ ಸುಮಾರು 2,200 ಕೋಟಿ ರೂ. ಲಂಚ ನೀಡಿದರೆನ್ನಲಾದ ಪ್ರಕರಣದಲ್ಲಿ ಉದ್ಯಮಿ ಗೌತಮ್ ಅದಾನಿ ‘ದೋಷಿ’ ಎಂದು ಅಮೆರಿಕದ ನ್ಯಾಯಾಲಯ ತೀರ್ಪು ನೀಡಿದ ಬೆನ್ನಲ್ಲೇ, ‘ಭಾರತದಲ್ಲಿ ಹಗರಣ ನಡೆದಿದ್ದರೆ ಅಮೆರಿಕದ ಕೋರ್ಟ್ನಲ್ಲೇಕೆ ಪ್ರಕರಣ ದಾಖಲಾಗಬೇಕು’ ಎಂಬ ಕುತೂಹಲ ಸಹಜ. ಅದಕ್ಕೆ ಕಾರಣವಿದೆ.
‘ಒಟ್ಟು 12 ಗಿಗಾವ್ಯಾಟ್ ಸೌರಶಕ್ತಿ ವಿದ್ಯುತ್ ಪೂರೈಕೆ ಯೋಜನೆಗಳಿಗೆ ಅದಾನಿ ಸಮೂಹವು ಅಮೆರಿಕದ ಬ್ಯಾಂಕ್ಗಳಿಂದ ಮತ್ತು ಹೂಡಿಕೆದಾರರಿಂದ ನೂರಾರು ಕೋಟಿ ಡಾಲರ್ ಹಣವನ್ನು ಸಂಗ್ರಹಿಸಿತ್ತು. ಆ ಪೈಕಿ ನಿರ್ದಿಷ್ಟ ಮೊತ್ತವನ್ನು ಭಾರತದಲ್ಲಿನ ಅಧಿಕಾರಿಗಳಿಗೆ ಲಂಚದ ರೂಪದಲ್ಲಿ ನೀಡಿದ್ದನ್ನು ಅಮೆರಿಕದ ಬ್ಯಾಂಕ್ಗಳು ಮತ್ತು ಹೂಡಿಕೆದಾರರಿಗೆ ತಿಳಿಸದೇ ಮರೆಮಾಚಲಾಗಿತ್ತು’ ಎಂದು ಅಮೆರಿಕನ್ ಅಧಿಕಾರಿಗಳು ವಿವರಿಸಿದ್ದಾರೆ.
‘ನಿರ್ದಿಷ್ಟ ಪ್ರಕರಣಗಳು ವಿದೇಶಗಳಲ್ಲಿ ನಡೆದಿದ್ದರೂ ಅವು ಅಮೆರಿಕದ ಹೂಡಿಕೆದಾರರಿಗೆ ಅಥವಾ ಮಾರುಕಟ್ಟೆಗೆ ಸಂಬಂಧಿಸಿದ್ದರೆ, ಅವುಗಳ ವಿಚಾರಣೆ ನಡೆಸಲು ಅಮೆರಿಕದ ಕಾನೂನಿನಲ್ಲಿ ಅವಕಾಶ ಇದೆ. 2020ರಿಂದ 2024ರವರೆಗಿನ ಅವಧಿಯಲ್ಲಿ ಅದಾನಿ ಸಮೂಹವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಗಳಿಂದ ಮತ್ತು ಅಮೆರಿಕ ಮೂಲದ ಅಸೆಟ್ ಮ್ಯಾನೇಜ್ವೆುಂಟ್ ಸಂಸ್ಥೆಗಳಿಂದ 2 ಶತಕೋಟಿ ಯುಎಸ್ ಡಾಲರ್ ಬ್ಯಾಂಕ್ ಸಾಲ ಪಡೆದಿದೆ. ಅಮೆರಿಕದ ಹೂಡಿಕೆದಾರರಿಗೆ 1 ಶತಕೋಟಿ ಡಾಲರ್ಗಿಂತ ಹೆಚ್ಚಿನ ಬೆಲೆಯ ಷೇರುಗಳನ್ನು ಮಾರಾಟ ಮಾಡಿದೆ. ಹೀಗಾಗಿ ಅದಾನಿ ಸಮೂಹವು ಅಮೆರಿಕದ ಹೂಡಿಕೆದಾರರ ಹಣದಲ್ಲಿ ಭಾರತದ ಅಧಿಕಾರಿಗಳಿಗೆ ಲಂಚ ನೀಡಿದಂತಾಗಿದೆ’ ಎಂದು ಅಮೆರಿಕದ ಡೆಪ್ಯೂಟಿ ಅಸಿಸ್ಟಂಟ್ ಅಟಾರ್ನಿ ಜನರಲ್ ಲೀಸಾ ಮಿಲ್ಲರ್ ವಿವರಿಸಿದ್ದಾರೆ.
‘ಅದಾನಿ ಸಮೂಹವು ಅಮೆರಿಕದ ಹಣಕಾಸು ಮಾರುಕಟ್ಟೆಯ ವಿಶ್ವಾಸಕ್ಕೆ ಧಕ್ಕೆ ಮಾಡುವುದಕ್ಕಾಗಿಯೇ ವಿಸõತ ಯೋಜನೆ ರೂಪಿಸಿ ಜಾರಿಗೊಳಿಸಿದೆ’ ಎಂದು ಅಮೆರಿಕದ ಅಟಾರ್ನಿ ಬ್ರಿಯಾನ್ ಪೀಸ್ ಅಭಿಪ್ರಾಯಪಟ್ಟಿದ್ದಾರೆ.
ಹಿಂಡೆನ್ಬರ್ಗ್ ಕೂಡ ಕಾಡಿತ್ತು: 2023ರ ಜನವರಿಯಲ್ಲಿ ಅಮೆರಿಕದ ಹಿಂಡೆನ್ಬರ್ಗ್ ಸಂಶೋಧನಾ ಸಂಸ್ಥೆ ಕೂಡ ಅದಾನಿ ಮೇಲೆ ಹಲವು ಆರೋಪಗಳನ್ನು ಮಾಡಿ ಗುಲ್ಲೆಬ್ಬಿಸಿತ್ತು. ಸ್ವಲಾಭಕ್ಕಾಗಿ ಷೇರುಪೇಟೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂಬುದು ಅದರ ತಿರುಳಾಗಿತ್ತು. ಆಗ ಅದಾನಿ ಸಮೂಹ ಷೇರುಪೇಟೆಯಲ್ಲಿ 150 ಶತಕೋಟಿ ಡಾಲರ್ ನಷ್ಟ ಅನುಭವಿಸಿತ್ತು. ನಂತರದ ದಿನಗಳಲ್ಲಿ ಚೇತರಿಸಿಕೊಂಡಿತ್ತು.
ಆಧಾರರಹಿತ ಆರೋಪ ಶೀಘ್ರ ಕಾನೂನು ಪ್ರಕ್ರಿಯೆ: ಸೌರಶಕ್ತಿ ಯೋಜನೆ ಗುತ್ತಿಗೆ ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಿರುವುದಾಗಿ ಅಮೆರಿಕದ ನ್ಯಾಯ ಇಲಾಖೆ ದಾಖಲಿಸಿರುವ ಆರೋಪ ಆಧಾರರಹಿತವಾಗಿದ್ದು, ಇದರ ವಿರುದ್ಧ ಎಲ್ಲ ರೀತಿಯ ಕಾನೂನು ಪ್ರಕ್ರಿಯೆ ಕೈಗೊಳ್ಳಲಾಗುವುದು ಎಂದು ಅದಾನಿ ಸಮೂಹ ಪ್ರತಿಕ್ರಿಯೆ ನೀಡಿದೆ. ‘ಇವು ಆರೋಪಗಳಷ್ಟೇ. ಸಾಬೀತಾಗದ ಹೊರತು ಆರೋಪಿಗಳು ನಿರಪರಾಧಿಗಳೇ. ಅದಾನಿ ಸಮೂಹ ಪಾರದರ್ಶಕತೆ ಮತ್ತು ಉನ್ನತ ಮಾನದಂಡಗಳನ್ನು ಅನುಸರಿಸುತ್ತಿದೆ. ಸದಾ ಕಾಲ ಕಾನೂನನ್ನು ಪಾಲಿಸುತ್ತ ಬಂದಿದೆ. ಮುಂದೆಯೂ ಕಾನೂನು ಪಾಲಿಸುತ್ತದೆ. ಇದು ನಮ್ಮ ಎಲ್ಲ ಪಾಲುದಾರರಿಗೆ ಮತ್ತು ಉದ್ಯೋಗಿಗಳಿಗೆ ನಾವು ನೀಡುವ ಭರವಸೆಯಾಗಿದೆ’ ಎಂದು ಕಂಪನಿಯ ವಕ್ತಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯಾರ ಪಾತ್ರ ಏನು?: ಯೋಜನೆ ಗುತ್ತಿಗೆ ಪಡೆಯಲು ಆಂಧ್ರದ ಸಿಎಂ ಮತ್ತು ಅಧಿಕಾರಿಗಳನ್ನು ಇತರ ಆರೋಪಿಗಳ ಜತೆ ಸ್ವತಃ ಗೌತಮ್ ಅದಾನಿಯೇ ಹಲವು ಬಾರಿ ಭೇಟಿ ಆಗಿದ್ದರು. ವಿಸõತ ಯೋಜನೆ ತಯಾರಿಸಿದ್ದರು. ಯಾವ ಅಧಿಕಾರಿಗೆ ಯಾವಾಗ ಎಷ್ಟು ಲಂಚದ ಆಫರ್ ನೀಡಲಾಗಿದೆ ಎಂಬುದನ್ನು ಸ್ವತಃ ಸಾಗರ್ ಅದಾನಿಯೇ ತನ್ನ ಮೊಬೈಲ್ ಫೋನ್ನಲ್ಲಿ ಟ್ರ್ಯಾಕ್ ಮಾಡುತ್ತಿದ್ದ. ಇದರ ಸಾರಾಂಶವು ವಿನೀತ್ ಜೈನ್ ಮೊಬೈಲ್ನಲ್ಲಿ ಸಂಗ್ರಹವಾಗಿತ್ತು. ಲಂಚ ಪಾವತಿಯ ವಿವರಗಳನ್ನು ಪವರ್ಪಾಯಿಂಟ್ ಮತ್ತು ಎಕ್ಸೆಲ್ ಫೈಲ್ನಲ್ಲಿ ಸಂಗ್ರಹಿಸಿ ಇತರ ಆರೋಪಿಗಳ ಜತೆ ಹಂಚಿಕೊಂಡಿದ್ದು ರೂಪೇಶ್ ಅಗರ್ವಾಲ್ ಎಂದು ನ್ಯಾಯಾಲಯದ ದಾಖಲೆಗಳಲ್ಲಿ ತಿಳಿಸಲಾಗಿದೆ.
ಕೋಡ್ವರ್ಡ್ಗಳು: ಲಂಚದ ದಾಖಲೆಗಳಲ್ಲಿ ಆರೋಪಿಗಳು ನೇರವಾಗಿ ಗೌತಮ್ ಅದಾನಿ ಎಂದು ನಮೂದಿಸದೆ, ನ್ಯೂಮರೊ ಯುನೊ (ನಂಬರ್ ಒನ್), ಬಿಗ್ ಮ್ಯಾನ್ ಎಂಬ ವಿಶೇಷಣಗಳನ್ನು ಬಳಸಿದ್ದಾರೆ ಎಂದು ಆರೋಪಿಸಲಾಗಿದೆ.
ಗೌತಮ್ ಅದಾನಿ ಮತ್ತಿತರರ ವಿರುದ್ಧ ಬಂದಿರುವ ಆರೋಪಗಳು ಆ ಸಮೂಹದ ಕಂಪನಿಗಳ ಮೇಲೆ ಖಂಡಿತ ನಕಾರಾತ್ಮಕ ಪರಿಣಾಮಗಳನ್ನು ಉಂಟು ಮಾಡುತ್ತವೆ. ನಮ್ಮ ಸಂಸ್ಥೆ ಕೂಡ ರೇಟಿಂಗ್ ನೀಡುವಾಗ ಕಂಪನಿಗಳ ಆಡಳಿತ ವಿಧಾನಗಳನ್ನೂ ಪರಿಗಣಿಸುತ್ತದೆ.
| ಮೂಡೀಸ್ ರೇಟಿಂಗ್ ಏಜೆನ್ಸಿ
ದೆಹಲಿಯ ವಿದ್ಯುತ್ ವಲಯಕ್ಕೂ ಪ್ರವೇಶಿಸಲು ಅದಾನಿ ಸಮೂಹ ಪ್ರಯತ್ನಿಸಿತ್ತು. ಆದರೆ ಅದನ್ನು ಆಗಿನ ಸಿಎಂ ಅರವಿಂದ ಕೇಜ್ರಿವಾಲ್ ತಡೆದಿದ್ದರು. ಹಲವಾರು ರಾಜ್ಯಗಳಲ್ಲಿ ಅದಾನಿ ಸಮೂಹ ವಾಮಮಾರ್ಗ ಗಳಿಂದಲೇ ಗುತ್ತಿಗೆ ಪಡೆದುಕೊಂಡಿದೆ.
| ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷದ ನಾಯಕ
ಅದಾನಿ ಹಗರಣ ದಿಂದಾಗಿ ಭಾರತಕ್ಕೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅವಮಾನ ಆಗಿದೆ. ಆ ಸಮೂಹದ ಕಾರ್ಯ ನಿರ್ವಹಣೆ ಕುರಿತು ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸಲು ಜಂಟಿ ಸಂಸದೀಯ ಸಮಿತಿ ರಚಿಸಬೇಕು. ವಿದೇಶಗಳಲ್ಲಿನ ಅದರ ಹೂಡಿಕೆ ಬಗ್ಗೆಯೂ ವಿಚಾರಣೆ ನಡೆಯಲಿ.
| ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷ