Ganesh Chaturthi: ಗಣೇಶ ಚತುರ್ಥಿಯನ್ನು ಎಲ್ಲೆಡೆ ಬಹಳ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಮತ್ತೊಂದೆಡೆ ಗಣೇಶ ಹಬ್ಬದ ದಿನ ಚಂದ್ರನನ್ನು ನೋಡಬಾರದು ಎಂಬ ನಂಬಿಕೆಯ ಹಿಂದೆ ಒಂದು ಪೌರಾಣಿಕ ಕಥೆಯಿದೆ. ಹಾಗಾಗಿ ವಿಘ್ನನಿವಾರಕನನ್ನು ಪೂಜಿಸಿದ ಈ ದಿನ ಚಂದ್ರನನ್ನು ನೋಡಬಾರದು ಎಂದು ಹಿರಿಯರು ಹೇಳುತ್ತಾರೆ.
ಅದಾಗ್ಯೂ ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡಿದರೆ, ಚಂದ್ರನ ಶಾಪದಿಂದ ಮುಕ್ತಿಪಡೆಯಲು ಕೆಲವು ಪರಿಹಾರ ಕ್ರಮಗಳನ್ನು ಹಿಂದೂ ಸಂಪ್ರದಾಯದಲ್ಲಿ ಅನುಸರಿಸಲಾಗುತ್ತದೆ. ಈ ಕ್ರಮಗಳು ಭಕ್ತಿಯನ್ನು ತೋರಿಸುವ ಮತ್ತು ದೋಷವನ್ನು ತೊಡೆದುಹಾಕುವ ಉದ್ದೇಶವನ್ನು ಹೊಂದಿವೆ.
ಪಾರ್ವತಿ ಬೆವರಿನಿಂದ ರೂಪ ತಾಳಿದವನು ಗಣೇಶ. ಆದರೆ ಶಿವನ ಕೋಪಕ್ಕೆ ಗುರಿಯಾಗಿ ತಲೆ ಕಳೆದುಕೊಂಡಾಗ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಆನೆ ತಲೆಯನ್ನು ತಂದು ಗಣಪತಿಗೆ ಹಾಕಲಾಗುತ್ತದೆ. ಅತ್ಯಂತ ಬುದ್ಧಿವಂತ ಹಾಗೂ ವಿಘ್ನಹರ ಗಣೇಶ, ಚೌತಿಯ ದಿನ ತಾಯಿ ಗೌರಿಯನ್ನು ಭೂಲೋಕದಿಂದ ಕರೆದುಕೊಂಡು ಹೋಗುತ್ತಿದ್ದನು. ಇಲಿಯ ಮೇಲೆ ಕುಳಿತಿದ್ದ ಆತ ಚಂದ್ರಲೋಕಕ್ಕೆ ಬರುತ್ತಾನೆ. ಡೊಳ್ಳು ಹೊಟ್ಟೆಯ, ಆನೆ ಸೊಂಡಿಲಿನ ಗಣಪತಿಯನ್ನು ನೋಡಿ ಚಂದ್ರ ಹಾಸ್ಯ ಮಾಡಿದನು. ಇದರಿಂದ ಕೋಪಗೊಂಡ ಗಣೇಶನು, ಚತುರ್ಥಿಯ ದಿನದಂದು ಯಾರಾದರೂ ಚಂದ್ರನನ್ನು ನೋಡಿದರೆ, ಅವರ ಮೇಲೆ ತಪ್ಪು ಆರೋಪ ಬೀಳುತ್ತದೆ, ನಿನ್ನನ್ನು ಯಾರು ನೋಡ್ತಾರೋ ಅವರು ಸುಳ್ಳು ಆರೋಪಕ್ಕೆ ಗುರಿಯಾಗುತ್ತಾರೆ ಎಂದು ಶಾಪವಿಟ್ಟನು. ಈ ಕಾರಣದಿಂದ, ಗಣೇಶ ಚತುರ್ಥಿಯಂದು ಚಂದ್ರನನ್ನು ನೋಡದಿರಲು ಜನರು ಜಾಗರೂಕರಾಗಿರುತ್ತಾರೆ. ಈ ನಂಬಿಕೆಯು ಭಕ್ತರಲ್ಲಿ ಗಣೇಶನಿಗೆ ಗೌರವವನ್ನು ತೋರಿಸುವ ಮತ್ತು ಶಾಪದಿಂದ ರಕ್ಷಣೆ ಪಡೆಯುವ ಉದ್ದೇಶದಿಂದ ರೂಢಿಯಲ್ಲಿದೆ. ಆದರೆ ಕೆಲ ಗ್ರಂಥಗಳಲ್ಲಿ ಈ ಕಥೆ ಸ್ವಲ್ಪ ಭಿನ್ನವಾಗಿದೆ.
ಗಣೇಶನಿಗೆ ವಿಶೇಷ ಪೂಜೆಯನ್ನು ಮಾಡಿ, ದೀಪವನ್ನು ಹಚ್ಚಿ, ಮೋದಕ ಅಥವಾ ಲಡ್ಡುವಿನಂತಹ ನೈವೇದ್ಯವನ್ನು ಅರ್ಪಿಸಿ. ಗಣೇಶ ಮಂತ್ರವಾದ "ಓಂ ಗಂ ಗಣಪತಯೇ ನಮಃ" ಜಪವನ್ನು 108 ಬಾರಿ ಪಠಿಸಿ.
ಗಣೇಶನಿಗೆ ಕ್ಷಮೆಯಾಚಿಸಿ, ತಪ್ಪಾಗಿ ಚಂದ್ರನನ್ನು ನೋಡಿದ್ದಕ್ಕಾಗಿ ಪಶ್ಚಾತ್ತಾಪವನ್ನು ವ್ಯಕ್ತಪಡಿಸಿ. ಇದಕ್ಕಾಗಿ ಓಂ ಗಂ ಗಣಪತಯೇ ನಮಃ ಮಂತ್ರವನ್ನು 28 ಬಾರಿ ಪಠಿಸುವುದರಿಂದ ಚಂದ್ರನ ಶಾಪದಿಂದ ಮುಕ್ತಿಯಾಗುವುದೆಂದು ನಂಬಲಾಗಿದೆ.
ಬಡವರಿಗೆ ಅಥವಾ ಬ್ರಾಹ್ಮಣರಿಗೆ ಆಹಾರ, ಧಾನ್ಯ, ಅಥವಾ ಸಿಹಿತಿಂಡಿಗಳನ್ನು ದಾನ ಮಾಡಿ. ಗೋಮಾತೆಗೆ ಆಹಾರವನ್ನು ದಾನ ನೀಡಿ.
ಗಂಗಾಜಲ ಅಥವಾ ಶುದ್ಧ ನೀರಿನಿಂದ ಸ್ನಾನ ಮಾಡಿ, ಗಣೇಶನಿಗೆ ಪ್ರಾರ್ಥನೆ ಸಲ್ಲಿಸಿ.
ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ.
(ಏಜೆನ್ಸೀಸ್)
ಈ ಪರಿಹಾರಗಳನ್ನು ಭಕ್ತಿಯಿಂದ ಮಾಡುವುದರಿಂದ ಚಂದ್ರನ ಶಾಪದಿಂದ ಉಂಟಾಗುವ ದೋಷವನ್ನು ತೊಡೆದುಹಾಕಬಹುದೆಂದು ನಂಬಲಾಗಿದೆ.