ಬೆಂಗಳೂರು: ರಾಜ್ಯದಲ್ಲಿ ಪದವಿ ಶಿಕ್ಷಣ ಹಂತದಲ್ಲಿ ಕನ್ನಡ ಭಾಷೆ ಕಲಿಕೆ ಕಡ್ಡಾಯಗೊಳಿಸಿ ಹೊರಡಿಸಲಾಗಿರುವ ಆದೇಶ ಮರುಪರಿಶೀಲಿಸುವ ಬಗ್ಗೆ ನಿಲುವು ತಿಳಿಸದ ಸರ್ಕಾರದ ಕ್ರಮಕ್ಕೆ ಬೇಸರ ವ್ಯಕ್ತಪಡಿಸಿರುವ ಹೈಕೋರ್ಟ್, ಶಿಕ್ಷಣದಲ್ಲಿ ರಾಜಕೀಯವನ್ನೇಕೆ ಸೇರಿಸುತ್ತಿದ್ದೀರಿ ಎಂದು ಪ್ರಶ್ನಿಸಿದೆ.
ಸರ್ಕಾರದ ಆದೇಶ ರದ್ದು ಕೋರಿ ಸಂಸ್ಕೃತ ಭಾರತಿ (ಕರ್ನಾಟಕ) ಟ್ರಸ್ಟ್, ಮಹಾವಿದ್ಯಾಲಯ ಸಂಸ್ಕೃತ ಪ್ರಾಧ್ಯಾಪಕ ಸಂಘ, ಹಯಗ್ರೀವ ಟ್ರಸ್ಟ್ ಹಾಗೂ ವ್ಯೋಮ ಲಿಂಗ್ವಿಸ್ಟಿಕ್ ಲ್ಯಾಬ್ ಫೌಂಡೇಷನ್ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ನೇತೃತ್ವದ ವಿಭಾಗೀಯ ಪೀಠ ಗುರುವಾರ ವಿಚಾರಣೆ ನಡೆಸಿತು.
ಅರ್ಜಿದಾರರ ಪರ ವಕೀಲರು, ನಿರ್ಧಾರ ಮರುಪರಿಶೀಲಿಸುವ ಬಗ್ಗೆ ಸರ್ಕಾರದಿಂದ ಮಾಹಿತಿ ಪಡೆದು ತಿಳಿಸುವಂತೆ ಅಡ್ವೊಕೇಟ್ ಜನರಲ್ಗೆ ಅ.26ರಂದು ಸೂಚಿಸಲಾಗಿತ್ತು ಎಂದು ನ್ಯಾಯಪೀಠದ ಗಮನಕ್ಕೆ ತಂದರು. ಸರ್ಕಾರದ ಪರ ವಕೀಲರು, ಈ ಕುರಿತು ಅಡ್ವೊಕೇಟ್ ಜನರಲ್ ಖುದ್ದು ವಾದ ಮಂಡಿಸಲಿದ್ದು, ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಬೇಕೆಂದು ಕೋರಿದರು.
ಸರ್ಕಾರದ ನಿರ್ಧಾರ ಮರುಪರಿಶೀಲಿಸುವ ಬಗ್ಗೆ ಮಾಹಿತಿ ನೀಡುವಂತೆ ಎಜಿಗೆ ಸೂಚಿಸಲಾಗಿತ್ತು. ಈ ಬಗ್ಗೆ ಸರ್ಕಾರಕ್ಕೆ ಸಲಹೆ ನೀಡುವುದಾಗಿ ಅವರು ತಿಳಿಸಿದ್ದರು. ಈಗ ಆ ವಿಚಾರ ಏನಾಗಿದೆ. ಆದೇಶ ಮರುಪರಿಶೀಲಿಸುವ ಬಗ್ಗೆ ಸರ್ಕಾರದ ನಿಲುವೇನು, ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣಕ್ಕಾಗಿ ಕರ್ನಾಟಕಕ್ಕೆ ಬರುವ ಹೊರ ರಾಜ್ಯದ ವಿದ್ಯಾರ್ಥಿಗಳಿಗೆ ಕನ್ನಡ ಕಲಿಕೆ ಕಡ್ಡಾಯಗೊಳಿಸಲು ಅವಕಾಶವಿದೆಯೇ? ಈ ಪ್ರಶ್ನೆಗೆ ನಮಗೆ ಉತ್ತರ ಬೇಕಿದೆ ಎಂದು ಹೇಳಿತು. ಸರ್ಕಾರದ ಪರ ವಕೀಲರು, ಭಾಷಾ ಕಲಿಕೆಯನ್ನು ಎನ್ಇಪಿ ಪ್ರೋತ್ಸಾಹಿಸುತ್ತದೆ. ಈ ಬಗ್ಗೆ ವಿವರವಾದ ಆಕ್ಷೇಪಣೆ ಸಲ್ಲಿಸಲಾಗಿದೆ ಎಂದರು. ಅದಕ್ಕೆ ನ್ಯಾಯಪೀಠ, ಎನ್ಇಪಿಯಲ್ಲಿ ಭಾಷೆ ಕಲಿಕೆಯನ್ನು ಉತ್ತೇಜಿಸಬಹುದು ಎಂದು ಹೇಳಲಾಗಿದೆಯೇ ಹೊರತು, ಕಡ್ಡಾಯಗೊಳಿಸಬಹುದು ಎಂದು ಹೇಳಿಲ್ಲ. ಶಿಕ್ಷಣದಲ್ಲೇಕೆ ನೀವು ರಾಜಕೀಯ ಸೇರಿಸುತ್ತಿದ್ದೀರಿ ಎಂದು ಪ್ರಶ್ನಿಸಿತು.
ಕನ್ನಡ ಅಕ್ಷರಮಾಲೆ, ಸಣ್ಣ ಸಣ್ಣ ಶಬ್ದಗಳು ಹಾಗೂ ವಾಕ್ಯಗಳನ್ನಷ್ಟೇ ಕಲಿಸಿಕೊಡಲಾಗುತ್ತದೆ. ಇವೆಲ್ಲ 1ನೇ ತರಗತಿ ಮಕ್ಕಳಿಗೆ ಕಲಿಸುವ ವಿಷಯಗಳಾಗಿವೆ. ಕನ್ನಡ ಕಲಿಯಲು ಉತ್ತೇಜಿಸುವುದರಿಂದ ಮುಂದೆ ಅವರು ಇಲ್ಲಿಯೇ ನೆಲೆಸುವಂತಾದರೆ ಸ್ಥಳೀಯರ ಜತೆ ಸಂವಹನ ನಡೆಸುವುದಕ್ಕೂ ಸುಲಭವಾಗುತ್ತದೆ. ಈ ಕುರಿತು ಎಜಿ ಹೆಚ್ಚಿನ ವಾದ ಮಂಡಿಸಲಿದ್ದಾರೆ ಎಂದು ಸರ್ಕಾರದ ಪರ ವಕೀಲರು ತಿಳಿಸಿದರು. ಅದನ್ನು ಪರಿಗಣಿಸಿದ ಪೀಠ ವಿಚಾರಣೆಯನ್ನು ನ.15ಕ್ಕೆ ಮುಂದೂಡಿತು.
ಸಿಬಿಎಸ್ಇ ಮಂಡಳಿಯು ಮಕ್ಕಳಲ್ಲಿರುವ ಕಲಿಕಾ ಗುಣಮಟ್ಟ ಪರಿಶೀಲನೆಗಾಗಿ ನ.12ರಂದು ನ್ಯಾಷನಲ್ ಅಚೀಮ್ೆುಂಟ್ ಸರ್ವೆ(ಎನ್ಎಎಸ್) ನಡೆಸುತ್ತಿದೆ. ಈ ಸಮೀಕ್ಷೆ ಇಡೀ ದೇಶಾದ್ಯಂತ ನಡೆಯಲಿದ್ದು, ಇದಕ್ಕಾಗಿಯೇ ಪ್ರತ್ಯೇಕ ಪ್ರಶ್ನೋತ್ತರ ಪತ್ರಿಕೆ ರೂಪಿಸಲಾಗಿದೆ. ವಿದ್ಯಾರ್ಥಿಗಳಲ್ಲಿರುವ ಕಲಿಕಾ ಗುಣಮಟ್ಟ ಮೌಲ್ಯಾಂಕನಕ್ಕಾಗಿ ಈ ಸಮೀಕ್ಷೆ ನಡೆಸುತ್ತಿದೆ. 3, 5, 8 ಮತ್ತು 10ನೇ ತರಗತಿ ವಿದ್ಯಾರ್ಥಿಗಳು ಕಲಿತಿರುವ ವಿಷಯದ ಬಗ್ಗೆ ಸಮೀಕ್ಷೆ
ಮಾಡಲಿದೆ. ಈ ಹಿಂದೆ 2017ರಲ್ಲಿ ಕೊನೆ ಬಾರಿಗೆ ಸಮೀಕ್ಷೆ ನಡೆದಿತ್ತು. ಎನ್ಸಿಇಆರ್ಟಿಯು ಸಮೀಕ್ಷೆಯ ಪ್ರಶ್ನೆಗಳನ್ನು ರೂಪಿಸಿಕೊಟ್ಟಿದೆ. ಎಲ್ಲ ವರ್ಗದ ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗುತ್ತದೆ. ಒಟ್ಟಾರೆ 733 ಜಿಲ್ಲೆಗಳು, 36 ರಾಜ್ಯಗಳು, 1.23 ಲಕ್ಷ ಶಾಲೆ, 38 ಲಕ್ಷ ವಿದ್ಯಾರ್ಥಿಗಳನ್ನು ಸಮೀಕ್ಷೆಗೆ ಒಳಪಡಿಸುತ್ತಿದೆ. ಒಟ್ಟಾರೆ ಪರೀಕ್ಷೆಯನ್ನು 22 ಮಾಧ್ಯಮಗಳಲ್ಲಿ ನಡೆಸಲಿದೆ. ಇದರಲ್ಲಿ ಕನ್ನಡ ಭಾಷೆಯೂ ಸೇರಿದೆ.
ರಾಜ್ಯ ಸರ್ಕಾರದ ಅಧೀನದಲ್ಲಿರುವ ವಸತಿ ಶಾಲೆಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳುವ ಉದ್ದೇಶದಿಂದ ಜವಾಹರ್ ನವೋದಯ ವಿದ್ಯಾಲಯ ನಿರ್ವಹಣಾ ಸಮಿತಿ ಮಾದರಿಯಲ್ಲಿ ಆಯಾ ಜಿಲ್ಲೆಗಳಲ್ಲಿ ಜಿಲ್ಲಾ ವಸತಿ ಶಾಲೆ ನಿರ್ವಹಣೆಗೆ ಸಮಾಜ ಕಲ್ಯಾಣ ಇಲಾಖೆ ಪ್ರತ್ಯೇಕ ಸಮಿತಿ ರಚನೆ ಮಾಡಿದೆ.
ಸಮಿತಿಯಲ್ಲಿ ಯಾರಿದ್ದಾರೆ?: ಜಿಲ್ಲಾಧಿಕಾರಿ ಸಮಿತಿ ಅಧ್ಯಕ್ಷ, ಜಿಪಂ ಸಿಇಒ ಉಪಾಧ್ಯಕ್ಷರಾಗಿರುತ್ತಾರೆ. ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು, ಜಿಲ್ಲಾ ಆರೋಗ್ಯಾಧಿಕಾರಿ, ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರರು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆಯ ಜಿಲ್ಲಾಧಿಕಾರಿ, ಪಿಯು ಶಿಕ್ಷಣ ಇಲಾಖೆ ಉಪನಿರ್ದೇಶಕರು ಸದಸ್ಯರಾಗಿರುತ್ತಾರೆ. ಇವರೊಂದಿಗೆ ಪೋಷಕ ವರ್ಗದಿಂದ ಇಬ್ಬರು ಪ್ರತಿನಿಧಿಗಳು (ಒಬ್ಬ ಪುರುಷ, ಒಬ್ಬ ಮಹಿಳೆ), ಇಬ್ಬರು ಹಿರಿಯ ಅನುಭವಿ ಪ್ರಾಂಶುಪಾಲರು ಸದಸ್ಯರಾಗಿರುತ್ತಾರೆ. ಸಮಿತಿಗೆ ಸಮಾಜ ಕಲ್ಯಾಣ ಇಲಾಖೆಯ ಜಂಟಿ ಅಥವಾ ಉಪ ನಿರ್ದೇಶಕರು ಸದಸ್ಯ ಕಾರ್ಯದರ್ಶಿಗಳಾಗಿರುತ್ತಾರೆ. ಒಟ್ಟು 13 ಜನರಿಗೆ ಸಮಿತಿಯಲ್ಲಿ ಅವಕಾಶ ಕಲ್ಪಿಸಲಾಗಿದೆ.
ಸಮಿತಿ ಅಧಿಕಾರ/ಕರ್ತವ್ಯಗಳು: ಸಮಿತಿಯ ಅಧಿಕಾರವಧಿ 3 ವರ್ಷಗಳದ್ದಾಗಿರುತ್ತದೆ. ಜಿಲ್ಲಾಧಿಕಾರಿಗಳು ತಮ್ಮ ಅಧಿಕಾರದಡಿ ಹಿರಿಯ ಅಧಿಕಾರಿಗಳನ್ನು ನಾಮನಿರ್ದೇಶನ ಮಾಡುವುದು. ಸಮಿತಿಯು ವರ್ಷಕ್ಕೆ ಕನಿಷ್ಠ 3 ಬಾರಿ ಸಭೆ ನಡೆಸತಕ್ಕದ್ದು. ಅನುದಾನದ ಸಮರ್ಪಕ ಬಳಕೆ ಹಾಗೂ ಅನಗತ್ಯ ವೆಚ್ಚಕ್ಕೆ ಕಡಿವಾಣ ಹಾಕುವುದು. ಮುಂದಿನ ವರ್ಷಕ್ಕೆ ಅಂದಾಜು ಪಟ್ಟಿ ಸಿದ್ಧಪಡಿಸುವುದು. ವಸತಿ ಶಾಲೆಯ ಸುಗಮ ನಿರ್ವಹಣೆ ಹಾಗೂ ಅಭಿವೃದ್ಧಿ ದೃಷ್ಟಿಯಿಂದ ಸ್ಥಳೀಯ ಮಟ್ಟದಲ್ಲಿ ಸಹಕಾರದೊಂದಿಗೆ ಸಮನ್ವಯ ಸಾಧಿಸುವುದು.