Soap Foam: ನಾವು ದಿನನಿತ್ಯ ಬಳಸುವ ಅನೇಕ ವಸ್ತುಗಳು ಹೇಗೆ ಕೆಲಸ ಮಾಡುತ್ತವೆ? ಅದಕ್ಕೆ ಬಣ್ಣಗಳು ಬಂದಿದ್ದೇಗೆ? ಯಾವ ಕಾರಣಕ್ಕೆ ಅದರಿಂದ ಪರಿಮಳ ಹೆಚ್ಚು ಸೂಸುತ್ತದೆ ಎಂಬುದರ ಬಗ್ಗೆ ನಾವು ಎಂದಿಗೂ ಯೋಚಿಸುವುದಿಲ್ಲ. ಕಾರಣ, ಶರವೇಗದಲ್ಲಿ ಓಡುತ್ತಿರುವ ಕಾಲದಲ್ಲಿ ನಮ್ಮ ಕೆಲಸಗಳಾದರೆ ಸಾಕು ಎನ್ನುವ ಮಂದಿ, ಅದನ್ನೆಲ್ಲ ಅಷ್ಟಾಗಿ ಚಿಂತಿಸಲು ಅಥವಾ ಉತ್ತರ ಹುಡುಕಲು ಪ್ರಯತ್ನಿಸುವುದಿಲ್ಲ. ಹಲವಾರು ವಸ್ತುಗಳ ಪೈಕಿ ನಾವು ಬಳಸುವ ಸಾಬೂನಿನ ವಿಷಯದಲ್ಲಿ ಇದೊಂದು ವಿಚಾರ ಮಾತ್ರ ಇದೀಗ ಬಹುತೇಕರ ತಲೆಯಲ್ಲಿ ಉಳಬಿಟ್ಟ ಪ್ರಶ್ನೆಯಂತೆ ಕಾಡತೊಡಗಿದೆ.
ನಾವು ಹಸಿರು, ನೀಲಿ, ಗುಲಾಬಿ, ಕೇಸರಿ, ಕೆಂಪು ಸೇರಿದಂತೆ ವಿವಿಧ ಬಣ್ಣಗಳಿರುವ ಸೋಪುಗಳನ್ನು ಬಳಸುತ್ತೇವೆ. ಆದರೆ, ಇವುಗಳ ನಡುವೆ ಒಂದು ಅಚ್ಚರಿಯ ಸಾಮ್ಯತೆಯಿರುವುದನ್ನು ನಾವೆಲ್ಲರೂ ಕಣ್ಣಾರೆ ನೋಡುತ್ತೀವಿ. ಆದರೆ, ಎಂದಿಗೂ ನಮ್ಮಲ್ಲೆ ಅಥವಾ ಅನ್ಯರೊಂದಿಗೆ ಪ್ರಶ್ನೆಗಳನ್ನು ಕೇಳುವುದಿಲ್ಲ. ಅದೇನೆಂದರೆ, ಯಾವುದೇ ಬಣ್ಣದ ಸೋಪಿರಲಿ. ಅದನ್ನು ಬಳಕೆ ಮಾಡುತ್ತಿದ್ದಂತೆ, ಅದರಿಂದ ಹೊರಬರುವ ನೊರೆ ಮಾತ್ರ ಬಿಳಿಯೇ ಆಗಿರುತ್ತದೆ. ಅಚ್ಚರಿ ಎಂದರೆ, ಅದೆಷ್ಟೇ ಬಣ್ಣದಿಂದ ಕೂಡಿರಲಿ, ಹೆಚ್ಚು ಉಪಯೋಗಿಸಿದರೂ ಬರುವುದು ಮಾತ್ರ ಬಿಳಿಯೇ ಎಂಬುದು ಅಚ್ಚರಿ ಸಂಗತಿ. ಅಷ್ಟಕ್ಕೂ, ಸಾಬೂನಿನ ಬಣ್ಣ ಯಾವುದಾದರೂ ಅದರಿಂದ ಬರುವ ನೊರೆ ಮಾತ್ರ ಬಿಳೆ ಬಣ್ಣ ಏಕೆ ಎಂಬುದರ ಹಿಂದಿರುವ ವೈಜ್ಞಾನಿಕ ಕಾರಣವನ್ನು ನಾವಿಲ್ಲಿ ತಿಳಿಯೋಣ ಬನ್ನಿ.
ಸಾಬೂನನ್ನು ನೀರಿನೊಂದಿಗೆ ಉಜ್ಜಿದಾಗ, ಗಾಳಿಯು ಅದರೊಂದಿಗೆ ಬೆರೆತು ಸಣ್ಣ ಸಣ್ಣ ಗುಳ್ಳೆಗಳನ್ನು ಸೃಷ್ಟಿಸುತ್ತದೆ. ಈ ಗುಳ್ಳೆಗಳ ಸುತ್ತಲೂ ಸೋಪು ಮತ್ತು ನೀರಿನ ಒಂದು ತೆಳುವಾದ ಪದರವಿರುತ್ತದೆ. ಹೀಗೆ ರೂಪುಗೊಳ್ಳುವ ಅಸಂಖ್ಯಾತ ಗಾಳಿಯ ಗುಳ್ಳೆಗಳು ಒಂದಕ್ಕೊಂದು ಸೇರಿಕೊಂಡು, ನಮಗೆ ಕಾಣುವ ನೊರೆಯನ್ನು ಉಂಟುಮಾಡುತ್ತವೆ. ಇದಕ್ಕೆ ಮುಖ್ಯ ಕಾರಣ ಬೆಳಕಿನ ಚದುರುವಿಕೆ (Scattering of Light).
ಬಿಳಿ ಬೆಳಕು ಅನೇಕ ಬಣ್ಣಗಳ ಮಿಶ್ರಣವಾಗಿರುತ್ತದೆ. ಸಾಬೂನಿನ ನೊರೆಯಲ್ಲಿರುವ ಅಸಂಖ್ಯಾತ ಗುಳ್ಳೆಗಳು ಮತ್ತು ಅವುಗಳ ತೆಳುವಾದ ಪದರಗಳು, ಬೆಳಕನ್ನು ವಿವಿಧ ದಿಕ್ಕುಗಳಲ್ಲಿ ಚದುರಿಸುತ್ತವೆ. ಇದರರ್ಥ, ವಿವಿಧ ಬಣ್ಣಗಳ ಬೆಳಕು ನಮ್ಮ ಕಣ್ಣುಗಳನ್ನು ತಲುಪಿದಾಗ, ಒಟ್ಟಾರೆಯಾಗಿ ನೊರೆಯು ಬಿಳಿ ಬಣ್ಣದಲ್ಲಿ ಕಾಣಿಸುತ್ತದೆ. ಹಾಗಾದರೆ, ಸಾಬೂನಿನ ಬಣ್ಣ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆ ಈಗ ನಿಮ್ಮಲ್ಲಿ ಮೂಡಿರಬಹುದು. ಅದಕ್ಕೂ ಇದೇ ಉತ್ತರ.
ನೊರೆ ರಚನೆಗೊಂಡಾಗ ಸಾಬೂನಿಗೆ ಸೇರಿಸಲಾದ ಬಣ್ಣಗಳು ಮಾಯವಾಗುವುದಿಲ್ಲ. ಆದರೆ, ಅವು ತೆಳುವಾದ ಪದರಗಳಲ್ಲಿ ಹರಡಿಕೊಳ್ಳುವುದರಿಂದ, ಆ ಬಣ್ಣಗಳು ಅಷ್ಟಾಗಿ ಎದ್ದು ಕಾಣುವುದಿಲ್ಲ. ಅದೇ ಸಮಯದಲ್ಲಿ, ಗುಳ್ಳೆಗಳಿಂದ ಬೆಳಕು ಚದುರುವ ಪ್ರಕ್ರಿಯೆಯು ಪ್ರಬಲವಾಗಿರುವುದರಿಂದ, ನೊರೆಯು ಒಟ್ಟಾರೆಯಾಗಿ ಬಿಳಿ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತದೆ. ಗುಳ್ಳೆಗಳ ಗಾತ್ರ ಮತ್ತು ಅವುಗಳ ರಚನೆಯು ಬೆಳಕು ಹೇಗೆ ಚದುರುತ್ತದೆ ಎಂಬುದರ ಮೇಲೆ ಪರಿಣಾಮ ಬೀರುತ್ತದೆ.
ನೊರೆಯಲ್ಲಿರುವ ಅಸಂಖ್ಯಾತ ಗುಳ್ಳೆಗಳು ಬೆಳಕನ್ನು ಹಲವು ದಿಕ್ಕುಗಳಲ್ಲಿ ಚದುರಿಸುವುದರಿಂದ, ನೊರೆಯು ಬಿಳಿ ಬಣ್ಣದಲ್ಲಿ ಹೆಚ್ಚಾಗಿ ಗೋಚರಿಸುತ್ತದೆ. ಇದಕ್ಕೆ ವ್ಯತಿರಿಕ್ತವಾಗಿ, ಕೆಲವೊಮ್ಮೆ ಒಂದು ಪ್ರತ್ಯೇಕ ಗುಳ್ಳೆಯ ತೆಳುವಾದ ಪದರದಲ್ಲಿ ಬಣ್ಣಬಣ್ಣದ ಬೆಳಕಿನ ಛಾಯೆಗಳನ್ನು ನೀವು ಕಾಣಬಹುದು.
ಆದ್ದರಿಂದ, ಮುಂದಿನ ಬಾರಿ ನೀವು ಯಾವುದೇ ಬಣ್ಣದ ಸಾಬೂನನ್ನು ಬಳಸುವಾಗ, ಅದರ ನೊರೆ ಬಿಳಿ ಬಣ್ಣದಲ್ಲಿರುವುದನ್ನು ಕಂಡು ಆಶ್ಚರ್ಯಪಡುವುದು ಬೇಡ. ಅಸಲಿ ಸಂಗತಿ ಏನೆಂದರೆ, ನಾವು ಪ್ರತಿದಿನ ನೋಡುವ ಸಾಮಾನ್ಯ ಸಂಗತಿಗಳ ಹಿಂದೆ ಬೆಳಕು ಮತ್ತು ದ್ರವ್ಯದ ಸ್ವರೂಪವನ್ನು ವಿವರಿಸುವ ಸುಂದರವಾದ ವಿಜ್ಞಾನ ಅಡಗಿದೆ ಎಂಬುದು ನೆನಪಿರಲಿ,(ಏಜೆನ್ಸೀಸ್).