ನ್ಯೂಸ್

ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಏಕೆ ಒಟ್ಟಿಗೆ ಇರಬಾರದು? ಇಲ್ಲಿದೆ ನೋಡಿ ಅಚ್ಚರಿಯ ಕಾರಣ... Ashadha

Ashadha : ತಿಂಗಳುಗಳಲ್ಲಿ ಆಷಾಢ ಮಾಸಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಈ ಆಷಾಢ ಮಾಸದಲ್ಲಿ ಅನೇಕ ಜನರು ಕೆಲವೊಂದು ಆಚರಣೆಗಳನ್ನು ಅನುಸರಿಸುತ್ತಾರೆ. ಅದರಲ್ಲಿ ಗಂಡ-ಹೆಂಡತಿಯರನ್ನು ಹಾಗೂ ಅತ್ತೆ-ಸೊಸೆಯನ್ನು ದೂರವಿಡುವುದು ಕೂಡ ಒಂದು.

ಇದಿಷ್ಟೇ ಅಲ್ಲದೆ, ಮದುವೆ ಹಾಗೂ ಗೃಹಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯಗಳನ್ನು ಈ ತಿಂಗಳಲ್ಲಿ ನಡೆಸಲಾಗುವುದಿಲ್ಲ. ಆಷಾಢ ಮಾಸವು ಆಧ್ಯಾತ್ಮಿಕವಾಗಿ ಹೆಚ್ಚಿನ ಪ್ರಾಮುಖ್ಯತೆಯನ್ನು ಹೊಂದಿದ್ದು, ಬಹಳ ಪವಿತ್ರವಾಗಿದ್ದರು ಕೂಡ ಕೆಲವೊಂದು ಆಚರಣೆ ಏಕೆ ಮಾಡುವುದಿಲ್ಲ ಗೊತ್ತಾ? ಇದಕ್ಕೆ ಉತ್ತರ ಇಲ್ಲಿದೆ.

ಪುರಾಣಗಳ ಪ್ರಕಾರ, ಆಷಾಢ ಮಾಸದಲ್ಲಿ ವಿಷ್ಣು ನಿದ್ರೆಗೆ ಜಾರುತ್ತಾನೆ. ಈ ಸಮಯದಲ್ಲಿ ಮದುವೆಯಾದವರಿಗೆ ವಿಷ್ಣುವಿನ ಆಶೀರ್ವಾದ ಸಿಗುವುದಿಲ್ಲ. ಅದಕ್ಕಾಗಿಯೇ ಆಷಾಢ ಮಾಸದಲ್ಲಿ ಮದುವೆಗಳು ಹಾಗೂ ಶುಭ ಕಾರ್ಯಗಳು ನಡೆಯುವುದಿಲ್ಲ.

ಆಷಾಢ ಮಾಸದಲ್ಲಿ ಗಂಡ-ಹೆಂಡತಿ ಏಕೆ ಸೇರಬಾರದು ಎಂಬ ವಿಚಾರಕ್ಕೆ ಬಂದಾಗ, ಈ ಸಮಯದಲ್ಲಿ ನವ ವಧುವನ್ನು ಖಂಡಿತವಾಗಿಯೂ ಆಕೆಯ ಜನ್ಮಸ್ಥಳಕ್ಕೆ ಕಳುಹಿಸಬೇಕು. ಈ ತಿಂಗಳಲ್ಲಿ ಗಂಡ-ಹೆಂಡತಿ ಸಂಭೋಗ ಮಾಡಿ ಗರ್ಭಿಣಿಯಾದರೆ, ಬೇಸಿಗೆಯಲ್ಲಿ ಹೆರಿಗೆಯಾಗುತ್ತದೆ. ಇದು ತಾಯಿ ಮತ್ತು ಮಗುವಿಗೆ ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡಬಹುದು. ಅಂದರೆ, ಆಷಾಢ ಮಾಸದಲ್ಲಿ ದಂಪತಿ ಮಿಲನ ಹೊಂದಿ, ಮಹಿಳೆ ಗರ್ಭಿಣಿಯಾದರೆ ಏಪ್ರಿಲ್ ತಿಂಗಳಿನಲ್ಲಿ ಮಗು ಜನಿಸುತ್ತದೆ. ಈ ಸಮಯದಲ್ಲಿ ಉಷ್ಣಾಂಶ ಅಧಿಕವಾಗಿರುತ್ತದೆ. ಇದರಿಂದ ಮಗುವಿಗೆ ಅನಾರೋಗ್ಯ ಕಾಡಬಹುದು. ಅಲ್ಲದೇ ನೀರಿನಿಂದ ಉಂಟಾಗುವ ಕಾಯಿಲೆಗಳು ಕೂಡ ಹೆಚ್ಚು. ಅದಕ್ಕಾಗಿಯೇ ಹಿರಿಯರು ಈ ನಿಯಮವನ್ನು ಮಾಡಿದ್ದಾರೆ.

ಇನ್ನು ಅತ್ತೆ-ಸೊಸೆ ಒಟ್ಟಿಗೆ ಏಕೆ ಇರಬಾರದು ಎಂಬ ವಿಚಾರಕ್ಕೆ ಬಂದಾಗ, ಹೊಸದಾಗಿ ಮದುವೆಯಾದ ಮಹಿಳೆ, ತನ್ನ ಹೆತ್ತವರಿಂದ ದೂರವಿದ್ದು, ಗಂಡನೊಂದಿಗೆ ಅತ್ತೆ ಮನೆಯಲ್ಲಿ ವಾಸಿಸುತ್ತಾಳೆ. ಈ ಸಮಯದಲ್ಲಿ ಮಗಳು ತಮ್ಮಿಂದ ದೂರವಿದ್ದಾಳೆ ಎಂಬ ಬೇಸರ ಮತ್ತು ಆತಂಕ ಪೋಷಕರಿಗೆ ಕಾಡಬಹುದು. ಹೀಗಾಗಿ ನವವಿವಾಹಿತೆ ತನ್ನ ತವರಿಗೆ ಮರಳಿ ತಂದೆ ತಾಯಿಯರ ಜೊತೆಗೆ ಇದ್ದು ಅವರ ಸೇವೆ ಮಾಡಲು ಅವಕಾಶವಾಗಿದೆ.

ಇನ್ನು ಆಷಾಢ ಮಾಸವು ಭಾರೀ ಮಳೆಯಿಂದ ಕೂಡಿರುತ್ತದೆ. ಈ ತಿಂಗಳು ಕೃಷಿಗೆ ಅನುಕೂಲಕರವಾಗಿದೆ. ಇದಲ್ಲದೆ, ಈ ಸಮಯದಲ್ಲಿ ಹೊಸದಾಗಿ ಮದುವೆಯಾದ ದಂಪತಿ ಸದಾ ರೊಮ್ಯಾಂಟಿಕ್ ಮೂಡಿನಲ್ಲಿರುತ್ತಾರೆ. ಹೀಗಾಗಿ ಬೇರೆ ಕೆಲಸಗಳತ್ತ ತಮ್ಮ ಗಮನಹರಿಸುವುದಿಲ್ಲ. ಇಂತಹ ಸಮಯದಲ್ಲಿ ಹೆಂಡತಿಯರನ್ನು ತವರು ಮನೆಗೆ ಕಳುಹಿಸಿದರೆ, ಗಂಡಂದಿರು ತಮ್ಮ ಕೆಲಸದ ಮೇಲೆ ಗಮನ ಹರಿಸುತ್ತಾರೆ ಎಂಬ ನಂಬಿಕೆ ಇದೆ.

ವಿಶೇಷ ಸೂಚನೆ: ಈ ಮೇಲೆ ಉಲ್ಲೇಖಿಸಲಾದ ಎಲ್ಲ ಮಾಹಿತಿಯನ್ನು ವಿವಿಧ ಮಾಧ್ಯಮಗಳು / ಜ್ಯೋತಿಷಿಗಳು / ಪಂಚಾಂಗಗಳು / ನಂಬಿಕೆಗಳು / ಆಧ್ಯಾತ್ಮಿಕ ಪಠ್ಯಗಳಿಂದ ಸಂಗ್ರಹಿಸಲಾಗಿದೆ. ಮಾಹಿತಿ ನೀಡುವುದು ಮಾತ್ರ ನಮ್ಮ ಉದ್ದೇಶವಾಗಿದ್ದು, ಇದಕ್ಕೆ “ವಿಜಯವಾಣಿ ಡಾಟ್​ ನೆಟ್”​ ಜವಾಬ್ದಾರರಾಗಿರುವುದಿಲ್ಲ.