Dogs Howl: ಸಾಮಾನ್ಯವಾಗಿ ನಮಗೆಲ್ಲ ಗೊತ್ತಿರುವಂತೆ ಬೀದಿ ನಾಯಿಗಳು ರಾತ್ರಿ ಅನ್ನೋದಕ್ಕಿಂತ ತಡರಾತ್ರಿ ಅಥವಾ ಮಧ್ಯರಾತ್ರಿಯ ವೇಳೆಗೆ ಜೋರಾಗಿ ತೋಳದಂತೆ ಕೂಗಲು ಶುರು ಮಾಡುತ್ತವೆ. ಶಾಂತವಾದ ಆಕಾಶ, ಸುತ್ತಮುತ್ತ ಒಂದು ರೀತಿಯ ನಿಶ್ಯಬ್ದತೆ ಆವರಿಸಿ, ಇನ್ನೇನೂ ಗಾಢ ನಿದ್ರೆಗೆ ಜಾರಿದ್ದೇವೆ ಎನ್ನುವಾಗಲೇ ಇವುಗಳ ಕೂಗು ತೀವ್ರ ವಿಚಿತ್ರ ಹಾಗೂ ಇಲ್ಲದ ಕಲ್ಪನೆಗಳನ್ನು ತಲೆಗೆ ಹೊಕ್ಕುವುದು ಕೆಲವೊಮ್ಮೆ ಗಾಬರಿಯನ್ನಾಗಿಸುತ್ತದೆ.
ಇದ್ದಕ್ಕಿದ್ದಂತೆ ಎಲ್ಲೋ ಒಂದು ಕಡೆಯಿಂದ ನಾಯಿಯೊಂದು ಊಳಿಡುವ ಅಥವಾ ಅಳುವಂತಹ ದೀರ್ಘ ಶಬ್ದ ಕೇಳಿಸಿಕೊಂಡಾಗ, ಅನೇಕರಿಗೆ ಮೈಜುಮ್ ಎನ್ನುತ್ತೆ. ತಕ್ಷಣವೇ ಅವರ ಮನಸ್ಸಿನಲ್ಲಿ ನಾನಾ ರೀತಿಯ ಅನುಮಾನಗಳು ಮೂಡುತ್ತವೆ. ಆ ನಾಯಿ ಯಾರ ನೆನಪಿನಲ್ಲಿ ಅಳುತ್ತಿದೆಯೋ? ಅದಕ್ಕೆ ಏನಾದರೂ ದೆವ್ವ, ಭೂತಗಳ ಸಂಚಾರ ಕಣ್ಣಿಗೆ ಬಿದ್ದಿತೋ? ಎಂದು ತಮ್ಮ ತಲೆಗೆ ಬಂದ ಕಲ್ಪನೆಗಳನ್ನೆಲ್ಲ ಹಾಗೆಯೇ ಪಕ್ಕದಲ್ಲಿ ಇರುವವರಿಗೆ, ಇಲ್ಲವೇ ತಮ್ಮೊಳಗೆ ಹೇಳಿಕೊಳ್ಳುತ್ತಾರೆ. ಇದು ಅವರನ್ನು ಮಾತ್ರವಲ್ಲದೇ, ಅವರೊಂದಿಗೆ ಯಾರಾದರೂ ಇದ್ದರೆ ಅವರನ್ನೂ ಸಹ ಭಯಕ್ಕೆ ದೂಡತ್ತದೆ.
ಮತ್ತೊಂದೆಡೆ, ಇಂದಿಗೂ ಅನೇಕ ಹಳ್ಳಿ, ಗ್ರಾಮೀಣ ಭಾಗದಲ್ಲಿ ರಾತ್ರಿಯೊತ್ತು ನಾಯಿ ಜೋರಾಗಿ ಕೂಗಿದರೆ ಏನೋ ಅಪಾಯ ಕಾದಿದೆ ಎಂದೋ ಅಥವಾ ದೆವ್ವಗಳು ಸುತ್ತಾಡುತ್ತಿವೆ ಅಂತಲೋ ಜನರು ಬಲವಾಗಿ ನಂಬುತ್ತಾರೆ. ಆದರೆ, ಇದರಲ್ಲಿ ಎಷ್ಟು ಸತ್ಯವಿದೆ? ನಾಯಿಗಳಿಗೆ ನಿಜವಾಗಿಯೂ ಆತ್ಮಗಳು ಕಾಣಿಸುತ್ತಾ? ಅದೇ ಕಾರಣಕ್ಕೆ ಅವುಗಳು ಪದೇ ಪದೇ ಯಾವ ವ್ಯಕ್ತಿ ಕಣ್ಣಿಗೆ ಬೀಳದಿದ್ದರೂ ಕುಗೋದಾ? ಇದಕ್ಕೆ ಏನಾದರೂ ವೈಜ್ಞಾನಿಕ ಪುರಾವೆಗಳಿವೆಯೇ? ಎಂಬ ಹತ್ತು ಹಲವು ಗೊಂದಲಮಯ ಪ್ರಶ್ನೆಗಳಿಗೆ ಉತ್ತರ ಇಲ್ಲ ಎನ್ನಬೇಕು ಅಷ್ಟೇ.
ಅಮೆರಿಕನ್ ಕೆನಲ್ ಕ್ಲಬ್ (AKC) ಪ್ರಕಾರ, ನಾಯಿಗಳು ಊಳಿಡುವುದು ಅಥವಾ ಜೋರಾಗಿ ಕೂಗುವುದು ಪರಸ್ಪರ ಸಂವಹನ ನಡೆಸುವ ಒಂದು ವಿಧಾನ. ದೂರದಲ್ಲಿರುವ ಇತರ ನಾಯಿಗಳಿಗೆ ಸೂಚನೆ ನೀಡಲು ಅಥವಾ ತಾವು ಎಲ್ಲಿದ್ದೇವೆ ಎಂಬುದನ್ನು ತಿಳಿಸಲು ಅವು ಹೀಗೆ ಮಾಡುತ್ತವೆ ಎನ್ನಲಾಗಿದೆ. ಹೀಗಾಗಿ, ರಾತ್ರಿಯಲ್ಲಿ ನಾಯಿಯ ಶಬ್ದ ಕೇಳಿದಾಗ ಅದು ದೆವ್ವವನ್ನು ಕಂಡು ಹೆದರುತ್ತಿದೆ ಎಂದು ಭಾವಿಸುವುದು ತಪ್ಪು. ಇದರ ಹಿಂದೆ ಅನೇಕ ಸಾಮಾನ್ಯ ಕಾರಣಗಳಿವೆ. ಹಗಲಿನಲ್ಲಿ ಇಲ್ಲದ ಶಬ್ದಗಳು ರಾತ್ರಿಯಲ್ಲಿ ಏಕೆ ಹೆಚ್ಚಾಗಿ ಕೇಳಿಸುತ್ತವೆ? ವಾಸ್ತವವಾಗಿ, ನಾಯಿಗಳು ರಾತ್ರಿಯಲ್ಲಿ ಮಾತ್ರ ಊಳಿಡುತ್ತವೆ ಎಂದು ಭಾವಿಸುವುದು ತಪ್ಪು. ಹಗಲಿನಲ್ಲಿ ವಾಹನಗಳ ಸಂಚಾರ ಮತ್ತು ಜನರ ಗದ್ದಲದಿಂದಾಗಿ ಅವುಗಳ ಕೂಗಿನ ಶಬ್ದ ನಮಗೆ ಹೆಚ್ಚಾಗಿ ಕೇಳಿಸುವುದಿಲ್ಲ.
ರಾತ್ರಿಯಲ್ಲಿ ಶಾಂತ ವಾತಾವರಣವಿರುವುದರಿಂದ, ಆ ಶಬ್ದವು ದೂರದವರೆಗೂ ಸ್ಪಷ್ಟವಾಗಿ ಕೇಳಿಸುತ್ತದೆ. ಇನ್ನೊಂದು ಪ್ರಮುಖ ವಿಷಯವೆಂದರೆ, ಮನುಷ್ಯರಿಗಿಂತ ನಾಯಿಗಳಿಗೆ ಶಬ್ದವನ್ನು ಗ್ರಹಿಸುವ ಸಾಮರ್ಥ್ಯ ಹೆಚ್ಚು. ನಮಗೆ ಕೇಳಿಸದ ವಿಚಿತ್ರವಾದ ಮತ್ತು ಅತ್ಯಂತ ಹೆಚ್ಚಿನ ಆವರ್ತನದ (high-frequency) ಶಬ್ದಗಳನ್ನು ಕೂಡ ಅವು ಸುಲಭವಾಗಿ ಗ್ರಹಿಸಬಲ್ಲವು. ಅದಕ್ಕಾಗಿಯೇ, ಶ್ವಾನ ಯಾವುದೇ ಕಾರಣವಿಲ್ಲದೆ ಊಳಿಡುತ್ತಿದೆ ಎಂದು ನಾವು ಭಾವಿಸುತ್ತೇವೆ. ಆದರೆ, ವಾಸ್ತವವಾಗಿ ಅದು ಯಾವುದಕ್ಕಾದರೂ ಪ್ರತಿಕ್ರಿಯೆ ನೀಡುತ್ತಿರಬಹುದು.
ಅದೇ ರೀತಿ, ಒಂದು ಪ್ರದೇಶದಲ್ಲಿ ನಾಯಿಯೊಂದು ಬೊಗಳಿದರೆ, ದೂರದಲ್ಲಿರುವ ಮತ್ತೊಂದು ನಾಯಿ ಅದಕ್ಕೆ ಪ್ರತಿಕ್ರಿಯಿಸುತ್ತದೆ. ಪಶುವೈದ್ಯರು ಕೂಡ ಇದನ್ನೇ ಹೇಳುತ್ತಾರೆ. ಸೈರನ್ ಶಬ್ದ, ಟಿವಿಯ ಸಂಗೀತ ಅಥವಾ ಇತರ ನಾಯಿಗಳ ಬೊಗಳುವಿಕೆಯನ್ನು ಕೇಳಿದಾಗ ನಾಯಿಗಳು ಈ ರೀತಿ ಪ್ರತಿಕ್ರಿಯಿಸುತ್ತವೆ. ಒಂದು ನಾಯಿ ಜೋರಾಗಿ ಬೊಗಳಿದರೆ, ಇನ್ನುಳಿದ ಸುತ್ತಮುತ್ತಲಿನ ನಾಯಿಗಳೂ ಅದೇ ರೀತಿಯ ಶಬ್ದಗಳನ್ನು ಮಾಡಲು ಪ್ರಾರಂಭಿಸುತ್ತವೆ. ಆದ್ದರಿಂದ, ರಾತ್ರಿಯಲ್ಲಿ ಅಲ್ಲಿ ಏನೋ ಭಯಾನಕ ಘಟನೆ ನಡೆಯುತ್ತಿದೆ ಎಂದು ಚಿಂತಿಸುವ ಅಗತ್ಯವೇನೂ ಇಲ್ಲ.
ಇದು ಕೇವಲ ಅವುಗಳ ನಡುವಿನ ಸಾಮಾನ್ಯ ಸಂಭಾಷಣೆ ಅಷ್ಟೇ. ಅಲ್ಲದೆ, ತಮ್ಮ ಇರುವಿಕೆಯನ್ನು ಇತರರಿಗೆ ತಿಳಿಸಲು ನಾಯಿಗಳು ಹೀಗೆ ಮಾಡುತ್ತವೆ ಎನ್ನಲಾಗಿದೆ. ಕಾಡು ತೋಳಗಳು ತಮ್ಮ ಗುಂಪಿನ ಇತರ ಸದಸ್ಯರೊಂದಿಗೆ ಸಂಪರ್ಕ ಸಾಧಿಸಲು ಜೋರಾಗಿ ಕೂಗುತ್ತವೆ. ಇದೇ ಅಭ್ಯಾಸ ನಮ್ಮ ಮನೆಯ ಮತ್ತು ಬೀದಿಯ ನಾಯಿಗಳಲ್ಲೂ ಕಂಡುಬರುತ್ತದೆ ಎಂಬುದೇ ಅರ್ಥ. ನಮಗೆ ಇದು ಅಳುವಿನಂತೆ ಕೇಳಿಸಿದರೂ, ಅವುಗಳ ಭಾಷೆಯಲ್ಲಿ ಇದು ಇತರ ನಾಯಿಗಳೊಂದಿಗೆ ಮಾತನಾಡುವ ರೀತಿಯಾಗಿದೆ.
ಪ್ರಾಚೀನ ಕಾಲದಿಂದಲೂ, ಅನೇಕ ಸಂಸ್ಕೃತಿಗಳಲ್ಲಿ ನಾಯಿ ಬೊಗಳುವುದನ್ನು ಸಾವು ಅಥವಾ ಅಪಶಕುನದ ಸಂಕೇತವೆಂದು ಪರಿಗಣಿಸಲಾಗಿದೆ. ಮನುಷ್ಯರಿಗೆ ಗ್ರಹಿಸಲು ಸಾಧ್ಯವಾಗದ ಅತಿ ಸೂಕ್ಷ್ಮ ಚಲನೆಗಳು ಮತ್ತು ಶಬ್ದಗಳನ್ನು ಈ ಮೂಕ ಜೀವಿಗಳು ಪತ್ತೆಹಚ್ಚಬಲ್ಲವು ಎಂಬ ಕಾರಣಕ್ಕೆ, ಜನರು ಅವುಗಳನ್ನು ದೆವ್ವಗಳೊಂದಿಗೆ ತಳುಕು ಹಾಕುತ್ತಾರೆ. ಆದರೆ, ನಾಯಿ ಬೊಗಳುವುದು ಸಾವು ಅಥವಾ ಅಪಶಕುನವನ್ನು ಮುನ್ಸೂಚಿಸುತ್ತದೆ ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ.
ಮನುಷ್ಯರಿಗೆ ಕಾಣದ ಅಥವಾ ಕೇಳಿಸದ ಯಾವುದಕ್ಕಾದರೂ ನಾಯಿ ಪ್ರತಿಕ್ರಿಯಿಸುವುದೇ ಹೊರತು, ಅವು ದೆವ್ವವನ್ನು ನೋಡುತ್ತಿದೆ ಎಂದರ್ಥವಲ್ಲ. ಹೀಗಾಗಿ, ನಿಮ್ಮ ಮನೆಯಲ್ಲಿ ಅಥವಾ ಸುತ್ತಮುತ್ತಲಿನಲ್ಲಿ ನಾಯಿ ರಾತ್ರಿಯಲ್ಲಿ ಬೊಗಳುತ್ತಿರುವುದನ್ನು ಕಂಡು ಆತಂಕ ಬೀಳಬೇಡಿ. ಪಕ್ಕದ ಬೀದಿಯಲ್ಲಿರುವ ಇನ್ನೊಂದು ನಾಯಿ ಬೊಗಳಿರಬಹುದು ಅಥವಾ ಯಾವುದಾದರೂ ಸೈರನ್ ಶಬ್ದ ಕೇಳಿಸಿರಬಹುದು. ಅಥವಾ ಅದಕ್ಕೆ ಭಯ ಅಥವಾ ಒಂಟಿತನದ ಭಾವನೆ ಉಂಟಾಗಿರಬಹುದು. ಅದು ನಿರಂತರವಾಗಿ ಬೊಗಳುತ್ತಿದ್ದರೆ, ಅದಕ್ಕೆ ಏನಾದರೂ ಗಾಯವಾಗಿದೆಯೇ ಅಥವಾ ಆರೋಗ್ಯ ಸರಿಯಿಲ್ಲವೇ ಎಂಬುದನ್ನೂ ಒಮ್ಮೆ ಪರಿಶೀಲಿಸಿ. ಅಲ್ಲದೆ, ರಾತ್ರಿಯ ವೇಳೆ ನಾಯಿ ಬೊಗಳುವ ಹಿಂದೆ ಯಾವುದೇ ಭಯಾನಕ ದೆವ್ವಗಳು ಅಥವಾ ಅಪಶಕುನಗಳು ಇರುವುದಿಲ್ಲ ಎಂದು ವಿಜ್ಞಾನ ಒತ್ತಿ ಹೇಳುತ್ತೆ,(ಮಾಹಿತಿ ಸಂಗ್ರಹ).