ಈರುಳ್ಳಿ ಕತ್ತರಿಸಿದ ತಕ್ಷಣ ಕಣ್ಣಲ್ಲಿ ನೀರು 
ನ್ಯೂಸ್

ಈರುಳ್ಳಿ ಕತ್ತರಿಸುವಾಗ ಕಣ್ಣೀರು ಯಾಕೆ ಬರುತ್ತೆ? ಇದರ ಅಸಲಿ ಕಾರಣ ಏನು ಗೊತ್ತಾ? | Onion cutting

ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಏಕೆ ಬರುತ್ತೆ? ಈರುಳ್ಳಿಯ ಜೀವಕೋಶಗಳು ಒಡೆದಾಗ ನಡೆಯುವ ರಾಸಾಯನಿಕ ಕ್ರಿಯೆಯೇ ಇದಕ್ಕೆ ಕಾರಣ. ಕಣ್ಣೀರು ಕಡಿಮೆ ಮಾಡಲು ಕೆಲವು ಸರಳ ಟಿಪ್ಸ್ ಇಲ್ಲಿವೆ.

Watery eyes while cutting onions: ಅಡುಗೆ ಮನೆಯಲ್ಲಿ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರೋದು ಸಾಮಾನ್ಯ. ಆದರೆ ಈರುಳ್ಳಿ ಕತ್ತರಿಸಿದ ತಕ್ಷಣ ಕಣ್ಣೀರು ಯಾಕೆ ಬರುತ್ತೆ ಅನ್ನೋದು ಗೊತ್ತಾ? ಇದರ ಹಿಂದೆ ಯಾವುದೇ ಭಾವನೆ ಇಲ್ಲ, ಈರುಳ್ಳಿಯೊಳಗಿನ ರಾಸಾಯನಿಕ ಕ್ರಿಯೆಯೇ ಮುಖ್ಯ ಕಾರಣ.

ಈರುಳ್ಳಿಯನ್ನು ಕತ್ತರಿಸಿದಾಗ ಅದರಲ್ಲಿರುವ ಜೀವಕೋಶಗಳು ಒಡೆಯುತ್ತವೆ. ಆಗ ಈರುಳ್ಳಿಯಲ್ಲಿರುವ ಅಮೈನೋ ಆಮ್ಲ ಸಲ್ಫಾಕ್ಸೈಡ್‌ಗಳು ಮತ್ತು ಕೆಲವು ಕಿಣ್ವಗಳು ಪರಸ್ಪರ ಕ್ರಿಯೆ ನಡೆಸುತ್ತವೆ. ಇದರಿಂದ ಸಿನ್-ಪ್ರೊಪನೇಥಿಯಲ್-ಎಸ್-ಆಕ್ಸೈಡ್ (syn-propanethial-S-oxide) ಎಂಬ ಕಣ್ಣಿಗೆ ಕಿರಿಕಿರಿ ಉಂಟುಮಾಡುವ ಅಸ್ಥಿರ ಸಂಯುಕ್ತ ಬಿಡುಗಡೆಯಾಗುತ್ತದೆ.

ಈ ಸಂಯುಕ್ತ ಕಣ್ಣಿನ ಮೇಲ್ಮೈಗೆ ತಲುಪಿದಾಗ ಅಲ್ಲಿರುವ ಸಂವೇದನಾ ನರಗಳಿಗೆ ಕಿರಿಕಿರಿ ಉಂಟುಮಾಡುತ್ತದೆ. ತಕ್ಷಣವೇ ಕಣ್ಣೀರಿನ ಗ್ರಂಥಿಗಳು ಆ ಕಿರಿಕಿರಿಯನ್ನು ತೊಳೆದುಹಾಕಲು ಹೆಚ್ಚು ಕಣ್ಣೀರನ್ನು ಉತ್ಪಾದಿಸುತ್ತವೆ. ಹೀಗಾಗಿಯೇ ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುತ್ತೆ.

ಕಣ್ಣೀರು ಕಡಿಮೆ ಮಾಡೋಕೆ ಏನು ಮಾಡಬಹುದು?

ಈರುಳ್ಳಿಯನ್ನು ತಣ್ಣಗಾಗಿಸಿ: ಕತ್ತರಿಸುವ 15–20 ನಿಮಿಷಗಳ ಮೊದಲು ಫ್ರಿಜ್‌ನಲ್ಲಿ ಇಟ್ಟರೆ ರಾಸಾಯನಿಕ ಕ್ರಿಯೆಯ ವೇಗ ಸ್ವಲ್ಪ ಕಡಿಮೆಯಾಗಬಹುದು.

ಹರಿತವಾದ ಚಾಕು ಬಳಸಿ: ಮೊಂಡಾದ ಚಾಕುವಿನಿಂದ ಈರುಳ್ಳಿಯನ್ನು ಜಜ್ಜಿದಂತೆ ಆಗಬಹುದು. ಹರಿತವಾದ ಚಾಕುವಿನಿಂದ ಸ್ವಚ್ಛವಾಗಿ ಕತ್ತರಿಸುವುದರಿಂದ ಕಿರಿಕಿರಿ ಉಂಟುಮಾಡುವ ಸಂಯುಕ್ತದ ಬಿಡುಗಡೆಯನ್ನು ಕಡಿಮೆ ಮಾಡಲು ಸಹಾಯವಾಗಬಹುದು.

ಕಣ್ಣೀರು ತರಿಸೋ ಈರುಳ್ಳಿಯ ರಹಸ್ಯ

ಗಾಳಿಯ ಇರಲಿ: ಅಡುಗೆ ಮನೆಯ ಎಕ್ಸಾಸ್ಟ್ ಫ್ಯಾನ್ ಆನ್ ಮಾಡುವುದು ಅಥವಾ ಸೂಕ್ತ ದಿಕ್ಕಿನಲ್ಲಿ ಗಾಳಿ ಹರಿಯುವಂತೆ ನೋಡಿಕೊಳ್ಳುವುದರಿಂದ ಆ ಸಂಯುಕ್ತ ಕಣ್ಣಿನತ್ತ ಬರುವುದನ್ನು ಕಡಿಮೆ ಮಾಡಬಹುದು.

ನೀರಿನಲಲ್ಲಿ ನೆನೆಸಿ: ಈರುಳ್ಳಿಯನ್ನು ನೀರಿನಲ್ಲಿ ನೆನೆಸಿ ಕತ್ತರಿಸುವುದು ಕೂಡ ಕಿರಿಕಿರಿ ಉಂಟುಮಾಡುವ ಸಂಯುಕ್ತದ ಬಿಡುಗಡೆಯನ್ನು ಕಡಿಮೆ ಮಾಡಬಹುದು. ಆದರೆ ಇದರಿಂದ ಈರುಳ್ಳಿಯ ರುಚಿಯಲ್ಲಿ ಬದಲಾವಣೆ ಆಗಬಹುದು.

ಚಾಕುವಿಗೆ ವಿನೆಗರ್ ಅಥವಾ ಲಿಂಬೆ ರಸ ಹಚ್ಚಿದರೆ?

ಈರುಳ್ಳಿಯ ಬುಡದಲ್ಲೇ ಕಣ್ಣೀರು ತರಿಸುವ ರಾಸಾಯನಿಕ ಹೆಚ್ಚು ಇರುತ್ತದೆ ಎಂಬ ಮಾತನ್ನು ಖಚಿತ ವೈಜ್ಞಾನಿಕ ಸಂಗತಿ ಎಂದು ಹೇಳಲು ಸಾಧ್ಯವಿಲ್ಲ. ಹಾಗೆಯೇ ಚಾಕುವಿಗೆ ವಿನೆಗರ್ ಅಥವಾ ಲಿಂಬೆ ರಸ ಹಚ್ಚಿದರೆ ಖಚಿತವಾಗಿ ಕಣ್ಣೀರು ನಿಲ್ಲುತ್ತದೆ ಎಂಬುದಕ್ಕೂ ಸ್ಪಷ್ಟ ವೈಜ್ಞಾನಿಕ ಆಧಾರವಿಲ್ಲ. ಕಣ್ಣಲ್ಲಿ ತುಂಬಾ ಉರಿ ಅಥವಾ ಕಿರಿಕಿರಿ ಉಂಟಾದರೆ ಈರುಳ್ಳಿ ಕತ್ತರಿಸುವುದನ್ನು ನಿಲ್ಲಿಸಿ, ಶುದ್ಧ ತಣ್ಣೀರಿನಿಂದ ಕಣ್ಣುಗಳನ್ನು ತೊಳೆಯುವುದು ಆರಾಮ ನೀಡಬಹುದು.

ಇದನ್ನೂ ಓದಿ: ‘ಅಪ್ಪ-ಅಮ್ಮ ಇಲ್ಲದಿದ್ದರೆ ಕಷ್ಟವಾಗುತ್ತಿತ್ತು’; ವಿಚ್ಛೇದನದ ದಿನಗಳನ್ನು ನೆನೆದ ಸೌಂದರ್ಯಾ| Soundarya Rajinikanth

ಒಟ್ಟಿನಲ್ಲಿ, ಈರುಳ್ಳಿ ಕತ್ತರಿಸುವಾಗ ಕಣ್ಣಲ್ಲಿ ನೀರು ಬರುವುದು ಭಾವನಾತ್ಮಕ ಕಾರಣದಿಂದಲ್ಲ. ಈರುಳ್ಳಿಯ ಜೀವಕೋಶಗಳು ಒಡೆದಾಗ ಬಿಡುಗಡೆಯಾಗುವ ಕಿರಿಕಿರಿಯುಂಟುಮಾಡುವ ರಾಸಾಯನಿಕಕ್ಕೆ ಕಣ್ಣು ನೀಡುವ ಸಹಜ ರಕ್ಷಣಾತ್ಮಕ ಪ್ರತಿಕ್ರಿಯೆಯೇ ಕಣ್ಣೀರು.