‘ಅಪ್ಪ-ಅಮ್ಮ ಇಲ್ಲದಿದ್ದರೆ ಕಷ್ಟವಾಗುತ್ತಿತ್ತು’; ವಿಚ್ಛೇದನದ ದಿನಗಳನ್ನು ನೆನೆದ ಸೌಂದರ್ಯಾ| Soundarya Rajinikanth

ವಿಚ್ಛೇದನದ ಕಷ್ಟದ ದಿನಗಳಲ್ಲಿ ತಂದೆ ರಜನಿಕಾಂತ್ ಹಾಗೂ ತಾಯಿ ಲತಾ ತಮ್ಮ ಬೆಂಬಲಕ್ಕೆ ಗಟ್ಟಿಯಾಗಿ ನಿಂತಿದ್ದರು ಎಂದು ಸೌಂದರ್ಯಾ ರಜನಿಕಾಂತ್ ಹೇಳಿದ್ದಾರೆ. ಇದೇ ವೇಳೆ ಪ್ರೀತಿ, ದಾಂಪತ್ಯ ಮತ್ತು ಸಂಬಂಧಗಳಲ್ಲಿನ ಸಮಾನತೆಯ ಬಗ್ಗೆಯೂ ಅವರು ಮನಬಿಚ್ಚಿ ಮಾತನಾಡಿದ್ದಾರೆ.
Soundarya Rajinikanth Divorce
ಸೌಂದರ್ಯಾ ರಜನಿಕಾಂತ್
Published on: 

Soundarya Rajinikanth: ನಟ ರಜನಿಕಾಂತ್ ಅವರ ಪುತ್ರಿ ಹಾಗೂ ನಿರ್ಮಾಪಕಿ ಸೌಂದರ್ಯಾ ರಜನಿಕಾಂತ್ ತಮ್ಮ ವೈಯಕ್ತಿಕ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಇತ್ತೀಚಿನ ಸಂದರ್ಶನದಲ್ಲಿ ತಮ್ಮ ಮೊದಲ ಮದುವೆ, ವಿಚ್ಛೇದನ, ಎರಡನೇ ಮದುವೆ ಹಾಗೂ ಸಂಬಂಧಗಳಲ್ಲಿ ಸಮಾನತೆಯ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ.

ಮೊದಲ ಮದುವೆ ಮುರಿದಾಗ ಅಪ್ಪ ರಜನಿಕಾಂತ್ ಹಾಗೂ ಅಮ್ಮ ಲತಾ ರಜನಿಕಾಂತ್ ತಮ್ಮ ಬೆನ್ನಿಗೆ ಗಟ್ಟಿಯಾಗಿ ನಿಂತಿದ್ದರು ಎಂದು ಸೌಂದರ್ಯಾ ಹೇಳಿದ್ದಾರೆ. ‘ನನ್ನ ಕಷ್ಟದ ಸಮಯದಲ್ಲಿ ಅಪ್ಪ-ಅಮ್ಮ ಬಂಡೆಯಂತೆ ನನ್ನ ಜತೆಗಿದ್ದರು. ಅವರ ಬೆಂಬಲ ಇಲ್ಲದೆ ಆ ಸಮಯವನ್ನು ಎದುರಿಸಲು ನನಗೆ ಸಾಧ್ಯವಾಗುತ್ತಿರಲಿಲ್ಲ’ ಎಂದು ಅವರು ಹೇಳಿದ್ದಾರೆ.

ವಿಚ್ಛೇದನದ ಬಳಿಕ ಮರುಮದುವೆ

ಮೊದಲ ಮದುವೆ ಮರಿದು ಬಿದ್ದರೂ ಅದರಿಂದ ಮದುವೆ ಮೇಲಿನ ನಂಬಿಕೆ ಹೋಗಲಿಲ್ಲ ಎಂದು ಸೌಂದರ್ಯಾ ಸ್ಪಷ್ಟಪಡಿಸಿದ್ದಾರೆ. ಅದು ಕೇವಲ ತಪ್ಪಾದ ಸಂಬಂಧವಾಗಿತ್ತು. ವಿಚ್ಛೇದನದ ಬಳಿಕ ತಾನು ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡೆ. ನಂತರ ಮತ್ತೆ ಮದುವೆಯಾಗಲು ನಿರ್ಧರಿಸಿದೆ ಎಂದು ಹೇಳಿದ್ದಾರೆ.

ನಮ್ಮ ಮನೆಯಲ್ಲೂ ಪುರುಷ ಪ್ರಧಾನ ವ್ಯವಸ್ಥೆ ಇತ್ತು

ತಮ್ಮ ತಲೆಮಾರಿನಲ್ಲಿ ಬೆಳೆದ ಬಹುತೇಕ ಕುಟುಂಬಗಳಲ್ಲಿದ್ದಂತೆ ತಮ್ಮ ಮನೆಯಲ್ಲೂ ಪುರುಷ ಪ್ರಧಾನ ವ್ಯವಸ್ಥೆ ಇತ್ತು ಎಂದು ಸೌಂದರ್ಯಾ ಹೇಳಿದ್ದಾರೆ. ಆದರೆ ಈಗ ಕಾಲ ಬದಲಾಗುತ್ತಿದೆ, ಅದರ ಜತೆಗೆ ಸಂಬಂಧಗಳ ಬಗ್ಗೆ ಇರುವ ಆಲೋಚನೆಯೂ ಬದಲಾಗುತ್ತಿದೆ ಎಂದಿದ್ದಾರೆ.

ನಾವಿಬ್ಬರೂ ಸಮಾನರು

ನಾನು, ನನ್ನ ಪತಿ ವಿಷಾಗನ್ ವನಂಗಮೂಡಿ ಇಬ್ಬರೂ ಸಮಾನರು ಎಂದು ಸೌಂದರ್ಯಾ ಹೇಳಿದ್ದಾರೆ. ಒಬ್ಬರನ್ನೊಬ್ಬರು ಅರ್ಥ ಮಾಡಿಕೊಂಡು ಜೀವನ ನಡೆಸುತ್ತಿದ್ದೇವೆ ಎಂದಿದ್ದಾರೆ. ಮಹಿಳೆಯರು ಒಂದೇ ಸಮಯದಲ್ಲಿ ಹಲವು ಕೆಲಸಗಳನ್ನು ನಿಭಾಯಿಸುತ್ತಾರೆ. ಹೀಗಾಗಿ ಅವರಿಂದಲೂ ಸಾಕಷ್ಟು ನಿರೀಕ್ಷೆ ಇರುತ್ತದೆ. ಆದರೆ ಮಹಿಳೆಯರು ಮಾಡೋ ಇಷ್ಟೊಂದು ಕೆಲಸವನ್ನು ಪುರುಷರು ಕೆಲವೊಮ್ಮೆ ಸಹಜವಾಗಿಯೇ ತೆಗೆದುಕೊಳ್ಳುತ್ತಾರೆ ಎಂದು ಸೌಂದರ್ಯಾ ಹೇಳಿದ್ದಾರೆ

ಇದನ್ನೂ ಓದಿ: 38 ಕಿ.ಮೀ ಓಡಿದ ಸೂಪರ್ ಡಾಗ್! ‘ಪಿಲ್ಲು ಗಾಗಿನ್ಸ್’ ಈಗ ಸೋಷಿಯಲ್ ಮೀಡಿಯಾ ಸ್ಟಾರ್ | Dog Runs 38 Km

ಸೌಂದರ್ಯಾ 2010ರಲ್ಲಿ ಉದ್ಯಮಿ ಅಶ್ವಿನ್ ರಾಮ್‌ಕುಮಾರ್ ಅವರನ್ನು ಮದುವೆಯಾಗಿದ್ದರು. ಈ ದಂಪತಿಗೆ 2015ರಲ್ಲಿ ವೇದ್ ಎಂಬ ಮಗ ಜನಿಸಿದ್ದ. ಆದರೆ 2016ರಲ್ಲಿ ಇಬ್ಬರೂ ಬೇರ್ಪಟ್ಟು, 2017ರಲ್ಲಿ ವಿಚ್ಛೇದನ ಪಡೆದಿದ್ದರು. ಬಳಿಕ 2019ರಲ್ಲಿ ಉದ್ಯಮಿ ವಿಷಾಗನ್ ವನಂಗಮೂಡಿ ಅವರನ್ನು ಸೌಂದರ್ಯಾ ಮದುವೆಯಾದರು. ಈ ದಂಪತಿಗೆ 2022ರಲ್ಲಿ ವೀರ್ ಎಂಬ ಮಗ ಜನಿಸಿದ್ದಾನೆ. (ಏಜೆನ್ಸೀಸ್)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net