ಸೀನುತ್ತಿರುವಾಗ ಕಣ್ಣುಗಳು ಸಹಜವಾಗಿ ಮುಚ್ಚಿಕೊಳ್ಳುತ್ತವೆ 
ನ್ಯೂಸ್

Sneeze: ಸೀನುವಾಗ ಕಣ್ಣುಗಳು ತಾನಾಗಿಯೇ ಯಾಕೆ ಮುಚ್ಚಿಕೊಳ್ಳುತ್ತವೆ? ಇದನ್ನು ಬಲವಂತವಾಗಿ ತಡೆದರೆ ಏನಾಗುತ್ತೆ ಗೊತ್ತಾ?

Eyes close when sneezing: ನಮಗೆ ಸೀನು ಬಂದಾಗಲೆಲ್ಲಾ ನಮ್ಮ ಗಮನಕ್ಕೆ ಬಾರದೆ ಕಣ್ಣುಗಳು ತಾನಾಗಿಯೇ ಮುಚ್ಚಿಕೊಳ್ಳುತ್ತವೆ. ಇದು ಏಕೆ ಎಂದು ಎಂದಾದರೂ ಯೋಚಿಸಿದ್ದೀರಾ? ಮೂಗಿನಲ್ಲಿ ಧೂಳು ಅಥವಾ ಬ್ಯಾಕ್ಟೀರಿಯಾ ಕಿರಿಕಿರಿ ಉಂಟುಮಾಡಿದಾಗ, ಮೆದುಳಿನ 'ಸೀನು ಕೇಂದ್ರ' ಕುತ್ತಿಗೆ, ಕಣ್ಣು ಹಾಗೂ ಶ್ವಾಸಕೋಶದ ಸ್ನಾಯುಗಳಿಗೆ ಏಕಕಾಲದಲ್ಲಿ ಸಂಕೇತ ಕಳುಹಿಸುತ್ತದೆ.

ಸೀನುವಾಗ ಮೂಗು ಮತ್ತು ಬಾಯಿಯಿಂದ ಗಂಟೆಗೆ ಸುಮಾರು 160 ಕಿಲೋಮೀಟರ್ ವೇಗದಲ್ಲಿ ಗಾಳಿ ಹಾಗೂ ಬ್ಯಾಕ್ಟೀರಿಯಾಗಳು ಹೊರಬರುತ್ತವೆ. ಈ ವೇಗದಲ್ಲಿ ಹೊರಬರುವ ಕಣಗಳು ಮರಳಿ ಕಣ್ಣಿಗೆ ಸೇರದಂತೆ ತಡೆಯಲು ನರಮಂಡಲದ ರಕ್ಷಣಾತ್ಮಕ ಪ್ರತಿಫಲಿತ ಕ್ರಿಯೆಯಿಂದ (Reflex Action) ಕಣ್ಣುಗಳು ಸ್ವಯಂಚಾಲಿತವಾಗಿ ಮುಚ್ಚಿಕೊಳ್ಳುತ್ತವೆ. ಕಣ್ಣುಗಳನ್ನು ಬಲವಂತವಾಗಿ ತೆರೆದಿಟ್ಟು ಸೀನಿದರೆ ಸ್ನಾಯುಗಳ ಮೇಲೆ ತೀವ್ರ ಒತ್ತಡ ಉಂಟಾಗುತ್ತದೆ.

ಸೀನನ್ನು ಬಲವಂತವಾಗಿ ತಡೆದರೆ ಏನಾಗುತ್ತದೆ?

ಅಪರೂಪಕ್ಕೆ ಕೆಲವರು ಸೀನು ಬರುವುದನ್ನು ಮೂಗು ಹಾಗೂ ಬಾಯಿಯನ್ನು ಗಟ್ಟಿಯಾಗಿ ಮುಚ್ಚಿ ಬಲವಂತವಾಗಿ ತಡೆಯಲು ಪ್ರಯತ್ನಿಸುತ್ತಾರೆ. ಆದರೆ ಇದು ಅತ್ಯಂತ ಅಪಾಯಕಾರಿ ಅಭ್ಯಾಸವಾಗಿದೆ. ಸೀನನ್ನು ತಡೆದಾಗ ಉಂಟಾಗುವ ತೀವ್ರವಾದ ಆಂತರಿಕ ಒತ್ತಡವು ಕಿವಿಯ ಒಳಗಿನ ಯುಸ್ಟಾಚಿಯನ್ ನಾಳದ ಮೂಲಕ ಸಾಗಿ ಕಿವಿಯ ತಮಟೆಯನ್ನು (Eardrum) ಹರಿದು ಹಾಕಬಹುದು.

ಕಣ್ಣು ಮುಚ್ಚಿ ಸೀನುತ್ತಿರುವ ವ್ಯಕ್ತಿ

ಅಷ್ಟೇ ಅಲ್ಲದೆ, ತಲೆ ಮತ್ತು ಮೂಗಿನಲ್ಲಿರುವ ಸೂಕ್ಷ್ಮ ರಕ್ತನಾಳಗಳು ಒಡೆಯುವ ಹಾಗೂ ಶ್ವಾಸಕೋಶದ ಮೇಲೂ ದುಷ್ಪರಿಣಾಮ ಬೀರುವ ಸಾಧ್ಯತೆ ಇರುತ್ತದೆ.

ವಾಗಸ್ ನರಗಳ ಕೆಲಸವೇನು?

ಇದಲ್ಲದೆ, ಸೀನಿನ ಪ್ರಕ್ರಿಯೆಯಲ್ಲಿ 'ವಾಗಸ್ ನರ' (Vagus Nerve) ಪ್ರಮುಖ ಪಾತ್ರ ವಹಿಸುತ್ತದೆ. ಸೀನು ಬರುವಾಗ ಎದೆ ಮತ್ತು ಹೊಟ್ಟೆಯಲ್ಲಿ ಸೃಷ್ಟಿಯಾಗುವ ಹಠಾತ್ ಒತ್ತಡ ಬದಲಾವಣೆಯನ್ನು ಈ ನರವು ಗುರುತಿಸುತ್ತದೆ. ದೇಹದ ವಿಶ್ರಾಂತಿ ವ್ಯವಸ್ಥೆಯನ್ನು ನಿಯಂತ್ರಿಸುವ ವಾಗಸ್ ನರವು, ಹೃದಯದ ಬಡಿತವನ್ನು ಸ್ವಲ್ಪ ಮಟ್ಟಿಗೆ ನಿಧಾನಗೊಳಿಸಲು ಸಂಕೇತ ನೀಡುತ್ತದೆ. ಸೀನು ಮುಗಿದ ತಕ್ಷಣ ಒತ್ತಡ ಕಡಿಮೆಯಾಗಿ ಹೃದಯ ಬಡಿತ ಮತ್ತೆ ಸಹಜ ಸ್ಥಿತಿಗೆ ಬರುತ್ತದೆ.

ಇದನ್ನೂ ಓದಿ: ದೇಶದ ಮಾನ ತೆಗೆದ್ರಾ ಇವರು? ಅರ್ಮೇನಿಯಾದಲ್ಲಿ ಬಾಲಕಿಯರಿಗೆ ಕಿರುಕುಳ ನೀಡಿದ ವಿಡಿಯೋ ವೈರಲ್ | Indian men in Armenia

ಒಟ್ಟಿನಲ್ಲಿ ಸೀನು ಬರುವುದು ದೇಹದ ಒಂದು ಸ್ವಾಭಾವಿಕ ರಕ್ಷಣಾ ಕ್ರಿಯೆಯಾಗಿದ್ದು, ಯಾವುದೇ ಕಾರಣಕ್ಕೂ ಅದನ್ನು ಬಲವಂತವಾಗಿ ತಡೆಯಬಾರದು.