ನ್ಯೂಸ್

‘ಸ್ವದೇಶ್​​’ಗೆ ಮೊದಲ ಆಯ್ಕೆ ಶಾರೂಖ್​ ಅಲ್ಲ.. ಹೃತಿಕ್​ ​​! ಸ್ಕ್ರಿಪ್ಟ್​​​ ಓದಿ ಸಿನಿಮಾ ತಿರಸ್ಕರಿಸಿದ್ದೇಕೆ ?

ಮುಂಬೈ: ಬಾಲಿವುಡ್​ ಕಿಂಗ್​​ ಶಾರೂಖ್ ​ಖಾನ್​ ತಮ್ಮ ವೃತ್ತಿಜೀವನದಲ್ಲಿ ಹಲವು ಬ್ಲಾಕ್​ಬಸ್ಟರ್​ ಸಿನಿಮಾಗಳನ್ನು ನೀಡಿದ್ದಾರೆ. ಶಾರೂಖ್​ ಹಿಟ್​ ಸಿನಿಮಾಗಳ ಲಿಸ್ಟ್​​ನಲ್ಲಿ ಸ್ವದೇಶ್​​​ ಕೂಡ ಸೇರಿದೆ. ಅಸಲಿಗೆ ಈ ಸಿನಿಮಾ ಶಾರೂಖ್​ಖಾನ್​ ಅವರಿಗಾಗಿ ನಿರ್ಮಿಸಿದ್ದಲ್ಲಾ. ಅಶುತೋಷ್ ಗೋವಾರಿಕರ್ ಅವರು ಸ್ವದೇಶ್​​ ಸಿನಿಮಾವನ್ನು ಬೇರೊಬ್ಬ ನಟನಿಗಾಗಿ ಹೆಣೆದಿದ್ದರು. ಆದರೆ ಆ ನಟ ಈ ಸಿನಿಮಾ ಆಫರ್​ ತಿರಸ್ಕರಿಸಿದ ಬಳಿಕ ಶಾರೂಖ್​​ ಖಾನ್​ ಸ್ವದೇಶ್​ ಚಿತ್ರದ ನಾಯಕನಾಗಿ ಆಯ್ಕೆಯಾದರು. ಅನೇಕ ಬಾರಿ ಬೇರೆಯವರಿಗಾಗಿ ಚಿತ್ರಗಳನ್ನು ನಿರ್ಮಿಸಲಾಗುತ್ತದೆ ಆದರೆ ಒಂದಲ್ಲಾ ಒಂದು ಕಾರಣಕ್ಕೆ ಆ ಸಿನಿಮಾ ಅವರ ಕೈತಪ್ಪೊ ಮತ್ತೊಬ್ಬರು ಸಿನಿಮಾದ ಪಾತ್ರಕ್ಕೆ ಜೀವ ತುಂಬುತ್ತಾರೆ.

ಶಾರೂಖ್ ಖಾನ್, ಗಾಯತ್ರಿ ಜೋಶಿ ಮತ್ತು ಕಿಶೋರಿ ಬಲ್ಲಾಳ್ ಚಿತ್ರದಲ್ಲಿ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಅಮೆರಿಕದ ನಾಸಾದಲ್ಲಿ ಕೆಲಸ ಮಾಡುವ ಎನ್​ಆರ್​ಐ ಮೋಹನ್​ ಭಾರ್ಗವ, ತನ್ನನ್ನ ಬೆಳೆಸಿದವರನ್ನು ಹುಡುಕಲು ತನ್ನ ದೇಶಕ್ಕೆ ಮರಳುತ್ತಾನೆ. ಇದೇ ಸಿನಿಮಾದ ಕಥಾಹಂದರ. 2004ರಲ್ಲಿ ಬಿಡುಗಡೆಯಾದ ಈ ಸಿನಿಮಾ ಗಲ್ಲಾಪೆಟ್ಟಿಗೆಯಲ್ಲಿ ಅಷ್ಟು ಸಕ್ಸಸ್​​ ಕಾಣಲಿಲ್ಲವಾದರೂ, ಇಂದಿಗೂ ಕಥೆಯನ್ನು ಮಾತ್ರ ಎಲ್ಲರೂ ಮೆಚ್ಚುತ್ತಾರೆ

ಸ್ವದೇಶ್​ ಚಿತ್ರದಲ್ಲಿನ ನಟನೆಗಾಗಿ ಶಾರೂಖ್ ಖಾನ್ ಅತ್ಯುತ್ತಮ ನಟ ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದಿದ್ದಾರೆ. ಈ ಸಿನಿಮಾದ ಮೋಹನ್​ ಭಾರ್ಗವ ಪಾತ್ರಕ್ಕೆ ಅಶುತೋಷ್​ ಅವರ ಮೊದಲ ಆಯ್ಕೆ ಶಾರೂಖ್​ ಆಗಿರಲಿಲ್ಲ. ಮೊದಲಿಗೆ ನಿರ್ದೇಶಕ ಈ ಪಾತ್ರಕ್ಕೆ ಇಚ್ಛಿಸಿದ್ದು ನಟ ಹೃತಿಕ್​ ರೋಷನ್​ ಅವರನ್ನು, ಆದರೆ ಹೃತಿಕ್​ ರೋಷನ್​ ಸ್ಕ್ರಿಪ್ಟ್​​​ ಓದಿದ ಬಳಿಕ ಸಿನಿಮಾ ಮಾಡಲು ಒಪ್ಪಲಿಲ್ಲ.

ಇನ್ನೂ ಈ ವಿಚಾರವಾಗಿ ಹೃತಿಕ್​ ರೋಷನ್​​ ಅವರು ಖಾಸಗಿ ವಾಹಿನಿಯ ಸಂದರ್ಶನದಲ್ಲಿ ಮಾತನಾಡಿದ್ದು, ಸ್ವದೇಶ್​ ಸಿನಿಮಾ ಮಾಡಲು ತಿರಸ್ಕರಿಸಿದ್ದೇಕೆ ಎಂಬುದಕ್ಕೆ ಕಾರಣ ಹೇಳಿದ್ದಾರೆ. ಅಶುತೋಷ್ ಅವರ ಸ್ವದೇಸ್​​ ಸಿನಿಮಾದ ಸ್ಕ್ರಿಪ್ಟ್​​​ ಓದಿದ್ದೆ. ನಿರ್ದೇಶಕರ ದೃಷ್ಟಿಕೋನದಿಂದ ನೋಡಲು ನನಗೆ ಸಾಧ್ಯವಾಗಲಿಲ್ಲ. ಅಲ್ಲದೆ ಆ ಪಾತ್ರ ನಿರ್ವಹಿಸುವ ಸಾಮರ್ಥ್ಯ ಹೊಂದಿದ್ದೇನೆ ಎಂದು ನಾನು ಭಾವಿಸಿರಲಿಲ್ಲ ಎಂದು ಹೇಳಿದ್ದಾರೆ. ಅಶುತೋಷ್ ಅವರನ್ನು ತಮ್ಮ ನೆಚ್ಚಿನ ಚಲನಚಿತ್ರ ನಿರ್ಮಾಪಕರಲ್ಲಿ ಒಬ್ಬರು ಎಂದು ಕೂಡ ತಿಳಿಸಿದರು.

ಸ್ವದೇಶ್​ ನಿರಾಕರಿಸಿದ ಬಳಿಕ ನಾಲ್ಕು ವರ್ಷಗಳನ ನಂತರ ಐತಿಹಾಸಿಕ ಸಿನಿಮಾ ಜೋಧಾ ಅಕ್ಬರ್​​​ನಲ್ಲಿ ಅಶುತೋಷ್​ ಮತ್ತು ಹೃತಿಕ್​ ಜೋಡಿ ಮತ್ತೆ ಒಂದಾಯ್ತು.(ಏಜೆನ್ಸೀಸ್​​)