ನ್ಯೂಸ್

ಡೊನೇಟ್ ಫಾರ್ ದೇಶ್ ಅಭಿಯಾನ: 138; 1,380; 13,800 ರೂಪಾಯಿ ಏಕೆ ಕಾಂಗ್ರೆಸ್​ ಸಂಗ್ರಹಿಸುತ್ತಿದೆ?

ನವದೆಹಲಿ: ಮುಂದಿನ ವರ್ಷ ನಡೆಯಲಿರುವ ಸಾರ್ವತ್ರಿಕ ಚುನಾವಣೆಗೆ ಮುನ್ನ ನಿಧಿ ಸಂಗ್ರಹಿಸಲು ಕಾಂಗ್ರೆಸ್​ ಪಕ್ಷದ ಡೊನೇಟ್ ಫಾರ್ ದೇಶ್ (ದೇಶಕ್ಕಾಗಿ ದಾನ ನೀಡಿ) ಅಭಿಯಾನಕ್ಕೆ ಚಾಲನೆ ನೀಡಿದ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು, ಶ್ರೀಮಂತರ ಮೇಲೆ ಅವಲಂಬಿತರಾದಾಗ ಅವರ ನೀತಿಗಳನ್ನು ಅನುಸರಿಸಬೇಕಾಗುತ್ತದೆ ಎಂದಿದ್ದಾರೆ.

.

ಸೋಮವಾರ ದೆಹಲಿಯಲ್ಲಿ ನಡೆದ ಈ ಆಂದೋಲನದ ಉದ್ಘಾಟನೆ ಸಮಾರಂಭದಲ್ಲಿ ಮಾತನಾಡಿದ ಅವರು, "ಕಾಂಗ್ರೆಸ್ ದೇಶಕ್ಕಾಗಿ ದೇಣಿಗೆ ಕೇಳುತ್ತಿರುವುದು ಇದೇ ಮೊದಲು. ನೀವು ಶ್ರೀಮಂತರನ್ನು ಅವಲಂಬಿಸಿ ಕೆಲಸ ಮಾಡಿದರೆ, ನಂತರ ನೀವು ಅವರ ನೀತಿಗಳನ್ನು ಅನುಸರಿಸಬೇಕು. ಮಹಾತ್ಮ ಗಾಂಧಿಯವರು ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ಸಾರ್ವಜನಿಕರಿಂದ ದೇಣಿಗೆ ಪಡೆದರು" ಎಂದು ಹೇಳಿದರು.

"ದೇಶಕ್ಕಾಗಿ ದೇಣಿಗೆ ನೀಡಿ" ಅಭಿಯಾನವು "ತುಳಿತಕ್ಕೆ ಒಳಗಾದ ಸಮುದಾಯಗಳ ಹಕ್ಕುಗಳು, ಅಸಮಾನತೆಗಳನ್ನು ನಿವಾರಿಸುವುದು ಮತ್ತು ಶ್ರೀಮಂತರಿಗೆ ಒಲವು ತೋರುವ ಸರ್ಕಾರದ ವಿರುದ್ಧ ಅಸಾಧಾರಣ ವಿರೋಧವಾಗಿ ನಿಲ್ಲುವ ಬದ್ಧತೆಯಾಗಿದೆ" ಎಂದು ಎಕ್ಸ್​ ಸೋಷಿಯಲ್​ ಮೀಡಿಯಾ ಪೋಸ್ಟ್‌ನಲ್ಲಿ ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ 138 ವರ್ಷ ಪೂರೈಸಿರುವ ಹಿನ್ನೆಲೆಯಲ್ಲಿ ಈ ಅಭಿಯಾನ ಆರಂಭಿಸಲಾಗಿದೆ. ರೂ, 138 ಅಥವಾ ರೂ. 1,380 ಇಲ್ಲವೇ 13,800 ರೂಪಾಯಿ ದಾನ ನೀಡಲು ಕಾಂಗ್ರೆಸ್ ವೆಬ್‌ಸೈಟ್‌ನಲ್ಲಿನ ಪಾವತಿ ಲಿಂಕ್ ದಾನಿಗಳನ್ನು ಪ್ರೇರೇಪಿಸುತ್ತದೆ. ಇದನ್ನು ಹೊರತುಪಡಿಸಿ ದಾನಿಯು ಬೇರೆ ಮೊತ್ತವನ್ನು ದಾನ ಮಾಡಲು ಆಯ್ಕೆ ಮಾಡಬಹುದಾಗಿದೆ.

ಈ ಕ್ರೌಡ್‌ ಫಂಡಿಂಗ್ ಉಪಕ್ರಮವು 1920-21ರಲ್ಲಿ ಪ್ರಾರಂಭವಾದ ಮಹಾತ್ಮ ಗಾಂಧಿಯವರ ಐತಿಹಾಸಿಕ 'ತಿಲಕ್ ಸ್ವರಾಜ್ ನಿಧಿ'ಯಿಂದ ಪ್ರೇರಿತವಾಗಿದೆ ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ. ವೇಣುಗೋಪಾಲ್ ಹೇಳಿದ್ದಾರೆ.

ಜನರು ದೇಣಿಗೆ ನೀಡಬೇಕು. ಇದರಿಂದ ಅವರು ಉತ್ತಮ ಭಾರತವನ್ನು ನಿರ್ಮಿಸಲು ಸಾಧ್ಯವಾಗಲಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮನವಿ ಮಾಡಿದ್ದಾರೆ. "ನೀವು ಮತ್ತು ನಾನು ಒಟ್ಟಾಗಿ ಉತ್ತಮ ಭಾರತವನ್ನು ಮಾಡೋಣ" ಎಂದು ಅವರು ಹೇಳಿದ್ದಾರೆ.

ಈ ಅಭಿಯಾನದ ಬಗ್ಗೆ ಜಾಗೃತಿ ಮೂಡಿಸುವಂತೆ ಎಲ್ಲಾ ರಾಜ್ಯ ಕಾಂಗ್ರೆಸ್ ಮುಖ್ಯಸ್ಥರಿಗೆ ತಿಳಿಸಲಾಗಿದೆ. ಡಿಸೆಂಬರ್ 28 ರಂದು ಪಕ್ಷದ ಸಂಸ್ಥಾಪನಾ ದಿನದವರೆಗೆ ಈ ಆಂದೋಲನವು ಪ್ರಾಥಮಿಕವಾಗಿ ಆನ್‌ಲೈನ್‌ನಲ್ಲಿರುತ್ತದೆ, ನಂತರ ಕಾಂಗ್ರೆಸ್ ಸ್ವಯಂಸೇವಕರು ಕನಿಷ್ಠ 138 ರೂಪಾಯಿ ದಾನ ಸಂಗ್ರಹಿಸಲು ಮನೆ-ಮನೆಗೆ ಹೋಗುತ್ತಾರೆ.

ಕಳೆದ ಲೋಕಸಭೆ ಚುನಾವಣೆಗೆ ಮುನ್ನ ಕಾಂಗ್ರೆಸ್ 2018 ರಲ್ಲಿ ಔಟ್ರೀಚ್-ಕಮ್-ಕ್ರೌಡ್‌ ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿತ್ತು, ಆದರೆ, ಅದು ಹೆಚ್ಚು ವೇಗ ಪಡೆದುಕೊಳ್ಳಿಲ್ಲ.

ಬಿಜೆಪಿ ಲೇವಡಿ:

60 ವರ್ಷಗಳಿಂದ ಭಾರತವನ್ನು ಲೂಟಿ ಮಾಡಿದವರು ಈಗ ನಿಧಿ ಹುಡುಕಲು ಹೊರಟಿದ್ದಾರೆ ಎಂದು ಬಿಜೆಪಿಯು ಕಾಂಗ್ರೆಸ್​ನ ಕ್ರೌಡ್‌ ಫಂಡಿಂಗ್ ಅಭಿಯಾನವನ್ನು ಲೇವಡಿ ಮಾಡಿದೆ. ಕಾಂಗ್ರೆಸ್ ಸಂಸದ ಧೀರಜ್ ಸಾಹು ಅವರ ಆವರಣದಿಂದ 351 ಕೋಟಿ ರೂಪಾಯಿ ಅಧಿಕ ಪ್ರಮಾಣದ ನಗದು ದಂಧೆಯಿಂದ ಗಮನವನ್ನು ಬೇರೆಡೆ ಸೆಳೆಯುವ ಉದ್ದೇಶವನ್ನು ಈ ಅಭಿಯಾನ ಹೊಂದಿದೆ ಎಂದು ಆಡಳಿತ ಪಕ್ಷ ಬಿಜೆಪಿ ಆರೋಪಿಸಿದೆ.