Asma al-Assad: ಸಿರಿಯಾದಲ್ಲಿ ತನ್ನ ಅಧಿಕಾರ ಕಳೆದುಕೊಂಡ ಬಳಿಕ ರಷ್ಯಾಕ್ಕೆ ಪಲಾಯನ ಮಾಡಿದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್, ಸದ್ಯ ತನ್ನ ಕುಟುಂಬದೊಂದಿಗೆ ರಷ್ಯಾದ ಮಾಸ್ಕೋದಲ್ಲಿ ವಾಸ್ತವ್ಯ ಹೂಡಿದ್ದಾರೆ. ಇತ್ತೀಚೆಗಷ್ಟೇ ಬಶರ್ ಅಲ್-ಅಸ್ಸಾದ್ರ ಧರ್ಮಪತ್ನಿ ಅಸ್ಮಾ ಅಲ್-ಅಸ್ಸಾದ್ ಪತಿಯೊಂದಿಗಿರುವ ಸಂಬಂಧವನ್ನು ಮುರಿದುಕೊಳ್ಳಲು ಬಯಸಿ, ರಷ್ಯಾ ಕೋರ್ಟ್ ಮೆಟ್ಟಿಲೇರಿದ್ದರು ಎಂಬ ಗಾಳಿ ಸುದ್ದಿ ಜಾಲತಾಣಗಳಲ್ಲಿ ಭಾರೀ ಸದ್ದು ಮಾಡಿತು. ಆದ್ರೆ, ಈವರೆಗೂ ದಂಪತಿಗಳಿಂದ ವಿಚ್ಛೇದನದ ಬಗ್ಗೆ ಯಾವುದೇ ರೀತಿಯ ಪ್ರತಿಕ್ರಿಯೆಗಳು ಲಭ್ಯವಾಗಿಲ್ಲ. ಸದ್ಯ ಈ ವಿಚಾರಗಳ ಬೆನ್ನಲ್ಲೇ ಅಸ್ಸಾದ್ ಪತ್ನಿ ಅಸ್ಮಾ ಲ್ಯುಕೇಮಿಯಾ ಎಂಬ ಮಾರಣಾಂತಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂಬ ವರದಿ ಅನೇಕರಲ್ಲಿ ಅಚ್ಚರಿ ಮೂಡಿಸಿದೆ.
ಒಂದೆಡೆ ಪತಿ ಬಶರ್ ಅಲ್ ಅಸ್ಸಾದ್ರಿಂದ ಡಿವೋರ್ಸ್ ಬಯಸಿರುವ ಅಸ್ಮಾ, ತನಗೆ ವಿಚ್ಛೇದನದ ಅಗತ್ಯವಿದೆ ಎಂದು ರಷ್ಯಾ ಕೋರ್ಟಿನಲ್ಲಿ ಅಸ್ಮಾ ಅರ್ಜಿ ಸಲ್ಲಿಸಿರುವುದಾಗಿ ಟರ್ಕಿಶ್ ಮತ್ತು ಅರೇಬಿಕ್ ಸುದ್ದಿ ಸಂಸ್ಥೆಗಳು ವರದಿ ಮಾಡಿವೆ. ಪ್ರಸ್ತುತ ರಷ್ಯಾದ ಮಾಸ್ಕೋದಲ್ಲಿರುವ ಅಸ್ಸಾದ್ ಪತ್ನಿ, ಸಿರಿಯಾದಲ್ಲಿ ಬಂಡುಕೋರರ ದಾಳಿಯಿಂದ ಬೇಸತ್ತಿದ್ದು, ಮಾಸ್ಕೋದಲ್ಲಿನ ಜೀವನ ಅತೃಪ್ತಿ ಎಂದು ಭಾವಿಸಿ, ಪತಿಯಿಂದ ವಿಚ್ಚೇದನ ಪಡೆಯಲು ಮುಂದಾಗಿದ್ದಾರೆ ಎನ್ನಲಾಗಿದೆ. ಆದರೆ, ಈ ವರದಿಗಳನ್ನು ಕ್ರೆಮ್ಲಿನ್ ವಕ್ತಾರ ತಳ್ಳಿಹಾಕಿದ್ದಾರೆ.
ಸಿರಿಯಾದ ಮಾಜಿ ಅಧ್ಯಕ್ಷ ಬಶರ್ ಅಲ್ ಅಸ್ಸಾದ್ರಿಂದ ಅಸ್ಮಾ ಡಿವೋರ್ಸ್ ವಿಚಾರ ಕೇವಲ ವದಂತಿಗಳು. ಅಸ್ಸಾದ್ ಮಾಸ್ಕೋಗೆ ಬಂದಿಳಿದಿದ್ದಾರೆ. ಸಿರಿಯಾದಲ್ಲಿನ ಅವರ ಆಸ್ತಿ-ಪಾಸ್ತಿಗಳನ್ನು ಫ್ರೀಜ್ ಮಾಡಲಾಗಿದೆ. ಇಂತಹ ವರದಿಗಳು ಸುಳ್ಳು ಹೇಳುತ್ತಿವೆ ಎಂದು ಡಿಮಿಟ್ರಿ ಪೆಸ್ಕೋವ್ ಸ್ಪಷ್ಟನೆ ನೀಡಿದ್ದಾರೆ. ಒಂದೆಡೆ ದೀರ್ಘಕಾಲದ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಅಸ್ಮಾ, ಪತಿಯಿಂದ ವಿಚ್ಚೇದನ ಪಡೆದು ಲಂಡನ್ಗೆ ಹಾರಲು ಇಚ್ಛಿಸಿದ್ದಾರೆ ಎಂಬ ವರದಿಗಳು ಬಲವಾಗಿವೆ ಎಂದೇ ಹೇಳಲಾಗುತ್ತಿದೆ.
ಲ್ಯುಕೇಮಿಯಾ ಖಾಯಿಲೆಯಿಂದ ನರಳುತ್ತಿರುವ ಅಸ್ಮಾ, ಪ್ರಸ್ತುತ ಅಗತ್ಯ ಚಿಕಿತ್ಸೆಯ ಮೊರೆ ಹೋಗಿದ್ದಾರೆ. ಈ ಮಧ್ಯೆ ತಾನು ಮಕ್ಕಳೊಂದಿಗೆ ಮಾತ್ರ ಲಂಡನ್ಗೆ ತೆರಳಲು ನಿರ್ಧರಿಸಿರುವ ಅಸ್ಮಾ, ಈ ವಿಷಯಕ್ಕೆ ಸಂಬಂಧಿಸಿದಂತೆ ರಷ್ಯಾದ ನ್ಯಾಯಾಲಯಕ್ಕೆ ವಿಶೇಷ ಅನುಮತಿ ಕೋರಿ ಅರ್ಜಿ ಸಲ್ಲಿಸಿದ್ದಾರೆ. ಸದ್ಯ ಆಕೆ ಸಲ್ಲಿಸಿರುವ ಅರ್ಜಿಯನ್ನು ರಷ್ಯಾದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ವರದಿ ಉಲ್ಲೇಖಿಸಿದೆ,(ಏಜೆನ್ಸೀಸ್).