ನ್ಯೂಸ್

ಎಲ್ಲ ಹಣ್ಣುಗಳು ಗುಂಡಾಗಿರುವಾಗ ಬಾಳೆಹಣ್ಣು ಮಾತ್ರ ಏಕೆ ವಕ್ರವಾಗಿದೆ? ಇಲ್ಲಿದೆ ಅಚ್ಚರಿಯ ಉತ್ತರ...Banana

Banana : ಮಾರುಕಟ್ಟೆಯಲ್ಲಿ ಸಿಗುವ ಯಾವುದೇ ಹಣ್ಣಗಳನ್ನು ಗಮನಿಸಿ, ಅವುಗಳ ಆಕಾರ ಸಾಮಾನ್ಯವಾಗಿ ದುಂಡಾಗಿರುತ್ತವೆ. ಸಹಜವಾಗಿ ಕಂಡುಬರುವ ವ್ಯತ್ಯಾಸಗಳೇನೆಂದರೆ, ಗಾತ್ರ ಮತ್ತು ರುಚಿ. ದ್ರಾಕ್ಷಿಗಳು ಚಿಕ್ಕದಾಗಿರುತ್ತವೆ, ಸೇಬು, ಕಿತ್ತಳೆ ಹಾಗೂ ಪೇರಲಗಳು ಸ್ವಲ್ಪ ದಪ್ಪವಾಗಿರುತ್ತದೆ. ಆದರೆ, ದುಂಡಾಗಿರುತ್ತವೆ. ಎಲ್ಲ ಹಣ್ಣುಗಳು ದುಂಡಾಗಿರುವಾಗ ಬಾಳೆಹಣ್ಣು ಮಾತ್ರ ಏಕೆ ವಕ್ರವಾಗಿರುತ್ತದೆ? ಎಂದಾದರೂ ಈ ಪ್ರಶ್ನೆ ನಿಮ್ಮ ತಲೆಯಲ್ಲಿ ಮೂಡಿದೆಯೇ? ಇಲ್ಲ ಅಂದರೆ, ಈ ಪ್ರಶ್ನೆಗೆ ಉತ್ತರವನ್ನು ನಾವಿಂದು ನಿಮಗೆ ತಿಳಿಸುತ್ತೇವೆ.

ಬಾಳೆಹಣ್ಣುಗಳು ತಿರುಳಿರುವ, ನೇರವಾದ ಕಾಂಡಗಳನ್ನು ಹೊಂದಿರುವ ಬೃಹತ್ ಸಸ್ಯಗಳಾಗಿವೆ. ಈ ಬಾಳೆಯ ಸಸ್ಯ ಬೀಜಗಳಿಂದಲ್ಲ, ಬದಲಿಗೆ ಗಿಡಮೂಲ ಅಥವಾ ಬೇರುಕಾಂಡಗಳ ಮೂಲಕ ಬೆಳೆಯುತ್ತದೆ. ಬೇರುಕಾಂಡಗಳನ್ನು ಕತ್ತರಿಸಿ ಹೊಸ ಸ್ಥಳದಲ್ಲಿ ನೆಡುತ್ತಾರೆ. ಬಳಿಕ ಹೊಸ ಎಲೆಗಳು ಬರುತ್ತವೆ. ಬಾಳೆಯ ತೊಟ್ಟು ಎಂದು ಕರೆಯುವ ಭಾಗವು ಎಲೆಗಳಿಂದ ರೂಪುಗೊಳ್ಳುತ್ತದೆ. ಸುಮಾರು 10 ರಿಂದ 15 ತಿಂಗಳುಗಳು ಬೆಳೆದ ನಂತರ, ಮಧ್ಯಭಾಗದಿಂದ ಒಂದು ದೊಡ್ಡ ಹೂವಿನ ಮೂಲ ಹೊರಬರುತ್ತದೆ. ಇದನ್ನು ಬಾಳೆಯ ಹೂವು (banana flower) ಎಂದು ಕರೆಯುತ್ತಾರೆ. ಇದು ಬಿಳಿಯ ಬಣ್ಣದಲ್ಲಿರುತ್ತದೆ. ಆ ಹೂವುಗಳ ದಳಗಳ ಕೆಳಗೆ ಸಣ್ಣ ಬಾಳೆ ಹಣ್ಣುಗಳ ಸಾಲುಗಳು ಬೆಳೆಯಲು ಪ್ರಾರಂಭಿಸುತ್ತವೆ. ಬಾಳೆ ಹಣ್ಣುಗಳ ಸಾಲುಗಳು ಹೂವಿನಿಂದ ಮಕರಂದವನ್ನು ಹೊರತೆಗೆಯುತ್ತವೆ. ಹೂವುಗಳ ಮಕರಂದವು ತುಂಬಾ ಒಳ್ಳೆಯದು. ಆ ಮೊಗ್ಗುಗಳು, ದೊಡ್ಡದಾಗಿ ಬೆಳೆಯುತ್ತವೆ ಮತ್ತು ಬಾಳೆ ಹಣ್ಣುಗಳಾಗುತ್ತವೆ. ಬಾಳೆ ಹಣ್ಣು ಬೆಳೆಯುವ ಪ್ರಕ್ರಿಯೆಯನ್ನು ನೆಗಿಟಿವ್​ ಜಿಯೋಟ್ರೋಪಿಸಮ್ ಎಂದು ಕರೆಯಲಾಗುತ್ತದೆ.

ನೆಗಿಟಿವ್​ ಜಿಯೋಟ್ರೋಪಿಸಮ್ ಎಂದರೇನು?

ಸಾಮಾನ್ಯವಾಗಿ, ಭೂಮಿಯು ಎಲ್ಲವನ್ನೂ ತನ್ನೆಡೆಗೆ ಸೆಳೆಯುತ್ತದೆ. ಅದನ್ನೇ ನಾವು ಗುರುತ್ವಾಕರ್ಷಣೆ ಎಂದು ಕರೆಯುತ್ತೇವೆ. ಆದರೆ, ಬಾಳೆಹಣ್ಣುಗಳು ಈ ಗುರುತ್ವಾಕರ್ಷಣೆಗೆ ಬಲಿಯಾಗುವುದಿಲ್ಲ. ಅವು ಭೂಮಿಗೆ ವಿರುದ್ಧವಾಗಿ ಅಂದರೆ, ಆಕಾಶದ ಕಡೆಗೆ ತಿರುಗುತ್ತವೆ. ಸೂರ್ಯನ ಬೆಳಕು ಇರುವ ಕಡೆಯಲೆಲ್ಲ ಬಾಳೆ ಹಣ್ಣು ಬೆಳೆಯುತ್ತವೆ. ಬಾಳೆಹಣ್ಣುಗಳು ಸೂರ್ಯನ ಬೆಳಕನ್ನು ಹೀರಿಕೊಳ್ಳಲು ಮೇಲಕ್ಕೆ ಬೆಳೆಯಲು ಪ್ರಯತ್ನಿಸುತ್ತವೆ. ಆ ಪ್ರಕ್ರಿಯೆಯಲ್ಲಿ, ಬಾಳೆಹಣ್ಣುಗಳು ವಕ್ರವಾಗುತ್ತವೆ. ಬಾಳೆಹಣ್ಣು ಸಂಪೂರ್ಣವಾಗಿ ಹಣ್ಣಾದಾಗ ಅದು ಸ್ವಲ್ಪ ಹೆಚ್ಚು ವಕ್ರವಾಗಿರುವುದನ್ನು ನಾವು ನೋಡುತ್ತೇವೆ. ಬಾಳೆ ಗಿಡಗಳ ಎಲೆಗಳು ದೊಡ್ಡದಾಗಿರುತ್ತವೆ. ಅವುಗಳ ಕೆಳಗೆ ಬೆಳೆಯುವ ಬಾಳೆ ಚಿಗುರುಗಳು ಸೂರ್ಯನ ಬೆಳಕನ್ನು ಅಷ್ಟು ಬೇಗ ಪಡೆಯುವುದಿಲ್ಲ. ಹೀಗಾಗಿ, ಬೆಳಕು ಪಡೆಯಲು ಬಾಳೆಹಣ್ಣುಗಳು ಮೇಲಕ್ಕೆ ಬೆಳೆಯುತ್ತವೆ.

ಭಾರತದಲ್ಲಿ, ಬಾಳೆ ಗಿಡಗಳನ್ನು ಬಹಳ ಪವಿತ್ರವೆಂದು ಪರಿಗಣಿಸಲಾಗುತ್ತದೆ. ಅದರಲ್ಲಿರುವ ಎಲ್ಲವೂ ನಮಗೆ ತುಂಬಾ ಉಪಯುಕ್ತವಾಗಿದೆ. ನಾವು ಎಲೆಗಳಿಂದ ಆಹಾರವನ್ನು ಸೇವಿಸುತ್ತೇವೆ. ಬಾಳೆಹಣ್ಣನ್ನು ದೇವರಿಗೆ ನೈವೇದ್ಯವಾಗಿ ಅರ್ಪಿಸುತ್ತೇವೆ. ಅದೇ ರೀತಿ, ಬಾಳೆ ಕಾಂಡಗಳನ್ನು ಹಸುಗಳಿಗೆ ಆಹಾರವಾಗಿ ನೀಡಲಾಗುತ್ತದೆ. ಬಾಳೆ ಕಾಂಡದ ಮಧ್ಯದಲ್ಲಿ ಒಂದು ತಿರುಳು ಇದೆ. ಅದನ್ನು ಬಾಳೆ ದಿಂಡು ಎಂದು ಕರೆಯಲಾಗುತ್ತದೆ. ಅದು ಬಿಳಿ ಬಣ್ಣದಲ್ಲಿರುತ್ತದೆ. ಈ ತಿರುಳನ್ನು ಜನರು ತಿನ್ನುತ್ತಾರೆ. ಏಕೆಂದರೆ, ಇದು ಆರೋಗ್ಯಕ್ಕೂ ತುಂಬಾನೇ ಒಳ್ಳೆಯದು.

ಇನ್ನು ಸೂರ್ಯಕಾಂತಿ ಹೂವು ಕೂಡ ಬಾಳೆಹಣ್ಣಿನಂತೆ ಸೂರ್ಯನ ದಿಕ್ಕಿನಲ್ಲಿ ತಿರುಗುತ್ತವೆ. ಈ ವಿಚಾರವನ್ನು ನಾವು ಬಾಲ್ಯದಿಂದಲೂ ಕೇಳುತ್ತಿದ್ದೇವೆ. ಅಂದಹಾಗೆ, ಬಾಳೆಹಣ್ಣು ಮತ್ತು ಸೂರ್ಯಕಾಂತಿ ಮಾತ್ರವಲ್ಲ, ಈ ಭೂಮಿಯ ಮೇಲಿನ ಅನೇಕ ಮರಗಳು ಇದೇ ಸೂತ್ರವನ್ನು ಅನುಸರಿಸುತ್ತವೆ. ಅವೆಲ್ಲವೂ ಸೂರ್ಯನ ಬೆಳಕಿಗೆ ಆಕಾಶದ ಕಡೆಗೆ ಬೆಳೆಯುತ್ತವೆ. (ಏಜೆನ್ಸೀಸ್​)