ನ್ಯೂಸ್

ಕಾಲೇಜು ವಿದ್ಯಾರ್ಥಿಗಳಿಂದ ಕೊವಿಡ್​-19 ಪಾರ್ಟಿ !..ಕರೊನಾ ಸೋಂಕಿಗೆ ಒಳಗಾಗಲು ನಾ ಮುಂದು ತಾ ಮುಂದು...

ಕರೊನಾ ವೈರಸ್​ನ್ನು ಇಡೀ ಜಗತ್ತು ಬಹಳ ಗಂಭೀರವಾಗಿ ಪರಿಗಣಿಸಿದೆ. ಈ ಸೋಂಕು ಹರಡುವುದನ್ನು ತಡೆಯಲು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದ್ದರೆ, ಅಮೆರಿಕದ ಅಲಬಾಮಾ ಸಿಟಿಯ ಒಂದಷ್ಟು ಕಾಲೇಜು ವಿದ್ಯಾರ್ಥಿಗಳು ಕೊವಿಡ್​-19 ವಿಚಾರದಲ್ಲಿ ಅಕ್ಷರಶಃ ಹುಡುಗಾಟ ಆಡುತ್ತಿದ್ದಾರೆ.

ಅಲಬಾಮಾ ಯೂನಿವರ್ಸಿಟಿ ಸೇರಿ ಹಲವು ಕಾಲೇಜು ವಿದ್ಯಾರ್ಥಿಗಳು ಸೇರಿಕೊಂಡು ಕೊವಿಡ್​-19 ಪಾರ್ಟಿ ಆಯೋಜಿಸುತ್ತಿದ್ದಾರೆ. ಏನಿದು ಕೊವಿಡ್​-19 ಪಾರ್ಟಿ ಎಂದು ಗೊಂದಲ ಬೇಡ..ಈ ಸುದ್ದಿ ಓದಿ

ಟಸ್ಕಲೂಸಾ ಸಿಟಿಯ ಕೌನ್ಸಿಲರ್​ ಸೋನ್ಯಾ ಮಾಕ್​ಕಿನ್​ಸ್ಟ್ರಿ ಈ ಬಗ್ಗೆ ವಿವರಣೆ ನೀಡಿದ್ದಾರೆ. ಕೆಲವು ಕಾಲೇಜುಗಳ ವಿದ್ಯಾರ್ಥಿಗಳು ಕೊವಿಡ್​-19 ಪಾರ್ಟಿ ಆಯೋಜಿಸುತ್ತಾರೆ. ಕರೊನಾ ಪಾಸಿಟಿವ್​ ಇರುವ ವ್ಯಕ್ತಿಗಳನ್ನು ಅದಕ್ಕೆ ಗಣ್ಯರನ್ನಾಗಿ ಕರೆಸುತ್ತಾರೆ. ಹಾಗೇ ವಿದ್ಯಾರ್ಥಿಗಳೂ ಪಾರ್ಟಿಯಲ್ಲಿ ಭಾಗವಹಿಸುತ್ತಾರೆ. ಈ ಪಾರ್ಟಿಯಲ್ಲಿ ಒಂದು ಮಡಕೆಯನ್ನಿಟ್ಟು, ಅದರಲ್ಲಿ ಹಣವನ್ನು ಇಡಲಾಗುತ್ತದೆ. ಪಾರ್ಟಿ ಮುಗಿದ ಬಳಿಕ ಅದರಲ್ಲಿ ಭಾಗವಹಿಸಿದ್ದವರಲ್ಲಿ ಯಾರಿಗೆ ಮೊದಲು ಕರೊನಾ ಸೋಂಕು ಕಾಣಿಸಿಕೊಳ್ಳುತ್ತದೆಯೋ ಅವರಿಗೆ ಆ ಮಡಕೆಯಲ್ಲಿದ್ದ ಹಣ ಸೇರುತ್ತದೆ. ಇವರೆಲ್ಲ ಉದ್ದೇಶಪೂರ್ವಕವಾಗಿ ಕೊವಿಡ್​-19 ಸೋಂಕನ್ನು ತಮಗೆ ಹಚ್ಚಿಸಿಕೊಳ್ಳುತ್ತಿದ್ದಾರೆ ಎಂದು ಸೋನ್ಯಾ ತಿಳಿಸಿದ್ದಾರೆ. ಇದನ್ನೂ ಓದಿ: ಕೊವಿಡ್​-19ಗೆ ಇನ್ನೊಂದು ಹೆಸರಿಟ್ಟ ಯುಎಸ್​ ಅಧ್ಯಕ್ಷ ಟ್ರಂಪ್​; ಮತ್ತೆ ಚೀನಾ ವಿರುದ್ಧ ಕುಹಕದ ಮಾತುಗಳು

ಈ ಪಾರ್ಟಿಯನ್ನು ಆಯೋಜಿಸುವವರು ಬೇಕೆಂದಲೇ ಕೊವಿಡ್​-19 ಸೋಂಕಿತರನ್ನು ಆಹ್ವಾನಿಸುತ್ತಾರೆ. ಅವರಿಂದ ತಮಗೂ ಸೋಂಕು ಹಬ್ಬಿಸಿಕೊಂಡು, ಹಣವನ್ನು ತಾವೇ ಪಡೆಯಬೇಕು ಎಂದು ವಿಚಿತ್ರ ಉದ್ದೇಶ ಇಟ್ಟುಕೊಂಡು ಕಾರ್ಯಕ್ರಮ ನಡೆಸುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಮೊದಲು ಈ ಪಾರ್ಟಿಯ ಬಗ್ಗೆ ಸ್ಥಳೀಯ ಆಡಳಿತ ನಂಬಿರಲಿಲ್ಲ. ಇಂಥ ನಾನ್ಸೆನ್ಸ್​​ಗಳನ್ನು ಯಾರು ಮಾಡುತ್ತಾರೆ ಎಂದೇ ಭಾವಿಸಲಾಗಿತ್ತು. ಆದರೆ ಬಳಿಕ ನಡೆದ ತನಿಖೆಯಲ್ಲಿ ಪಾರ್ಟಿಗಳು ನಡೆಯುತ್ತಿರುವುದು ಸತ್ಯ ಎಂಬುದು ಸಾಬೀತಾಗಿದೆ ಎಂದು ಸೋನ್ಯಾ ಮಾಹಿತಿ ನೀಡಿದ್ದಾರೆ.

ವಿದ್ಯಾರ್ಥಿಗಳ ವಿರುದ್ಧ ಏನು ಕ್ರಮ ಕೈಗೊಳ್ಳಲಾಗಿದೆ ಎಂಬ ಬಗ್ಗೆ ಇನ್ನೂ ಸ್ಪಷ್ಟ ಮಾಹಿತಿ ಸಿಕ್ಕಿಲ್ಲ.(ಏಜೆನ್ಸೀಸ್)