Vice President: ಉಪರಾಷ್ಟ್ರಪತಿ ಚುನಾವಣೆಗೆ ಸಂಬಂಧಿಸಿದಂತೆ, ಭಾರತೀಯ ಜನತಾ ಪಕ್ಷ (ಬಿಜೆಪಿ) ತನ್ನ ಅಭ್ಯರ್ಥಿಯನ್ನು ಅಂತಿಮಗೊಳಿಸಲು ಪೂರ್ಣ ಪ್ರಮಾಣದಲ್ಲಿ ಕೆಲಸ ಆರಂಭಿಸಿದ್ದು, ಸಂಭ್ಯಾವ ಪಟ್ಟಿಯಲ್ಲಿ ಅನೇಕ ರಾಜ್ಯಗಳ ರಾಜ್ಯಪಾಲರ ಹೆಸರುಗಳು ಮುಂಚೂಣಿಯಲ್ಲಿವೆ ಎಂದು ವರದಿಯಾಗಿದೆ.
ಸೆಪ್ಟೆಂಬರ್ 9 ರಂದು ನಡೆಯಲಿರುವ ಉಪರಾಷ್ಟ್ರಪತಿ ಚುನಾವಣೆಗೆ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ, ಬಿಹಾರ ರಾಜ್ಯಪಾಲ ಆರಿಫ್ ಮೊಹಮ್ಮದ್ ಖಾನ್, ಕರ್ನಾಟಕ ರಾಜ್ಯಪಾಲ ಥಾವರ್ಚಂದ್ ಗೆಹ್ಲೋಟ್, ಸಿಕ್ಕಿಂ ರಾಜ್ಯಪಾಲ ಓಂ ಮಾಥುರ್, ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ, ಗುಜರಾತ್ ರಾಜ್ಯಪಾಲ ಆಚಾರ್ಯ ದೇವವ್ರತ್ ಆಯ್ಕೆಯ ಬಗ್ಗೆ ಚರ್ಚೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.
ಅವರನ್ನೆಲ್ಲಾ ಹೊರತುಪಡಿಸಿ, ಬಿಜೆಪಿ ಕಾರ್ಯಕಾರಣಿ ಸದಸ್ಯರು, ರಾಷ್ಟ್ರೀಯ ಸ್ವಯಂಸೇವಕ ಸಂಘದ ಹಿರಿಯರಾದ ಶೇಷಾದ್ರಿ ಚಾರಿ ಅವರ ಉಮೇದುವಾರಿಕೆಯ ಬಗ್ಗೆಯೂ ಚರ್ಚೆ ನಡೆದಿರುವ ಸಾಧ್ಯತೆ ಇದೆ. ಮುಂಬರುವ ಬಿಹಾರ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ಪ್ರಸ್ತುತ ರಾಜ್ಯಸಭಾ ಉಪಾಧ್ಯಕ್ಷ ಹರಿವಂಶ್ ಅವರನ್ನು ನಾಮನಿರ್ದೇಶಿತರನ್ನಾಗಿ ಪರಿಗಣಿಸಲಾಗುತ್ತಿದೆ, ಮುಂದಿನ ಉಪಾಧ್ಯಕ್ಷರು ತಮ್ಮ ಪಕ್ಷದವರೇ ಮತ್ತು ಮತ್ತು ಆರ್‌ಎಸ್‌ಎಸ್‌ನ ಹಿನ್ನಲೆಯಿಂದ ಬಂದವರೆ ಆಗಿರುತ್ತಾರೆ ಎಂದು ಈ ಹಿಂದೆ ಬಿಜೆಪಿ ನಾಯಕರೊಬ್ಬರು ತಿಳಿಸಿದ್ದರು ಎನ್ನಲಾಗಿದೆ.
ಕಳೆದ ಒಂದು ತಿಂಗಳಲ್ಲಿ ಹಲವಾರು ರಾಜ್ಯಪಾಲರು ಮತ್ತು ಲೆಫ್ಟಿನೆಂಟ್ ಗವರ್ನರ್‌ಗಳು ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡುತ್ತಿರುವುದು ಇದಕ್ಕೆ ಪುಷ್ಠಿ ನೀಡಿದೆ.(ಏಜೆನ್ಸೀಸ್)