ನ್ಯೂಸ್

ಅವಸರದ ಅನ್​ಲಾಕ್​​ ಬೇಡ...ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ ಒಂದು ಎಚ್ಚರಿಕೆ !

ಜಗತ್ತಿನಾದ್ಯಂತ ಕರೊನಾ ವೈರಸ್​ ಪ್ರಸರಣ ಇನ್ನೂ ಹೆಚ್ಚುತ್ತಲೇ ಇದೆ. ಈ ಮಧ್ಯೆ ಭಾರತವೂ ಸೇರಿದಂತೆ ಹಲವು ದೇಶಗಳು ಲಾಕ್​ಡೌನ್​​ಗಳನ್ನೆಲ್ಲ ಮುಗಿಸಿ, ಎಲ್ಲ ರೀತಿಯ ಸಾಮಾಜಿಕ, ಆರ್ಥಿಕ ಚಟುವಟಿಕೆಗಳನ್ನೂ ಪ್ರಾರಂಭಿಸುತ್ತಿವೆ. ನಮ್ಮ ದೇಶದಲ್ಲೂ ಕೂಡ ಮೊನ್ನೆಯಷ್ಟೇ ಅನ್​ಲಾಕ್​-4 ರ ಮಾರ್ಗಸೂಚಿಗಳನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ.

ಹೀಗಿರುವಾಗ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯೊಂದನ್ನು ನೀಡಿದೆ. ಹೀಗೆ ಅವಸರದಲ್ಲಿ ಎಲ್ಲ ಚಟುವಟಿಕೆಗಳನ್ನೂ ಶುರು ಮಾಡುವುದು ಒಳ್ಳೆಯದಲ್ಲ. ಕರೊನಾ ವೈರಸ್​ ಸಾಂಕ್ರಾಮಿಕ ಇನ್ನೂ ಅಸ್ತಿತ್ವದಲ್ಲಿ ಇರುವುದರಿಂದ ಜನಜೀವನದ ಸಹಜ ಸ್ಥಿತಿಗೆ ಅನುವು ಮಾಡಿಕೊಡುವುದು ಅಪಾಯ. ಮತ್ತೊಂದು ಅನಾಹುತಕ್ಕೆ ದಾರಿ ಮಾಡಿಕೊಟ್ಟಂತೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಹಾ ನಿರ್ದೇಶಕ ಟೆಡ್ರೋಸ್ ಅಧ್ನಾಮ್​ ಗೆಬ್ರೆಯೆಸಿಸ್​ ಎಚ್ಚರಿಕೆ ನೀಡಿದ್ದಾರೆ.

ಕೆಲವು ದೇಶಗಳಲ್ಲಿ ವೈರಸ್​​ನ್ನು ಪರಿಣಾಮಕಾರಿಯಾಗಿ ನಿಯಂತ್ರಣ ಮಾಡಿಕೊಳ್ಳಲಾಗಿದೆ. ಅಂಥ ದೇಶಗಳಲ್ಲಿ ಸಾಮಾಜಿಕ ಚಟುವಟಿಕೆಗಳನ್ನು ಸಹಜಸ್ಥಿತಿಗೆ ತರಬಹುದು. ಹಾಗಂತ ಅಲ್ಲೂ ಮುನ್ನೆಚ್ಚರಿಕಾ ಕ್ರಮಗಳು ಇರಲೇಬೇಕು. ಹಾಗೇ ಇನ್ನೂ ಹಲವು ದೇಶಗಳು ಕರೊನಾದಿಂದ ಸಂಕಷ್ಟದಲ್ಲಿಯವೆ. ಆದರೆ ಆರ್ಥಿಕ, ಸಾಮಾಜಿಕ ಜೀವನ ಮತ್ತೆ ಪ್ರಾರಂಭಿಸುವತ್ತ ಗಂಭೀರವಾಗಿ ಚಿಂತಿಸುತ್ತಿವೆ. ಅದಕ್ಕೆ ಅನುಸಾರವಾಗಿಯೇ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಆದರೆ ಅಂಥ ದೇಶಗಳು ಕರೊನಾ ಸೋಂಕಿನ ನಿಯಂತ್ರಣದ ಬಗ್ಗೆಯೂ ಅಷ್ಟೇ ಗಂಭೀರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದ್ದಾರೆ.

ದೇಶಗಳು ಸಮತೋಲನ ಕಾಪಾಡಿಕೊಳ್ಳಲೇಬೇಕು. ಕಷ್ಟ ಎನ್ನಿಸಬಹುದು..ಆದರೆ ಅಸಾಧ್ಯವಲ್ಲ ಎಂದು ಕಿವಿಮಾತು ಹೇಳಿದ್ದಾರೆ. (ಏಜೆನ್ಸೀಸ್​)