ನ್ಯೂಸ್

ನಿತ್ಯಾನಂದನ ಕೈಲಾಸ ರಾಯಭಾರಿ ವಿಜಯಪ್ರಿಯಾ ಬಗ್ಗೆ ನಿಮಗೆಲ್ಲರಿಗೂ ಗೊತ್ತಿರದ ಆಸಕ್ತಿಕರ ಸಂಗತಿ ಇಲ್ಲಿದೆ….

ನವದೆಹಲಿ: ಕೇಸರಿ ಬಟ್ಟೆ ಧರಿಸಿ, ತಲೆ ತುಂಬಾ ಡ್ರೆಡ್​ಲಾಕ್​ ಮಾಡಿಕೊಂಡು, ಹಣೆಯಲ್ಲಿ ತಿಲಕ ಇಟ್ಟುಕೊಂಡು ಹಾಗೂ ಕೊರಳಿಗೆ ರುದ್ರಾಕ್ಷಿ ಮಾಲೆ ಸುತ್ತಿಕೊಂಡು ಜಿನಿವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಭೆಯಲ್ಲಿ ಇಂಗ್ಲಿಷ್​ನಲ್ಲಿ ಭಾಷಣ ಮಾಡಿದ ಮಹಿಳೆಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಎಲ್ಲರ ಗಮನ ಸೆಳೆದಿದೆ.

ಯಾರು ಆಕೆ ಎಂಬ ನಿಗೂಢ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಯಾವಾಗ ಪರಾರಿಯಾಗಿರುವ ಅತ್ಯಾಚಾರ ಆರೋಪಿ ನಿತ್ಯಾನಂದ ಸ್ವಾಮಿ ತನ್ನ ಟ್ವಿಟರ್​ ಖಾತೆಯಲ್ಲಿ ಮಹಿಳೆಯ ಫೋಟೋ ಶೇರ್​ ಮಾಡಿಕೊಂಡ ಆಗ ನಿಗೂಢ ಪ್ರಶ್ನೆಗೆ ಉತ್ತರ ಸಿಕ್ಕಿತು. ಅಂದಹಾಗೆ ಅತ್ಯಾಚಾರ ಆರೋಪ ಹೊತ್ತಿರುವ ನಿತ್ಯಾನಂದ ಭಾರತದ ಪೊಲೀಸರಿಗೆ ಕಣ್ತಪ್ಪಿಸಿ ವಿದೇಶಕ್ಕೆ ಹೋಗಿ, ತನ್ನದೇ ಸ್ವಂತ ರಾಷ್ಟ್ರ ನಿರ್ಮಾಣ ಮಾಡಿಕೊಂಡು ಅದಕ್ಕೆ "ಯುನೈಟೆಡ್​ ಕೈಲಾಸ" ಎಂದು ಹೆಸರಿಟ್ಟುಕೊಂಡು ನೆಲೆಸಿದ್ದಾನೆ ಎಂದು ಹೇಳಲಾಗುತ್ತಿದೆ. ಇಲ್ಲಿರುವ ಜನರು ಹಿಂದು ನಂಬಿಕೆಗಳಿಗೆ ಅನುಗುಣವಾಗಿ ಜೀವನ ಸಾಗಿಸುತ್ತಿದ್ದಾರೆ ಎನ್ನಲಾಗುತ್ತಿದೆ.

ಇದೀಗ ನಿತ್ಯಾನಂದ ಅವರು ತಮ್ಮ ದೇಶದ ಮಹಿಳಾ ನಾಯಕತ್ವದ ನಿಯೋಗವನ್ನು ವಿಶ್ವಸಂಸ್ಥೆಯ ಸಮ್ಮೆಳಕ್ಕೆ ಕಳುಹಿಸಿಕೊಟ್ಟಿದ್ದಾರೆ. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ತಮ್ಮ ಜಾಲತಾಣ ಖಾತೆಗಳ ಮೂಲಕ ಪ್ರಚುರಪಡಿಸುತ್ತಿದ್ದಾರೆ. ತನ್ನದೇ ಆದ ಸ್ವತಂತ್ರ ರಾಷ್ಟ್ರವನ್ನು ಸ್ಥಾಪಿಸುವ ಬಗ್ಗೆ ನಿತ್ಯಾನಂದ ವಾದಿಸಿದ್ದರೂ ಅದರ ನಿಜವಾದ ಅಸ್ತಿತ್ವವನ್ನು ಸಾಬೀತುಪಡಿಸಲು ಸದ್ಯಕ್ಕೆ ಯಾವುದೇ ಪುರಾವೆಗಳಿಲ್ಲ.

ನಿತ್ಯಾನಂದನ ದೇಶದ ಪರ ವಿಶ್ವಸಂಸ್ಥೆಯ ಸಭೆಯಲ್ಲಿ ಭಾಗಿಯಾದ ಆತನ ಶಿಷ್ಯೆಯ ಹೆಸರು ಮಾ ವಿಜಯಪ್ರಿಯಾ. ಆಕೆಯನ್ನು ವಿಶ್ವಸಂಸ್ಥೆಯಲ್ಲಿ ಕೈಲಾಸ ದೇಶದ ಖಾಯಂ ರಾಯಭಾರಿ ಎಂದು ಹೇಳಲಾಗಿದೆ. ಕಳೆದ ಫೆ. 24ರಂದು ವಿಶ್ವಸಂಸ್ಥೆಯು ಜಿನೀವಾದಲ್ಲಿ 19 ನೇ ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಹಕ್ಕುಗಳ ಸಮ್ಮೇಳನವನ್ನು ಆಯೋಜಿಸಿತ್ತು. ಇದರಲ್ಲಿ ವಿಜಯಪ್ರಿಯಾ ಕೈಲಾಶದ ದೇಶದ ಪರವಾಗಿ ಭಾಗವಹಿಸಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳನ್ನು ನಿತ್ಯಾನಂದ ಶೇರ್​ ಮಾಡಿಕೊಂಡು ನಮ್ಮ ಕೈಲಾಸ ದೇಶವನ್ನು ವಿಶ್ವಸಂಸ್ಥೆ ಪರಿಗಣಿಸಿದೆ ಎಂದಿದ್ದನು.

ಯಾವಾಗ ಈ ವಿಚಾರ ವೈರಲ್​ ಆಯಿತು ಇದನ್ನು ವಿಶ್ವಸಂಸ್ಥೆ ತಿರಸ್ಕರಿಸಿತು. 'ಕೈಲಾಸ'ದ ಪ್ರತಿನಿಧಿಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುವುದಿಲ್ಲ ಎಂದು ಸ್ಪಷ್ಟನೆ ನೀಡಿತು.

ಯಾರು ಈ ವಿಜಯಪ್ರಿಯಾ?

ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆದ ಕೈಲಾಸ ದೇಶದ ವಿಶ್ವಸಂಸ್ಥೆಯ ರಾಯಭಾರಿ ಎಂದು ಹೇಳಿಕೊಂಡಿರುವ ಈ ಮಾ ವಿಜಯಪ್ರಿಯಾ ಯಾರು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಆಕೆಯ ಫೇಸ್​ಬುಕ್​ ಖಾತೆಯ ಪ್ರಕಾರ ವಿಜಯಪ್ರಿಯಾ, ನಿತ್ಯಾನಂದನ ಕೈಲಾಶ ದೇಶದ ವಿಶ್ವಸಂಸ್ಥೆಯ ರಾಯಭಾರಿಯಂತೆ. ಯುನೈಟೆಡ್​ ಸ್ಟೇಟ್ಸ್​ನ ವಾಷಿಂಗ್ಟನ್​ ಡಿಸಿ ನಗರದ ನಿವಾಸಿ ಎಂದು ಹೇಳಿಕೊಂಡಿದ್ದಾಳೆ. ವಿಜಯಪ್ರಿಯಾ ಅವರಿಗೆ ನಿತ್ಯಾನಂದನ ದೇಶ ಕೈಲಾಸದಲ್ಲಿ ರಾಜತಾಂತ್ರಿಕ ಸ್ಥಾನಮಾನವಿದೆ.

ಕೈಲಾಸ ವೆಬ್​​ಸೈಟ್ ಪ್ರಕಾರ​ ವಿಜಯಪ್ರಿಯಾ ಅವರು ಈ "ವರ್ಚುವಲ್ ದೇಶದ" ಪರವಾಗಿ ವಿವಿಧ ಸಂಸ್ಥೆಗಳೊಂದಿಗೆ ಒಪ್ಪಂದಗಳನ್ನು ಸಹ ಮಾಡುತ್ತಾರೆ.

ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ವಿಜಯಪ್ರಿಯಾ ಹಲವು ದೇಶಗಳ ಪ್ರತಿನಿಧಿಗಳನ್ನು ಭೇಟಿ ಮಾಡಿ ಆ ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ವೀಡಿಯೋವೊಂದರಲ್ಲಿ ವಿಜಯಪ್ರಿಯಾ ಅವರು ಅಮೆರಿಕದ ಕೆಲವು ಅಧಿಕಾರಿಗಳೊಂದಿಗೆ ಕೆಲವು ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ ಎನ್ನಲಾಗಿದೆ. ಕೈಲಾಸ ತನ್ನ ರಾಯಭಾರ ಕಚೇರಿಗಳನ್ನು ಮತ್ತು ಎನ್‌ಜಿಒಗಳನ್ನು ವಿಶ್ವದ ಹಲವಾರು ದೇಶಗಳಲ್ಲಿ ತೆರೆದಿದೆ ಎಂದು ವಿಜಯಪ್ರಿಯಾ ಹೇಳಿಕೊಂಡಿದ್ದಾರೆ.

ಫೆ. 22 ರಂದು ಸ್ವಿಡ್ಜರ್​ಲೆಂಡ್​ನ​ ಜಿನೀವಾದಲ್ಲಿ ನಡೆದ ವಿಶ್ವಸಂಸ್ಥೆಯ ಸಮ್ಮೇಳನದಲ್ಲಿ ವಿಜಯಪ್ರಿಯಾ ಅವರನ್ನು ಹೊರತುಪಡಿಸಿ, "ವರ್ಚುವಲ್ ದೇಶ ಕೈಲಾಸ" ದ ಇತರ ಐದು ಮಹಿಳೆಯರು ಭಾಗವಹಿಸಿದ್ದರು. ಕೈಲಾಸ ಮುಖ್ಯಸ್ಥೆ ಮುಕ್ತಿಕಾ ಆನಂದ್, ಕೈಲಾಸ ಸಂತ ಲೂಯಿಸ್ ಮುಖ್ಯಸ್ಥೆ ಸೋನಾ ಕಾಮತ್, ಕೈಲಾಸ ಯುಕೆ ಮುಖ್ಯಸ್ಥೆ ನಿತ್ಯಾ ಆತ್ಮದಾಯಿಕಿ, ಕೈಲಾಸ ಫ್ರಾನ್ಸ್ ಮುಖ್ಯಸ್ಥೆ ನಿತ್ಯಾ ವೆಂಕಟೇಶಾನಂದ ಮತ್ತು ಕೈಲಾಸ ಸ್ಲೊವೇನಿಯನ್ ಮಾ ಪ್ರಿಯಾಂಪರ ಸಭೆಯಲ್ಲಿ ಪಾಲ್ಗೊಂಡಿದ್ದರು.

ವಿಶ್ವಸಂಸ್ಥೆಯ ಸಮಾವೇಶದಲ್ಲಿ ವಿಜಯಪ್ರಿಯಾ ಅವರು ತಮ್ಮ ಪರಮೋಚ್ಚ ಗುರು ನಿತ್ಯಾನಂದ ಅವರನ್ನು "ಹಿಂದೂ ಸಂಪ್ರದಾಯಗಳನ್ನು ಪುನರುಜ್ಜೀವನಗೊಳಿಸುವುದಕ್ಕಾಗಿ ಭಾರತದಲ್ಲಿ ಕಿರುಕುಳ ನೀಡಲಾಗುತ್ತಿದೆ" ಎಂದು ಆರೋಪಿಸಿದ್ದಾರೆ. (ಏಜೆನ್ಸೀಸ್​)