ನ್ಯೂಸ್

ಶಿಕ್ಷಕರ ನೇಮಕಾತಿ ರದ್ದತಿಯಲ್ಲಿ ಟ್ವಿಸ್ಟ್! ಸೋಮ ದಾಸ್‌ಗೆ ಸುಪ್ರೀಂ ಕೋರ್ಟ್ ರಿಲೀಫ್; ಕ್ಯಾನ್ಸರ್ ಪೀಡಿತ ಶಿಕ್ಷಕಿ ಬೇಸರ | Soma Das

Soma Das: ನಿನ್ನೆಯಷ್ಟೇ (ಏ.03) ಪಶ್ಚಿಮ ಬಂಗಾಳದಲ್ಲಿ 2016ರಲ್ಲಿ ನಡೆದ ಶಿಕ್ಷಕರ ನೇಮಕಾತಿಯನ್ನು ರದ್ದುಗೊಳಿಸಿದ ಕೋಲ್ಕತ್ತ ಹೈಕೋರ್ಟ್​ ಕ್ರಮವನ್ನು ದೇಶದ ಉನ್ನತ ನ್ಯಾಯಾಲಯ ಸುಪ್ರೀಂಕೋರ್ಟ್​ ಎತ್ತಿ ಹಿಡಿಯಿತು. ಹಣಕ್ಕಾಗಿ ಶಿಕ್ಷಕರ ಹುದ್ದೆಯನ್ನು ಮಾರಾಟ ಮಾಡಿದ ಹಗರಣಕ್ಕೆ ಸಂಬಂಧಿಸಿದಂತೆ 2016ರಲ್ಲಿ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗದ (WBSSC) 25,000ಕ್ಕೂ ಹೆಚ್ಚು ಬೋಧಕ ಮತ್ತು ಬೋಧಕೇತರ ಸಿಬ್ಬಂದಿಯ ನೇಮಕಾತಿಗಳನ್ನು ಕೊಲ್ಕತ್ತ ಹೈಕೋರ್ಟ್‌ ವಜಾಗೊಳಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್​ನಲ್ಲಿ ಮೇಲ್ಮನವಿ ಸಲ್ಲಿಸಲಾಗಿತ್ತು. ಇದರ ತೀರ್ಪು ನೀಡಿದ ಉನ್ನತ ನ್ಯಾಯಾಲಯ, ಹೈಕೋರ್ಟ್​ ತೀರ್ಪನ್ನು ಎತ್ತಿ ಹಿಡಿದಿದೆ.

ನೇಮಕಾತಿಗಳಲ್ಲಿ ಭಾರಿ ಅಕ್ರಮಗಳು ಮತ್ತು ಅಕ್ರಮಗಳಲ್ಲಿ ಭಾಗಿಯಾಗಿರುವ ಪಶ್ಚಿಮ ಬಂಗಾಳ ಶಾಲಾ ಸೇವಾ ಆಯೋಗ (ಪಶ್ಚಿಮ ಬಂಗಾಳ ಶಿಕ್ಷಕರ ಹಗರಣ 2016) ವಿರುದ್ಧ ಸುಪ್ರೀಂ ಕೋರ್ಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಆದಾಗ್ಯೂ, ಪಶ್ಚಿಮ ಬಂಗಾಳದ ಮಾತೃಭಾಷೆಯಾದ ಬಂಗಾಳಿಯನ್ನು ಕಲಿಸುವ ಶಿಕ್ಷಕಿ ಸೋಮಾ ದಾಸ್​ಗೆ ಒಂದು ವಿನಾಯಿತಿ ನೀಡಲಾಯಿತು. ಆಕೆ ಎಂದಿನಂತೆ ತಮ್ಮ ಉದ್ಯೋಗದಲ್ಲಿ ಮುಂದುವರಿಯಬಹುದು ಎಂದು ನ್ಯಾಯಾಲಯ ಸೂಚಿಸಿತು.

ಯಾರು ಈ ಸೋಮಾ ದಾಸ್?

ಸಾವಿರಾರು ಶಿಕ್ಷಕರ ನೇಮಕಾತಿಗಳನ್ನು ರದ್ದುಗೊಳಿಸಿದ ಸುಪ್ರೀಂ ಕೋರ್ಟ್, ಪ್ರಸ್ತುತ ಸೋಮಾ ದಾಸ್​ ಮಾತ್ರ ತಮ್ಮ ಕೆಲಸದಲ್ಲಿ ಮುಂದುವರಿಯಬಹುದು ಎಂದು ತನ್ನ ತೀರ್ಪಿನಲ್ಲಿ ಹೇಳಿತು. ಪಶ್ಚಿಮ ಬಂಗಾಳ ಸರ್ಕಾರವು 2016ರಲ್ಲಿ ಕೈಗೊಂಡ ಬೋಧಕ ಮತ್ತು ಬೋಧಕೇತರ ನೇಮಕಾತಿಗಳಲ್ಲಿ ಸೋಮಾ ದಾಸ್​ ಶಿಕ್ಷಕಿಯಾಗಿ ಆಯ್ಕೆಯಾದರು. ಸುಪ್ರೀಂ ಕೋರ್ಟ್ ತೀರ್ಪಿನ ಬಳಿಕ ಶಿಕ್ಷಕಿಯಾಗಿ ಮುಂದುವರಿಯಲು ಅವಕಾಶ ಸಿಕ್ಕಿದ್ದಕ್ಕೆ ಅವರು ಸಂತಸ ವ್ಯಕ್ತಪಡಿಸಿದ್ದಾರೆ. ಆದರೆ, ಅದೇ ಸಮಯದಲ್ಲಿ, ಸಾವಿರಾರು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ ಎಂಬುದಕ್ಕೆ ಅತೀವ ಬೇಸರ ಸಹ ಹೊರಹಾಕಿದ್ದಾರೆ.

ಸುಪ್ರೀಂ ಕೋರ್ಟ್ ತೀರ್ಪಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಸೋಮಾ ದಾಸ್​, "ಈ ವಿಷಯದಲ್ಲಿ ನಾನು ನಿಜವಾಗಿಯೂ ಅದೃಷ್ಟಶಾಲಿ. ಆದರೆ, ಸಾವಿರಾರು ಜನರು ತಮ್ಮ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಇದು ಯಾರೂ ಊಹಿಸಲೂ ಸಾಧ್ಯವಾಗದ ಸಂಗತಿ" ಎಂದು ಬೇಸರ ವ್ಯಕ್ತಪಡಿಸಿದ್ದಾರೆ,(ಏಜೆನ್ಸೀಸ್).