ನ್ಯೂಸ್

2 ಸೂಪರ್​ಹಿಟ್​ ಸಿನಿಮಾ! ಡಬಲ್ ಆಯ್ತು 'ಡ್ಯೂಡ್​'​ ಸಂಭಾವನೆ; ಅಷ್ಟಕ್ಕೂ ಯಾರು ಈ Pradeep Ranganathan?

ತಮಿಳುನಾಡು: ತಮಿಳಿನ ಸೂಪರ್​ಹಿಟ್ ಲವ್​ ಟುಡೇ,​ ‘ಡ್ರ್ಯಾಗನ್’ ಚಿತ್ರಗಳ ಮೂಲಕ ಯುವ ಪ್ರೇಕ್ಷಕರ ಮನ ಗೆದ್ದಿರುವ ಹಾಗೂ ಯಶಸ್ಸು ಕಂಡಿರುವ ನಟ ಪ್ರದೀಪ್​ ರಂಗನಾಥನ್ (Pradeep Ranganathan), ಇದೀಗ ಅದೇ ಯುವಜನತೆ ಮುಂದೆ ತಾವು ಅಭಿನಯದ ಮತ್ತೊಂದು ಸಿನಿಮಾ ‘ಡ್ಯೂಡ್’ ಮೂಲಕ ಚಿತ್ರಮಂದಿರಕ್ಕೆ ಎಂಟ್ರಿಕೊಟ್ಟಿದ್ದಾರೆ. ಅ.17ರಂದು ಬಹುತೇಕ ಥಿಯೇಟರ್​ಗಳಲ್ಲಿ ತೆರೆಕಂಡ ಪ್ರದೀಪ್​ ಹೊಸ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆಗಳು ಲಭಿಸಿದ್ದು, ​ಬಾಕ್ಸ್ ಆಫೀಸ್​ನಲ್ಲಿ ಉತ್ತಮ ಲಯವನ್ನೇ ಕಂಡುಕೊಂಡಿದೆ.

ದೀಪಾವಳಿ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇರುವಂತೆ ತಮಿಳಿನ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದಾಗಿದ್ದ ಡ್ಯೂಡ್​ ಸಿನಿಮಾ ರಿಲೀಸ್ ಆಯಿತು. ಪ್ರದೀಪ್​ ‘ಡ್ಯೂಡ್​’ ಒಂದೆಡೆಯಾದರೆ, ‘ಬಿಸಾನ್​’ ಮತ್ತು ಇನ್ನೊಂದಿಷ್ಟು ಸಿನಿಮಾಗಳು ಸಹ ಇದೇ ದಿನಾಂಕಗಳಲ್ಲಿ ರಿಲೀಸ್ ಆಗಿವೆ. ಈ ಮೂಲಕ ಬಾಕ್ಸ್​ ಆಫೀಸ್​ನಲ್ಲಿ ಭಾರೀ ಪೈಪೋಟಿಗಿಳಿದಿವೆ. ಸಾಧಾರಣ ಮೈಕಟ್ಟು, ಸಿಂಪಲ್​ ಲುಕ್​ ಮತ್ತು ಅಭಿನಯದಿಂದಲೇ ಇಂದು ಅಪಾರ ಸಿನಿಪ್ರಿಯರನ್ನು ಸಂಪಾದಿಸಿರುವ ಪ್ರದೀಪ್​, ಇದೀಗ ತಮ್ಮ ಸಂಭಾವನೆಯನ್ನು ದುಪ್ಪಟ್ಟು ಮಾಡಿಕೊಂಡಿದ್ದಾರೆ. ಅದು ಕೇವಲ ಎರಡ್ಮೂರು ಚಿತ್ರಗಳಿಂದ ಎಂಬುದು ಗಮನಾರ್ಹ.

ಒಂದು ಚಿತ್ರಕ್ಕೆ ಪ್ರದೀಪ್​ ಪಡೆಯುವ ಸಂಭಾವನೆ ಎಷ್ಟಿದೆ?

ಪಿಂಕ್ ವಿಲ್ಲಾ ವರದಿ ಪ್ರಕಾರ, 2022ರಲ್ಲಿ, ಪ್ರದೀಪ್ 'ಲವ್ ಟುಡೇ' ಎಂಬ ಚಿತ್ರದ ಮುಖೇನ ಕಾಲಿವುಡ್​ಗೆ ಪಾದಾರ್ಪಣೆ ಮಾಡಿದರು. ವಿಶೇಷವಾಗಿ ಈ ಸಿನಿಮಾದ ಕಥೆಯನ್ನು ಸ್ವತಃ ಪ್ರದೀಪ್​ ಅವರೇ ಬರೆದು, ನಿರ್ದೇಶಿಸಿದರು. ಆಧುನಿಕ ಸಂಬಂಧಗಳು ಮತ್ತು ಮೊಬೈಲ್ ಫೋನ್‌ಗಳ ಪ್ರಭಾವ ಏನೆಲ್ಲ ಮಾಡುತ್ತದೆ ಎಂಬುದನ್ನು ಈ ಕಥೆ ಹೇಳುತ್ತದೆ. 5 ಕೋಟಿ ರೂ. ಬಜೆಟ್​ನಲ್ಲಿ ನಿರ್ಮಾಣಗೊಂಡ ಈ ಚಿತ್ರವು, ಬಾಕ್ಸ್ ಆಫೀಸ್​ನಲ್ಲಿ 100 ಕೋಟಿ ರೂ.ಗೂ ಅಧಿಕ ಲಾಭವನ್ನೇ ಕಂಡಿತು. ಇದರೊಟ್ಟಿಗೆ ಬ್ಲಾಕ್‌ಬಸ್ಟರ್ ಸಾಲಿಗೆ ಸೇರಿತು.

ಲವ್​ ಟುಡೇ ಚಿತ್ರಕ್ಕೆ ಆರಂಭದಲ್ಲಿ ಪ್ರದೀಪ್‌ ಪಡೆದಿದ್ದು, 70 ಲಕ್ಷ ರೂ. ಸಂಭಾವನೆ. ಚಿತ್ರವು ಭರ್ಜರಿ ಯಶಸ್ಸನ್ನು ಕಂಡ ಬಳಿಕ ನಿರ್ಮಾಪಕರು, ಒಟ್ಟು ಲಾಭದ ಗಳಿಕೆಯಲ್ಲಿ 80 ಲಕ್ಷ ರೂ. ಹಣವನ್ನು ಪ್ರದೀಪ್​ಗೆ ನೀಡಿದ್ದಾಗಿ ವರದಿಯಾಗಿದೆ. ಇದಾದ ನಂತರ, 2025ರ ಫೆಬ್ರವರಿಯಲ್ಲಿ ರಿಲೀಸ್ ಆದ ಡ್ರ್ಯಾಗನ್ (2025) ನಟಿಸಿದ ಪ್ರದೀಪ್​, ನಟಿ ಅನುಪಮಾ ಪರಮೇಶ್ವರನ್ ಮತ್ತು ಕಾಯದು ಲೋಹರ್ ಜತೆಗೆ ತೆರೆ ಹಂಚಿಕೊಂಡರು. ಈ ಚಿತ್ರವೂ ಸೂಪರ್​ಹಿಟ್​ ಆಗಿದ್ದು, ವರ್ಷದ ಅತಿದೊಡ್ಡ ತಮಿಳು ಬ್ಲಾಕ್‌ಬಸ್ಟರ್‌ಗಳಲ್ಲಿ ಒಂದಾಯಿತು.

ಇದು ಜಾಗತಿಕವಾಗಿ 150 ಕೋಟಿ ರೂ.ಗೂ ಹೆಚ್ಚು ಲಾಭ ಗಳಿಸಿತು. ಪ್ರದೀಪ್ ರಂಗನಾಥನ್​ ಅವರ ಮುಂಬರುವ 'ಲವ್​ ಇನ್ಶೂರೆನ್ಸ್ ಕಂಪನಿ' ಹಾಗೂ ಇನ್ನೊಂದು​​ ಯೋಜನೆ ಸೇರಿ ಒಟ್ಟು ಸಂಭಾವನೆ ಸುಮಾರು 17 ಕೋಟಿ ರೂ.ಗೆ ಏರಿದೆ ಎಂದು ವರದಿಗಳು ಸೂಚಿಸಿವೆ.

ಯಾರು ಈ ಪ್ರದೀಪ್​ ರಂಗನಾಥನ್​?

ಮೂಲತಃ ತಮಿಳುನಾಡಿನವರೇ ಆದ ಪ್ರದೀಪ್ ರಂಗನಾಥನ್, ಚೆನ್ನೈನಲ್ಲಿ ಹೆಚ್ಚು ಸಮಯ ಕಳೆದಿದ್ದಾರೆ. ತಮಿಳು ಚಿತ್ರರಂಗದ ಬಹುಮುಖ ಪ್ರತಿಭೆಗಳಲ್ಲಿ ಒಬ್ಬರಾಗಿ ಹೊರಹೊಮ್ಮಿರುವ ಅವರು, ನಟ, ಬರಹಗಾರ ಮತ್ತು ನಿರ್ದೇಶಕರಾಗಿ ಗುರುತಿಸಿಕೊಂಡಿದ್ದಾರೆ. ನಟ ಜಯಂ ರವಿ ಮತ್ತು ಕಾಜಲ್ ಅಗರ್ವಾಲ್ ನಟಿಸಿದ 2019ರ ಸೂಪರ್​ಹಿಟ್ ಚಿತ್ರ 'ಕೋಮಲಿ' ಮೂಲಕ ಮೊದಲು ಗಮನ ಸೆಳೆದ ಪ್ರದೀಪ್​, ಆ ನಂತರ ಪೂರ್ಣ ಪ್ರಮಾಣದಲ್ಲಿ ಸ್ಟಾರ್​ ಹೀರೋ ಆಗಿ ಮಿಂಚಿದರು.

2021ರಲ್ಲಿ ಅತ್ಯುತ್ತಮ ಚೊಚ್ಚಲ ನಿರ್ದೇಶಕರಿಗಾಗಿ ಸೈಮಾ ಪ್ರಶಸ್ತಿಯನ್ನು ಗೆದ್ದ ಪ್ರದೀಪ್ ರಂಗನಾಥನ್​, ಚೆನ್ನೈನ ಶಿವಸುಬ್ರಮಣ್ಯ ನಾಡರ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮಾಹಿತಿ ತಂತ್ರಜ್ಞಾನದಲ್ಲಿ ಪದವಿ ಮುಗಿಸಿದ್ದಾರೆ. ಸಿನಿಮಾ ನಿರ್ಮಾಣದ ಮೇಲಿನ ಅವರ ಉತ್ಸಾಹ ಕಿರುಚಿತ್ರಗಳಿಂದ ಆರಂಭವಾಗಿ ಇಂದು ಬಹುನಿರೀಕ್ಷಿತ ಚಿತ್ರಗಳ ಹಂತಕ್ಕೆ ಬಂದು ನಿಂತಿದೆ. 'ವಾಟ್ಸಾಪ್ ಕಾದಲ್', 'ಕಾಲೇಜ್ ಡೈರೀಸ್' ಮತ್ತು 'ಟಿವಿ ಕಾದೈ'ನಂತಹ ಸ್ವಂತ ಪ್ರಾಜೆಕ್ಟ್​ಗಳೇ ಇಂದು ಅವರ ಸಿನಿವೃತ್ತಿಗೆ ದೊಡ್ಡ ಅಡಿಪಾಯವನ್ನು ಹಾಕಿಕೊಟ್ಟಿದೆ,(ಏಜೆನ್ಸೀಸ್).