ತಮಿಳುನಾಡು: ಚಂದ್ರಯಾನ 3 ಮಿಷನ್‌ನಲ್ಲಿ 54 ಮಹಿಳೆಯರು ಪ್ರಮುಖ ಪಾತ್ರವಹಿಸಿದ್ದರು. ಇದು ಮಹಿಳಾ ಶಕ್ತಿಯ ಜೀವಂತ ಉದಾಹರಣೆ ಎಂದು ಪ್ರಧಾನಿ ಮೋದಿ ಬಣ್ಣಿಸಿದ್ದರು. ಭಾರತದ ಬಾಹ್ಯಾಕಾಶ ಕಾರ್ಯಾಚರಣೆಯಲ್ಲಿ ತಮಿಳುನಾಡಿನ ಪಾತ್ರವು ಮಹತ್ವದ್ದಾಗಿದೆ. ಚಂದ್ರಯಾನ 3 ರ ಯಶಸ್ಸಿನಲ್ಲಿ ತಮಿಳುನಾಡಿನ ಪುತ್ರರು ಮತ್ತು ಪುತ್ರಿಯರ ಪ್ರಮುಖ ಕೊಡುಗೆಯಿದೆ. ಇದೀಗ ಆದಿತ್ಯ ಎಲ್1 ಮಿಷನ್‌ನಲ್ಲೂ ಇಲ್ಲಿನ ಹೆಣ್ಣು ಮಗಳು ದೇಶಕ್ಕೆ ಕೀರ್ತಿ ತಂದಿದ್ದಾರೆ.
ಇಂದು ಇಸ್ರೋ ಸೌರ ಮಿಷನ್ ಆದಿತ್ಯ L1 ಅನ್ನು ಪ್ರಾರಂಭಿಸಿದ್ದು, ಅವರು ಈ ಕಾರ್ಯಾಚರಣೆಯಲ್ಲಿ ಯೋಜನಾ ನಿರ್ದೇಶಕರ ಪಾತ್ರವನ್ನು ನಿರ್ವಹಿಸುತ್ತಿದ್ದಾರೆ. ತಮಿಳುನಾಡಿನ ತೆಂಕಶಿ ಜಿಲ್ಲೆಗೆ ಸೇರಿದ ಇವರ ಹೆಸರು ನಿಗರ್ ಶಾಜಿ, 59 ವರ್ಷ. ಚಂದ್ರಯಾನ 3 ರ ಯೋಜನಾ ನಿರ್ದೇಶಕರಾದ ಪಿ ವೀರಮುತ್ತುವೆಲ್ ಕೂಡ ತಮಿಳುನಾಡಿನವರೇ.
ಆದಿತ್ಯ ಎಲ್ 1 ರ ಪ್ರಾಜೆಕ್ಟ್ ಡೈರೆಕ್ಟರ್ ನಿಗರ್ ಶಾಜಿ
ಈ ಸೋಲಾರ್ ಮಿಷನ್‌ನ ಯೋಜನಾ ನಿರ್ದೇಶಕಿ ನಿಗರ್ ಶಾಜಿ ಬಗ್ಗೆ ಅವರ ಸಹೋದರ ಶೇಖ್ ಸಲೀಂ ಮಾಹಿತಿ ನೀಡಿರುವ ಪ್ರಕಾರ, "ನಿಗರ್ ಶಾಜಿ ತಮ್ಮ ಶಾಲಾ ಶಿಕ್ಷಣವನ್ನು ಶೆಂಗೊಟ್ಟೈ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಆಂಗ್ಲ ಮಾಧ್ಯಮದಲ್ಲಿ ಮಾಡಿದರು. ನಂತರ ತಿರುನಲ್ವೇಲಿ ಸರ್ಕಾರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಪದವಿ ಪಡೆದು 1987 ರಲ್ಲಿ ISRO ಸೇರಿದರು.
ಬೆಂಗಳೂರಿನಲ್ಲಿ ನೆಲೆಸಿರುವ ನಿಗರ್ ಶಾಜಿ ಕುಟುಂಬ ಕಾರ್ಯಕ್ರಮಗಳು ಇದ್ದಾಗ ಶೆಂಗೊಟ್ಟೈಗೆ ಭೇಟಿ ನೀಡುತ್ತಾರೆ. ಶಾಜಿ ಅವರ ಪತಿ ಇಂಜಿನಿಯರ್, ಗಲ್ಫ್ ದೇಶದಲ್ಲಿ ಕೆಲಸ ಮಾಡುತ್ತಿದ್ದಾರೆ. ಒಬ್ಬ ಮಗನೂ ಸಹ ವಿಜ್ಞಾನಿಯಾಗಿ ನೆದರ್ಲ್ಯಾಂಡ್ಸ್ ನಲ್ಲಿ ಕೆಲಸ ಮಾಡುತ್ತಿದ್ದಾರೆ. ಮಗಳು ಮತ್ತು ಶಾಜಿ ಅವರ ತಾಯಿ ಬೆಂಗಳೂರಿನಲ್ಲಿ ಶಾಜಿಯೊಂದಿಗೆ ವಾಸಿಸುತ್ತಿದ್ದಾರೆ. ತಂದೆ 30 ವರ್ಷಗಳ ಹಿಂದೆ ನಿಧನರಾದರು''.
ತಮಿಳರಿಗೆ ಮತ್ತೊಂದು ಹೆಮ್ಮೆ
ಮೈಲಸ್ವಾಮಿ ಅಣ್ಣಾದೊರೈ ಅವರಿಂದ ಹಿಡಿದು ಶಿವನ್, ವನಿತಾ ಮುತ್ತಯ್ಯ ಮತ್ತು ವೀರಮುತ್ತುವೇಲ್, ನಿಗರ್ ಶಾಜಿ ಅವರು ಈಗ ಇಸ್ರೋದ ಮಿಷನ್‌ಗಳ ಯಶಸ್ಸಿಗೆ ಕೊಡುಗೆ ನೀಡಿದ ತಮಿಳುನಾಡಿನ ಪ್ರತಿಭಾವಂತ ವಿಜ್ಞಾನಿಗಳ ಪಟ್ಟಿಗೆ ಸೇರಿಕೊಂಡಿದ್ದಾರೆ. ಪಿಎಸ್‌ಎಲ್‌ವಿ-ಸಿ57 ಮೂಲಕ ಆದಿತ್ಯ-ಎಲ್1 ಉಡಾವಣೆ ಯಶಸ್ವಿಯಾಗಿ ನೆರವೇರಿದೆ ಎಂದು ಇಸ್ರೋ ಶನಿವಾರ ಪ್ರಕಟಿಸಿದೆ.