ನ್ಯೂಸ್

ನಿಜಾಮುದ್ದೀನ್ ಮರ್ಕಜ್​ ಅನ್ನು ಕರೊನಾ ವೈರಸ್​ ಹಾಟ್​ಸ್ಪಾಟ್​ ಆಗಿಸಿದ ವ್ಯಕ್ತಿಯ ಪರಿಚಯ ಇದು..

malli

ನವದೆಹಲಿ: ನಮ್ಮ ದೇಶದ ಮಟ್ಟಿಗೆ ಕರೊನಾ COVID19 ಸೋಂಕು ಹರಡುವ ಹಾಟ್​ಸ್ಪಾಟ್ ಆಗಿ ಕಾಣಿಸಿಕೊಂಡಿರುವ ತಬ್ಲಿಘಿ ಜಮಾತ್​ನ ಮುಖ್ಯಸ್ಥ ಮೌಲಾನಾ ಮುಹಮ್ಮದ್ ಸಾದ್​ ಕಾಂಧಲ್ವಿ. ತಬ್ಲಿಘಿ ಜಮಾತ್​ಗೆ 214 ರಾಷ್ಟ್ರಗಳಲ್ಲಿ 100 ಕೋಟಿಗೂ ಅಧಿಕ ಬೆಂಬಲಿಗರಿದ್ದಾರೆ. ದೇಶದಲ್ಲಿ ಸೋಂಕು ಹರಡಲು ಕಾರಣವಾಗಿರುವ ಈ ಜಮಾತ್ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ಮುಹಮ್ಮದ್ ಸಾದ್ ತಲೆಮರೆಸಿಕೊಂಡಿದ್ದಾರೆ.

ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮಾರ್ಚ್ 28ರಂದು ಸಾದ್​ಗೆ ನೋಟಿಸ್ ಜಾರಿಗೊಳಿಸಿದ್ದಾರೆ. ಆ ದಿನದಿಂದ ಸಾದ್ ನಾಪತ್ತೆ. ಮಂಗಳವಾರ ಸಾದ್ ಮತ್ತು ತಬ್ಲಿಘಿ ಜಮಾತ್​ನ ಇತರೆ ಪದಾಧಿಕಾರಿಗಳ ವಿರುದ್ಧ ಪೊಲೀಸರು ಎಫ್​ಐಆರ್ ದಾಖಲಿಸಿದ್ದಾರೆ. ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್​ 1897ರ ಅಂಶಗಳು ಮತ್ತು ಭಾರತೀಯ ದಂಡ ಸಂಹಿತೆಯ ವಿವಿಧ ಅಂಶಗಳ ಪ್ರಕಾರ ಆಪಾದನೆಗಳನ್ನು ಹೊರಿಸಲಾಗಿದೆ.

ಯಾರು ಈ ಸಾದ್: ಮೌಲಾನಾ ಮುಹಮ್ಮದ್ ಸಾದ್ ತಬ್ಲಿಘಿ ಜಮಾತ್​ನ ಮುಖ್ಯಸ್ಥರಾಗಿದ್ದು, 1965ರ ಮೇ 10ರಂದು ಜನಿಸಿದ್ದಾರೆ. ತಬ್ಲಿಘಿ ಜಮಾತ್​ನ ಸಂಸ್ಥಾಪಕ ಮೌಲಾನಾ ಮುಹಮ್ಮದ್ ಇಲಿಯಾಸ್ ಅವರ ಮೊಮ್ಮಗ. ಸಾದ್ ತಬ್ಲಿಘಿ ಜಮಾತ್​ನ ಒಂದು ಬಣವನ್ನು ಮುನ್ನಡೆಸುತ್ತಿದ್ದಾರೆ.

ತಬ್ಲಿಘಿ ಜಮಾತ್ ಎನ್ನುವಂಥದ್ದು ಇಸ್ಲಾಮಿಕ್ ಧರ್ಮ ಬೋಧನೆಯ ಕೇಂದ್ರ ಸ್ಥಾನವಾಗಿದ್ದು, ಇಲ್ಲಿನ ಧರ್ಮ ಬೋಧಕರು ಪ್ರವಾದಿ ಮುಹ್ಮದರ ಜೀವನಾದರ್ಶಗಳನ್ನು ಪ್ರತಿಯೊಬ್ಬ ಮುಸಲ್ಮಾನನೂ ತನ್ನ ಬದುಕಿನಲ್ಲಿ ಎಲ್ಲ ರೀತಿಯಲ್ಲೂ ಅಳವಡಿಸಬೇಕು ಎಂಬ ಬೋಧನೆಯನ್ನು ಮಾಡುತ್ತಾರೆ. ಎಲ್ಲ ರೀತಿಯಲ್ಲೂ ಎಂದರೆ ಧಾರ್ಮಿಕ ಆಚರಣೆ, ಉಡುಪು ಮತ್ತು ವೈಯಕ್ತಿಕ ನಡವಳಿಕೆ ತನಕ ಎಲ್ಲವೂ ಪರಿಗಣಿಸಲ್ಪಡುತ್ತದೆ.

ಮೌಲಾನಾ ಸಾದ್ ತಬ್ಲಿಘಿ ಜಮಾತ್​ನ ಮುಖ್ಯಸ್ಥರಾಗಿ 2015ರ ನವೆಂಬರ್ 16ರಂದು ನೇಮಕಗೊಳ್ಳುತ್ತಾರೆ. 1995-2015ರ ನಡುವೆ ಸಾದ್​ ತಬ್ಲಿಘಿ ಜಮಾತ್​ನ ಶುರಾ(ಸೆಂಟ್ರಲ್ ಕನ್ಸಲ್ಟೇಟಿವ್ ಕೌನ್ಸಿಲ್​)ದ ಸದಸ್ಯರಾಗಿದ್ದರು. ಮರ್ಕಜ್​ನ ಭಾಗವಾಗಿರುವ ಕಶಿಫ್​ ಅಲ್ ಉಲೂಮ್​ ಮದರಸಾದಲ್ಲಿ ಮೌಲ್ವಿಯತ್​ ಅನ್ನು ಅಭ್ಯಾಸ ಮಾಡಿದ್ದಾರೆ.

ಐವತ್ತಾರು ವರ್ಷ ವಯಸ್ಸಿನ ಸಾದ್​​ಗೆ ಮೂವರು ಪುತ್ರರು ಮತ್ತು ಪುತ್ರಿಯರಿದ್ದಾರೆ. ಹಜ್ರತ್ ನಿಜಾಮುದ್ದೀನ್ ಬಸ್ತಿಯ ಮರ್ಕಜ್​ಗೆ ಹೊರತಾಗಿ ದೆಹಲಿಯ ಝಕೀರ್​ನಗರದಲ್ಲಿ ಮತ್ತು ಉತ್ತರ ಪ್ರದೇಶದ ಕಾಂಢ್ಲಾದಲ್ಲಿ ಮನೆಗಳಿವೆ.

ಸಾದ್ ವಿರುದ್ಧದ ಪ್ರಕರಣ ಏನು?: ಮೌಲಾನಾ ಸಾದ್​ ಮತ್ತು ಮರ್ಕಜ್​ನ ಇತರೆ ಪದಾಧಿಕಾರಿಗಳಾದ ಡಾ.ಝೀಶಾನ್​, ಮುಫ್ತಿ ಶೆಹಜಾದ್​, ಎಂ.ಸೈಫ್​, ಯೂನಸ್​, ಮೊಹಮ್ಮದ್ ಸಲ್ಮಾನ್​, ಮೊಹಮ್ಮದ್ ಅಶ್ರಫ್​ ವಿರುದ್ಧ ಎಪಿಡೆಮಿಕ್​ ಡಿಸೀಸ್​ ಆ್ಯಕ್ಟ್ 1897 ಮತ್ತು ಐಪಿಸಿ ಸೆಕ್ಷನ್ ಪ್ರಕಾರ ಪ್ರಕರಣ ದಾಖಲಾಗಿದೆ. ಎಫ್​ಐಆರ್ ಪ್ರಕಾರ, ಎಪಿಡೆಮಿಕ್ ಡಿಸೀಸ್ ಆ್ಯಕ್ಟ್ 1897ರ ಸೆಕ್ಷನ್​ 3(ಅಪರಾಧಕ್ಕೆ ದಂಡ), ಐಪಿಸಿ ಸೆಕ್ಷನ್ 269(ಸೋಂಕು ಹರಡುವ ವಿಚಾರದಲ್ಲಿ ನಿರ್ಲಕ್ಷ್ಯ), 270(ಸೋಂಕು ಹರಡುವ ಮಾರಕ ಕ್ರಿಯೆ), 271(ಕ್ವಾರಂಟೈನ್ ನಿಯಮಾವಳಿಗೆ ಅವಿಧೇಯತೆ), 120 ಬಿ(ಅಪರಾಧಿಕ ಪಿತೂರಿಗೆ ಶಿಕ್ಷೆ) ಅಂಶಗಳಂತೆ ಪ್ರಕರಣ ದಾಖಲಾಗಿದೆ.(ಏಜೆನ್ಸೀಸ್)