ಯಾರೀ ಎಲಿಫೆಂಟ್​ ಮ್ಯಾನ್​! ಎಲ್ಲರಂತೆ ನಿದ್ರಿಸಲಾಗದ ಈ ವಿಚಿತ್ರ ಮುಖದ ಹಿಂದಿತ್ತು ಯಾರಿಗೂ ಬೇಡವಾದ ಕಣ್ಣೀರು | Joseph Carey Merrick 
ನ್ಯೂಸ್

ಯಾರೀ 'ಎಲಿಫೆಂಟ್​ ಮ್ಯಾನ್'? ಎಲ್ಲರಂತೆ ನಿದ್ರಿಸಲಾಗದ ಈ ವಿಚಿತ್ರ ಮುಖದ ಹಿಂದಿತ್ತು ಯಾರಿಗೂ ಬೇಡವಾದ ಕಣ್ಣೀರು| Joseph Carey Merrick

ಜನರು ಭಯ ಮತ್ತು ಅಸಹ್ಯದಿಂದ ನೋಡುತ್ತಿದ್ದ ಆ ವ್ಯಕ್ತಿಯ ಜೀವನ ಮತ್ತು ಜೀವನವು ಅತ್ಯಂತ ಕಠಿಣ ಹಾಗೂ ನೋವಿನಿಂದ ಕೂಡಿತ್ತು. ಅವನ ಕೊಳಕು ದೇಹದೊಳಗೆ, ಒಂದು ಕವಿತೆ ಮತ್ತು ಪ್ರೀತಿಯಿಂದ ಕನಸು ಕಾಣುವ ಸುಂದರ ಮನಸ್ಸಿತ್ತು. ಅದರ ಅದ್ಯಾರಿಗೂ ತಿಳಿಯದೆ ಹೋಯಿತು.

Joseph Carey Merrick: ಜಗತ್ತಿನ ಕೆಲವು ವಿಭಿನ್ನ, ವಿಚಿತ್ರ ಹಾಗೂ ವಿಸ್ಮಯಕಾರಿ ಘಟನೆಗಳು ಜನರನ್ನು ಕೊನೆಯವರೆಗೂ ಕಾಡುವುದು ತೀರ ಸಾಮಾನ್ಯ. ಆದರದೇ, ವಿಚಿತ್ರತೆ ಅಥವಾ ಅಚ್ಚರಿ ಎನ್ನುವಂತೆ ಮಾಡುವ ಮನುಷ್ಯರ ಬದುಕುಗಳು ಮಾತ್ರ ನಂಬಿಕೆಯಿಂದ ದೂರ ಉಳಿದರೆ, ಇನ್ನೂ ಒಂದಷ್ಟು ಬೆಚ್ಚಿ ಬೆರಗಾಗಿಸುತ್ತವೆ. ಅಂತಹ ಘಟನೆಗಳಲ್ಲಿ ಈ ವ್ಯಕ್ತಿಯ ಜೀವನ ಕೂಡ ಒಂದು.

ಅದು 19ನೇ ಶತಮಾನ. ಕೈಗಾರಿಕಾ ಕ್ರಾಂತಿಯ ಸಮಯ. ಕುತೂಹಲ ಮತ್ತು ಭಯವು ಮನುಷ್ಯಲ್ಲಿ ಕಾಡಲಾರಂಭಿಸಿದ ಸಮಯ. ಇತರರಿಗಿಂತ ಭಿನ್ನವಾಗಿರುವ ಜನರನ್ನು ಸರ್ಕಸ್​​ನಂತಹ ಸ್ಥಳಗಳಲ್ಲಿ ಪ್ರದರ್ಶಿಸುವ ಸಮಯವೂ ಆಗಿತ್ತು. ಯುರೋಪ್ ಮತ್ತು ಅಮೆರಿಕಾದಲ್ಲಿ, ಫ್ರೀಕ್ ಶೋಸ್ ಎಂಬ ಪ್ರದರ್ಶನಗಳು ತೀರ ಸಾಮಾನ್ಯವಾಗಿದ್ದವು. ಅಲ್ಲಿ ಜನರನ್ನು ಪ್ರಾಣಿಗಳಂತೆ ನೋಡಲು ಪ್ರದರ್ಶನಕ್ಕೆ ಇಡಲಾಗುತ್ತಿತ್ತು. ಅಂತಹ ಒಂದು ಜಾಗದಲ್ಲಿ, "ಆನೆ ಮನುಷ್ಯ" (Elephant Man) ಪಟ್ಟ ಪಡೆದಿದ್ದ ಒಬ್ಬ ಬಡ ಮನುಷ್ಯನನ್ನೂ ಪ್ರದರ್ಶಿಸಲಾಯಿತು. ಇಲ್ಲೇ ನೋಡಿ ಜನರಿಗೆ ಕೌತುಕ ಹೆಚ್ಚಾಗಿದ್ದು.

ಜನರು ಭಯ ಮತ್ತು ಅಸಹ್ಯದಿಂದ ನೋಡುತ್ತಿದ್ದ ಆ ವ್ಯಕ್ತಿಯ ಜೀವನ ಮತ್ತು ಜೀವನವು ಅತ್ಯಂತ ಕಠಿಣ ಹಾಗೂ ನೋವಿನಿಂದ ಕೂಡಿತ್ತು. ಅವನ ಕೊಳಕು ದೇಹದೊಳಗೆ, ಒಂದು ಕವಿತೆ ಮತ್ತು ಪ್ರೀತಿಯಿಂದ ಕನಸು ಕಾಣುವ ಸುಂದರ ಮನಸ್ಸಿತ್ತು. ಆನೆಗೆ ಹೋಲುವಂತ ದಟ್ಟ, ಬೂದು ಚರ್ಮ ಸೇರಿದಂತೆ ಕೆಲವು ಗಂಭೀರ ದೈಹಿಕ ನ್ಯೂನತೆಗಳಿಂದಾಗಿ ಜಗತ್ತು ಆ ಮನುಷ್ಯನಿಗೆ ಸಂಪೂರ್ಣ ವಿಲಕ್ಷಣ ಎಂಬ ಹೆಸರನ್ನು ಹಣೆಪಟ್ಟಿ ಮಾಡಿತು. ಅಸಲಿಗೆ, ಇದು ವಿಶ್ವ ಕಂಡ ಮಹಾನ್ ದುರಂತ ನಾಯಕರಲ್ಲಿ ಒಬ್ಬರಾದ ಜೋಸೆಫ್ ಕ್ಯಾರಿ ಮೆರಿಕ್ ಅವರ ಹೃದಯ ವಿದ್ರಾವಕ ಕಥೆ.

ಯಾರೀ ಜೋಸೆಫ್ ಮೆರಿಕ್?

ಆಗಸ್ಟ್ 5, 1862ರಂದು, ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿ, ಜೋಸೆಫ್ ರಾಕ್ಲಿ ಮೆರಿಕ್ ಮತ್ತು ಅವರ ಪತ್ನಿ ಮೇರಿ ಜೇನ್‌ ದಂಪತಿಯ ಪುತ್ರ ಈ ಜೋಸೆಫ್​ ಮೆರಿಕ್​. ಆರಂಭದಲ್ಲಿ ದಂಪತಿಗಳು ಬಹಳ ಮುದ್ದಿನಿಂದ ಮಗುವನ್ನು ಬೆಳೆಸಿದರು. ಬೇಬಿ ಮೆರಿಕ್ ಕೂಡಲ ಎಲ್ಲರಂತೆ ಆರೋಗ್ಯಕರವಾಗಿ, ಆಟ-ಪಾಠಗಳನ್ನು ಆಡಿ ಕಲಿತನು. ಮೆರಿಕ್​ ಬೆಳೆಯುತ್ತಿದ್ದಂತೆ ಅವರಲ್ಲಿ ಅಡಗಿದ್ದ ವಿಚಿತ್ರ ಸಮಸ್ಯೆಯೂ ಹೊರಬರಲು ಶುರುವಾಯಿತು. ಆದರೆ, ಮುಂದೊಂದು ದಿನ ಇದೇ ಅವರನ್ನು ಕತ್ತಲೆಯ ಕೋಣೆಗೆ ನೂಕುತ್ತದೆ ಎಂದು ಯಾರೊಬ್ಬರೂ ಅಂದುಕೊಂಡಿರಲಿಲ್ಲ.

ಐದನೇ ವಯಸ್ಸಿನಲ್ಲಿ, ಅವನ ದೇಹದಲ್ಲಿ ವಿಚಿತ್ರ ಬದಲಾವಣೆಗಳು ಕಾಡಲಾರಂಭಿಸಿದವು. ಮೊದಲಿಗೆ, ಅವರ ದೇಹದಲ್ಲಿ ಸಣ್ಣ ಗೆಡ್ಡೆಗಳು ಬೆಳೆಯಲು ಪ್ರಾರಂಭಿಸಿದವು. ಮೊದಮೊದಲು ಮನೆಯವರು ಹೆಚ್ಚು ತಲೆಕಡಿಸಿಕೊಳ್ಳಲಿಲ್ಲ. ಆದರೆ ದಿನಗಳು ಕಳೆದಂತೆ ಗಡ್ಡೆಗಳು ಬೆಳೆಯತೊಡಗಿದವು. ಚರ್ಮವು ದಪ್ಪವಾಯಿತು ಮತ್ತು ಮೂಳೆಗಳು ಅಸಹಜವಾಗಿ ಬೆಳೆದವು. ಕೈಗಳು, ಪಾದಗಳು, ತುಟಿಗಳು ಮತ್ತು ತಲೆಗಳು ವಿಚಿತ್ರ ರೀತಿಯಲ್ಲಿ ಬೆಳೆಯಲಾರಂಭಿಸಿತು. ಮಗುವಿನ ರೂಪವು ಕ್ರಮೇಣ ಭಯಾನಕವಾಗಿ ಕಾಣತೊಡಗಿತು ಮತ್ತು ಆಕಾರವು ಭಯಾನಕ ರೀತಿಯಲ್ಲಿ ಬದಲಾಗುತ್ತಲೇ ಹೋಯಿತು.

ಆಸ್ತಿಕರಾಗಿದ್ದ ಮೆರಿಕ್​ ತಾಯಿ, ಮಗನ ದೇಹದಲ್ಲಾಗುತ್ತಿರುವ ಬದಲಾವಣೆಗಳನ್ನು ಕಂಡು ಇದೆಲ್ಲ ದೇವರ ಪರೀಕ್ಷೆ ಎಂದುಕೊಂಡರು. ಆದರೆ, ಸ್ಥಳೀಯರು ಮೆರಿಕ್​ಗೆ ಬಂದಿರುವ ಸಮಸ್ಯೆಗಳು ಶಾಪವೆಂದು ಹೇಳಿದರು. ಇಷ್ಟಾದರೂ ಬಿಟ್ಟುಕೊಡದ ತಾಯಿ, ಜೋಸೆಫ್​ರನ್ನು ಅನೇಕ ದೇವಾಲಯಗಳು ಮತ್ತು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಕರೆದುಕೊಂಡು ಹೋಗಿ, ಚಿಕಿತ್ಸೆ, ಪೂಜೆ ಎಂದು ಮಗನ ಸಮಸ್ಯೆಯನ್ನು ಪರಿಹರಿಸಲು ಹರಸಾಹಸ ಪಟ್ಟರು. ಹನ್ನೊಂದು ವರ್ಷದವರಾಗಿದ್ದಾಗ, ಅವರ ತಾಯಿ ನಿಧನರಾದರು.

ಆಗ ಮೆರಿಕ್​ಗೆ ಜೀವನದಲ್ಲಿ ಒಂದೇ ಒಂದು ಗಟ್ಟಿಯಾದ ನಂಬಿಕೆ, ಭರವಸೆ ಆಗಿದ್ದ ತಾಯಿಯನ್ನೇ ಕಳೆದುಕೊಂಡಿದ್ದು ಜೀವನದ ಕೊನೆ ಎಂಬ ಭಾಸವಾಯಿತು. ಹದಿಮೂರನೆಯ ವಯಸ್ಸಿನಲ್ಲಿ, ಶಾಲೆಯನ್ನು ತೊರೆದ ಅವರು, ಉದ್ಯೋಗವನ್ನು ಹುಡುಕುತ್ತಾ ಅಲೆದಾಡಿದರು. ತನ್ನ ತಂದೆ ಮತ್ತು ಮಲತಾಯಿಯ ಕಿರುಕುಳದಿಂದ ತಪ್ಪಿಸಿಕೊಳ್ಳಲು, ಕಿರಿಯ ವಯಸ್ಸಿಗೆ ಮನೆಬಿಟ್ಟು ಹೋದರು. ವಿರೂಪಗೊಂಡ ದೇಹದಿಂದಾಗಿ ಯಾರೂ ಅವರಿಗೆ ಸಹಾಯ ಮಾಡಲು ಅಥವಾ ಕೆಲಸ ಕೊಡಲು ಸಿದ್ಧರಿರಲಿಲ್ಲ. ಹಸಿವು ನೀಗಿಸಿಕೊಳ್ಳಲು ಬೀದಿ ಬೀದಿ ಅಲೆದಾಡಿ, ಕೊನೆಗೆ ನಿರಾಶ್ರಿತರ ಆಶ್ರಯದಲ್ಲಿ ಆಶ್ರಯ ಪಡೆದು ಬದುಕು ದೂಡಿದರು.

ಜೀವನವೇ ಒಂದು ಪ್ರದರ್ಶನ

ಕಡು ಬಡತನದಿಂದ ಪಾರಾಗಲು ಮತ್ತು ಜೀವನೋಪಾಯಕ್ಕೆ ದಾರಿ ಹುಡುಕಲು ಕೊನೆಯ ಉಪಾಯಕ್ಕೆ ಮುಗಿಬಿದ್ದ ಮೆರಿಕ್​, 1884ರಲ್ಲಿ ಫ್ರೀಕ್ ಶೋಗಳ ಭಾಗವಾಗಲು ನಿರ್ಧರಿಸಿದರು. ತಮ್ಮ ದೇಹದ ನ್ಯೂನ್ಯತೆಯನ್ನೇ ಬಳಸಿಕೊಳ್ಳುವ ಮೂಲಕ ಇಂತಹ ಸಮಾಜದಲ್ಲಿ ಜೀವಿಸುವುದು ಅವರ ಮುಖ್ಯ ಧ್ಯೇಯವಾಯಿತು. ಮೆರಿಕ್‌ನ ವಿಚಿತ್ರ ಮುಖ ಲಕ್ಷಣವು ಮನುಷ್ಯನನ್ನು ವಾಣಿಜ್ಯ ವಸ್ತುವಾಗಿ ಬದಲಾಯಿಸಿತು. ಮೆರಿಕ್ ಅನ್ನು "ಎಲಿಫೆಂಟ್ ಮ್ಯಾನ್ - ಆಫ್​ ಮ್ಯಾನ್​" ಎಂಬ ಹೆಸರಿನಲ್ಲಿ ಪ್ರದರ್ಶಿಸಲಾಯಿತು.

ಕೆಲವರು ಈತನನ್ನು ನೋಡಿ ನಕ್ಕರೆ, ಇನ್ನೂ ಕೆಲವರು ಭಯಭೀತರಾದರು. ಕೆಲವರಂತು ಆತನ ವಿಚಿತ್ರತೆ ನೋಡಿ ಕಲ್ಲು ಕೂಡ ಎಸೆದಿರುವುದು ಉಂಟು. ಪ್ರತಿ ಬಾರಿ ಜನಸಮೂಹದ ಮುಂದೆ ಪ್ರದರ್ಶನಗೊಂಡಾಗ, ಅವರು ಅನುಭವಿಸಿದ ನೋವನ್ನು ಯಾರೂಬ್ಬರು ಗಮನಿಸಲಿಲ್ಲ ಮತ್ತು ಕಣ್ಣೀರಾಕಲಿಲ್ಲ. ಆಗ ಡಾ.ಫ್ರೆಡ್ರಿಕ್ ಟ್ರೀವ್ಸ್ ಎಂಬ ವೈದ್ಯರು, ಮೆರಿಕ್ ಅವರನ್ನು ನೋಡಲು ಬಂದರು. ಟ್ರೀವ್ಸ್ ಮೊದಲು ಕುತೂಹಲದಿಂದ ಮೆರಿಕ್ ಜತೆ ಮಾತನಾಡಿದರು. ಅವರ ದೈಹಿಕ ಸ್ಥಿತಿಯ ಬಗ್ಗೆ ಇನ್ನಷ್ಟು ಆಳವಾಗಿ ತಿಳಿಯಲು ತಮ್ಮೊಂದಿಗೆ ಕರೆದೊಯ್ದರು.

ಅತ್ಯದ್ಭುತ ಕಲಾವಿದ

ಮೆರಿಕ್​ ಲಂಡನ್ ಆಸ್ಪತ್ರೆಯಲ್ಲಿದ್ದಾಗ, ಜಗತ್ತಿಗೆ ಆ ಬಡವನ ನಿಜ ಸ್ವರೂಪ ಗೊತ್ತಾಯಿತು. ಕೊಳಕು ದೇಹದೊಳಗೆ ಒಂದು ಸುಂದರವಾದ ಮನಸ್ಸು, ದಯೆ ಮತ್ತು ಎಲ್ಲರಿಗೂ ಹಂಚುವ ನಿಷ್ಕಲ್ಮಶ ಪ್ರೀತಿ ಅಡಗಿತ್ತು. ಚಿಕಿತ್ಸೆಯ ಬಳಿಕ ಮೆರಿಕ್ ಪುಸ್ತಕಗಳನ್ನು ಓದಲು ಪ್ರಾರಂಭಿಸಿದರು. ಒಂದೊಂದಾಗಿ ಕವನಗಳನ್ನು ಬರೆಯಲು ಪ್ರಾರಂಭಿಸಿದರು ಮತ್ತು ಸುಂದರವಾದ ಕರಕುಶಲ ವಸ್ತುಗಳನ್ನು ರಚಿಸಲು ಆರಂಭಿಸಿದರು. ಒಮ್ಮೆ, ಮೆರಿಕ್ ಚರ್ಚ್‌ನ ರಟ್ಟಿನ ಮಾದರಿಯನ್ನು ತಯಾರಿಸಿದರು ಮತ್ತು ಅದನ್ನು ನೋಡಿದ ಡಾ. ಟ್ರೆವ್ಸ್ ಕೆಲ ನಿಮಿಷ ಆಶ್ಚರ್ಯಚಕಿತರಾದರು.

ಮೆರಿಕ್‌ನ ಕಥೆಯನ್ನು ಕೇಳಿದ ನಂತರ, ಲಂಡನ್‌ನ ಪ್ರಮುಖ ಜನರು ಅವರನ್ನು ಭೇಟಿಯಾಗಲು ಪ್ರಾರಂಭಿಸಿದರು. ಅಲೆಕ್ಸಾಂಡ್ರಾ, ಆಗಿನ ವೇಲ್ಸ್ ರಾಜಕುಮಾರಿ, ಮೆರಿಕ್​ರನ್ನು ಆಗಾಗ್ಗೆ ಭೇಟಿ ನೀಡುತ್ತಿದ್ದರು. ಮನುಷ್ಯನಿಗೆ ಅವಮಾನದ ಬದಲು ಗೌರವ, ಭಯದ ಬದಲು ಪ್ರೀತಿ ಸಿಗಬೇಕು. ಆತನೂ ಸಹ ಮನುಷ್ಯನೆ ಎಂಬುದು ಅವರ ಕಾಳಜಿ, ವಾದವಾಗಿತ್ತು. ಮತ್ತೊಂದೆಡೆ, ಎಲ್ಲರಂತೆ ಸುಖವಾಗಿ ನಿದ್ರಿಸಬೇಕೆಂಬುದು ಮೆರಿಕ್ ಅವರ ದೊಡ್ಡ ಆಸೆಯಾಗಿತ್ತು. ಆದರೆ, ತಲೆಯ ಅತಿಯಾದ ತೂಕದಿಂದಾಗಿ, ಕುಳಿತಲ್ಲೇ ಮಲಗಲು ಮಾತ್ರ ಸಾಧ್ಯವಿತ್ತು. ಇದನ್ನು ಈಡೇರಿಸುವ ಮೊದಲೇ ಮೆರಿಕ್ ಪ್ರಾಣ ಪಕ್ಷಿ ಹಾರಿಹೋಗಿದ್ದು ಅನೇಕರ ಕಣ್ಣೀರಿಗೆ ಕಾರಣವಾಯಿತು.

ಮೆರಿಕ್ ಏಪ್ರಿಲ್ 11, 1890ರಂದು 27ನೇ ವಯಸ್ಸಿನಲ್ಲಿ ನಿಧನರಾದರು. ಆ ರಾತ್ರಿ, ಮೆರಿಕ್ ಕುಳಿತುಕೊಳ್ಳುವ ಬದಲು ಹಾಸಿಗೆಯಲ್ಲಿ ಮಲಗಲು ಪ್ರಯತ್ನಿಸಿದರು. ಅಂದೇ ಅವರ ಕೊನೆಯೇ ದಿನವಾಯಿತು. ಕಾರಣ, ತಲೆಯ ಭಾರ ತಾಳಲಾರದೆ ಮೆರಿಕ್ ಕತ್ತು ಮುರಿದು, ಉಸಿರುಗಟ್ಟಿ ಸಾವನ್ನಪ್ಪಿದರು ಎಂದು ವರದಿಗಳು ಉಲ್ಲೇಖಿಸಿವೆ.

ಏನದು ಅಪರೂಪದ ಕಾಯಿಲೆ?

ವರ್ಷಗಳವರೆಗೆ, ವೈದ್ಯಕೀಯ ವಿಜ್ಞಾನವು ಜೋಸೆಫ್ ಮೆರಿಕ್ ಅವರ ವಿರೂಪಗಳ ಹಿಂದಿರುವ ಅಸಲಿ ಕಾರಣವನ್ನು ತಿಳಿಯಲು ನಿರಂತರವಾಗಿ ಶ್ರಮಿಸಿದರು. ಆದರೆ, ಅಂತಿಮವಾಗಿ ನಿರ್ಧರಿಸಲು ಸಾಧ್ಯವಾಗಲಿಲ್ಲ. ಅವರ ಬಲಗೈ ಮತ್ತು ತಲೆಯ ಮೇಲೆ ದೊಡ್ಡ ಗೆಡ್ಡೆಗಳು ಬೆಳೆದಿದ್ದವು. ಅವರ ತಲೆಬುರುಡೆಯು ಅಸಾಧಾರಣವಾಗಿ ದೊಡ್ಡದಾಯಿತು ಮತ್ತು ಮೂಳೆಗಳು ವಿಚಿತ್ರವಾಗಿ ಬೆಳೆದುಕೊಂಡಿತ್ತು. ಇದರಿಂದ, ಮೆರಿಕ್ ನೋಡಲು ಭಯಂಕರವಾಗಿ ಕಾಣುತ್ತಿದ್ದರು.

ಎಲಿಫಾಂಟಿಯಾಸಿಸ್ ಎಂದು ಕರೆಯಲ್ಪಡುವ ಈ ಸ್ಥಿತಿಯನ್ನು ನಂತರ ನ್ಯೂರೋಫೈಬ್ರೊಮಾಟೋಸಿಸ್ ಟೈಪ್ 1 (NF1) ಎಂದು ಹೇಳಲಾಯಿತು. ಆದಾಗ್ಯೂ, ವಿಜ್ಞಾನವು ಮುಂದುವರೆದಂತೆ, ಮೆರಿಕ್ ಅವರ ದೈಹಿಕ ನ್ಯೂನ್ಯತೆಗಳು ಪ್ರೋಟಿಯಸ್ ಸಿಂಡ್ರೋಮ್ ಎಂಬ ಅಪರೂಪದ ಆನುವಂಶಿಕ ಅಸ್ವಸ್ಥತೆಯಿಂದ ಉಂಟಾಗಿರುವುದು ಎಂದು ಕಂಡುಹಿಡಿದರು ಎಂದು ಸಾಕಷ್ಟು ವರದಿಗಳು ತಿಳಿಸಿವೆ,(ಏಜೆನ್ಸೀಸ್).