ಚರಕ ಮಹರ್ಷಿಗಳು ಹೇಳಿದ ಗುಣರಸಾಯನಗಳಲ್ಲಿ ಧೀರತ್ವವೂ ಒಂದು ಪ್ರಮುಖವಾದ ಗುಣರಸಾಯನವು. ‘ಧೀರಸ್ಯ ಭಾವಃ ಧೈರ್ಯಂ’ ಧೀರನಲ್ಲಿರುವ ಗುಣವೇ ಧೈರ್ಯವು. ಅದುವೇ ಧೀರತ್ವವು. ಧೀರ ಎಂಬ ಶಬ್ದಕ್ಕೆ ಮಹಾಕವಿ ಕಾಳಿದಾಸನು ಕುಮಾರಸಂಭವ ಮಹಾಕಾವ್ಯದಲ್ಲಿ ‘ವಿಕಾರಹೇತೌ ಸತಿ ವಿಕ್ರಿಯಂತೇ| ಏಷಾಂ ನ ಚೇತಾಂಸಿ ತ ಏವ ಧೀರಾಃ||’ ಅಂದರೆ - ಮನಸ್ಸನ್ನು ವಿಕಾರಗೊಳಿಸುವ ವಿಷಯಗಳು ಎದುರಿನಲ್ಲಿದ್ದರೂ ಯಾರ ಮನಸ್ಸು ವಿಕೃತಿಗೊಳ್ಳುವುದಿಲ್ಲವೋ ಅವರೇ ಧೀರರು. ಎಂಬುದಾಗಿ ಧೀರನ ಲಕ್ಷಣವನ್ನು ಹೇಳಿದ್ದಾರೆ. ಧೀರನಲ್ಲಿರುವ ಈ ಧೈರ್ಯವು ಸಫಲತೆಯ ಬಹುದೊಡ್ಡ ಸಾಧನವು.
ಧೈರ್ಯಶಾಲಿಯು ಅಸಾಧ್ಯವನ್ನೂ ಸಾಧಿಸಬಲ್ಲನು. ಅಂತೆಯೇ ‘ಧೈರ್ಯಂ ಸರ್ವತ್ರ ಸಾಧನಂ’ಎಂಬುದಾಗಿ ಹೇಳಿದ್ದಾರೆ. ಆದ್ದರಿಂದ ಶ್ರೀಮನ್ನಿಜಗುಣ ಶಿವಯೋಗಿಗಳು ಭಗವಂತನನ್ನು ಕುರಿತು ಜಗತ್ತಿನ ಬೇರಾವ ಪದಾರ್ಥವನ್ನು ಬೇಡಿಕೊಳ್ಳದೇ ಸುಗುಣ ಸಂತತಿಯನ್ನು ಬೇಡಿಕೊಳ್ಳುವಾಗ ‘ಯಡರಡಸಿದ ವೇಳೆಯೊಳು ಧೈರ್ಯವನು’ ಎಂಬುದಾಗಿ ವಿಕಟ ಪ್ರಸಂಗಗಳು ಬಂದಾಗ ಅದನ್ನು ಎದುರಿಸಲು ಧೈರ್ಯವನ್ನೇ ಕೊಡು ಎಂದು ಬೇಡಿಕೊಂಡಿದ್ದಾರೆ. ರೋಗ ರುಜಿನಗಳು ಬಂದು ಆವರಿಸಿದಾಗ ಬೇಕಾದಷ್ಟು ಔಷಧೋಪಚಾರಗಳನ್ನು ಮಾಡುತ್ತಿದ್ದರೂ ರೋಗಿಯು ಧೈರ್ಯಗುಂದಿದರೆ ಔಷಧದ ಯಾವ ಪ್ರಯೋಜನವೂ ಆಗುವುದಿಲ್ಲ. ಶರೀರವು ಮನೋ ಚಾಲಿತ ಯಂತ್ರ ವಾಗಿರುವುದರಿಂದ ಮನಸ್ಸಿನಲ್ಲಿ ಭಯವು ಪ್ರವೇಶಿಸಿದರೆ ಶರೀರದ ಎಲ್ಲ ಕ್ರಿಯೆಗಳು ಸ್ಥಗಿತಗೊಳ್ಳುವವು.
ವೈದ್ಯಶಾಸ್ತ್ರದ ಪ್ರಕಾರ ಭಯಗ್ರಸ್ತನಾದ ವ್ಯಕ್ತಿಯ ರಕ್ತನಾಳಗಳು ಸಂಕೋಚಗೊಂಡು ಹೃದಯ, ಮಿದುಳು, ಮೂತ್ರಪಿಂಡಾದಿಗಳಿಗೆ ರಕ್ತ ಸಂಚಾರವು ನಿಂತು ಹೋಗಿ ವ್ಯಕ್ತಿಯು ಪ್ರಾಣಾಪಾಯಕ್ಕೆ ತುತ್ತಾಗುತ್ತಾನೆ. ಅಂತೆಯೇ ವೈದ್ಯರು ಸಹ ಉಪಚಾರವನ್ನು ಮಾಡುವಾಗ ರೋಗಿಗೆ ಮೊದಲು ಧೈರ್ಯವನ್ನು ತುಂಬುತ್ತಾರೆ. ಆದ್ದರಿಂದ ಅಸಾಧ್ಯ ರೋಗಗಳು ಆವರಿಸಿದರೂ ಮನಸ್ಸಿನಲ್ಲಿ ಧೈರ್ಯವಿದ್ದರೆ ಆ ವ್ಯಕ್ತಿಯು ಆ ಧೈರ್ಯದ ಬಲದಿಂದ ರೋಗ ಮುಕ್ತನಾಗುವಲ್ಲಿ ಸಂಶಯವಿಲ್ಲ. ಅಂತೆಯೇ ಚರಕ ಮಹರ್ಷಿಗಳು ಮನಸ್ಸಿನ ಧೈರ್ಯವನ್ನು ಸಹ ಒಂದು ರಾಸಾಯನವೆಂಬುದಾಗಿ ಬೋಧಿಸಿದ್ದಾರೆ. ಆದ್ದರಿಂದ ಪ್ರತಿಯೊಬ್ಬರೂ ಜೀವನದಲ್ಲಿ ಅಂತಹ ಪ್ರಸಂಗಗಳು ಬಂದಾಗ ಧೈರ್ಯವನ್ನೇ ಬಳಸಿಕೊಂಡು ವಿಕಟ ಪ್ರಸಂಗಗಳಿಂದ ಮುಕ್ತರಾಗಬೇಕು.