ನ್ಯೂಸ್

ರೇಣುಕಸ್ವಾಮಿ ಹತ್ಯೆ ಬಳಿಕ ಪವಿತ್ರಾ ಗೌಡ ಕರೆ ಮಾಡಿದ್ದು ಯಾರಿಗೆ, ಹೋಗಿದ್ದು ಎಲ್ಲಿಗೆ? ಚಾರ್ಜ್​ಶೀಟ್​ನಲ್ಲಿ ಬಯಲಾಯ್ತು 'ಡಿ ಗ್ಯಾಂಗ್​'ನ ಮತ್ತೊಂದು ಕರಾಳ ಮುಖ

ಬೆಂಗಳೂರು: ಸಾಮಾಜಿಕ ಜಾಲತಾಣದಲ್ಲಿ ಗೆಳತಿ ಪವಿತ್ರಾ ಗೌಡಗೆ ಅಶ್ಲೀಲವಾಗಿ ಮೆಸ್ಸೇಜ್​ ಮಾಡಿದ ಎಂಬ ಕಾರಣಕ್ಕೆ ಚಿತ್ರದುರ್ಗ ಮೂಲದ ರೇಣುಕಸ್ವಾಮಿಯನ್ನು ಭೀಕರವಾಗಿ ಕೊಲೆ ಮಾಡಿ ಜೈಲು ಪಾಲಾಗಿರುವ ನಟ ದರ್ಶನ್​ ಮತ್ತು ಗ್ಯಾಂಗ್​ನ ಕರಾಳ ಕೃತ್ಯಗಳು ದಿನ ಕಳೆದಂತೆ ಒಂದೊಂದೇ ಬಯಲಾಗುತ್ತಿದೆ. ನಿಜಜೀವನದಲ್ಲಿ ಮಾದರಿಯಾಗಬೇಕಿದ್ದ ಸ್ಟಾರ್​ ನಟನ ಈ ಕೃತ್ಯ ಪರ-ವಿರೋಧದ ಚರ್ಚೆಗೆ ಆಸ್ಪದ ಮಾಡಿಕೊಟ್ಟಿದ್ದು, ಚಾರ್ಜ್​ಶೀಟ್​ನಲ್ಲಿ ಪೊಲೀಸರು ಉಲ್ಲೇಖಿಸಿರುವ ಆಘಾತಕಾರಿ ಅಂಶಗಳು ಡಿ ಗ್ಯಾಂಗ್​ನ ಕರಾಳ ಮುಖವನ್ನು ಹೊರಜಗತ್ತಿಗೆ ಪರಿಚಯಿಸುತ್ತಿದೆ.

ಪ್ರಕರಣದ ಪ್ರಮುಖ ಆರೋಪಿಯಾಗಿರುವ ದರ್ಶನ್​ ಗೆಳತಿ ಪವಿತ್ರಾ ಗೌಡ ಪರಪ್ಪನ ಅಗ್ರಹಾರದಲ್ಲಿ ದಿನ ದೂಡುತ್ತಿದ್ದು, ಕೋರ್ಟ್​ ಕೆಲ ದಿನಗಳ ಹಿಂದೆ ಇವರ ಜಾಮೀನು ಅರ್ಜಿಯನ್ನು ವಜಾ ಮಾಡಿತ್ತು. ಇದೀಗ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​ ಸಲ್ಲಿಸಿದ್ದು, ಅರೋಪಿಗಳಿಗೆ ಮತ್ತಷ್ಟು ಟೆನ್ಷನ್​ ಜಾಸ್ತಿ ಆಗುವಂತೆ ಮಾಡಿದೆ.

ಪಟ್ಟಣಗೆರೆ ಶೆಡ್​ನಲ್ಲಿ ರೇಣುಕಸ್ವಾಮಿ ಹತ್ಯೆಯ ಬಳಿಕ ಪ್ರಕರಣದ ಎರಡನೇ ಆರೋಪಿ ನಟ ದರ್ಶನ್​ ಮನೆಗೆ ತೆರಳಿದ್ದು, ಮಾರನೇ ದಿನ ಸಂಜೆ ಡೆವಿಲ್​ ಶೂಟಿಂಗ್​ ನಿಮಿತ ಮೈಸೂರಿಗೆ ಹೊರಟಿದ್ದಾರೆ. ಇತ್ತ ಪ್ರಕರಣದ ಪ್ರಮುಖ ಆರೋಪಿ ಪವಿತ್ರಾ ಗೌಡ ಹತ್ಯೆ ನಡೆದ ಮಾರನೇ ದಿನ ಬ್ಯೂಟಿ ಪಾರ್ಲರ್​ಗೆ ಹೋಗಿದ್ದರಂತೆ. ಈ ಬಗ್ಗೆ ಪೊಲೀಸರು ಚಾರ್ಜ್​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಈ ಬಗ್ಗೆ ಸಾಕ್ಷ್ಯಧಾರಗಳನ್ನು ಒದಗಿಸಿದ್ದಾರೆ.

ಇದಲ್ಲದೆ ಪವಿತ್ರಾ ಗೌಡ ದರ್ಶನ್​ ಜೊತೆ ಪಟ್ಟಣಗೆರೆ ಶೆಡ್​ಗೆ ತೆರಳುವಾಗ ತಮ್ಮ ಸ್ನೇಹಿತರೊಬ್ಬರಿಗೆ ಕರೆ ಮಾಡಿದ್ದು, ರೇಣುಕಸ್ವಾಮಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ, ಶೆಡ್​ನಲ್ಲಿ ಕೆಲಸ ಮುಗಿದ ಬಳಿಕ ಭೇಟಿಯಾಗುವುದಾಗಿಯೂ ಹೇಳಿದ್ದಾರೆ. ಈ ಬಗ್ಗೆಯೂ ಪೊಲೀಸರು ಚಾರ್ಜ್​​ಶೀಟ್​ನಲ್ಲಿ ಉಲ್ಲೇಖಿಸಿದ್ದು, ಇದಕ್ಕೆ ಪೂರಕವಾದ ಸಾಕ್ಷಿಯನ್ನು ಕೋರ್ಟ್​​ಗೆ ಸಲ್ಲಿಸಿದ್ದಾರೆ.

ರೇಣುಕಾಸ್ವಾಮಿ ಕೊಲೆ ಕೇಸ್​ ಸಂಬಂಧ ಈಗಾಗಲೆ ಪೊಲೀಸರು ಕೋರ್ಟ್​​ಗೆ ಚಾರ್ಜ್​ ಶೀಟ್ ಸಲ್ಲಿಸಿದ್ದು, ಕೊಲೆ ಪ್ರಕರಣದ ವಿವರಗಳು ಒಂದೊಂದಾಗಿಯೇ ಹೊರಗೆ ಬರುತ್ತಿವೆ. ಪ್ರಮುಖವಾಗಿ ರೇಣುಕಾಸ್ವಾಮಿಯನ್ನು ಅಪಹರಣ ಮಾಡಿದ್ದ ಆರೋಪಿಗಳ ಕುರಿತು ಹಲವು ವಿಚಾರಗಳು ಬಹಿರಂಗವಾಗಿದೆ. ಬಗೆದಷ್ಟು ಆಳ ಎಂಬಂತೆ ಪ್ರಕರಣದಲ್ಲಿರುವ ಅಂಶಗಳು ಹೊರಬರುತ್ತಿದ್ದು, ಡಿ ಗ್ಯಾಂಗ್​ ಜೈಲೂಟ್ ಖಾಯಂ ಎಂದು ಹೇಳಲಾಗುತ್ತಿದೆ.