ನವದೆಹಲಿ: ಕರೊನಾದ ಒಮಿಕ್ರಾನ್ ರೂಪಾಂತರಿಯ ಭೀತಿ ಹುಟ್ಟಿರುವ ಹಿನ್ನೆಲೆಯಲ್ಲಿ ವಾಣಿಜ್ಯ ವಿಮಾನಗಳ ನಿಯಮಿತ ಸಂಚಾರವನ್ನು ಪುನರಾರಂಭಿಸುವ ನಿರ್ದಿಷ್ಟ ದಿನಾಂಕವನ್ನು, ಮುಂದಿನ ದಿನಗಳಲ್ಲಿ, ಪರಿಸ್ಥಿತಿಗಳಿಗನುಸಾರವಾಗಿ ನಿರ್ಧರಿಸಿ ತಿಳಿಸಲಾಗುವುದು ಎಂದು ಭಾರತದ ನಾಗರಿಕ ವಿಮಾನಯಾನದ ಡೈರೆಕ್ಟರೇಟ್ ಜನರಲ್ನ ಪ್ರಕಟಣೆ ತಿಳಿಸಿದೆ.
ಅನ್ಯದೇಶಗಳಿಂದ ಭಾರತಕ್ಕೆ ಬರುವ ಮತ್ತು ಭಾರತದಿಂದ ಅನ್ಯದೇಶಗಳಿಗೆ ಹೋಗುವ ಷೆಡ್ಯೂಲ್ಡ್ ಕಮರ್ಷಿಯಲ್ ಇಂಟರ್ನ್ಯಾಷನಲ್ ಪ್ಯಾಸೆಂಜರ್ ವಿಮಾನಗಳ ಸೇವೆಗಳನ್ನು 2020ರ ಮಾರ್ಚ್ 23ರಿಂದ ಅಮಾನತ್ತಿನಲ್ಲಿರಿಸಲಾಗಿದೆ. ಜುಲೈ 2020ರಿಂದ 31 ದೇಶಗಳೊಂದಿಗೆ ರೂಪಿಸಲಾಗಿರುವ ಏರ್ ಬಬಲ್ ವ್ಯವಸ್ಥೆಯಡಿ ವಿಶೇಷ ಅಂತಾರಾಷ್ಟ್ರೀಯ ಪ್ರಯಾಣಿಕ ವಿಮಾನಗಳು ಮಾತ್ರ ಸಂಚರಿಸುತ್ತಿವೆ.
ಈ ಮುನ್ನ ಕೇಂದ್ರ ಸರ್ಕಾರವು ಡಿಸೆಂಬರ್ 15 ರಿಂದ ಎಲ್ಲಾ ನಿಗದಿತ ವಾಣಿಜ್ಯ ಪ್ರಯಾಣಿಕ ವಿಮಾನಗಳ ಸಂಚಾರವನ್ನು ಪುನರಾರಂಭಿಸಲಾಗುವುದು ಎಂದು ಆದೇಶ ಹೊರಡಿಸಿತ್ತು. ಆದರೆ, ಸುಮಾರು 20 ದೇಶಗಳಲ್ಲಿ ಒಮಿಕ್ರಾನ್ ಸೋಂಕು ಕಂಡುಬಂದಿರುವುದು ಅಂತಾರಾಷ್ಟ್ರೀಯ ಪ್ರಯಾಣಿಕರಿಂದಾಗಿ ಕರೊನಾ ಉಲ್ಬಣಿಸುವ ಆತಂಕ ಉಂಟುಮಾಡಿದೆ. ಹೀಗಾಗಿ ಪ್ರಸ್ತುತ ಜಾಗತಿಕ ಪರಿಸ್ಥಿತಿಯನ್ನು ಅಧ್ಯಯನ ಮಾಡುತ್ತಿದ್ದು, ಸಂಬಂಧಿತ ವಲಯಗಳೊಂದಿಗೆ ಚರ್ಚೆ ನಡೆಸಿ ಮತ್ತೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ. (ಏಜೆನ್ಸೀಸ್)