ನ್ಯೂಸ್

ಕುರುಬೂರು ಶಾಂತಕುಮಾರ್ vs ಕನ್ನಡ ಸಂಘಟನೆಗಳು; ಬಂದ್​ ದಿನಾಂಕದಲ್ಲಿ ಗೊಂದಲ!

ಬೆಂಗಳೂರು: ರಾಜ್ಯ ಸರ್ಕಾರ ತಮಿಳುನಾಡಿಗೆ ಕಾವೇರಿ ನೀರು ಹರಿಸುತ್ತಿರುವುದನ್ನು ವಿರೋಧಿಸಿ ಸೆ.26 ರಂದು ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷರಾದ ಕುರುಬೂರು ಶಾಂತಕುಮಾರ್ ರಾಜ್ಯಾದ್ಯಂತ ಬಂದ್​ಗೆ ಕರೆ ಕೊಟ್ಟಿದ್ದಾರೆ. ಈ ಮಧ್ಯೆ 29 ರಂದು ಬಂದ್​ ನಡೆಸುವಂತೆ ಕನ್ನಡ ಸಂಘಟನೆಗಳು ಮನವಿ ಮಾಡಿದ್ದು, ಈ ಕಾರಣಗಳಿಂದ ಬಂದ್​ ಪ್ರತ್ಯೇಕವಾಗಿ ಎರಡು ದಿನಗಳು ನಡೆಯಲಿದೆಯೇ ಎಂಬ ಗೊಂದಲ ಉದ್ಬವಗೊಂಡಿದೆ.

ಕುರುಬೂರು ಶಾಂತಕುಮಾರ್ ವಿರುದ್ಧ ಕನ್ನಡ ಸಂಘಟನೆಗಳಿಂದ ಅಸಮಾಧಾನ ಬುಗಿಲೆದ್ದಿದ್ದು, ಯಾವುದೇ ಕಾರಣಕ್ಕೂ 26ಕ್ಕೆ ಬಂದ್ ವಾಪಾಸ್ ಪಡೆಯುವುದಿಲ್ಲ ಎಂದು ಶಾಂತಕುಮಾರ್ ಹೇಳಿದರೆ, 26ಕ್ಕೆ ನಾವು ತಟಸ್ಥ. 29ಕ್ಕೆ ಅಖಂಡ ಕರ್ನಾಟಕ ಬಂದ್​ಗೆ ನಾವು ಸಿದ್ಧ ಎಂದು ಕನ್ನಡ ಸಂಘಟನೆಗಳು ಹೇಳಿವೆ.

ಕುರುಬೂರು ಶಾಂತಕುಮಾರ್​ಗೆ ಮನವಿ ಮಾಡಿದ ಕನ್ನಡಪರ ಸಂಘಟನೆಗಳು, 26 ರಂದು ಬೆಂಗಳೂರು ಬಂದ್ ವಾಪಾಸ್ ಪಡೆಯುವಂತೆ ತಿಳಿಸಿವೆ. ಕನ್ನಡ ಸಂಘಟನೆಗಳ ಮುಖಂಡರಿಂದ ಮನವೋಲಿಕೆಯ ಬಗ್ಗೆ ಚರ್ಚೆ ಕೂಡ ನಡೆಯುತ್ತಿದೆ.

ಒಂದೇ ಬಂದ್ ಬೇಕಾ? ಎರಡು ಬಂದ್ ಬೇಕಾ? ಎಂಬ ಚರ್ಚೆ ವ್ಯಾಪಕವಾಗಿ ಕೇಳಿಬಂದ ಬೆನ್ನಲ್ಲೇ ಇದೀಗ ಸಭೆಯಲ್ಲಿ ಹೋರಾಟಗಾರರಿಗೆ ಕುರುಬೂರು ಶಾಂತಕುಮಾರ್ ಸಲಹೆಯೊಂದನ್ನು ನೀಡಿದ್ದಾರೆ. ಮಂಗಳವಾರ ಶಾಂತಿಯುತವಾಗಿ ಬಂದ್ ಮಾಡಿ, ಅಹಿತಕರ ಘಟನೆ ನಡೆಯದಂತೆ ನೋಡಿಕೊಳ್ಳಿ. ಎಲ್ಲರೂ ಜತೆಯಲ್ಲಿ ಬಂದ್ ಮಾಡೋಣ ಎಂದು ಹೇಳಿದರು.

ಪರೀಕ್ಷೆ ಇರುವ ವಿದ್ಯಾರ್ಥಿಗಳಿಗೆ ತೊಂದರೆ ಕೊಡುವುದು ಬೇಡ. ಮಂಗಳವಾರ ಬಂದ್ ವಾಪಸ್​ ಪಡೆಯುವ ಅಗತ್ಯವಿಲ್ಲ. ಎಲ್ಲರನ್ನೂ ಸಂಪರ್ಕಿಸಿ ಬಂದ್​ಗೆ ಬೆಂಬಲಿಸುವಂತೆ ಮನವಿ ಮಾಡೋಣ ಎಂದು ಹೇಳಿದ್ದಾರೆ.