ನ್ಯೂಸ್

ಅಂತೂ ಬಂತು ವಾಟ್ಸ್​ಆ್ಯಪ್​ ಪೇ: ಹೇಗಿದೆ ಗೊತ್ತಾ ಈ ಸೌಲಭ್ಯ

ನವದೆಹಲಿ: ಹಲವು ವರ್ಷಗಳಿಂದ ವಾಟ್ಸ್​ಆ್ಯಪ್​ ಪೇ ಬಗ್ಗೆ ಕೇಳುತ್ತಲೇ ಬಂದಿದ್ದೇವೆ. ಆನ್​ಲೈನ್​ ಜಗತ್ತಿಗೆ ಹೊಂದಿಕೊಂಡು ಬದುಕುತ್ತಿರುವ ನಮಗೆ ಗೂಗಲ್​ ಪೇ, ಫೋನ್​ ಪೇ, ಪೇಟಿಎಂ ಹೊರೆತಾಗಿ ವಾಟ್ಸ್​ಆ್ಯಪ್​ನಲ್ಲಿಯೂ ಹಣ ಕಳುಹಿಸುವ, ವ್ಯವಹಾರ ಮಾಡುವ ಸದಾವಕಾಶ ಇದೀಗ ಬಂದಿದೆ. ಬಹು ನಿರೀಕ್ಷಿತ ವಾಟ್ಸ್​ಆ್ಯಪ್​ ಪೇ ಸೌಲಭ್ಯಕ್ಕೆ ಭಾರತದಲ್ಲಿ ವಾಟ್ಸ್​ಆ್ಯಪ್​ ಸಂಸ್ಥೆ ಚಾಲನೆ ನೀಡಿದೆ.

ಈ ಸೌಲಭ್ಯದ ಪ್ರಯೋಗವನ್ನು ವಾಟ್ಸ್​ಆ್ಯಪ್​ ಸಂಸ್ಥೆ ಎರಡು ವರ್ಷಗಳ ಹಿಂದೆಯೇ ಆರಂಭಿಸಿತ್ತು. ಎಲ್ಲ ರೀತಿಯ ಪ್ರಯೋಗಗಳನ್ನು ನಡೆಸಿದ ನಂತರ ಇದೀಗ ಜನರಿಗೆ ವಾಟ್ಸ್​ಆ್ಯಪ್​ ಪೇ ಮುಕ್ತವಾಗಿದೆ. ಭಾರತದ ರಾಷ್ಟ್ರೀಯ ಪಾವತಿ ನಿಗಮ (ಎನ್​ಪಿಸಿಐ)ದ ಸಹಯೋಗದೊಂದಿಗೆ ಸೌಲಭ್ಯವನ್ನು ಆರಂಭಿಸಲಾಗಿದೆ.

ಸದ್ಯದ ಮಟ್ಟಿಗೆ ದೇಶದ ಐದು ಬ್ಯಾಂಕ್​ಗಳ ಗ್ರಾಹಕರು ಮಾತ್ರವೇ ವಾಟ್ಸ್​ಆ್ಯಪ್​ ಪೇ ಬಳಸಬಹುದು. ಐಸಿಐಸಿಐ ಬ್ಯಾಂಕ್​, ಎಚ್​ಡಿಎಫ್​ಸಿ ಬ್ಯಾಂಕ್​, ಆ್ಯಕ್ಸಿಸ್​ ಬ್ಯಾಂಕ್​, ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ (ಎಸ್​ಬಿಐ) ಮತ್ತು ಜಿಯೋ ಪೇಮೆಂಟ್​ ಬ್ಯಾಂಕ್​ಗಳ ಗ್ರಾಹಕರಿಗೆ ಸೌಲಭ್ಯ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇನ್ನು ಹೆಚ್ಚು ಬ್ಯಾಂಕ್​ಗಳನ್ನು ಸೌಲಭ್ಯದಲ್ಲಿ ಅಳವಡಿಸಿಕೊಳ್ಳುವುದಾಗಿ ವಾಟ್ಸ್​ಆ್ಯಪ್​ ತಿಳಿಸಿದೆ.

ಬಳಕೆ ಹೇಗೆ?

ಒಂದು ವೇಳೆ ನೀವು ಈ ಮೇಲಿನ ಯಾವುದೇ ಬ್ಯಾಂಕ್​ನಲ್ಲಿ ಖಾತೆ ಹೊಂದಿದ್ದರೆ ವಾಟ್ಸ್​ಆ್ಯಪ್​ ಪೇ ಸೌಲಭ್ಯವನ್ನು ಬಳಸಬಹುದು.

- ಪ್ಲೇಸ್ಟೋರ್​ನಲ್ಲಿ ವಾಟ್ಸ್​ಆ್ಯಪ್​ ಅನ್ನು ಅಪ್​ಡೇಟ್​ ಮಾಡಿಕೊಳ್ಳಿ

- ಚಾಟ್​ ವಿಂಡೋನ ಬಡ ಮೇಲ್ಭಾಗದಲ್ಲಿ ಕಾಣುವ ಮೂರು ಚುಕ್ಕೆಗಳ ಮೇಲೆ ಕ್ಲಿಕ್​ ಮಾಡಿ

- ಪೇಮೆಂಟ್​ ವಿಂಡೋ ತೆರೆದುಕೊಳ್ಳುತ್ತದೆ. ಅದರಲ್ಲಿ ಆ್ಯಡ್​ ಪೇಮೆಂಟ್​ ಮೇಲೆ ಕ್ಲಿಕ್ಕಿಸಿ

- ಅಕ್ಸೆಪ್ಟ್​ ಮೇಲೆ ಕ್ಲಿಕ್ಕಿಸಿ

- ಬ್ಯಾಂಕ್​ಗಳ ಪಟ್ಟಿ ತೆರೆದುಕೊಳ್ಳುತ್ತದೆ. ನಿಮ್ಮ ಬ್ಯಾಂಕ್​ ಆಯ್ಕೆ ಮಾಡಿ

- ಫೋನ್​ ನಂಬರ್​ ಮೂಲಕ ಬ್ಯಾಂಕ್​ ಖಾತೆ ಖಾತರಿ ಪಡಿಸಿಕೊಳ್ಳಿ

- ನಿಮ್ಮ ಖಾತೆಯನ್ನು ದೃಢೀಕರಿಸಲು ವಾಟ್ಸ್​ಆ್ಯಪ್​ ಟೆಕ್ಸ್ ಮೆಸೇಜ್​ ಕಳುಹಿಸಲು ಕೇಳುತ್ತದೆ. ಅದಕ್ಕೆ ಅನುಮತಿ ನೀಡಿ

- ಮತ್ತೊಮ್ಮೆ ಫೋನ್​ ನಂಬರ್​ ಕೇಳಲಾಗುತ್ತದೆ. ನಂಬರ್​ ಹಾಕಿದ ನಂತರ ನಿಮ್ಮ ಖಾತೆ ದೃಢೀಕರಣವಾಗುತ್ತದೆ

- ಡನ್​ ಮೇಲೆ ಕ್ಲಿಕ್ಕಿಸಿ, ನಂತರ ನೀವು ಪೇಮೆಂಟ್​ ಪೇಜ್​ಗೆ ಅಕ್ಸೆಸ್​ ಪಡೆಯಬಹುದು

ಪಾವತಿ ಹೇಗೆ?

- ಯಾರಿಗೆ ಹಣ ಕಳುಹಿಸಬೇಕೋ ಅವರ ಚಾಟ್​ ವಿಂಡೋ ತೆರೆಯಿರಿ

- ಕ್ಲಿಪ್​ ಐಕಾನ್​ ಮೇಲೆ ಕ್ಲಿಕ್ಕಿಸಿ

- ರೂಪಾಯಿ ಐಕಾನ್​ ಮೇಲೆ ಕ್ಲಿಕ್ಕಿಸಿ

- ಎಷ್ಟು ಹಣ ಕಳುಹಿಸಬೇಕು ಎನ್ನುವುದನ್ನು ನಮೂದಿಸಿ

- ನಿಮ್ಮ ಯುಪಿಐ ಪಿನ್​ ನಮೂದಿಸಿ

- ಹಣ ವರ್ಗಾವಣೆ ಸಂದೇಶದಿಂದ ಖಾತರಿ ಪಡಿಸಿಕೊಳ್ಳಿ