ಕೊತ್ತೂರು ಜಿ.ಮಂಜುನಾಥ್​ 
ನ್ಯೂಸ್

ಗೌರವದಿಂದ ನಮಸ್ಕರಿಸೋದರಲ್ಲಿ ತಪ್ಪೇನಿದೆ..?

ಕಿರುವಾರ ಎಸ್.ಸುದರ್ಶನ್

ಕೋಲಾರ: ಅನುದಾನಕ್ಕಾಗಿ ಸಿಎಂ ಕಾಲು ಹಿಡಿದುಕೋ ಅಂತ ಹೇಳಿಲ್ಲ, ಗೌರವದಿಂದ ನಮಸ್ಕರಿಸೋದರಲ್ಲಿ ತಪ್ಪೇನಿದೆ. ಅದನ್ನು ಬೇರೆ ರೀತಿ ಅರ್ಥೈಸಿಕೊಂಡಿದ್ದಾರೆ ಎಂದು ಶಾಸಕ ಕೊತ್ತೂರು ಜಿ.ಮಂಜುನಾಥ್​ ಹೇಳಿದರು.

ತಾಲೂಕಿನ ಚಂದ್ರಶೇಖರಪುರದಲ್ಲಿ ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕ್ಷೇತ್ರದ ಅನುದಾನ, ಅಭಿವೃದ್ಧಿಗಾಗಿಯೇ ಅಲ್ಲ, ಸಿಎಂ ಅವರನ್ನು ಭೇಟಿ ನೀಡಿದಾಗ ಗೌರವದಿಂದ ನಮಸ್ಕರಿಸುತ್ತೇನೆ ಎಂದರು.

ಈ ಹಿಂದೆ ಹೇಳಿಕೆ ನೀಡಿರುವ ವಿಡಿಯೋ ನಿಮ್ಮ ಬಳಿ ಇದೆ, ಅದರಲ್ಲಿ ಏನಿದೆ ಎನ್ನುವುದನ್ನು ನೋಡಿದರೆ ಅರ್ಥವಾಗುತ್ತದೆ. ಅನುದಾನ ಪಡೆಯಲು ಹೋಗಿ ಮುಖ್ಯಮಂತ್ರಿ ಕಾಲು ಹಿಡಿಯಿರಿ ಎಂದು ಯಾರಿಗೂ ನಾವು ಹೇಳಿಲ್ಲ. ಹಿರಿಯರು, ತಂದೆ ಸಮಾನರು ಎನ್ನುವ ಭಾವನೆಯಿಂದ ಹೇಳಿದ್ದು ಎಂದು ಸ್ಪಷ್ಟಪಡಿಸಿದರು.

ಸಿಎಂ ಕಾಲಿಗೆ ನಮಸ್ಕರಿಸಿದರೆ ತಪ್ಪೇನಿಲ್ಲ ಎಂದು ಹೇಳಿದ್ದೇವೆ, ಆದರೆ ಅದನ್ನೇ ಮುಳಬಾಗಲು ಶಾಸಕರು ಬೇರೆ ರೀತಿ ಅರ್ಥ ಮಾಡಿಕೊಂಡು ಮಾತನಾಡಿದ್ದಾರೆ. ಪ್ರೀತಿಯಿಂದ ಹೋಗಿ ನಮಸ್ಕರಿಸಿ ಅನುದಾನ ಕೇಳಿಕೊಂಡು ಬರುವುದರಲ್ಲಿ ತಪ್ಪೇನಿಲ್ಲ ಎಂದು ತಿಳಿಸಿದರು.

ಕೆಲಸಗಳನ್ನು ಇನ್ನಷ್ಟು ಆಗುತ್ತವೆ ಎನ್ನುವ ನಿಟ್ಟಿನಲ್ಲಿ ಹೇಳಿದ್ದನ್ನು ಬೇರೆ ರೀತಿಯಲ್ಲಿ ಅರ್ಥ ಮಾಡಿಕೊಂಡಿರುವ ಮುಳಬಾಗಲು ಶಾಸಕರು, ಅಭಿವೃದ್ಧಿಗಾಗಿ ನಾನು ಸಿಎಂ ಕಾಲು ಹಿಡಿದುಕೊಳ್ಳಬೇಕಾ ಎಂದು ಉಲ್ಟಾ ಮಾತುಗಳನ್ನು ಪದೇ ಪದೇ ಹೇಳುತ್ತಿದ್ದು, ಹೋಗಿ ಕಾಲು ಹಿಡಿದುಕೋ ಯಾರು ಬೇಡ ಎನ್ನುತ್ತಾರೆ ಎಂದು ತಿರುಗೇಟು ನೀಡಿದರು.

ಅನುದಾನಕ್ಕಾಗಿ ಕಾಲು ಹಿಡಿದುಕೊಂಡು ಕೇಳಿಕೋ, ಅನುದಾನ ಕೊಟ್ಟಿಲ್ಲವೆಂದರೆ ಕಾಲು ಎಳೆದು ಬಿಡು ಎಂದು ನಾವು ಹೇಳಿಲ್ಲವೆಂದು ಸ್ಪಷ್ಟಪಡಿಸಿದರು.

* ಚುನಾವಣೆ ವೇಳೆ ಕಾಲು ಹಿಡಿಯಲ್ವಾ

ಎಂಎಲ್ಸಿ ಅನಿಲ್​ಕುಮಾರ್​ ಮಾತನಾಡಿ, ಚುನಾವಣೆ ಸಮಯದಲ್ಲಿ ಕ್ಷೇತ್ರದ ಜನರು, ಹಿರಿಯರು ಕಾಲು ಹಿಡಿದಂತೆ ಕ್ಷೇತ್ರದ ಅಭಿವೃದ್ಧಿಗೆ ಅನುದಾನ ಪಡೆಯಲು ಕಾಲು ಹಿಡಿಯುವುದರಲ್ಲಿ ತಪ್ಪೇನಿಲ್ಲವೆನ್ನುವುದು ನಮ್ಮ ಅನಿಸಿಕೆ ಎಂದರು.