ಜೋರಾಯ್ತು ಸರಣಿ ಸಭೆಗಳ ಭರಾಟೆ

vemgal
Published on

ಮುನಿರಾಜ ಆರ್​. ಕೋಲಾರ/ವೇಮಗಲ್​

ವೇಮಗಲ್​-ಕುರುಗಲ್​ ಪಟ್ಟಣ ಪಂಚಾಯಿತಿ ಚುನಾವಣೆ ಆಗಸ್ಟ್​ 17ಕ್ಕೆ ನಿಗದಿಯಾದ ಬೆನ್ನಲ್ಲೇ ರಾಜಕೀಯ ಪಕ್ಷಗಳ ಮುಖಂಡರಿಂದ ಸರಣಿ ಸಭೆಗಳು ನಡೆಯತೊಡಗಿದ್ದ್ದು, ಎಲ್ಲೆಲ್ಲೂ ಸರಣಿ ಸಭೆಗಳ ಸದ್ದು&ಗದ್ದಲ ಬಿರುಸಾಗಿದೆ.

ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಆಡಳಿತದಲ್ಲಿದ್ದು, ಕ್ಷೇತ್ರದ ಶಾಸಕ ಕೊತ್ತೂರು ಜಿ.ಮಂಜುನಾಥ್​, ಎಂಎಲ್ಸಿ ಎಂ.ಎಲ್​.ಅನಿಲ್​ ಕುಮಾರ್​, ಮಾಜಿ ಉಪ ಸಭಾಪತಿ ವಿ.ಆರ್​.ಸುದರ್ಶನ್​ ಅವರು ಈ ಚುನಾವಣೆಯನ್ನು ಪ್ರತಿಷ್ಠೆಯಾಗಿ ತೆಗೆದುಕೊಂಡಿದ್ದು, ಪ್ರಥಮ ಚುನಾವಣೆ ಮೂಲಕ ಮೇಲುಗೈ ಸಾಧಿಸಿ, ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿದ್ದಾರೆ. ಅಂತೆಯೇ, ಜೆಡಿಎಸ್​&ಬಿಜೆಪಿ ಪಕ್ಷಗಳ ಮುಖಂಡರೂ ಶತಾಯಗತಾಯ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಪಣತೊಟ್ಟಿದ್ದಾರೆ.

ಈಗಾಗಲೇ ಕಾಂಗ್ರೆಸ್​ನಿಂದ ವಾರ್ಡ್​ವಾರು ಸಭೆ ನಡೆಸುವ ಮೂಲಕ ರಾಜ್ಯ ಸರ್ಕಾರವು ಜಾರಿಗೆ ತಂದಿರುವ ಪಂಚ ಗ್ಯಾರಂಟಿ ಯೋಜನೆ ತಿಳಿಸಿ ಮತ ಗಿಟ್ಟಿಸಿಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇನ್ನು ಕಾಂಗ್ರೆಸ್​ಗೆ ಸೆಡ್ಡು ಹೊಡೆಯಲು ಮುಂದಾಗಿರುವ ಮೈತ್ರಿ ಪಕ್ಷಗಳು ಸರ್ಕಾರದ ವೈಲ್ಯಗಳನ್ನು ಜನರ ಮುಂದಿಟ್ಟು ಗೆಲುವಿನ ಸೂತ್ರ ಉಪಯೋಗಿಸುತ್ತಿದ್ದಾರೆ. ಯಾರನ್ನು ಕಣಕ್ಕೆ ಇಳಿಸಿದರೆ ಗೆಲ್ಲಬಹುದು ಎಂಬುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಅಳೆದು ತೂಗಿ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸಲಿದ್ದಾರೆ ಎಂಬ ಕಾತರದಲ್ಲಿ ಮತದಾರರಿದ್ದಾರೆ.

* ಗೆಲುವಿಗೆ ಗ್ಯಾರಂಟಿ ಅಸ್ತ್ರ

ರಾಜ್ಯದಲ್ಲಿ ಕಾಂಗ್ರೆಸ್​ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳನ್ನು ಮುಂದಿಟ್ಟುಕೊಂಡು ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. 2 ವರ್ಷ 3 ತಿಂಗಳಲ್ಲಿ ವೇಮಗಲ್​ ಪಟ್ಟಣ ಪಂಚಾಯಿತಿ ಅಭಿವೃದ್ಧಿಗಾಗಿ ಬಿಡುಗಡೆಗೊಳಿಸಿರುವ ಅನುದಾನ, ರಸ್ತೆ, ಇಂದಿರಾ ಕ್ಯಾಂಟೀನ್​ ಹೀಗೆ ಹಲವು ಕಾರ್ಯಕ್ರಮಗಳ ಪ್ರಯೋಗ ಬಳಕೆ ಮಾಡುತ್ತಿದ್ದಾರೆ. ವಿ.ಆರ್​.ಸುದರ್ಶನ್​ ನೇತೃತ್ವದಲ್ಲಿ ಚುನಾವಣೆಗೆ ಕಾಂಗ್ರೆಸ್​ ಮುಂದಾಗಿದ್ದು, ತಳಮಟ್ಟದಿಂದ ಪಕ್ಷ ಸಂಟನೆ ಮೂಲಕ ಮತದಾರರನ್ನು ಹಿಡಿದಿಟ್ಟುಕೊಳ್ಳುವ ಕಸರತ್ತು ಆರಂಭವಾಗಿದೆ.

* ಭಿನ್ನಾಭಿಪ್ರಾಯದ ಬಿಸಿ

ವೇಮಗಲ್​ ಭಾಗದಲ್ಲಿ ಜೆಡಿಎಸ್​ ಬಲಿಷ್ಠವಾಗಿದ್ದು, ಚುನಾವಣೆಗೆ ಸ್ಪರ್ಧಿಸುವ ಅಭ್ಯರ್ಥಿಗಳು ಬಹುತೇಕ ವಾರ್ಡ್​ಗಳಲ್ಲಿದ್ದಾರೆ. ಜತೆಗೆ ಬಿಜೆಪಿ ಅಭ್ಯರ್ಥಿಗಳೂ ಇದ್ದಾರೆ. 15 ವಾರ್ಡ್​ಗಳ ಪೈಕಿ ಎರಡೂ ಪಕ್ಷಗಳಿಗೆ ಎಷ್ಟು ವಾರ್ಡ್​ಗಳು ಹಂಚಿಕೆಯಾಗುತ್ತವೆ ಎಂಬುದು ಪ್ರಶ್ನೆಯಾಗಿದೆ. ಎಲ್ಲ ವಾರ್ಡ್​ಗಳಲ್ಲೂ ಉಭಯ ಪಕ್ಷಗಳಿಂದ ಅಭ್ಯರ್ಥಿಗಳು ಇದ್ದರೂ ಒಬ್ಬರಿಗೆ ಟಿಕೆಟ್​ ಕೊಟ್ಟು, ಇನ್ನೊಬ್ಬರಿಗೆ ಕೊಡದಿದ್ದರೆ ಭಿನ್ನಾಭಿಪ್ರಾಯ ಸೃಷ್ಟಿಯಾಗುತ್ತದೆ. ತಲೆ ಬಿಸಿ ನಿವಾರಣೆಗೆ ಬಿಜೆಪಿ, ಜೆಡಿಎಸ್​ ಸಮತೋಲನ ಪ್ರಕ್ರಿಯೆಗೆ ಮುಂದಾಗಿದೆ. ಮೈತ್ರಿಯಲ್ಲಿನ ಭಿನ್ನಾಭಿಪ್ರಾಯಗಳ ಲಾಭವನ್ನು ಪಡೆದುಕೊಳ್ಳಲು ಕಾಂಗ್ರೆಸ್​ ಹವಣಿಸುತ್ತಿದೆ.

*ಮನವೊಲಿಸುವ ಯತ್ನ

ರಾಜಕೀಯ ಪಕ್ಷಗಳಿಂದ ಸರಣಿ ಸಭೆಗಳು ನಡೆದಂತೆ ಪ್ರತಿ ವಾರ್ಡ್​ನಲ್ಲೂ ಆಕಾಂಗಳ ಪಟ್ಟಿಯೂ ಹೆಚ್ಚುತ್ತಿದೆ. ಇದು ಕೈಪಾಳಯದಲ್ಲಿ ತುಸು ಹೆಚ್ಚು ಎನ್ನಬಹುದು. ಟಿಕೆಟ್​ ತಪ್ಪಿದ ಆಕಾಂ ಬೆಂಬಲವು ಯಾರಿಗೆ ಸಿಗಲಿದೆ ಎಂಬುದು ಪ್ರಶ್ನೆಯಾಗಿದೆ. ಆದ್ದರಿಂದ ಈಗಲೇ ಕೆಲವರನ್ನು ಮನವೊಲಿಸುವ ಪ್ರಯತ್ನವೂ ಶುರುವಾಗಿದೆ.

* ಜೆಡಿಎಸ್​-ಬಿಜೆಪಿಯಿಂದ ಪ್ರತ್ಯೇಕ ಸಭೆಗಳು

ಬಿಜೆಪಿ-ಜೆಡಿಎಸ್​ ಈ ವಿಚಾರದಲ್ಲಿ ಒಂದಾಗದೆ ಪ್ರತ್ಯೇಕ ಸಭೆಗಳನ್ನು ನಡೆಸುತ್ತಿದ್ದಾರೆ. ಇದು ಕಾರ್ಯಕರ್ತರಲ್ಲಿ ಅಸಮಾಧಾನಕ್ಕೆ ಕಾರಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net