2070ರ ವೇಳೆಗೆ ಭಾರತದಲ್ಲಿ ವಿಶ್ವದ 2ನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆ 
ನ್ಯೂಸ್

2070ಕ್ಕೆ ಭಾರತದಲ್ಲಿ ಮುಸ್ಲಿಂ ಜನಸಂಖ್ಯೆ ಎಷ್ಟಾಗಲಿದೆ! ಹಿಂದೂಗಳ ಪಾಲೆಷ್ಟು? | India population 2070

India population 2070: ಮುಂದಿನ ಐದು ದಶಕಗಳಲ್ಲಿ ಭಾರತವು ಹಿಂದೂ ಬಹುಸಂಖ್ಯಾತ ರಾಷ್ಟ್ರವಾಗಿಯೇ ಮುಂದುವರಿಯಲಿದ್ದರೂ, 2070ರ ವೇಳೆಗೆ ಪಾಕಿಸ್ತಾನದ ನಂತರ ವಿಶ್ವದ ಎರಡನೇ ಅತಿದೊಡ್ಡ ಮುಸ್ಲಿಂ ಜನಸಂಖ್ಯೆಯನ್ನು ಹೊಂದಿರುವ ದೇಶವಾಗಲಿದೆ ಎಂದು ಅಮೆರಿಕದ 'ಪ್ಯೂ ಸಂಶೋಧನಾ ಕೇಂದ್ರ' (Pew Research Centre) ತನ್ನ ಹೊಸ ವರದಿಯಲ್ಲಿ ತಿಳಿಸಿದೆ.

201 ದೇಶಗಳ ಏಳು ಪ್ರಮುಖ ಧಾರ್ಮಿಕ ಗುಂಪುಗಳ ಅಧ್ಯಯನ ನಡೆಸಿರುವ ಪ್ಯೂ, 2035ರ ವೇಳೆಗೆ ಜಾಗತಿಕವಾಗಿ ಕ್ರಿಶ್ಚಿಯನ್ನರನ್ನು ಹಿಂದಿಕ್ಕಿ ಮುಸ್ಲಿಮರು ವಿಶ್ವದ ಅತಿದೊಡ್ಡ ಧಾರ್ಮಿಕ ಗುಂಪಾಗಲಿದ್ದಾರೆ ಎಂದು ಅಂದಾಜಿಸಿದೆ.

ವರದಿಯ ಪ್ರಕಾರ, ಭಾರತದಲ್ಲಿ ಹಿಂದೂಗಳ ಜನಸಂಖ್ಯೆಯು 2020ರಲ್ಲಿ ಇದ್ದ 111 ಕೋಟಿಯಿಂದ 2070ರ ವೇಳೆಗೆ 129 ಕೋಟಿಗೆ ಏರಿಕೆಯಾಗಲಿದೆ (ಸುಮಾರು 17.6 ಕೋಟಿ ಹೆಚ್ಚಳ). ಆದರೆ, ದೇಶದ ಒಟ್ಟು ಜನಸಂಖ್ಯೆಯಲ್ಲಿ ಹಿಂದೂಗಳ ಪ್ರಮಾಣ ಶೇ. 79ರಿಂದ ಶೇ. 76ಕ್ಕೆ ಚೂರು ಇಳಿಕೆಯಾಗಲಿದೆ.

ಈ ಹಿಂದೆ ಪ್ರಧಾನ ಮಂತ್ರಿಗಳ ಆರ್ಥಿಕ ಸಲಹಾ ಮಂಡಳಿಯ (EAC-PM) ವರದಿಯೂ 1950 ಮತ್ತು 2015ರ ನಡುವೆ ಹಿಂದೂಗಳ ಜನಸಂಖ್ಯಾ ಪ್ರಮಾಣದಲ್ಲಿ ಶೇ. 7.8ರಷ್ಟು ಇಳಿಕೆಯಾಗಿರುವುದನ್ನು ಉಲ್ಲೇಖಿಸಿತ್ತು. ಜಾಗತಿಕ ಮಟ್ಟದಲ್ಲಿ ಪಾಕಿಸ್ತಾನ (1.03 ಕೋಟಿ) ಮತ್ತು ಅಮೆರಿಕದಲ್ಲಿ (74 ಲಕ್ಷ) ಹಿಂದೂಗಳ ಜನಸಂಖ್ಯೆ ಗಣನೀಯವಾಗಿ ಹೆಚ್ಚಾಗಲಿದೆ ಎಂದು ವರದಿ ಹೇಳಿದೆ.

ಮತ್ತೊಂದೆಡೆ, ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ 2020ರಲ್ಲಿದ್ದ 21.3 ಕೋಟಿಯಿಂದ 2070ರ ಹೊತ್ತಿಗೆ 33.4 ಕೋಟಿಗೆ ತಲುಪಲಿದ್ದು, ಒಟ್ಟು ಜನಸಂಖ್ಯೆಯಲ್ಲಿ ಅವರ ಪಾಲು ಶೇ. 15ರಿಂದ ಶೇ. 20ಕ್ಕೆ ಏರಲಿದೆ. ಇದರಿಂದ ವಿಶ್ವದ ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಿಂದ ಎರಡನೇ ಸ್ಥಾನಕ್ಕೆ ಏರಲಿದ್ದು, ಜಾಗತಿಕ ಮುಸ್ಲಿಂ ಜನಸಂಖ್ಯೆಯ ಶೇ. 9.2ರಷ್ಟು ಪಾಲನ್ನು ಹೊಂದಲಿದೆ. 2070ರ ವೇಳೆಗೆ ಇಂಡೋನೇಷ್ಯಾವನ್ನು ಹಿಂದಿಕ್ಕಿ ಪಾಕಿಸ್ತಾನ (46.1 ಕೋಟಿ) ಮೊದಲ ಸ್ಥಾನಕ್ಕೇರಲಿದ್ದು, ನೈಜೀರಿಯಾ ಮೂರನೇ ಸ್ಥಾನದಲ್ಲಿರಲಿದೆ.

ಈ ಜನಸಂಖ್ಯಾ ಬದಲಾವಣೆಗೆ ಯುವ ಜನಸಂಖ್ಯೆ ಮತ್ತು ಫಲವತ್ತತೆ ದರವೇ (Fertility rate) ಮುಖ್ಯ ಕಾರಣ ಎಂದು ಪ್ಯೂ ತಜ್ಞರು ವಿಶ್ಲೇಷಿಸಿದ್ದಾರೆ. 2020ರಲ್ಲಿ ಭಾರತೀಯ ಮುಸ್ಲಿಮರ ಸರಾಸರಿ ವಯಸ್ಸು 24 ಆಗಿದ್ದರೆ, ಹಿಂದೂಗಳ ಸರಾಸರಿ ವಯಸ್ಸು 29 ಆಗಿತ್ತು. ಅಲ್ಲದೆ, 2025-2030ರ ಅವಧಿಯಲ್ಲಿ ಹಿಂದೂ ಮಹಿಳೆಯರ ಸರಾಸರಿ ಮಕ್ಕಳ ಸಂಖ್ಯೆ 1.8ಕ್ಕೆ ಇಳಿಯಲಿದ್ದರೆ, ಮುಸ್ಲಿಂ ಮಹಿಳೆಯರಲ್ಲಿ ಈ ಪ್ರಮಾಣ 2.3ರಷ್ಟು ಇರಲಿದೆ ಎಂದು ಅಂದಾಜಿಸಲಾಗಿದೆ.

ಇದನ್ನೂ ಓದಿ: 'ತ್ರಿಮೂರ್ತಿ'ಗಳ ಭೇಟಿಗೆ ಸಜ್ಜಾದ 38 ಹೆಕ್ಟೇರ್ ಹಸಿರು ಸಾಮ್ರಾಜ್ಯ: 'ಕಿಲಿನ್ ವಿಲ್ಲಾ' ಒಳಗೆ ಏನೆಲ್ಲಾ ಇದೆ ಗೊತ್ತಾ? | Kylin Villa

ಆದರೆ, ಈ ಅಂದಾಜುಗಳನ್ನು 2020ರ ಜನಸಂಖ್ಯಾ ಅಂಕಿಅಂಶಗಳನ್ನು ಆಧರಿಸಿ ಮಾಡಲಾಗಿದೆ. ಮುಂದಿನ 50 ವರ್ಷಗಳಲ್ಲಿ ಆರ್ಥಿಕ ಪರಿಸ್ಥಿತಿ, ಆರೋಗ್ಯ, ವಲಸೆ, ಸರ್ಕಾರದ ನೀತಿಗಳು ಮತ್ತು ಸಾಮಾಜಿಕ ಬದಲಾವಣೆಗಳು ಜನಸಂಖ್ಯಾ ಬೆಳವಣಿಗೆಯ ಮೇಲೆ ಪರಿಣಾಮ ಬೀರಬಹುದು. ಒಂದು ವೇಳೆ 2020ರ ಇದೇ ಜನಸಂಖ್ಯಾ ಪ್ರವೃತ್ತಿ ಮುಂದುವರಿದರೆ ಮಾತ್ರ ಈ ಅಂದಾಜು ನಿಜವಾಗಬಹುದು ಎಂದು ವರದಿ ಸ್ಪಷ್ಟಪಡಿಸಿದೆ.