ನ್ಯೂಸ್

ಹಣದುಬ್ಬರ ಏನು ಪರಿಹಾರ?: ದಕ್ಷಿಣದಲ್ಲಿ ರಾಜ್ಯಕ್ಕೆ 3ನೇ ಸ್ಥಾನ, ಚುನಾವಣಾ ವರ್ಷದಲ್ಲಿ ಕಮಲ ಕಂಪನ

Webdesk - Ravikanth

| ರುದ್ರಣ್ಣ ಹರ್ತಿಕೋಟೆ ಬೆಂಗಳೂರು

ಇಡೀ ದೇಶವನ್ನು ಕಾಡುತ್ತಿರುವ ಹಣದುಬ್ಬರ ರಾಜ್ಯಕ್ಕೆ ತುಸು ಹೆಚ್ಚೇ ಆಘಾತ ನೀಡಿದೆ. ದಕ್ಷಿಣ ಭಾರತದ ರಾಜ್ಯಗಳ ಪೈಕಿ ಕರ್ನಾಟಕ ಹಣದುಬ್ಬರದಲ್ಲಿ ಮೂರನೇ ಸ್ಥಾನದಲ್ಲಿರುವುದರಿಂದ ಚುನಾವಣೆ ಎದುರಾಗಲಿರುವ ಈ ವರ್ಷದಲ್ಲಿ ಅದನ್ನು ತಗ್ಗಿಸಿ ಜನರ ವಿಶ್ವಾಸ ಗಳಿಸುವ ದೊಡ್ಡ ಸವಾಲು ಸರ್ಕಾರಕ್ಕೆ ಎದುರಾಗಿದೆ.

ಕೇಂದ್ರದ ಅಂಕಿಅಂಶಗಳ ಪ್ರಕಾರ ಗ್ರಾಮೀಣ ಹಣದುಬ್ಬರ ಶೇ.5.96, ನಗರ ಹಣದುಬ್ಬರ ಶೇ.6.72 ಇದೆ. ಹಿಂದೆ ಯಾವಾಗಲೂ ಇಷ್ಟೊಂದು ಪ್ರಮಾಣದಲ್ಲಿ ಹಣದುಬ್ಬರ ಹೆಚ್ಚಳವಾಗಿರಲಿಲ್ಲ. ಹಣದುಬ್ಬರ ಶೇ.3 ಮೀರಬಾರದೆಂಬುದು ಅರ್ಥಶಾಸ್ತ್ರಜ್ಞರ ಅನಿಸಿಕೆ. ಅನುಭೋಗಿಗಳ ಬೆಲೆ ಸೂಚ್ಯಂಕದ ಮೇಲೆ ಹಣದುಬ್ಬರ ಅಳೆಯಲಾಗುತ್ತದೆ. ಹಣದುಬ್ಬರ ತಗ್ಗಿಸಲು ರಾಜ್ಯ ಸರ್ಕಾರ ಕೇಂದ್ರದ ಮೇಲೆ ಅವಲಂಬಿತವಾಗದೆ ತನ್ನದೇ ಆದ ಕ್ರಮಕೈಗೊಳ್ಳಬೇಕಿದೆ.

ರಾಜ್ಯದಲ್ಲಿ ಈ ವರ್ಷ ಬಿಬಿಎಂಪಿ, ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಹಾಗೂ ಮುಂದಿನ ವರ್ಷ ವಿಧಾನಸಭಾ ಚುನಾವಣೆ ಎದುರಾಗುವುದರಿಂದ ಹಣದುಬ್ಬರ ನಿಯಂತ್ರಿಸದಿದ್ದಲ್ಲಿ ಕಷ್ಟದ ಪರಿಸ್ಥಿತಿ ಎದುರಿಸಬೇಕಾದ ಆತಂಕವೂ ಇದೆ. ಕರೊನಾ ಸಂಕಷ್ಟದಿಂದ ಹೊರಬರುತ್ತಿರುವ ಸಂದರ್ಭದಲ್ಲಿಯೇ ಬೆಲೆ ಹೆಚ್ಚಳವಾಗಿರುವುದರಿಂದ ಜನ ಸಾಮಾನ್ಯರು, ದುಡಿಯುವ ವರ್ಗದ ಜನ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೆಟ್ರೋಲಿಯಂ ಉತ್ಪನ್ನಗಳ ಬೆಲೆ ಹೆಚ್ಚಳ ಪ್ರಮುಖ ಕಾರಣವಾಗಿದ್ದರೂ ರಾಜ್ಯ ಸರ್ಕಾರ ಇತಿಮಿತಿಯಲ್ಲಿ ಕೆಲ ಕ್ರಮ ಕೈಗೊಳ್ಳುವ ಮೂಲಕ ಜನರ ನೆರವಿಗೆ ಬರಬಹುದಾಗಿದೆ.

ಅಲ್ಪಾವಧಿ, ದೀರ್ಘಾವಧಿ ಕ್ರಮ
  • ಸಗಟು ಮಾರಾಟ ಸೂಚ್ಯಂಕ ಹೆಚ್ಚಳವಾಗಿರುವುದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿ ಹಣದುಬ್ಬರಕ್ಕೆ ಕಾರಣವಾಗಿದೆ. ಆದ್ದರಿಂದ ಸರ್ಕಾರ ಪಿಡಿಎಸ್​ನಲ್ಲಿ ಅಗತ್ಯ ವಸ್ತುಗಳನ್ನು ಸರಬರಾಜು ಮಾಡುವ ಮೂಲಕ ಬೆಲೆ ನಿಯಂತ್ರಣ ಮಾಡಬೇಕಾಗಿದೆ. ಅದಕ್ಕಾಗಿ ವಸ್ತುಗಳನ್ನು ಆಮದು ಮಾಡಿಕೊಳ್ಳಬೇಕು. ಇದು ಅಲ್ಪಾವಧಿ ಕ್ರಮವಾಗುತ್ತದೆ.
  • ದೀರ್ಘಾವಧಿ ಕ್ರಮಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ರಾಜ್ಯದ ತೆರಿಗೆಯನ್ನು ಕಡಿಮೆ ಮಾಡುವುದು; ರಾಜ್ಯದಿಂದ ಅಗತ್ಯ ವಸ್ತುಗಳ ರಫ್ತು ತಡೆಯುವುದು ಸೇರಿವೆ.
ಜನರ ದಿನಬಳಕೆಯ ಅಗತ್ಯ ವಸ್ತು ಅಕ್ರಮ ದಾಸ್ತಾನಾಗಿ ಕೃತಕ ಬೆಲೆ ಏರಿಕೆ ಆಗದಂತೆ ಸರ್ಕಾರ ಎಚ್ಚರವಹಿಸಬೇಕು. ಅಗತ್ಯ ವಸ್ತುಗಳನ್ನು ಅಮದು ಮಾಡಿಕೊಂಡು ಪಿಡಿಎಸ್ ಮೂಲಕ ಜನರಿಗೆ ವಿತರಣೆ ಮಾಡಬೇಕು. ಅಲ್ಪಾವಧಿ, ದೀರ್ಘಾವಧಿ ಕ್ರಮ ಕೈಗೊಳ್ಳಬೇಕು. | ಪ್ರೊ. ಕೃಷ್ಣರಾಜ್ ಪ್ರಾಧ್ಯಾಪಕ, ಐಸೆಕ್ ಗ್ರಾಮೀಣ ಹಣದುಬ್ಬರ ಹೆಚ್ಚಳಕ್ಕೆ ಬಹುಮುಖ್ಯ ಕಾರಣ ಅಗತ್ಯ ವಸ್ತುಗಳ ಬೆಲೆ ಏರಿಕೆ. ಜನರಲ್ಲಿ ಹಣದ ಹರಿವು ಹೆಚ್ಚಾದರೆ ಹಣದುಬ್ಬರ ನಿಯಂತ್ರಣಕ್ಕೆ ಬರುತ್ತದೆ. | ಡಾ. ಅಬ್ದುಲ್ ಅಜೀಜ್ ಹಿರಿಯ ಅರ್ಥಶಾಸ್ತ್ರಜ್ಞ ರೈತರನ್ನು ಸದೃಢಗೊಳಿಸಲು ಮೊದಲು ಸರ್ಕಾರ ಗಮನ ಹರಿಸಬೇಕಾಗಿದೆ. ತಮಿಳುಮಾಡು ಮತ್ತು ಆಂಧ್ರಪ್ರದೇಶದಲ್ಲಿ ಅನೇಕ ಕ್ರಮಗಳ ಮೂಲಕ ಬೆಲೆ ಕಡಿಮೆ ಮಾಡಲಾಗಿದೆ. ರಾಜ್ಯದಲ್ಲಿ ಖಾದ್ಯ ತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕಾಗಿದೆ. | ಡಾ. ಆರ್.ಎಚ್. ಪವಿತ್ರಾ ಅರ್ಥಶಾಸ್ತ್ರ ಸಹಾಯಕ ಪ್ರಾಧ್ಯಾಪಕರು, ಮುಕ್ತ ವಿವಿ, ಮೈಸೂರು ಕೇಂದ್ರ ಇಂಧನ ತೆರಿಗೆ ತಗ್ಗಿಸಿರುವುದರಿಂದ ಅನುಕೂಲ ಆಗುತ್ತಿದೆ. ರಾಜ್ಯ ಸರ್ಕಾವೂ ಕಡಿಮೆ ಮಾಡಿದರೆ ಹಣದುಬ್ಬರ ನಿಯಂತ್ರಣಕ್ಕೆ ಸಹಕಾರಿಯಾಗುತ್ತದೆ. | ಬಿ.ಟಿ.ಮನೋಹರ್, ತೆರಿಗೆ ಸಲಹೆಗಾರರು
ಹಳದಿ ಕ್ರಾಂತಿ ತುರ್ತು ಅಗತ್ಯ: ಕೃಷಿಗೆ ಸಂಬಂಧಿಸಿದಂತೆ ಅನೇಕ ಕ್ರಾಂತಿಗಳಾಗಿವೆ. ಈಗ ತುರ್ತಾಗಿ ಆಗಬೇಕಾಗಿರುವುದು ಹಳದಿ ಕ್ರಾಂತಿ. ಎಣ್ಣೆಕಾಳು ಉತ್ಪಾದನೆ ಮಾಡಿ ಅದನ್ನು ಖಾದ್ಯತೈಲವನ್ನಾಗಿ ಮೌಲ್ಯವರ್ಧನೆ ಮಾಡುವ ಕಡೆ ಸರ್ಕಾರ ತುರ್ತು ಗಮನ ಹರಿಸಬೇಕಾಗಿದೆ. ಅದಕ್ಕೆ ಬೇಕಾದ ಸಬ್ಸಿಡಿ ಹೆಚ್ಚಿಸಬೇಕು ಎಂದು ಅರ್ಥಶಾಸ್ತ್ರಜ್ಞರು ಹೇಳುತ್ತಾರೆ.

ಸಾಲದ ಮೇಲಿನ ಬಡ್ಡಿದರ ಸವಾಲು: ಆರ್​ಬಿಐ ರೆಪೋ ದರ ಹೆಚ್ಚಿಸಿರುವುದರಿಂದ ಸಾಲದ ಮೇಲಿನ ಕಂತಿನ ಪಾವತಿ, ಬಡ್ಡಿ ದರ ಹೆಚ್ಚಾಗುತ್ತದೆ. ಇದು ಇನ್ನಷ್ಟು ಹಣದುಬ್ಬರಕ್ಕೆ ಕಾರಣವಾಗುತ್ತದೆ. ಆದ್ದರಿಂದ ಆರ್ಥಿಕ ಚಟುವಟಿಕೆ ಹೆಚ್ಚಿಸುವ ದೊಡ್ಡ ಜವಾಬ್ದಾರಿ ಸರ್ಕಾರದ ಮೇಲಿದೆ. ಜಿಎಸ್​ಟಿಯಲ್ಲಿ ತೆರಿಗೆ ದರ ಬದಲಾವಣೆ ಸುಲಭವಿಲ್ಲ. ಕೆಲ ಬದಲಾವಣೆಗೆ ಕೇಂದ್ರದ ಮೇಲೆ ಒತ್ತಡ ತರಬಹುದಷ್ಟೇ.

ತಮಿಳುನಾಡು ಮಾದರಿ: ತಮಿಳುನಾಡು, ಕೇರಳದಲ್ಲಿ ಸ್ಥಳೀಯ ಸಂಸ್ಥೆಗಳ ತೆರಿಗೆ ವಸೂಲಿ, ಸಾರ್ವಜನಿಕ ವಿತರಣಾ ವ್ಯವಸ್ಥೆ ಬಲ ಪಡಿಸಿರುವುದು, ಮಹಿಳೆಯರಿಗೆ ಉಚಿತ ಬಸ್​ಪಾಸ್ ಸೇರಿದಂತೆ ಕೆಲ ಕ್ರಮ ಕೈಗೊಳ್ಳಲಾಗಿದೆ. ಇದರಿಂದ ಹಣದುಬ್ಬರ ಕಡಿಮೆ ಇದೆ. ತಮಿಳುನಾಡಿನಲ್ಲಿ ಆಸ್ತಿ ತೆರಿಗೆ ಸಂಗ್ರಹ ಶೇ.25 ರಿಂದ 50 ಹೆಚ್ಚಿದೆ.

ತಜ್ಞರ ಸಲಹೆಗಳೇನು?

  • ಅಗತ್ಯ ವಸ್ತುಗಳು ಅಕ್ರಮ ದಾಸ್ತಾನು ಆಗದಂತೆ ಎಚ್ಚರವಹಿಸಬೇಕು
  • ಕೃತಕ ಬೆಲೆ ಏರಿಕೆ ಆಗದಂತೆ ಕ್ರಮಕೈಗೊಳ್ಳಬೇಕು
  • ವಿದ್ಯುತ್ ದರ ಹೆಚ್ಚಳ ಆದೇಶ ವಾಪಸ್ ಪಡೆಯಬೇಕು
  • ಶಾಲಾ ಶುಲ್ಕ ಹೆಚ್ಚಳವಾಗದಂತೆ ಎಚ್ಚರವಹಿಸಬೇಕು
  • ಸರ್ಕಾರಿ ಆಸ್ಪತ್ರೆಗಳ ವ್ಯವಸ್ಥೆ ಬಲಪಡಿಸಬೇಕು
  • ಮನೆ ಬಾಡಿಗೆ ನಿಯಂತ್ರಣ ಕಾನೂನು ಮರುಜಾರಿಯಾಗಬೇಕು
  • ಅಗತ್ಯ ವಸ್ತುಗಳೆಲ್ಲವೂ ಪಡಿತರ ವ್ಯವಸ್ಥೆಯಲ್ಲಿ ವಿತರಣೆಯಾಗಬೇಕು
  • ಉದ್ಯೋಗದ ಅವಕಾಶಗಳನ್ನು ಹೆಚ್ಚು ಮಾಡಬೇಕು
  • ಸಬ್ಸಿಡಿಗಳನ್ನು ಹೆಚ್ಚು ನೀಡಬೇಕು
  • ಸಾಮಾಜಿಕ ಭದ್ರತೆಯನ್ನು ಜಾಸ್ತಿ ಮಾಡಬೇಕು
  • ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ಕಡಿತಕ್ಕೆ ಕೇಂದ್ರದ ಮೇಲೆ ಒತ್ತಡ ಹಾಕಬೇಕು
  • ಕೇಂದ್ರದಿಂದ ಹೆಚ್ಚಿನ ಅನುದಾನಗಳನ್ನು ಪಡೆಯಲು ಕ್ರಮಕೈಗೊಳ್ಳಬೇಕು
  • ಕೇಂದ್ರ ಕೆಲವು ಸೆಸ್​ಗಳನ್ನು ಕಡಿಮೆ ಮಾಡಬೇಕು
  • ಖಾದ್ಯತೈಲ ಉತ್ಪಾದನೆಯಲ್ಲಿ ಸ್ವಾವಲಂಬಿಯಾಗಬೇಕು
  • ಕೃಷಿ ಉತ್ಪನ್ನಗಳ ಆಮದು ತಗ್ಗಿಸಿ ಸ್ಥಳೀಯ ಉತ್ಪಾದನೆಗೆ ಆದ್ಯತೆ ನೀಡಬೇಕು
  • ನಗದು ಮೀಸಲು ಅನುಪಾತ ಹೆಚ್ಚಳ ಮಾಡಬೇಕು