ನ್ಯೂಸ್

ಬೆಳಗಾವಿಯಲ್ಲಿ ಸತೀಶ್​ ಜಾರಕಿಹೊಳಿಯನ್ನು ಸೋಲಿಸಿದ ರಮೇಶ್ ಜಾರಕಿಹೊಳಿ!

ಬೆಳಗಾವಿ: ತೀವ್ರ ಕುತೂಹಲ ಕೆರಳಿಸಿದ್ದ ಬೆಳಗಾವಿ ಲೋಕಸಭಾ ಉಪಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಅಂತಿಮವಾಗಿ ಬಿಜೆಪಿ ಅಭ್ಯರ್ಥಿ ದಿವಂಗತ ಸುರೇಶ್ ಅಂಗಡಿ ಅವರ ಪತ್ನಿ ಮಂಗಳಾ ಅಂಗಡಿ ಅವರಿಗೆ ರೋಚಕ ಗೆಲುವು ದೊರೆತಿದೆ.

ಎಲ್ಲ ಸುತ್ತಿನ ಮತ ಎಣಿಕೆಯಲ್ಲೂ ಮಂಗಳಾ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಸತೀಶ್ ಜಾರಕಿಗೊಳಿ ಅವರಿಗೆ ತೀವ್ರ ಪೈಪೋಟಿ ಏರ್ಪಟ್ಟಿತ್ತು. ಆದರೆ ಅಂತಿಮವಾಗಿ 3600 ಮತಗಳ ಅಂತರದಿಂದ ಮಂಗಳಾ ಅವರು ಗೆಲುವಿನ ನಗೆ ಬೀರಿದರು. ಆದರೆ, ಫಲಿತಾಂಶದ ವಿಶ್ಲೇಷಣೆ ನೋಡಿದರೆ, ಸತೀಶ್ ಜಾರಕಿಹೊಳಿ ಅವರ ಸೋಲಿಗೆ ಅವರ ಸಹೋದರ (ಅಣ್ಣ) ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರೇ ಕಾರಣ ಎಂಬುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ.

ಹೌದು, ರಮೇಶ್ ಜಾರಕಿಹೊಳಿ ಪ್ರತಿನಿಧಿಸುವ ಗೋಕಾಕ್​ ಮತಕ್ಷೇತ್ರದಲ್ಲಿ ಸತೀಶ್ ಅವರಿಗೆ ತೀವ್ರ ಹಿನ್ನಡೆಯುಂಟಾಗಿದ್ದೇ ಅವರ ಸೋಲಿಗೆ ಕಾರಣವಾಗಿದೆ. ಈ ಕ್ಷೇತ್ರದಲ್ಲಿ ಮಂಗಳಾ ಅವರಿಗೆ ಅತಿ ಹೆಚ್ಚು ಲೀಡ್ ಬಂದಿದೆ. 26826 ಮತಗಳು ಲೀಡ್​ ಬಂದಿದ್ದರಿಂದ ಮಂಗಳಾ ಅವರು ಗೆಲುವಿನ ದಡ ಸೇರುವಂತಾಯಿತು. ಒಂದು ವೇಳೆ ಗೋಕಾಕ್​ನಲ್ಲಿ ಶೇ 10 ರಷ್ಟು ಲೀಡ್ ಮತಗಳು ಸತೀಶ್ ಅವರ ಪರ ವಾಲಿದ್ದರೇ ಸತೀಶ್ ಗೆಲ್ಲುತ್ತಿದ್ದರು ಎಂಬ ವಿಶ್ಲೇಷಣೆಗಳು ಕೇಳಿ ಬರುತ್ತಿವೆ.

ಕೋವಿಡ್ ಪಾಸಿಟಿವ್ ಆಗಿ ಹೋಮ್ ಐಸೋಲೇಷನ್​​ನಲ್ಲಿರುವ ರಮೇಶ್ ಜಾರಕಿಹೊಳಿ ಅವರು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಳ್ಳದಿದ್ದರೂ ತಮ್ಮ ಕ್ಷೇತ್ರದಿಂದ ಬಿಜೆಪಿಗೆ ಹೆಚ್ಚಿನ ಮತಗಳು ಹೋಗುವಂತೆ ಮಾಡಿರುವುದು ರಮೇಶ್ ಅವರ ಹೆಚ್ಚುಗಾರಿಕೆಯೇ ಸರಿ.