ನ್ಯೂಸ್

1964ರಲ್ಲಿ ಅಂಬಾಸಿಡರ್​ ಕಾರಿನ ಬೆಲೆ ಇಷ್ಟು ಕಡಿಮೆನಾ? ಹಳೆಯ ಬಿಲ್​ ನೋಡಿದ್ರೆ ಹುಬ್ಬೇರೋದು ಖಚಿತ!

ನವದೆಹಲಿ: ಅಂಬಾಸಿಡರ್​ ಕಾರಿನ ಬಗ್ಗೆ ಭಾರತೀಯರಿಗೆ ವಿಶೇಷವಾಗಿ ಪರಿಚಯ ಮಾಡುವ ಅಗತ್ಯವಿಲ್ಲ. ಹಿಂದಿನ ಕಾಲದ ಮಾಸ್ಟರ್​ ಪೀಸ್​ ಇದು. ಈ ಕಾರುಗಳನ್ನು ಹೆಚ್ಚಾಗಿ ರಾಜಕಾರಣಿಗಳು ಬಳಸುತ್ತಿದ್ದರು. ಸಿನಿಮಾಗಳಲ್ಲಂತೂ ವ್ಯಾಪಕವಾಗಿ ತೋರಿಸಲಾಗುತ್ತಿತ್ತು. ಆಗಿನ ಕಾಲದಲ್ಲಿ ರಾಜಕಾರಣಿಗಳಿಂದ ಹಿಡಿದು ಆಡಳಿತದಲ್ಲಿ ಇರುವವರೆಲ್ಲ ಈ ಕಾರನ್ನು ಉಪಯೋಗಿಸುತ್ತಿದ್ದರು. ಹಾಗಾಗಿಯೇ ಈ ಕಾರನ್ನು ಆ ಕಾಲದಲ್ಲಿ "ಭಾರತೀಯ ರಸ್ತೆಗಳ ರಾಜ" ಎಂದು ಕರೆಯಲಾಗುತ್ತಿತ್ತು.

ಈಗಲೂ ಅನೇಕರು ಈ ಕಾರನ್ನು ಬಳಸುತ್ತಿದ್ದಾರೆ. ಹಿಂದೂಸ್ತಾನ್ ಮೋಟಾರ್ಸ್ 1957ರಲ್ಲಿ ಅಂಬಾಸಿಡರ್ ಕಾರನ್ನು ಬಿಡುಗಡೆ ಮಾಡಿತು. ಇದು ಬ್ರಿಟಿಷ್ ಕಾರನ್ನು ಆಧರಿಸಿದೆ. ಈ ಕಾರು 80ರ ದಶಕದವರೆಗೂ ಜನರ ಹೃದಯವನ್ನು ಆಳಿತು. ಈ ಕಾರುಗಳಲ್ಲಿ ಹೆಚ್ಚಿನವು ಬಿಳಿ ಮತ್ತು ಕಪ್ಪು ಬಣ್ಣವನ್ನು ಹೊಂದಿದ್ದವು. ಮಾರುಕಟ್ಟೆಯಲ್ಲಿ ಎಷ್ಟೇ ಬಗೆಯ ಕಾರುಗಳು ಲಭ್ಯವಿದ್ದರೂ ಅಂಬಾಸಿಡರ್ ಕಾರಿಗೆ ಬೇರೇನೆ ಕ್ರೇಜ್ ಇತ್ತು. ಆದರೆ ಮಾರುತಿ ಸುಜುಕಿ ಬಂದ ನಂತರ ಅದರ ಜನಪ್ರಿಯತೆ ಕುಸಿಯಿತು. ಆದರೆ ಈ ಕಾರು ಪ್ರಯಾಣ ಇಂದಿಗೂ ಅನೇಕ ಜನರಿಗೆ ಉತ್ಸಾಹವಾಗಿದೆ.

ಸದ್ಯದ ಟ್ರೆಂಡ್‌ಗೆ ಅನುಗುಣವಾಗಿ ಈ ಕಾರನ್ನು ಅಪ್‌ಡೇಟ್ ಮಾಡದ ಕಾರಣ ಮಾರಾಟದಲ್ಲಿ ಭಾರಿ ಕುಸಿತವಾಯಿತು. ಹಿಂದೂಸ್ತಾನ್ ಮೋಟಾರ್ಸ್ 2014ರಲ್ಲಿ ಈ ಕಾರಿನ ಉತ್ಪಾದನೆಯನ್ನು ನಿಲ್ಲಿಸಿತು. ಆದರೂ ಅಂಬಾಸಿಡರ್ ಕಾರನ್ನು ಇಷ್ಟಪಡುವವರು ಇನ್ನೂ ತಮ್ಮ ಹಳೆಯ ಕಾರುಗಳನ್ನು ಆಧುನಿಕವಾಗಿ ಮಾರ್ಪಡಿಸುತ್ತಲೇ ಇದಾರೆ. ಈ ಕಾರುಗಳ ಉತ್ಪಾದನೆ ನಿಂತುಹೋದ ಸಮಯದಲ್ಲಿ ಇದರ ಬೆಲೆ ನಾಲ್ಕು ಲಕ್ಷದಿಂದ ಆರಂಭವಾಗುತ್ತಿತ್ತು. ಇತ್ತೀಚೆಗೆ 1964ರ ಅಂಬಾಸಿಡರ್ ಕಾರಿನ ಇನ್‌ವಾಯ್ಸ್ ಅಥವಾ ಬಿಲ್​ ಒಂದು ವೈರಲ್ ಆಗಿದೆ. 1964ರಲ್ಲಿ ಒಂದು ಅಂಬಾಸಿಡರ್​ ಕಾರಿನ ಬೆಲೆ 16,495 ರೂಪಾಯಿ. ಇದನ್ನು ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ, ಇದು ನಿಜ.

ಹಳೆಯ ಬಿಲ್​ ಪ್ರಕಾರ 1964ರಲ್ಲಿ ಮದ್ರಾಸ್‌ನಲ್ಲಿರುವ ಗುಪ್ತಾ ಅವರ ಸ್ಟೇಟ್ಸ್ ಹೋಟೆಲ್‌ಗೆ ಈ ಕಾರನ್ನು ಡೆಲಿವರಿ ಮಾಡಲಾಗಿದೆ. ಈ ಕಾರನ್ನು ಪಶ್ಚಿಮ ಬಂಗಾಳದಿಂದ ರೈಲಿನ ಮೂಲಕ ಮದ್ರಾಸ್‌ಗೆ ತಲುಪಿಸಲಾಗಿತ್ತು. ಕಾರಿನ ಮೂಲ ಬೆಲೆ 13,787 ರೂಪಾಯಿ, ಸರ್ಚಾರ್ಜ್ 255 ರೂಪಾಯಿಗಳು, ಸಾರಿಗೆ ಶುಲ್ಕಗಳು 897 ರೂಪಾಯಿಗಳು, ಮದ್ರಾಸ್ ಜನರಲ್ ಸೇಲ್ಸ್ ಟ್ಯಾಕ್ಸ್ 1,493 ರೂಪಾಯಿಗಳು, ನೋಂದಣಿ 54 ರೂಪಾಯಿಗಳು ಮತ್ತು ನಂಬರ್ ಪ್ಲೇಟ್ 7 ರೂಪಾಯಿಗಳು. ಒಟ್ಟು 16,495 ರೂಪಾಯಿ.

ಇದೀಗ ವೈರಲ್ ಆಗಿರುವ ಈ ಇನ್​ವಾಯ್ಸ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ. ಈ ಕಾರಿನ ಜೊತೆಗಿನ ತಮ್ಮ ಒಡನಾಟವನ್ನು ನೆನೆದು ತಮಾಷೆಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ಈ ಪೋಸ್ಟ್​ಗೆ ನೆಟ್ಟಿಗರೊಬ್ಬರು ಪ್ರತಿಕ್ರಿಯಿಸಿದ್ದು, 1972ರಲ್ಲಿ ನನ್ನ ತಂದೆ ಅಂಬಾಸಿಡರ್ ಕಾರನ್ನು 18,000 ರೂ.ಗೆ ಖರೀದಿಸಿದರು ಎಂದು ಬರೆದಿದ್ದಾರೆ. (ಏಜೆನ್ಸೀಸ್​)