ನ್ಯೂಸ್

ಏನಿದು E20 ಪೆಟ್ರೋಲ್? ಸುಪ್ರೀಂಕೋರ್ಟ್​ಗೆ ಪಿಐಎಲ್​ ಸಲ್ಲಿಕೆ! ವಾಹನ ಸವಾರರು ತಿಳಿಯಬೇಕಾದ ವಿಷಯವಿದು | E20 Petrol

E20 Petrol: ನೀವು ಈಗೇನಾದರೂ ಹಳೆಯ ಮಾಡೆಲ್ ಕಾರು ಅಥವಾ ಬೈಕ್ ಖರೀದಿಸಲು ಯೋಚಿಸುತ್ತಿದ್ದರೆ ಕೊಂಚ ಜಾಗರೂಕರಾಗಿರಿ! ಅಷ್ಟಕ್ಕೂ ತಾವು ಖರೀದಿಸುತ್ತಿರುವ ವಾಹನ ಯಾವ ವರ್ಷದಲ್ಲಿ ತಯಾರಿಸಲಾಗಿದೆ ಎಂಬುದನ್ನು ಮೊದಲು ಪರಿಶೀಲಿಸಿಕೊಳ್ಳಿ. ಕಾರಣ, ಈಗ ಪೆಟ್ರೋಲ್ ಅನ್ನು ಎಥೆನಾಲ್​ ಜತೆಗೆ ಬೆರೆಸಿ ಮಾರಾಟ ಮಾಡಲಾಗುತ್ತಿದೆ. ಕೇಂದ್ರ ಸರ್ಕಾರವು ಶೇ.20ರಷ್ಟು ಎಥೆನಾಲ್ ಬೆರೆಸಿದ ಪೆಟ್ರೋಲ್ ಮಾರಾಟ ಮಾಡುವುದನ್ನು ಕಡ್ಡಾಯಗೊಳಿಸಿದೆ. ಸದ್ಯ ಇದೇ ಈಗ ಒಂದು ಸಮಸ್ಯೆಯಾಗಿ ಪರಿಣಮಿಸಿದೆ.

ಗ್ರಾಹಕರಿಗೆ ತಿಳಿಸದೆ ಅಥವಾ ಯಾವುದೇ ಪರ್ಯಾಯ ಮಾರ್ಗ ನೀಡದೆ ದೇಶಾದ್ಯಂತ ಶೇ.20ರಷ್ಟು ಎಥೆನಾಲ್ ಮಿಶ್ರಿತ ಪೆಟ್ರೋಲ್ (EBP-20) ಕಡ್ಡಾಯ ಪೂರೈಕೆಯನ್ನು ಪ್ರಶ್ನಿಸಿ ಭಾರತದ ಸುಪ್ರೀಂ ಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (PIL) ಸಲ್ಲಿಸಲಾಗಿದೆ. ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ, ಆ ವಾಹನಗಳ ಇಂಜಿನ್‌ಗಳು ಖಂಡಿತವಾಗಿಯೂ ಹಾನಿಗೊಳಗಾಗುತ್ತವೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ.

ಹೀಗಾಗಿಯೇ ಹಳೆಯ ವಾಹನಗಳನ್ನು ಖರೀದಿಸುವಾಗ ಒಮ್ಮೆ ಅಥವಾ ಎರಡು ಬಾರಿ ಪರಿಶೀಲಿಸುವುದು ಉತ್ತಮ ಎನ್ನುವಂತಾಗಿದೆ. 2023ರ ನಂತರ ತಯಾರಿಸಿದ ವಾಹನಗಳಲ್ಲಿ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಈ ಎಲ್ಲಾ ವಾಹನಗಳು ಎಥೆನಾಲ್ ಬೆರೆಸಿದ ಪೆಟ್ರೋಲ್‌ನಿಂದ ಚಲಿಸುವ ಉತ್ತಮ ಇಂಜಿನ್‌ಗಳನ್ನೇ ಹೊಂದಿವೆ. ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸುವುದರಿಂದ ಇಂಜಿನ್‌ಗಳ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ.

2023ಕ್ಕೂ ಹಿಂದಿನ ವಾಹನಗಳಿಗೆ ಎಫೆಕ್ಟ್​!

ಅಸಲಿ ಸಮಸ್ಯೆಯೆಂದರೆ 2023ರ ಮೊದಲು ತಯಾರಿಸಿದ ವಾಹನಗಳಿಗೆ ಈ ಸೌಲಭ್ಯ ಲಭ್ಯವಿಲ್ಲ. ಇದರಿಂದಾಗಿ, ಎಥೆನಾಲ್ ಬೆರೆಸಿದ ಪೆಟ್ರೋಲ್ ಅನ್ನು ಬಳಸಿದರೆ ಕಾರು ಅಥವಾ ಬೈಕ್ ಇಂಜಿನ್‌ ಹಾನಿಯಾಗುವ ಅಪಾಯ ಹೆಚ್ಚು. ಪ್ರತಿ ಬಾರಿ ಕಾರು ಅಥವಾ ಬೈಕನ್ನು ದುರಸ್ತಿಗೆ ತೆಗೆದುಕೊಳ್ಳಬೇಕಾದಾಗ, ಕೇಂದ್ರವು ಹಳೆಯ ವಾಹನಗಳ ನವೀಕರಣ ಶುಲ್ಕವನ್ನು ಸಹ ಹೆಚ್ಚಿಸಿದೆ. ಅಂತಹ ಪರಿಸ್ಥಿತಿಯಲ್ಲಿ, ಹಳೆಯ ವಾಹನಗಳನ್ನು ಖರೀದಿಸುವುದರಿಂದ ನಿಮಗೆ ಸಾಕಷ್ಟು ಹಣ ಖರ್ಚಾಗುತ್ತದೆ. ಇಲ್ಲಿಯವರೆಗೆ ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಕೇವಲ ಶೇ.10ರಷ್ಟಿತ್ತು. ಆಗಸ್ಟ್ 1ರಿಂದ ಕೇಂದ್ರವು ಅದನ್ನು ಶೇ.20ರಷ್ಟು ಹೆಚ್ಚಿಸಿದೆ. ಪೆಟ್ರೋಲ್‌ಗಿಂತ ಅಗ್ಗದ ಬೆಲೆಯಲ್ಲಿ ಎಥೆನಾಲ್ ಲಭ್ಯವಿದೆ.

ಶೇ.20ರಷ್ಟು ಎಥೆನಾಲ್ ಮಿಶ್ರಣ ವಿರುದ್ಧ 'ಸುಪ್ರೀಂ'ನಲ್ಲಿ ಅರ್ಜಿ

ಆ ಸಂದರ್ಭದಲ್ಲಿ, ಎಥೆನಾಲ್ ಅನ್ನು ಪೆಟ್ರೋಲ್‌ನೊಂದಿಗೆ ಬೆರೆಸಿದ ನಂತರವೂ ಪೆಟ್ರೋಲ್ ಬೆಲೆಯಲ್ಲಿ ಯಾವುದೇ ಬದಲಾವಣೆಯಾಗಿಲ್ಲ ಎಂಬ ವಾದ ಕೇಳಿಬರುತ್ತಿದೆ. ಇ-20 ಪೆಟ್ರೋಲ್ ವಾಹನಗಳಿಗೆ ಹಾನಿಗೊಳಿಸುತ್ತದೆ ಮತ್ತು ಮೈಲೇಜ್ ಕಡಿತಗೊಳಿಸುತ್ತಿದೆ ಎಂಬ ಕಳವಳ ಹೆಚ್ಚುತ್ತಿದೆ. ಇದೇ ಸಮಯದಲ್ಲಿ, ಎಥೆನಾಲ್ ಮಿಶ್ರಣವನ್ನು ಕಡ್ಡಾಯಗೊಳಿಸುವ ಕೇಂದ್ರದ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಪಿಐಎಲ್ (ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ) ಸಲ್ಲಿಕೆ ಮಾಡಿರುವುದು ಗಮನಾರ್ಹ.

ಎಥೆನಾಲ್ ಮುಕ್ತ ಪೆಟ್ರೋಲ್ (E0) ನೀಡುವ ಬದಲು E20 ಪೆಟ್ರೋಲ್ ಅನ್ನು ಮಾತ್ರ ಬಳಸಲು ಗ್ರಾಹಕರನ್ನು ಒತ್ತಾಯಿಸುವುದು, ಶೇ.20ರಷ್ಟು ಎಥೆನಾಲ್ (E20) ಜತೆಗೆ ಬೆರೆಸಿದ ಪೆಟ್ರೋಲ್ ಅನ್ನು ಮಾರಾಟ ಮಾಡುವ ಮೂಲಕ ತಮ್ಮ ಮೂಲಭೂತ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ವಕೀಲ ಅಕ್ಷಯ್ ಮಲ್ಹೋತ್ರಾ ವಾದಿಸಿದ್ದಾರೆ. ಲಕ್ಷಾಂತರ ವಾಹನ ಚಾಲಕರಿಗೆ ಪೆಟ್ರೋಲ್‌ಗೆ ಎಥೆನಾಲ್ ಸೇರಿಸಲಾಗುತ್ತದೆ ಎಂಬ ಅಂಶದ ಬಗ್ಗೆ ತಿಳಿದಿಲ್ಲ ಮತ್ತು ಅದನ್ನು ಗ್ರಾಹಕ ಸಂರಕ್ಷಣಾ ಕಾಯ್ದೆ, 2019ರ ಅಡಿಯಲ್ಲಿ ಬಹಿರಂಗಪಡಿಸಬೇಕು ಎಂದು ಅರ್ಜಿಯಲ್ಲಿ ಹೇಳಲಾಗಿದೆ.

ಏಪ್ರಿಲ್ 2023ರ ಮೊದಲು ತಯಾರಿಸಿದ ವಾಹನಗಳು, ಇತ್ತೀಚಿನ ಅನೇಕ BS-VI ಮಾದರಿಗಳು ಸೇರಿದಂತೆ, E20 ಅಡಿ ಓಡಲು ವಿನ್ಯಾಸಗೊಳಿಸಲಾಗಿಲ್ಲ. ಹೆಚ್ಚಿನ ಪ್ರಮಾಣದ ಎಥೆನಾಲ್ ಬಳಕೆಯು ಇಂಜಿನ್​ ಸವೆತ, ರಬ್ಬರ್ ಮತ್ತು ಪ್ಲಾಸ್ಟಿಕ್ ಭಾಗಗಳಿಗೆ ಹಾನಿ, ಕಡಿಮೆ ಇಂಧನ ದಕ್ಷತೆ ಮತ್ತು ಹೆಚ್ಚಿನ ನಿರ್ವಹಣಾ ವೆಚ್ಚಗಳಿಗೆ ಕಾರಣವಾಗಬಹುದು ಎಂದು ಅರ್ಜಿದಾರರು ಪ್ರಸ್ತಾಪಿಸಿದ್ದಾರೆ.

ಪಿಐಎಲ್‌ನಲ್ಲಿ ಹೇಳಲಾದ ವಿಷಯಗಳೇನು?

  • E20 ಜತೆಗೆ ಎಥೆನಾಲ್ ಮುಕ್ತ ಪೆಟ್ರೋಲ್ (E0) ಪೂರೈಕೆ ಮುಂದುವರಿಕೆ.
  • ಇಂಧನ ವಿತರಕಗಳಲ್ಲಿ ಎಥೆನಾಲ್ ಅಂಶದೊಂದಿಗೆ ಸ್ಪಷ್ಟವಾಗಿ ಲೇಬಲ್ ಮಾಡಬೇಕು.
  • ಇಂಧನ ತುಂಬಿಸುವ ಸಮಯದಲ್ಲಿ ವಾಹನವು ಇಂಧನಕ್ಕೆ ಸೂಕ್ತವಾಗಿದೆಯೇ ಎಂದು ವಾಹನ ಚಾಲಕರಿಗೆ ತಿಳಿಸಬೇಕು.
  • ಗ್ರಾಹಕ ರಕ್ಷಣಾ ಮಾನದಂಡಗಳನ್ನು ಜಾರಿಗೆ ತರಬೇಕು.
  • ವಾಹನ ಕಾರ್ಯಕ್ಷಮತೆಯ ಮೇಲೆ E20 ದೀರ್ಘಕಾಲೀನ ಪರಿಣಾಮಗಳ ಕುರಿತು ಅಧ್ಯಯನ ನಡೆಸಬೇಕು.

ಏನಿದು E20 ಪೆಟ್ರೋಲ್?

E20 ಪೆಟ್ರೋಲ್ ಶೇ.80ರಷ್ಟು ಬೆರೆಸಿದ ಶೇ.20ರಷ್ಟು ಎಥೆನಾಲ್ ಅನ್ನು ಒಳಗೊಂಡಿರುವ ಇಂಧನವಾಗಿದೆ. ಎಥೆನಾಲ್ ಪ್ರಾಥಮಿಕವಾಗಿ ಕಬ್ಬು ಮತ್ತು ಇತರ ಕೃಷಿ ಉಪಉತ್ಪನ್ನಗಳಿಂದ ಪಡೆದ ಜೈವಿಕ ಇಂಧನವಾಗಿದೆ. ಇದು ಪೆಟ್ರೋಲ್‌ಗಿಂತ ಹೆಚ್ಚು ಪರಿಣಾಮಕಾರಿಯಾಗಿ ಉರಿಯುತ್ತದೆ. ಇದು ವಾಹನಗಳಿಂದ ಮಾಲಿನ್ಯಕಾರಕ ಹೊರಸೂಸುವಿಕೆಯನ್ನು ಗಮನಾರ್ಹವಾಗಿ ಕಡಿತಗೊಳಿಸುತ್ತದೆ. ದೇಶದಲ್ಲಿ ವಾಹನ ತಯಾರಕರು ಈಗಾಗಲೇ ಈ ಇಂಧನಕ್ಕೆ ಹೊಂದಿಕೆಯಾಗುವ ಇಂಜಿನ್‌ಗಳನ್ನು ತಯಾರಿಸುತ್ತಿದ್ದಾರೆ. ಆದಾಗ್ಯೂ, ಎಥೆನಾಲ್‌ನೊಂದಿಗೆ ಬೆರೆಸಿದ ಪೆಟ್ರೋಲ್ ಅನ್ನು ಹಳೆಯ ವಾಹನಗಳ ಇಂಜಿನ್‌ಗಳಿಗೆ ಹಾಕಿದರೆ, ಇಂಜಿನ್​ ತುಕ್ಕು ಹಿಡಿಯುತ್ತದೆ,(ಏಜೆನ್ಸೀಸ್).