ಲಖನೌ: ಬಸ್ಸು, ಕಾರು, ಲಾರಿ, ಬೈಕ್ ಸೇರಿದಂತೆ ಮುಂತಾದ ವಾಹನಗಳು ಟ್ರಾಫಿಕ್ ಜಾಮ್ನಲ್ಲಿ ಸಿಲುಕುವದನ್ನು ಕಂಡಿದ್ದೇವೆ ಮತ್ತು ಕೇಳಿದ್ದೇವೆ. ಆದರೆ, ರೈಲೊಂದು ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಂಡಿತು ಅಂದರೆ ನೀವು ನಂಬುತ್ತೀರಾ? ನಂಬಲೇಬೇಕು. ಏಕೆಂದರೆ, ಅದಕ್ಕೆ ಸಂಬಂಧಿಸಿದ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಟ್ರಾಫಿಕ್ ಜಾಮ್ ಅನ್ನೋದು ಭಾರತ ಅತಿ ದೊಡ್ಡ ಸಮಸ್ಯೆಗಳಲ್ಲಿ ಒಂದು. ಫ್ಲೈಓವರ್, ರಸ್ತೆ ಅಗಲೀಕರಣದಂತಹ ಅನೇಕ ಪರಿಹಾರಗಳನ್ನು ಕಂಡುಕೊಂಡಿದ್ದರೂ ಟ್ರಾಫಿಕ್ ಜಾಮ್ ಮಾತ್ರ ಇನ್ನೂ ಕಡಿಮೆ ಆಗಿಲ್ಲ. ಪ್ರಮುಖ ನಗರಗಳಲ್ಲಿ ಟ್ರಾಫಿಕ್ ಸಮಸ್ಯೆಯಿಂದ ಅನೇಕ ತೊಂದರೆಗಳು ಕೂಡ ಎದುರಾಗುತ್ತಿವೆ. ಅಚ್ಚರಿಯ ಸಂಗತಿಯೇನೆಂದರೆ, ಬೆಂಗಳೂರಿನಲ್ಲಿ ಟ್ರಾಫಿಕ್ ಜಾಮ್ನಿಂದ ವಾರ್ಷಿಕ 19 ಸಾವಿರ ಕೋಟಿ ರೂ. ನಷ್ಟವಾಗಿದೆ ಎಂಬ ಸಂಶೋಧನಾ ವರದಿಯು ಕೂಡ ಬಹಿರಂಗವಾಗಿದೆ.
ಅನೇಕ ಜನರು ದೇಶದಲ್ಲಿ ವಿವಿಧ ರೀತಿಯ ಟ್ರಾಫಿಕ್ ಜಾಮ್ ಅನ್ನು ನೋಡಿದ್ದಾರೆ. ಆದರೆ, ಟ್ರಾಫಿಕ್ ಜಾಮ್ನಲ್ಲಿ ರೈಲು ಸಿಕ್ಕಿಹಾಕಿಕೊಂಡಿರುವ ಘಟನೆ ಇದೀಗ ವೈರಲ್ ಆಗಿದೆ. ಹೇಳಬೇಕೆಂದರೆ ರೈಲ್ವೆ ಕ್ರಾಸಿಂಗ್ನಲ್ಲಿ ರೈಲು ಆಗಮಿಸುವಾಗ ವಾಹನಗಳನ್ನು ತಡೆದು ನಿಲ್ಲಿಸಿ, ರೈಲಿಗೆ ಹೋಗಲು ದಾರಿ ಮಾಡಿಕೊಡಲಾಗುತ್ತದೆ. ಆದರೆ, ಕ್ರಾಸಿಂಗ್ನಲ್ಲಿ ರೈಲೇ ಕೆಲ ಕಾಲ ನಿಂತು ವಾಹನಗಳಿಗೆ ಹೋಗಲು ದಾರಿ ಮಾಡಿಕೊಟ್ಟ ಪ್ರಸಂಗ ಇದಾಗಿದೆ.
ಈ ಘಟನೆ ನಡೆದಿರುವುದು ಉತ್ತರ ಪ್ರದೇಶದ ವಾರಣಾಸಿಯ ಬನಾರಸ್ನಲ್ಲಿ. ಭಾರೀ ಪ್ರಮಾಣದ ವಾಹನಗಳು ರೈಲ್ವೆ ಕ್ರಾಸಿಂಗ್ನಲ್ಲಿ ಜಮಾಯಿಸಿದ್ದರಿಂದ ಟ್ರಾಫಿಕ್ ಜಾಮ್ ಉಂಟಾಗಿದ್ದು, ಮುನ್ನೆಚ್ಚರಿಕಾ ಕ್ರಮವಾಗಿ ಅದೇ ಸಮಯದಲ್ಲಿ ಬರುತ್ತಿದ್ದ ರೈಲನ್ನು ನಿಲ್ಲಿಸಿ ವಾಹನಗಳು ಹೋಗಲು ದಾರಿ ಮಾಡಿಕೊಡಲಾಗಿದೆ. ಪೊಲೀಸ್ ಟ್ರಾಫಿಕ್ ಕ್ಲಿಯರ್ ಮಾಡಲು ಹರಸಾಹಸ ಮಾಡುತ್ತಿರುವ ದೃಶ್ಯವನ್ನು ನೀವು ವಿಡಿಯೋದಲ್ಲಿ ನೋಡಬಹುದು.
ಬಾಲಾ ಎಂಬ ಹೆಸರಿನ ಎಕ್ಷ್ (ಟ್ವಿಟರ್) ಖಾತೆಯಲ್ಲಿ ಆ. 13ರಂದು ವಿಡಿಯೋ ಪೋಸ್ಟ್ ಮಾಡಲಾಗಿದೆ. ಕೇವಲ ಮೂರೇ ದಿನದಲ್ಲಿ ಈ ವಿಡಿಯೋವನ್ನು 9 ಲಕ್ಷಕ್ಕೂ ಅಧಿಕ ಮಂದಿ ವೀಕ್ಷಣೆ ಮಾಡಿದ್ದಾರೆ. 11 ಸಾವಿರಕ್ಕೂ ಹೆಚ್ಚು ಮಂದಿ ವಿಡಿಯೋವನ್ನು ಲೈಕ್ ಮಾಡಿದ್ದಾರೆ. (ಏಜೆನ್ಸೀಸ್)