ಲಖನೌ: ಉತ್ತರ ಪ್ರದೇಶದ ಮುಸ್ಲಿಂ ಪ್ರಾಬಲ್ಯದ ಜಿಲ್ಲೆ ಸಂಭಾಲ್‌ನಲ್ಲಿ ಭಾನುವಾರ (ನವೆಂಬರ್ 24) ಬೆಳಗ್ಗೆ ತೀವ್ರ ಉದ್ವಿಗ್ನತೆ ಕಂಡುಬಂದಿದೆ. ಜಿಲ್ಲೆಯಲ್ಲಿರುವ ಮೊಘಲರ ಕಾಲದ ಶಾಹಿ ಜಾಮಾ ಮಸೀದಿಯಲ್ಲಿ( Shahi Jama Masjid) ನ್ಯಾಯಾಲಯದ ಆದೇಶದ ಮೇರೆಗೆ ನಡೆಸಿದ ಸಮೀಕ್ಷೆ ವೇಳೆ ಭಾರೀ ಕೋಲಾಹಲ ಉಂಟಾಗಿದೆ. ಈ ಸಮಯದಲ್ಲಿ ಕಲ್ಲು ತೂರಾಟ, ಬೆಂಕಿ ಹಚ್ಚಿ ಹಿಂಸಾಚಾರದ ಘಟನೆಗಳು ಬೆಳಕಿಗೆ ಬಂದಿದೆ.
ಇದನ್ನು ಓದಿ: ಮಿಲಿಯನ್ಗಟ್ಟಲೆ ಫಾಲೋವರ್ಸ್ ಇದ್ರೂ ಎಲೆಕ್ಷನ್ನಲ್ಲಿ ಬೀಳಲಿಲ್ಲ ವೋಟ್; 131 ಮತ ಪಡೆದ ಅಜಾಜ್ ಖಾನ್ | Ajaz Khan
ಕಲ್ಲು ತೂರಾಟ ನಡೆಸಿದ ಗುಂಪನ್ನು ಚದುರಿಸಲು ಪೊಲೀಸರು ಅಶ್ರುವಾಯು ಮತ್ತು ಲಾಠಿ ಪ್ರಹಾರ ನಡೆಸಿ ಗುಂಪನ್ನು ಚದುರಿಸಲು ಯತ್ನಿಸಿದರು. ಕೆಲ ವಾಹನಗಳಿಗೂ ಕಿಡಿಗೇಡಿಗಳು ಬೆಂಕಿ ಹಚ್ಚಿದ್ದಾರೆ. ಸಮೀಕ್ಷೆ ಪೂರ್ಣಗೊಂಡಿದ್ದು ತಂಡವನ್ನು ಸುರಕ್ಷಿತವಾಗಿ ಪ್ರದೇಶದಿಂದ ಹೊರಕ್ಕೆ ಕರೆತರಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಉತ್ತರ ಪ್ರದೇಶದ ಕಾಶಿ ಮತ್ತು ಮಥುರಾ ನಂತರ ಇದೀಗ ಸಂಭಾಲ್‌ನ ಶಾಹಿ ಜಾಮಾ ಮಸೀದಿ ವಿವಾದಕ್ಕೀಡಾಗಿದೆ. ಈ ಸ್ಥಳವು 1529ರಲ್ಲಿ ಬಾಬರನಿಂದ ಕೆಡವಲ್ಪಟ್ಟ ಶ್ರೀ ಹರಿಹರ ದೇವಾಲಯವಾಗಿತ್ತು. ಅಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹೇಳಲಾಗುತ್ತಿದೆ. ಮಸೀದಿಯಲ್ಲಿ ಶಿವಲಿಂಗವಿದೆ ಎಂಬುದಾಗಿಯೂ ಹೇಳಲಾಗುತ್ತಿದೆ.
ನ್ಯಾಯಾಲಯದ ಆದೇಶದ ಮೇರೆಗೆ ಶಾಹಿ ಜಾಮಾ ಮಸೀದಿಯ ಸರ್ವೆ ಕಾರ್ಯ ನಡೆಯುತ್ತಿದೆ. ಮಸೀದಿಯನ್ನು ಸರ್ವೆ ಮಾಡಿ ಏಳು ದಿನಗಳೊಳಗೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಸೂಚಿಸಿತ್ತು. ನವೆಂಬರ್ 19(ಮಂಗಳವಾರ) ರಂದು ನಡೆಸಿದ ಮೊದಲ ಸಮೀಕ್ಷೆಯ ನಂತರ ತಂಡವು ನವೆಂಬರ್ 24( ಭಾನುವಾರ) ರಂದು ಬೆಳಗ್ಗೆ ಎರಡನೇ ಸಮೀಕ್ಷೆಗೆ ಆಗಮಿಸಿತು. ಸಮೀಕ್ಷಾ ತಂಡ ಜಾಮಾ ಮಸೀದಿ ತಲುಪುತ್ತಿದ್ದಂತೆಯೇ ಅಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಮಾಯಿಸಿ ಪ್ರತಿಭಟನೆ ಆರಂಭಿಸಿದರು. ಸ್ವಲ್ಪ ಸಮಯದಲ್ಲೇ ಪ್ರತಿಭಟನೆ ಗದ್ದಲಕ್ಕೆ ತಿರುಗಿತು. ಸಮೀಕ್ಷಾ ವರದಿಯನ್ನು ನ.26ರಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು 29ಕ್ಕೆ ವಿಚಾರಣೆ ನಿಗದಿಯಾಗಿದೆ.(ಏಜೆನ್ಸೀಸ್)