Kurnool Bus Accident: ಅ.24ರ ಬೆಳ್ಳಂಬೆಳಗ್ಗೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಚಿನ್ನತೇಕೂರಿನಲ್ಲಿ ಖಾಸಗಿ ಬಸ್ ಬೈಕ್ಗೆ ಡಿಕ್ಕಿ ಹೊಡೆದ ಕೆಲವೇ ನಿಮಿಷಗಳಲ್ಲಿ ಬೆಂಕಿಗೆ ಸಂಪೂರ್ಣ ಸುಟ್ಟು ಕರಕಲಾಯಿತು. ಹೈದರಾಬಾದ್ನಿಂದ ಬೆಂಗಳೂರಿಗೆ ಬರುತ್ತಿದ್ದ ಬಸ್ನಲ್ಲಿ ಅಗ್ನಿ ಜ್ವಾಲೆಯಂತೆ ಹೊತ್ತಿಕೊಂಡ ಕಾರಣ ದುರಂತದಲ್ಲಿ 19 ಪ್ರಯಾಣಿಕರು ಉಸಿರು ಚೆಲ್ಲಿದರು. ಇನ್ನುಳಿದ 27 ಮಂದಿ ಅದೃಷ್ಟವಶಾತ್ ಪ್ರಾಣಪಾಯದಿಂದ ಪಾರಾದರು. ಈ ದುರಂತಕ್ಕೆ ಸಂಬಂಧಿಸಿದಂತೆ ಬೈಕ್ ಸವಾರನ ಪೋಷಕರು ಪ್ರತಿಕ್ರಿಯಿಸಿದ್ದಾರೆ.
ಬಸ್ ಅಪಘಾತಕ್ಕೂ ಮೊದಲು ಶಿವಶಂಕರ್ ಎಂಬ ವ್ಯಕ್ತಿ ಬೈಕ್ನಿಂದ ಬಿದ್ದು ಸಾವನ್ನಪ್ಪಿದ್ದರು. ಆ ಸಮಯದಲ್ಲಿ ಅದೇ ಬೈಕ್ನಲ್ಲಿದ್ದ ಮೊತ್ತೋರ್ವ ಎರ್ರಿಸ್ವಾಮಿ, ಸಣ್ಣಪುಟ್ಟ ಗಾಯಗಳಿಂದ ಪಾರಾದ. ಬೈಕ್ ರಸ್ತೆಯಲ್ಲಿ ಬಿದ್ದಿದ್ದಾಗ, ವೇಗವಾಗಿ ಬಂದ ಬಸ್, ಬೈಕ್ಗೆ ಡಿಕ್ಕಿ ಹೊಡೆದು ಸ್ವಲ್ಪ ದೂರ ಎಳೆದೊಯ್ದಿತು. ಈ ವೇಳೆ ಗಾಡಿಯ ಪೆಟ್ರೋಲ್ ಟ್ಯಾಂಕ್ನಿಂದ ಬೆಂಕಿ ಬಸ್ಗೆ ತಗುಲಿ, ಇಡೀ ಬಸ್ ಅಗ್ನಿಯ ಕೆನ್ನಾಲಿಗೆಗೆ ಸಂಪೂರ್ಣ ಭಸ್ಮವಾಯಿತು.
ಘಟನೆಯ ಬಗ್ಗೆ ಮಾತನಾಡಿದ ಮೃತ ಶಿವಶಂಕರ್ ಹೆತ್ತವರು, "ಬಸ್ ಅಪಘಾತಕ್ಕೆ ನಮ್ಮ ಪುತ್ರ ಕಾರಣನಲ್ಲ. ಬಸ್ ಚಾಲಕನ ಅಜಾಗರೂಕತೆಯಿಂದ 19 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ. ಬಸ್ ಚಾಲಕ ಎಚ್ಚರಿಕೆಯಲ್ಲಿದ್ದಿದ್ರೆ, ಇಂತಹ ದೊಡ್ಡ ಅನಾಹುತ ಸಂಭವಿಸುತ್ತಿರಲಿಲ್ಲ" ಎಂದು ಹೇಳಿದ್ದಾರೆ. ಈ ಮಧ್ಯೆ, ಎರ್ರಿಸ್ವಾಮಿಯನ್ನು ಬಂಧಿಸಿರುವ ಪೊಲೀಸರು, ಘಟನೆಗೆ ಸಂಬಂಧಿಸಿದ ಮಾಹಿತಿಗಳನ್ನು ವಿಚಾರಣೆ ಮೂಲಕ ಕಲೆಹಾಕಿದ್ದಾರೆ.
ದೂರಿನಲ್ಲಿ ಉಲ್ಲೇಖಿಸಲಾದ ವಿವರಗಳ ಪ್ರಕಾರ, 'ಬಸ್ ಅಪಘಾತಕ್ಕೂ ಮೊದಲು ಬೈಕ್ ಅಪಘಾತಕ್ಕೀಡಾಯಿತು. ನಾನು ಮತ್ತು ಶಿವಶಂಕರ್ ಕುಡಿದಿದ್ದೆವು. ಕುಡಿದು ಅಜಾಗರೂಕತೆಯಿಂದ ಚಾಲನೆ ಮಾಡಿದ್ದೇ ನಮ್ಮ ಬೈಕ್ ನಿಯಂತ್ರಣ ತಪ್ಪಿ ಡಿವೈಡರ್ಗೆ ಡಿಕ್ಕಿ ಹೊಡೆಯಿತು. ಘಟನೆಯಲ್ಲಿ ಶಿವಶಂಕರ್ ಸ್ಥಳದಲ್ಲೇ ಮೃತಪಟ್ಟ. ನಾನು ಗಾಯಗೊಂಡು ಬದುಕುಳಿದೆ. ಈ ವೇಳೆ, ಗೆಳೆಯನ ಮೃತದೇಹವನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸುತ್ತಿದ್ದೆ. ಆಗ ವೇಗವಾಗಿ ಬಂದ ಬಸ್,ಬೈಕನ್ನು ಒಂದಷ್ಟು ದೂರ ಎಳೆದೊಯ್ದಿತು. ಕೆಲವೇ ಹೊತ್ತಿನಲ್ಲಿ ಬಸ್ ಬೆಂಕಿಯಿಂದ ಧಗಧಗಿಸಿತು ಎಂದು ಎರ್ರಿಸ್ವಾಮಿ ಹೇಳಿಕೆ ನೀಡಿದ್ದಾನೆ.
ಮತ್ತೊಂದೆಡೆ, ಚಾಲಕನ ಅಜಾಗರೂಕ ಚಾಲನೆಯಿಂದ ಅಪಘಾತ ಸಂಭವಿಸಿದೆ ಎಂದು ಪೊಲೀಸ್ ಎಫ್‌ಐಆರ್ ಪ್ರತಿಯಲ್ಲಿ ಹೇಳಲಾಗಿದೆ. ಇಬ್ಬರ ಹೆಸರನ್ನು ಪೊಲೀಸರು ಆರೋಪಿಗಳ ಪಟ್ಟಿಯಲ್ಲಿ ಸೇರಿಸಿದ್ದು, ಕಾವೇರಿ ಟ್ರಾವೆಲ್ಸ್‌ನ ಬಸ್ ಚಾಲಕನನ್ನು ಎ1 ಮತ್ತು ಮಾಲೀಕರನ್ನು ಎ2 ಆರೋಪಿ ಎಂದು ಉಲ್ಲೇಖಿಸಿದ್ದಾರೆ,(ಏಜೆನ್ಸೀಸ್).