ನ್ಯೂಸ್

ಅಂಬಾನಿ ಕುಟುಂಬಸ್ಥರು ಪದೇ ಪದೇ ಕರೆಯುತ್ತಿದ್ದಾರೆ: ಕಡೆಗೂ ಸ್ಪಷ್ಟನೆ ಕೊಟ್ಟ ಮಮತಾ ಬ್ಯಾನರ್ಜಿ

ಪ.ಬಂಗಾಳ: ರಿಲೈಯನ್ಸ್​ ಇಂಡಸ್ಟ್ರೀಸ್​ ಸಂಸ್ಥಾಪಕರಾದ ಮುಖೇಶ್ ಅಂಬಾನಿ ಹಾಗೂ ನೀತಾ ಅಂಬಾನಿ ಅವರ ಪುತ್ರ ಅನಂತ್ ಮತ್ತು ರಾಧಿಕಾ ಮರ್ಚೆಂಟ್ ವಿವಾಹ ಸಮಾರಂಭ ಇದೇ ಜುಲೈ 12ರಂದು ಅದ್ಧೂರಿಯಾಗಿ ನಡೆಯಲಿದೆ. ಜುಲೈ 13 ಮತ್ತು 14ರಂದು ಎರಡು ಪ್ರತ್ಯೇಕ ಕಾರ್ಯಕ್ರಮಗಳು ನಡೆಯಲಿದ್ದು, ಈ ಕಾರ್ಯಕ್ರಮಗಳಲ್ಲಿ ಅಂತಾರಾಷ್ಟ್ರೀಯ ಸೆಲೆಬ್ರಿಟಿಗಳು ಸೇರಿದಂತೆ ರಾಜಕೀಯ ಗಣ್ಯರು ಪಾಲ್ಗೊಳ್ಳಲಿದ್ದಾರೆ.

ಕಳೆದ ಕೆಲವು ದಿನಗಳಿಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೂ ಅನಂತ್-ರಾಧಿಕಾ ವಿವಾಹ ಸಮಾರಂಭಕ್ಕೆ ವಿಶೇಷವಾಗಿ ಆಹ್ವಾನಿಸಲಾಗಿದೆ ಎಂಬ ಸುದ್ದಿ ವ್ಯಾಪಕವಾಗಿ ಹರಿದಾಡಿತ್ತು. ಅಂಬಾನಿ ಕುಟುಂಬದಿಂದ ಮದುವೆ ಆಹ್ವಾನ ಪತ್ರಿಕೆ ಸಿಎಂ ಮಮತಾ ಅವರನ್ನು ತಲುಪಿದ್ದು, ಈ ಬಗ್ಗೆ ಬ್ಯಾನರ್ಜಿ ಏನು ಹೇಳಲಿದ್ದಾರೆ? ಮದುವೆಗೆ ಹೋಗಿ ನವ ದಂಪತಿಗಳನ್ನು ಹರಸಿ, ಆರ್ಶಿವದಿಸಲಿದ್ದಾರಾ ಎಂಬುದರ ಕುರಿತು ಸಾಕಷ್ಟು ವದಂತಿಗಳು ಹರಿದಾಡಿತ್ತು.

ಈ ಬಗ್ಗೆ ಕಡೆಗೂ ಪ್ರತಿಕ್ರಿಯೆ ನೀಡಿದ ಪ.ಬಂಗಾಳ ಸಿಎಂ, "ನಾನು ಮದುವೆ ಸಮಾರಂಭಕ್ಕೆ ಹೋಗವುದು ಪ್ರಾಯಶಃ ಅನುಮಾನವಾಗಿತ್ತು. ಆದ್ರೆ, ಅಂಬಾನಿ ದಂಪತಿ ಪದೇ ಪದೇ ನನ್ನನ್ನು ಮದುವೆಗೆ ಬನ್ನಿ ಎಂದು ಒತ್ತಾಯಿಸಿದ್ದೇ ಈಗ ಹೊರಡಲು ಕಾರಣ. ವಿವಾಹ ಕಾರ್ಯಕ್ರಮದಲ್ಲಿ ನಾನು ಎನ್‌ಸಿಪಿ ಅಧ್ಯಕ್ಷರಾದ ಶರದ್ ಪವಾರ್ ಅವರನ್ನು ಸಹ ಭೇಟಿಯಾಗುತ್ತೇನೆ" ಎಂದು ಹೇಳಿದರು,(ಏಜೆನ್ಸೀಸ್).