ಕಲ್ಕತ್ತ: ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ಅವರ ಮೇಲೆ ದಾಳಿ ನಡೆದಿದೆ. ಉತ್ತರ ಬಂಗಾಳದಲ್ಲಿ ಚುನಾವಣಾ ಪ್ರಚಾರ ಮುಗಿಸಿ ವಾಪಸ್ ಬರುತ್ತಿದ್ದ ಅವರ ಕಾರ್ ಮೇಲೆ ಕೂಚ್ ಬೆಹರ್ ಎಂಬಲ್ಲಿ ದುಷ್ಕರ್ಮಿಗಳು ದಾಳಿ ಮಾಡಿದ್ದಾರೆ.
ಈ ಕುರಿತು ಟ್ವಿಟ್ಟರ್ನಲ್ಲಿ ಮಾಹಿತಿ ಹಂಚಿಕೊಂಡಿರುವ ಘೋಷ್ ಅವರು, ಟಿಎಂಸಿ ಗುಂಡಾಗಳು ನನ್ನ ಹಾಗೂ ನನ್ನ ಪಕ್ಷದ ಕಾರ್ಯಕರ್ತರ ಮೇಲೆ ದಾಳಿ ಮಾಡಿದ್ದಾರೆ. ಕಲ್ಲು ಇಟ್ಟಿಗೆಗಳಿಂದ ದಾಳಿ ಮಾಡಿದ್ದಾರೆ. ಕಾರ್ ಗ್ಲಾಸ್ ಪುಡಿ ಪುಡಿ ಮಾಡಿದ್ದಾರೆ. ಸುಮಾರು 100 ಕ್ಕೂ ಹೆಚ್ಚು ಟಿಎಂಸಿ ಕಾರ್ಯಕರ್ತರು ಈ ಕೆಲಸ ಮಾಡಿದ್ದಾರೆ. ಅಲ್ಲದೇ ಪೆಟ್ರೋಲ್ ಬಾಂಬ್ ಎಸೆಯಲಾಗಿದೆ ಎಂದು ಅವರು ಆರೋಪಿಸಿದ್ದಾರೆ.
ಕೂಡಲೇ ಸ್ಥಳಕ್ಕೆ ಭೇಟಿ ನೀಡಿದ್ದ ಪೊಲೀಸರು ವಾತಾವರಣವನ್ನು ತಿಳಿಗೊಳಿಸುವಲ್ಲಿ ಯಶಸ್ವಿಯಾದರು ಎಂದು ಘೋಷ್ ಹೇಳಿದ್ದಾರೆ.
ಆದರೆ, ದಿಲೀಪ್ ಘೋಷ್ ಅವರ ಈ ಆರೋಪವನ್ನು ಟಿಎಂಸಿ ನಾಯಕರು ತಳ್ಳಿ ಹಾಕಿದ್ದಾರೆ. ಅದು ಬಿಜೆಪಿ ಹಳೆಯ ಹಾಗೂ ಹೊಸ ಕಾರ್ಯಕರ್ತರ ನಡುವೆ ನಡೆದ ಗಲಾಟೆ ಎಂದು ಹೇಳಿದ್ದಾರೆ.