ನ್ಯೂಸ್

ನಾಲ್ಕು ವರ್ಷಕ್ಕೊಮ್ಮೆ ಬರುವ ಫೆ.29ನ್ನು ಸ್ವಾಗತಿಸಿ

ಮತ್ತೊಮ್ಮೆ ಲೀಪ್ ಇಯರ್ ಬಂದಿದೆ. ಹೌದು, 2024ರಲ್ಲಿ ಇರುವುದು 365 ದಿನಗಳಲ್ಲ, 366 ದಿನಗಳು! ಪ್ರತಿ ವರ್ಷಕ್ಕಿಂತ ಒಂದು ದಿನ ಹೆಚ್ಚು. ನಾಲ್ಕು ವರ್ಷಕ್ಕೊಮ್ಮೆ ಬರುವ ಈ ಫೆಬ್ರವರಿ 29ರ ಇತಿಹಾಸದ ಬಗ್ಗೆ ಸ್ವಾರಸ್ಯಕರ ಸಂಗತಿಗಳಿವೆ. ಆ ಕುರಿತಾದ ಮಾಹಿತಿ ಇಲ್ಲಿದೆ.

ನಮ್ಮಲ್ಲಿ ಸಮಯದ ಅಳತೆಯನ್ನು (ಕಾಲಚಕ್ರ) ವೈಜ್ಞಾನಿಕ ಆಧಾರದ ಮೇಲೆ ರೂಪಿಸಿ, ಅನುಸರಿಸಿಕೊಂಡು ಬರಲಾಗುತ್ತಿದೆ.

  • ಭೂಮಿ ತನ್ನ ಅಕ್ಷದ ಮೇಲೆ ಒಂದು ಸುತ್ತು ಹಾಕುವ ಸಮಯವನ್ನು ಅಂದರೆ ಸೂರ್ಯೋದಯದಿಂದ ಸೂರ್ಯೋದಯದವರೆಗಿನ ಸಮಯವನ್ನು ‘ಒಂದು ದಿನ’ ಎಂದು ಕರೆಯಲಾಗಿದೆ.
  • ಭೂಮಿಯು ಸೂರ್ಯನ ಸುತ್ತ ಒಂದು ಸುತ್ತು ಹಾಕುವ ಸಮಯವನ್ನು ಅಂದರೆ ಎಲ್ಲ ಋತುಗಳ ಒಂದು ಸರಣಿಯನ್ನು ಒಂದು ವರ್ಷ ಎಂದು ಅನುಸರಿಸಲಾಗುತ್ತಿದೆ.
  • ಭೂಮಿ ಮತ್ತು ಸೂರ್ಯನ ಆಧಾರದ ಮೇಲೆ ದಿನ ಮತ್ತು ವರ್ಷವನ್ನು ಗುರುತಿಸ ಬಹುದು. ಆದರೆ, ಈ ಆಧಾರದ ಮೇಲೆ ಒಂದು ತಿಂಗಳನ್ನು ಗುರುತಿಸುವುದು, ನಿಗದಿ ಪಡಿಸುವುದು ಕಷ್ಟ. ಬದಲಿಗೆ ಚಂದ್ರನು ಭೂಮಿಯ ಸುತ್ತ ಒಂದು ಸುತ್ತು ಹಾಕುವ ಸಮಯವನ್ನು ಅಮಾವಾಸ್ಯೆಯಿಂದ ಅಮಾವಾಸ್ಯೆಗೆ ಅಥವಾ ಹುಣ್ಣಿಮೆಯಿಂದ ಹುಣ್ಣಿಮೆಗೆ ಒಂದು ತಿಂಗಳು ಎಂದು ಕರೆಯಬಹುದು. ಈ ಮೂರು ಸಮಯಗಳ ಸಮನ್ವಯದ ಆಧಾರದ ಮೇಲೆ ಗೆಗ್ರೋರಿಯನ್ ಕ್ಯಾಲೆಂಡರ್ ಸೃಷ್ಟಿಯಾಯಿತು. ಭೂಮಿಯು ಸೂರ್ಯನ ಸುತ್ತ ಸುತ್ತಲು 365 ದಿನಗಳು ಮತ್ತು 6 ಗಂಟೆಗಳನ್ನು ತೆಗೆದುಕೊಳ್ಳುತ್ತದೆ. ಪ್ರತಿ ವರ್ಷ 6 ಹೆಚ್ಚುವರಿ ಗಂಟೆಗಳನ್ನು ತೆಗೆದುಕೊಳ್ಳುವುದರಿಂದ, ನಾಲ್ಕು ವರ್ಷಗಳ ನಂತರ 24 ಗಂಟೆಗಳಾಗಿ ಒಂದು ದಿನಕ್ಕೆ ಪರಿವರ್ತಿತವಾಗುತ್ತದೆ. ಹಾಗಾಗಿ ಪ್ರತಿ 4 ವರ್ಷಗಳಿಗೊಮ್ಮೆ ಫೆಬ್ರವರಿಯಲ್ಲಿ 29 ದಿನಗಳು ಇರುತ್ತವೆ.

ತಿಂಗಳ ಲೆಕ್ಕಾಚಾರ: ಭೂಮಿಯು ಸೂರ್ಯನ ಸುತ್ತ ಸುತ್ತಲು 365.242 (0.242 ದಿನ= 6 ಗಂಟೆ) ದಿನಗಳು ಬೇಕು ಹಾಗೂ ಚಂದ್ರನ ಒಂದು ಸುತ್ತಾಟಕ್ಕೆ 29.5306 ದಿನಗಳು ಬೇಕು. ಅಂದರೆ ಒಂದು ವರ್ಷದಲ್ಲಿ ಸುಮಾರು 12.3687 ತಿಂಗಳುಗಳಿವೆ. ಇದನ್ನು ಒಂದು ಪೂರ್ಣಸಂಖ್ಯೆಯಾಗಿಸಿ, 12 ತಿಂಗಳು ಎಂದು ನಿಗದಿ ಮಾಡಲಾಗಿದೆ. ಪ್ರತಿಯೊಂದು ತಿಂಗಳಲ್ಲಿ ಸರಾಸರಿ ಸುಮಾರು 30.438 ದಿನಗಳು ಬರುತ್ತವೆ. ಪ್ರತಿ ತಿಂಗಳಲ್ಲೂ ದಿನಗಳ ಸಂಖ್ಯೆಗಳೂ ಪೂರ್ಣ ಸಂಖ್ಯೆಗಳಾಗಿರಬೇಕು. ಹಾಗಾಗಿ ಕೆಲವು ತಿಂಗಳುಗಳಲ್ಲಿ 30, ಇನ್ನು ಕೆಲವು ತಿಂಗಳುಗಳಲ್ಲಿ 31 ದಿನಗಳಾಗಿ ಮಾಡಿ, ಕ್ಯಾಲೆಂಡರ್ ರೂಪಿಸಲಾಗಿದೆ. ರೋಮನ್ನರು ಕೆಲವು ತಿಂಗಳುಗಳಿಗೆ ಚಕ್ರವರ್ತಿಗಳ ಹೆಸರುಗಳನ್ನು ಕೊಟ್ಟಿದ್ದಾರೆ.

ಲೀಪ್ ಇಯರ್ ಇರದಿದ್ದರೆ? : ಯೇಸುವಿನ ಜನ್ಮದಿಂದ ಗ್ರೆಗೋರಿಯನ್ ಕ್ಯಾಲೆಂಡರ್​ನ ಬಳಕೆ ಆರಂಭವಾಯಿತು. ಅದರ ನಾಲ್ಕು ವರ್ಷದ ಬಳಿಕ ಮೊದಲ ಲೀಪ್ ಇಯರ್ ಆಚರಿಸಲಾಯಿತು. ನಾಲ್ಕು ವರ್ಷಗಳಿಗೆ ಒಮ್ಮೆ ಕ್ಯಾಲೆಂಡರ್​ನಲ್ಲಿ ಒಂದು ಹೆಚ್ಚುವರಿ ದಿನ ಇರದಿದ್ದರೆ 100 ವರ್ಷಗಳ ನಂತರ ನಾವು 25 ದಿನಗಳಷ್ಟು ಮುಂದೆ ಇರುತ್ತೇವೆ. ಅದರಿಂದ, ಹವಾಮಾನದ ಬದಲಾವಣೆಯನ್ನು ನಿಖರವಾಗಿ ತಿಳಿದುಕೊಳ್ಳಲು ಆಗುವುದಿಲ್ಲ ಮತ್ತು ಹವಾಮಾನಕ್ಕೆ ವ್ಯತಿರಿಕ್ತವಾಗಿ ಜೀವನಶೈಲಿ ರೂಪುಗೊಳ್ಳುವ ಸಾಧ್ಯತೆಯನ್ನು ತಳ್ಳಿಹಾಕಲಾಗದು. 2020ರ ಬಳಿಕ ಈ ವರ್ಷ ಲೀಪ್ ಇಯರ್ ಬಂದಿದೆ. ಮುಂದಿನ ಲೀಪ್ ಇಯರ್ 2028 ಆಗಿರಲಿವೆ.